Saturday, July 12, 2025

ಚುಂಚಾದ್ರಿ ಮಹಿಳಾ ವೇದಿಕೆಯಿಂದ ಗುರುಪೂರ್ಣಿಮೆ

ಭದ್ರಾವತಿ ನಗರದ ಚುಂಚಾದ್ರಿ ಮಹಿಳಾ ವೇದಿಕೆವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಗುರುಪೂರ್ಣಿಮೆ ವಿಶಿಷ್ಟವಾಗಿ ಆಚರಿಸಲಾಯಿತು. 
    ಭದ್ರಾವತಿ: ನಗರದ ಚುಂಚಾದ್ರಿ ಮಹಿಳಾ ವೇದಿಕೆವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಗುರುಪೂರ್ಣಿಮೆ ವಿಶಿಷ್ಟವಾಗಿ ಆಚರಿಸಲಾಯಿತು. 
    ಗುರುಪೂರ್ಣಿಮೆ ಅಂಗವಾಗಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಸಂಸ್ಥಾನ ಮಠದ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಡಾ. ಶ್ರೀ ನಿರ್ಮಲನಂದನಾಥ ಸ್ವಾಮೀಜಿಯವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್‌ರವರು ಗುರು ಪೂರ್ಣಿಮೆ ಆಚರಣೆ ಮಹತ್ವ, ಗುರು-ಶಿಷ್ಯರ ಸಂಬಂಧಗಳು ಹಾಗು ವೇದವ್ಯಾಸರ ಜೀವನ ಚರಿತ್ರೆ ಕುರಿತು ಮಾತನಾಡಿದರು. 
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಗುರುಗಳ ಮಹತ್ವ ಅರಿತುಕೊಂಡು ಗುರುಗಳನ್ನು ಸ್ಮರಿಸಿಕೊಳ್ಳುವ ಮೂಲಕ ಅವರನ್ನು ಗೌರವಿಸಬೇಕೆಂದರು. 
    ಕಾರ್ಯಕ್ರಮದಲ್ಲಿ ಉದ್ಯಮಿ ಅರುಂದತಿ, ಗಾಯತ್ರಿ ಯಲ್ಲಪ್ಪ ಗೌಡ ಉಪಸ್ಥಿತರಿದ್ದರು. ವೇದಿಕೆ ಪದಾಧಿಕಾರಿಗಳು ಹಾಗು ನಿರ್ದೇಶಕರು ಪಾಲ್ಗೊಂಡಿದ್ದರು.  ಕಾರ್ಯದರ್ಶಿ ಪ್ರತಿಭಾ ವಂದಿಸಿದರು. 

ಗ್ಯಾರಂಟಿ ಅಧ್ಯಕ್ಷರಾಗಿ ಶಾಸಕರ ಪುತ್ರ ಬಿ.ಎಸ್ ಗಣೇಶ್ ನೇಮಕ

ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಹಿರಿಯ ಪುತ್ರ ಬಿ.ಎಸ್ ಗಣೇಶ್ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಭದ್ರಾವತಿ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಇವರನ್ನು ಕೂಡ್ಲಿಗೆರೆ ಗ್ರಾಮದ ಆರ್.ಎನ್ ರುದ್ರೇಶ್ ಮತ್ತು ಕುಮಾರ್ ಮಾಸ್ಟರ್ ಸೇರಿದಂತೆ ಇನ್ನಿತರರು ಸನ್ಮಾನಿಸಿ ಅಭಿನಂದಿಸಿದರು. 
    ಭದ್ರಾವತಿ: ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಹಿರಿಯ ಪುತ್ರ ಬಿ.ಎಸ್ ಗಣೇಶ್‌ರವರನ್ನು ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. 
    ಪ್ರಸ್ತುತ ಅಧ್ಯಕ್ಷರಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್‌ರವರ ಸ್ಥಾನಕ್ಕೆ ಗಣೇಶ್‌ರವರನ್ನು ಸರ್ಕಾರ ನೇಮಕಗೊಳಿಸಿದೆ. ಇದುವರೆಗೂ ಗಣೇಶ್‌ರವರು ರಾಜಕೀಯವಾಗಿ ಎಲ್ಲೂ ಸಹ ಗುರುತಿಸಿಕೊಂಡಿಲ್ಲ. 
    ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರರು ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದು, ಸಂಗಮೇಶ್ವರ್ ಸಹೋದರ ಅಣ್ಣ ಬಿ.ಕೆ ಮೋಹನ್ ಹಾಗು ಇವರ ಪುತ್ರ ಬಿ.ಎಂ ಮಂಜುನಾಥ್ ಪ್ರಸ್ತುತ ನಗರಸಭೆ ಸದಸ್ಯರಾಗಿದ್ದಾರೆ. ಇನ್ನೊಬ್ಬ ಸಹೋದರ ಬಿ.ಕೆ ಶಿವಕುಮಾರ್ ಕೆಲವು ತಿಂಗಳ ಹಿಂದೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದು, ಉಳಿದಂತೆ ಹಿರಿಯ ಸಹೋದರ ಬಿ.ಕೆ ಜಗನ್ನಾಥ್‌ರವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಇದೀಗ ಸಂಗಮೇಶ್ವರ್‌ರವರ ಪುತ್ರ ಗಣೇಶ್‌ರವರು ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. 

ವಿಶೇಷ ವಿಕಲಚೇತನ ಮಕ್ಕಳು ಸಮಾಜದ ಆಸ್ತಿ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ(ಬಿಆರ್‌ಸಿ)ಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುಮಾರು ೩೦ ವಿಶೇಷ ವಿಕಲಚೇತನ ಮಕ್ಕಳನ್ನು ಅಭಿನಂದಿಸಲಾಯಿತು. 
    ಭದ್ರಾವತಿ: ವಿಶೇಷಚೇತನ ಮಕ್ಕಳಲ್ಲಿ ಒಂದು ವಿಶೇಷತೆ ಇದೆ. ಇವರು ಸಮಾಜದ ಆಸ್ತಿಯಾಗಿದ್ದು, ಪ್ರತಿಯೊಬ್ಬರು ಸಹ ಇವರ ಏಳಿಗೆಗೆ ಶ್ರಮಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ(ಬಿಆರ್‌ಸಿ)ಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುಮಾರು ೩೦ ವಿಶೇಷ ವಿಕಲಚೇತನ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಪೋಷಕರು ವಿಶೇಷ ವಿಕಲಚೇತನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಜೊತೆಗೆ ಕಲಿಕಾ ಮನೋಭಾವನೆ ಪ್ರೋತ್ಸಾಹಿಸಬೇಕೆಂದರು. 


    ಶಿವಮೊಗ್ಗ ಸುಬ್ಬಯ್ಯ ಆಸ್ಪತ್ರೆ ವೈದ್ಯ ಡಾ. ಸುಜಿತ್ ಮಾತನಾಡಿ, ವಿಕಲಚೇತನ ಮಕ್ಕಳ ವೈಯಕ್ತಿಕ ಸ್ವಚ್ಛತೆ ಕುರಿತು ಹಾಗು ವಿಕಲಚೇತನ ಮಕ್ಕಳ ಉಸಿರಾಟ ಮತ್ತು ಅಸ್ತಮಾ ಕಾಯಿಲೆ ಕುರಿತು ಹಾಗು ಅದರಿಂದ ಉಂಟಾಗುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
    ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಶಿವಮೊಗ್ಗ ಸುಬ್ಬಯ್ಯ ಆಸ್ಪತ್ರೆ ವ್ಯವಸ್ಥಾಪಕ ಕಾಂತರಾಜ್ ಹಾಗೂ ಇಸಿಓ ದಯಾನಂದ, ಬಿಆರ್‌ಪಿ ಗಂಗಾಧರ ಹಾಗು ಸಿಬ್ಬಂದಿ ವರ್ಗದವರು ಮತ್ತು ಪೋಷಕರು ಉಪಸ್ಥಿತರಿದ್ದರು. 
      ಟಿ.ಎನ್ ಪ್ರತಿಭಾ ಸ್ವಾಗತಿಸಿ, ವಿಶೇಷ ಮಕ್ಕಳ ಪಟ್ಟಿಯನ್ನು ಜಯಲಕ್ಷ್ಮಿ ವಾಚಿಸಿ, ತೀರ್ಥಪ್ಪ ವಂದಿಸಿದರು.