Sunday, February 6, 2022

ವಿಧಾನ ಪರಿಷತ್ ಸದಸ್ಯ, ಕೇಂದ್ರದ ಮಾಜಿ ಸಚಿವ ಸಿ.ಎಂ ಇಬ್ರಾಹಿಂಗೆ ರಾಜಕೀಯ ಅಸ್ಥಿರತೆ

ಕ್ಷೇತ್ರದ ಜನರಲ್ಲಿ ನಂಬಿಕೆ ಕಳೆದು ಕೊಂಡ ನಾಯಕ..!


ಸಿ.ಎಂ ಇಬ್ರಾಹಿಂ

    * ಅನಂತಕುಮಾರ್
    ಭದ್ರಾವತಿ, ಫೆ. ೬: ವಿಧಾನ ಪರಿಷತ್ ಸದಸ್ಯ, ಕೇಂದ್ರದ ಮಾಜಿ ಸಚಿವ ಸಿ.ಎಂ ಇಬ್ರಾಹಿಂರವರಿಗೆ ಇತ್ತೀಚೆಗೆ ರಾಜಕೀಯ ಅಸ್ಥಿರತೆ ಕಂಡು ಬರುತ್ತಿದ್ದು, ಸೂಕ್ತ ನೆಲೆಗಾಗಿ ಹುಡುಕಾಟ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕಳೆದ ಸುಮಾರು ೧ ವರ್ಷದಿಂದ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಇಬ್ರಾಹಿಂ, ಇದೀಗ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಕ್ಷೇತ್ರದಲ್ಲಿ ಇವರ ಸ್ಪಷ್ಟನೆ ಮೇಲೆ ಬಹುತೇಕ ಮಂದಿಗೆ ನಂಬಿಕೆ ಬರುತ್ತಿಲ್ಲ.
    ಇಬ್ರಾಹಿಂರವರು ಕ್ಷೇತ್ರದ ಜನತೆಗೆ ಹೊಸಬರಲ್ಲ. ಹಾಗಂತ ಇಲ್ಲಿಯೇ ಹುಟ್ಟಿ ಬೆಳೆದವರಲ್ಲ. ಆದರೆ ಇಲ್ಲಿಯೇ ರಾಜಕೀಯವಾಗಿ ನೆಲೆ ಕಂಡುಕೊಳ್ಳಬೇಕೆಂದು ಕೇರಳದಿಂದ ಬಂದು ನೆಲೆ ನಿಂತವರು. ಮೂಲತಃ ಜನತಾ ಪರಿವಾರದಿಂದ ರಾಜಕೀಯಕ್ಕೆ ಬಂದ ಇಬ್ರಾಹಿಂ ಎಂದಿಗೂ ಚುನಾವಣೆ ಎದುರಿಸಿ ಗೆದ್ದವರಲ್ಲ. ಹಿಂಬದಿಯಿಂದ ಅಧಿಕಾರಕ್ಕೆ ಏರಿದವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ನೇಹಿತರಾಗಿರುವ ಹಿನ್ನಲೆಯಲ್ಲಿ ಇಂದಿಗೂ ರಾಜಕೀಯದಲ್ಲಿ ಇಬ್ರಾಹಿಂ ಉಳಿದುಕೊಳ್ಳಲು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು.
       ಕ್ಷೇತ್ರದ ಆರಂಭದ ರಾಜಕಾರಣದಲ್ಲಿ ಮುಸ್ಲಿಂ ಸಮುದಾಯದವರ ಪಾತ್ರ ಹೆಚ್ಚಿನದ್ದಾಗಿದೆ. ಈ ಹಿನ್ನಲೆಯಲ್ಲಿ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕರಾಗಿದ್ದ ಅಬ್ದುಲ್ ಖುದ್ದೂಸ್ ಅನ್ವರ್‌ರವರು ೧೯೬೭ ರಿಂದ ೧೯೭೨ರವರೆಗೆ ೨ ಬಾರಿ ಶಾಸಕರಾಗಿದ್ದರು. ಆ ನಂತರ ೧೯೮೯ರಲ್ಲಿ ಇಸಾಮಿಯಾ ಅವರು ಒಂದು ಬಾರಿ ಶಾಸಕರಾಗಿದ್ದರು. ಈ ಇಬ್ಬರ ನಂತರ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಪ್ರಬಲ ನಾಯಕರಾಗಿ ಇದುವರೆಗೂ ಯಾರು ಗುರುತಿಸಿಕೊಂಡಿಲ್ಲ. ಈ ನಡುವೆ ಇಬ್ರಾಹಿಂ ನಾಯಕರಾಗಿ ಬೆಳೆಯಲು ಪ್ರಯತ್ನಿಸಿದರಾದರೂ ಸಹ ಇವರ ಮೇಲೆ ಮುಸ್ಲಿಂ ಸಮುದಾಯದ ಬಹುತೇಕ ಮಂದಿ ಒಲವು ತೋರಿಸಲಿಲ್ಲ.
    ಸಿದ್ದರಾಮಯ್ಯಯವರು ಜಾತ್ಯಾತೀತ ಜನತಾದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಾಗ ಇಬ್ರಾಹಿಂ ಸಹ ಕಾಂಗ್ರೆಸ್ ಸೇರಲು ಪ್ರಯತ್ನಿಸಿದರಾದರೂ ಸಹ ಕಾಂಗ್ರೆಸ್‌ನಲ್ಲಿ ಇವರ ಸೇರ್ಪಡೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಭದ್ರ ಬುನಾದಿ ಕಂಡುಕೊಂಡ ನಂತರ ಅವರ ಒತ್ತಡಕ್ಕೆ ಮಣಿದು ಇಬ್ರಾಹಿಂ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಇಬ್ರಾಹಿಂ ಈ ನಡುವೆ ಕ್ಷೇತ್ರದಲ್ಲಿ ಆಗಲೇ ಪ್ರಬಲವಾಗಿ ರಾಜಕೀಯ ಅಸ್ತಿತ್ವ ಕಂಡುಕೊಂಡಿದ್ದ ಬಿ.ಕೆ ಸಂಗಮೇಶ್ವರ್‌ರನ್ನು ಮೂಲೆ ಗುಂಪು ಮಾಡಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿ ಕೊನೆಗೆ ೩ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಆದರೂ ಸಹ ಸಿದ್ದರಾಮಯ್ಯ ಇಬ್ರಾಹಿಂರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಿ ರಾಜಕೀಯದಲ್ಲಿ ಮುಂದುವರೆಯುವಂತೆ ನೋಡಿಕೊಂಡರು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಇಬ್ರಾಹಿಂ ಇದೀಗ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಲು ಮುಂದಾಗಿರುವುದು ಅವರ ರಾಜಕೀಯ ಅಸ್ಥಿರತೆಯನ್ನು ಎದ್ದು ತೋರಿಸುತ್ತಿದೆ.
    ಕಳೆದ ಸೆಪ್ಟಂಬರ್‌ನಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಮೊದಲ ವರ್ಷದ ಪುಣ್ಯಸ್ಮರಣೆ ಸಮಾರಂಭದಲ್ಲಿ ಇಬ್ರಾಹಿಂ ಜೆಡಿಎಸ್ ಸೇರುವ ಮುನ್ಸೂಚನೆ ಸಹ ನೀಡಿದ್ದರು. ಆದರೆ ಈ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿರಲಿಲ್ಲ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇಬ್ರಾಹಿಂ ಸೇರ್ಪಡೆಗೊಳ್ಳುವ ಬಗ್ಗೆ ಸಹ ಸಹಮತ ವ್ಯಕ್ತಪಡಿಸಿದ್ದರು. ಆದರೆ ಕ್ಷೇತ್ರದಲ್ಲಿ ಇಬ್ರಾಹಿಂ ನೆಲೆ ನಿಲ್ಲುವ ಅವಕಾಶ ಈಗಾಗಲೇ ಕಳೆದುಕೊಂಡಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಶಾರದ ಅಪ್ಪಾಜಿಯೇ ಅಭ್ಯರ್ಥಿ ಎಂದು ಕುಮಾರಸ್ವಾಮಿಯವರು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೂ ಸಹ ಇಬ್ರಾಹಿಂ ಜೆಡಿಎಸ್ ಸೇರುವುದಾಗಿ ಘೋಷಿಸಿಕೊಂಡಿರುವುದು ಪುನಃ ಹಿಂಬದಿ ರಾಜಕಾರಣದ ಮೂಲಕ ಅಧಿಕಾರ ಹಿಡಿಯಬೇಕೆಂಬ ಉದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷಗಳಿಲ್ಲ. ಈ ಹಿನ್ನಲೆಯಲ್ಲಿ ರಾಜಕೀಯ ಸ್ಥಿರತೆ ಕಾಯ್ದುಕೊಳ್ಳಲು ಜೆಡಿಎಸ್ ಸೇರುವುದು ಅನಿವಾರ್ಯವಾಗಿದೆ. ಆದರೆ ಇಬ್ರಾಹಿಂ ಜೆಡಿಎಸ್ ಸೇರುವ ಸ್ಪಷ್ಟನೆ ಬಗ್ಗೆ ಕ್ಷೇತ್ರದಲ್ಲಿ ಬಹುತೇಕ ಮಂದಿಗೆ ನಂಬಿಕೆ ಬರುತ್ತಿಲ್ಲ.  

ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ


ಭದ್ರಾವತಿ ಜನ್ನಾಪುರದ ಹಿರಿಯ ಹವ್ಯಾಸಿ ಅಂಚೆ ಚೀಟಿ, ನೋಟು, ನಾಣ್ಯ ಸಂಗ್ರಹಗಾರ ಗಣೇಶ್‌ರವರು ನೋಟಿನ ಮೂಲಕ ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
    ಭದ್ರಾವತಿ, ಫೆ. ೬: ಭಾರತ ರತ್ನ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಗಾನ ಕೋಗಿಲೆ ಲತಾ ಮಂಗೇಶ್ಕರ್‌ರವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ.
    ಲತಾ ಮಂಗೇಶ್ಕರ್‌ರವರ ನಿಧನ ಮನಸ್ಸಿಗೆ ತುಂಬಾ ನೋವುಂಟು ಮಾಡಿದ್ದು, ಇವರ ನಿಧನ ಸಂಗೀತ ಮತ್ತು ಗಾಯನ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಸುಮಾರು ೩೬ ಭಾಷೆಗಳಲ್ಲಿ ಗಾಯನ ಮಾಡಿರುವ ಇವರು ತಮ್ಮ ಸುಮಧುರ ಕಂಠದಿಂದ ಎಲ್ಲಾ ಭಾಷಿಗರ ಮನಸ್ಸನ್ನು ಸೂರೆಗೊಂಡಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದುವ ಮೂಲಕ ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದು ಗೌರವಕ್ಕೆ ಪಾತ್ರರಾಗಿದ್ದರು. ಇವರಿಗೆ ಅಂತಿಮ ಗೌರವ ಪೂರ್ವಕ ನಮನ ಸಲ್ಲಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
    ನೋಟಿನ ಮೂಲಕ ಸಂತಾಪ :
    ನಗರದ ಜನ್ನಾಪುರದ ಹಿರಿಯ ಹವ್ಯಾಸಿ ಅಂಚೆ ಚೀಟಿ, ನೋಟು, ನಾಣ್ಯ ಸಂಗ್ರಹಗಾರ ಗಣೇಶ್‌ರವರು ನೋಟಿನ ಮೂಲಕ ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
    ೧೦ ರು. ಮುಖಬೆಲೆ ಹೊಂದಿರುವ ಲತಾ ಮಂಗೇಶ್ಕರ್‌ರವರ ಜನ್ಮ ದಿನಾಂಕ ಮತ್ತು ಮರಣ ದಿನಾಂಕ ಒಳಗೊಂಡಿರುವ ನೋಟನ್ನು ಸಮರ್ಪಿಸಿದ್ದಾರೆ. ಗಣೇಶ್‌ರವರು ಪ್ರತಿ ಬಾರಿ ಗಣ್ಯ ವ್ಯಕ್ತಿಗಳು ನಿಧನ ಹೊಂದಿದಾಗ ನೋಟಿನ ಮೂಲಕ ಸಂತಾಪ ಸೂಚಿಸಿ ಗಮನ ಸೆಳೆಯುತ್ತಿದ್ದಾರೆ.