``ಕಾರ್ಮಿಕ ವಿರೋಧಿ, ರೈತ ವಿರೋಧಿ, ಕಾರ್ಪೊರೇಟ್‌ಪರ" ನೀತಿಗಳನ್ನು ಖಂಡಿಸಿ ಪ್ರತಿಭಟನೆ
ಕೇಂದ್ರ ಸರ್ಕಾರದ "ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್‌ಪರ" ನೀತಿಗಳನ್ನು ಖಂಡಿಸಿ ಬುಧವಾರ ದೇಶಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್‌ಗೆ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ (ವಿಐಎಸ್‌ಎಲ್) ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸಂಘ ಸಹ ಬೆಂಬಲ ವ್ಯಕ್ತಪಡಿಸಿ ಕಾರ್ಖಾನೆ ಮುಂಭಾಗ ತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿತು.
ಭದ್ರಾವತಿ: ಕೇಂದ್ರ ಸರ್ಕಾರದ "ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್‌ಪರ" ನೀತಿಗಳನ್ನು ಖಂಡಿಸಿ ಬುಧವಾರ ದೇಶಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್‌ಗೆ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ (ವಿಐಎಸ್‌ಎಲ್) ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸಂಘ ಸಹ ಬೆಂಬಲ ವ್ಯಕ್ತಪಡಿಸಿ ಕಾರ್ಖಾನೆ ಮುಂಭಾಗ ತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿತು.
ಕಳೆದ ಸುಮಾರು ೩೦ ತಿಂಗಳಿನಿಂದ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಹಿಂಪಡೆಯುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಹಾಗು ಗುತ್ತಿಗೆ ಕಾರ್ಮಿಕರಿಗೆ ತಿಂಗಳ ಪೂರ್ತಿ ಉದ್ಯೋಗ ಕಲ್ಪಿಸಿಕೊಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯುಸಿ ಸಂಘಟನೆ ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ. ನಾರಾಯಣ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಂತರಾಮುರವರು, ಈಗಾಗಲೇ ಹಲವು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಧೋರಣೆ ಮುಂದುವರಿಸಿದೆ. ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ ವಿಶ್ವೇಶ್ವರಾಯನವರ ದೂರ ದೃಷ್ಟಿ ಹಾಗು ಪರಿಶ್ರಮದಿಂದ ಸ್ಥಾಪಿತವಾದ ವಿಐಎಸ್‌ಎಲ್ ಕಾರ್ಖಾನೆಗೆ ಮೊದಲು ಬಂಡವಾಳ ಹೂಡಬೇಕು. ಗುತ್ತಿಗೆ ಕಾರ್ಮಿಕರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
ಕಾರ್ಮಿಕರ ಹಕ್ಕುಗಳಿಂದ ಹಿಡಿದು ಹಣದುಬ್ಬರದಂತಹ ಸಾಮಾನ್ಯ ಜನರ ಜೀವನದ ಸಮಸ್ಯೆಗಳವರೆಗೂ ಕಾರ್ಮಿಕ ವಿರೋಧಿ ನೀತಿಗಳು ವಿಸ್ತರಿಸಿವೆ. ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ. ಈ ಹೊಸ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಿ, ಉದ್ಯೋಗದಾತರಿಗೆ(ಕಾರ್ಪೊರೇಟ್‌ಗಳಿಗೆ) ಹೆಚ್ಚಿನ ಅನುಕೂಲ ಮಾಡಿಕೊಡುತ್ತವೆ ಎಂದು ಆರೋಪಿಸಿದರು.
ವಾರಕ್ಕೆ ೭೦-೯೦ ಗಂಟೆಗಳಷ್ಟು ಕೆಲಸದ ಸಮಯವನ್ನು ಜಾರಿಗೆ ತರುವ ಯಾವುದೇ ಪ್ರಯತ್ನವನ್ನು ಕಾರ್ಮಿಕರ ಆರೋಗ್ಯ ಮತ್ತು ವೈಯಕ್ತಿಕ ಜೀವನದ ದೃಷ್ಟಿಯಿಂದ ಬಲವಾಗಿ ವಿರೋಧಿಸಲಾಯಿತು.
ಅಸಂಘಟಿತ, ಗುತ್ತಿಗೆ ಮತ್ತು ವಿವಿಧ ಯೋಜನೆಗಳಡಿ ಕೆಲಸ ಮಾಡುವವರಿಗೆ ಮಾಸಿಕ ಪ್ರಸ್ತುತದ ಜೀವನ ವೆಚ್ಚಕ್ಕೆ ಅನುಗುಣವಾಗಿ ೨೬,೦೦೦ ರಾಷ್ಟ್ರೀಯ ಕನಿಷ್ಠ ವೇತನ ನಿಗದಿಪಡಿಸುವಂತೆ ಆಗ್ರಹಿಸಿದರು.
ಈ ಮುಷ್ಕರಕ್ಕೆ ಹತ್ತು ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳ ವೇದಿಕೆ ಮತ್ತು ಬಹುತೇಕ ಎಲ್ಲಾ ಸ್ವತಂತ್ರ ಅಖಿಲ ಭಾರತ ವಲಯ ಒಕ್ಕೂಟಗಳು/ಸಂಘಟನೆಗಳು ಒಟ್ಟಾಗಿ ಕರೆ ನೀಡಿವೆ. ಇದರ ಜೊತೆಗೆ, ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೃಷಿ ಕಾರ್ಮಿಕರ ಒಕ್ಕೂಟಗಳು ಸಹ ಸಂಪೂರ್ಣ ಬೆಂಬಲ ಘೋಷಿಸಿವೆ. ಈ ಮುಷ್ಕರವು ಸರ್ಕಾರಕ್ಕೆ ಬಲವಾದ ಸಂದೇಶ ರವಾನಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್, ಪ್ರಧಾನ ಕಾರ್ಯದರ್ಶಿ ಪಿ. ರಾಕೇಶ್, ಉಪಾಧ್ಯಕ್ಷರಾದ ಆರ್. ಮಂಜುನಾಥ್, ಎನ್. ಶ್ರೀನಿವಾಸ್, ಸಹ ಕಾರ್ಯದರ್ಶಿಗಳಾದ ಅಂತೋಣಿ ದಾಸ್, ಎನ್.ಬಿ ಮಂಜುನಾಥ್, ಎಚ್.ಡಿ ತ್ಯಾಗರಾಜ್, ಖಜಾಂಚಿ ಜಿ. ಆನಂದ ಹಾಗು ಕಾರ್ಯಕಾರಿ ಸಮಿತಿ ಸದಸ್ಯರು, ಎಐಟಿಯುಸಿ ಸಂಘಟನೆ ಪ್ರಮುಖರಾದ ಐಸಾಕ್, ಕುಮಾರಸ್ವಾಮಿ ಸೇರಿದಂತೆ ಕಾರ್ಮಿಕ ಮುಖಂಡರು, ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.