Wednesday, July 9, 2025

ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆಗೆ ಕಾಯ್ದಿಸಿರುವ ಜಾಗ ರಕ್ಷಿಸಿ, ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿ

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ  ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಎಸ್. ವಿರುಪಾಕ್ಷಪ್ಪ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಮಾತನಾಡಿದರು. 
    ಭದ್ರಾವತಿ : ತಾಲೂಕಿನ ಸಿಂಗನಮನೆ ಕಸಬಾ ೨ನೇ ಹೋಬಳಿ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಕಟ್ಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ನಿರ್ಮಾಣಕ್ಕೆ ಕಾಯ್ದಿಸಿರುವ ಗ್ರಾಮ ಠಾಣಾ ಜಾಗ ರಕ್ಷಿಸುವಂತೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಎಸ್. ವಿರುಪಾಕ್ಷಪ್ಪ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಒತ್ತಾಯಿಸಿದ್ದಾರೆ. 
    ಅವರು ಬುಧವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಅನುಕೂಲ ಹೊಂದಿರುವ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ನಿರ್ಮಾಣಕ್ಕೆ ಕಾಯ್ದಿಸಿರುವ ಜಾಗವನ್ನು ೨-೩ ನಿವೇಶನಗಳನ್ನು ಹೊಂದಿರುವ ಗ್ರಾಮಸ್ಥರು ಅಕ್ರಮವಾಗಿ ಒತ್ತುವರಿ ಮಾಡುತ್ತಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯಿತಿ ವತಿಯಿಂದ ತುರ್ತು ಸಭೆ ನಡೆಸಿ ಹಲವಾರು ಬಾರಿ ಪತ್ರದ ಮೂಲಕ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಥವಾ ಗ್ರಾಮ ಪಂಚಾಯಿತಿ ಆಡಳಿತದ ಗಮನಕ್ಕೆ ಯಾವುದೇ ಮಾಹಿತಿ ತರದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದು, ಗ್ರಾಮಠಾಣಾ ಜಾಗ ಸಂಬಂಧ ನ್ಯಾಯಾಲಯದ ಆದೇಶವನ್ನು ಪರಿಗಣಿಸದೆ, ಕಾನೂನು ರಕ್ಷಿಸದೆ ನಡೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. 
    ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ನಿರ್ಮಾಣಕ್ಕೆ ಮೀಸಲಿರಿಸಿರುವ ಜಾಗ ರಕ್ಷಿಸಿ ಉಳಿದ ಜಾಗ ಯಾರಿಗಾದರೂ ಕೊಡಲಿ ಅದಕ್ಕೆ ನಮ್ಮ ವಿರೋಧವಿಲ್ಲ. ತಕ್ಷಣ ಆಸ್ಪತ್ರೆ ಹಾಗು ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು. 
    ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಶೀಲ, ಸುರೇಶ್ ಗೌಳಿ, ದಯಾನಂದ, ಶ್ವೇತ, ಗ್ರಾಮಸ್ಥರಾದ ಗಂಗಾರಾಮ್, ವೆಂಕಾರೆಡ್ಡಿ, ಮಣಿಕಂಠ ಮತ್ತು ಸಂತೋಷ್ ಉಪಸ್ಥಿತರಿದ್ದರು. 

No comments:

Post a Comment