Monday, December 9, 2024

ಮೆಸ್ಕಾಂ ಗ್ರಾಹಕರ ಸಲಹಾ ಸಮಿತಿ ರಚನೆ : ಅಧಿಕಾರ ಹಸ್ತಾಂತರ

ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉಪವಿಭಾಗ ಹಾಗು ಶಾಖಾ ಕಛೇರಿ ಮಟ್ಟದಲ್ಲಿ ಸರ್ಕಾರದ ಆದೇಶದಂತೆ ಮೆಸ್ಕಾಂ ಗ್ರಾಹಕರ ಸಲಹಾ ಸಮಿತಿ ರಚನೆ ಮಾಡಲಾಗಿದ್ದು, ನೂತನ ಸಮಿತಿಗೆ ಸೋಮವಾರ ಜೆಪಿಎಸ್ ಕಾಲೋನಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿಯಲ್ಲಿ ಅಧಿಕಾರ ಹಸ್ತಾಂತರಿಸಲಾಯಿತು. 
    ಭದ್ರಾವತಿ: ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಉಪವಿಭಾಗ ಹಾಗು ಶಾಖಾ ಕಛೇರಿ ಮಟ್ಟದಲ್ಲಿ ಸರ್ಕಾರದ ಆದೇಶದಂತೆ ಮೆಸ್ಕಾಂ ಗ್ರಾಹಕರ ಸಲಹಾ ಸಮಿತಿ ರಚನೆ ಮಾಡಲಾಗಿದ್ದು, ನೂತನ ಸಮಿತಿಗೆ ಸೋಮವಾರ ಜೆಪಿಎಸ್ ಕಾಲೋನಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿಯಲ್ಲಿ ಅಧಿಕಾರ ಹಸ್ತಾಂತರಿಸಲಾಯಿತು. 
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಗರ ಉಪವಿಭಾಗ ಸಲಹಾ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಪ್ರಸರಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸದಸ್ಯರಾಗಿದ್ದು,  ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ಸಂಚಾಲಕರಾಗಿದ್ದಾರೆ. 
    ಉಳಿದಂತೆ ಗ್ರಾಹಕ ಪ್ರತಿನಿಧಿ-೧, ಗಾಂಧಿನಗರದ ನಿವಾಸಿ ಸುರೇಶ್ ವರ್ಮ, ಪರಿಶಿಷ್ಟ ಜಾತಿ/ಪಂಗಡದ ಪ್ರತಿನಿಧಿ, ಭೋವಿ ಕಾಲೋನಿ ನಿವಾಸಿ ಎಲ್. ಮಂಜುನಾಥ್, ಮಹಿಳಾ ಪ್ರತಿನಿಧಿ, ನ್ಯೂಕಾಲೋನಿ ನಿವಾಸಿ ವಿಜಯಲಕ್ಷ್ಮೀ, ಹಿಂದುಳಿದ ವರ್ಗಗಳ ಪ್ರತಿನಿಧಿ, ಹುಡ್ಕೋ ಕಾಲೋನಿ ನಿವಾಸಿ ಸೆಲ್ವರಾಜ್ ಹಾಗು ಕೈಗಾರಿಕಾ/ ವಾಣಿಜ್ಯ ಪ್ರತಿನಿಧಿಯಾಗಿ ಕೇಶವಪುರ ಬಡಾವಣೆ ನಿವಾಸಿ ಬಸವಂತಪ್ಪ ನಾಮನಿರ್ದೇಶನಗೊಂಡಿದ್ದಾರೆ. 
    ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಅಧ್ಯಕ್ಷತೆಯಲ್ಲಿ ಘಟಕ-೧, ನಗರ ಉಪವಿಭಾಗ ಸಲಹಾ ಸಮಿತಿ ರಚಿಸಲಾಗಿದೆ. ಪ್ರಸರಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸದಸ್ಯರಾಗಿದ್ದು, ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ಸಂಚಾಲಕರಾಗಿದ್ದಾರೆ. 
    ಉಳಿದಂತೆ ಗ್ರಾಹಕ ಪ್ರತಿನಿಧಿ-೧, ಉಜ್ಜನಿಪುರ ನಿವಾಸಿ ಡಿ. ಭಾಸ್ಕರ್, ಗ್ರಾಹಕ ಪ್ರತಿನಿಧಿ-೨, ದೊಡ್ಡಗೊಪ್ಪೇನಹಳ್ಳಿ ನಿವಾಸಿ ಜಗದೀಶ್, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಪ್ರತಿನಿಧಿ, ಕಾಗದನಗರ ನಿವಾಸಿ ರಾಕೇಶ್, ಮಹಿಳಾ ಪ್ರತಿನಿಧಿ, ಹುಡ್ಕೋ ಕಾಲೋನಿ ನಿವಾಸಿ ರುಕ್ಮಿಣಿಯಮ್ಮ, ಹಿಂದುಳಿದ ವರ್ಗಗಳ ಪ್ರತಿನಿಧಿ ಗೌತಮ್ ಹಾಗು ಕೈಗಾರಿಕಾ/ವಾಣಿಜ್ಯ ಪ್ರತಿನಿಧಿಯಾಗಿ ಆಂಜನೇಯ ಅಗ್ರಹಾರ ನಿವಾಸಿ ಪಿ. ಸುಬ್ಬು ನಾಮನಿರ್ದೇಶನಗೊಂಡಿದ್ದಾರೆ. 
    ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಅಧ್ಯಕ್ಷತೆಯಲ್ಲಿ ಘಟಕ-೨, ನಗರ ಉಪವಿಭಾಗ ಸಲಹಾ ಸಮಿತಿ ರಚಿಸಲಾಗಿದೆ. ಪ್ರಸರಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸದಸ್ಯರಾಗಿದ್ದು, ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ಸಂಚಾಲಕರಾಗಿದ್ದಾರೆ. 
    ಉಳಿದಂತೆ ಗ್ರಾಹಕ ಪ್ರತಿನಿಧಿ-೨, ಹಳೇನಗರದ ದೊಡ್ಡ ಕುರುಬರ ಬೀದಿ ನಿವಾಸಿ ಎಚ್. ಶ್ರೀನಿವಾಸ್ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಪ್ರತಿನಿಧಿಯಾಗಿ ಅಂಬೇಡ್ಕರ್ ನಗರ ನಿವಾಸಿ ಎಲ್. ರಮೇಶ್ ನಾಮನಿರ್ದೇಶನಗೊಂಡಿದ್ದಾರೆ. 
    ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಬಳ್ಳಾಪುರ, ತಾಲೂಕು ಬಗರ್ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಸದಸ್ಯರಾದ ಚನ್ನಪ್ಪ, ಬಿ.ಟಿ ನಾಗರಾಜ್, ಲತಾ ಚಂದ್ರಶೇಖರ್, ಮುಖಂಡ ಪ್ರಕಾಶ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವಿಜೃಂಭಣೆಯಿಂದ ಜರುಗಿದ ಅಮಲೋದ್ಭವಿ ಮಾತೆ ದೇವಾಲಯದ ವಾರ್ಷಿಕ ಮಹೋತ್ಸವ

ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ವಾರ್ಷಿಕ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ : ನಗರದ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ವಾರ್ಷಿಕ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. ಕ್ರೈಸ್ತ ಧರ್ಮದ ಸಹಸ್ರಾರು ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. 
    ಸುಮಾರು ೮ ದಶಕದಿಂದ ನಗರದಲ್ಲಿ ಕ್ರೈಸ್ತರ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಪ್ರತಿ ವರ್ಷ ೯ ದಿನಗಳ ಕಾಲ ವಾರ್ಷಿಕ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. 
    ಈ ಬಾರಿ ವಾರ್ಷಿಕ ಮಹೋತ್ಸವದ ಅಂಗವಾಗಿ ಶನಿವಾರ ಮಾತೆಯ ಅಲಂಕೃತ ಭವ್ಯ ತೇರಿನ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.  
    ಮಹೋತ್ಸವದ ಅಂತಿಮ ದಿನ ದೇವಾಲಯದ ಆವರಣದಲ್ಲಿ ಧರ್ಮ ಗುರುಗಳ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಮುಕ್ತಾಯಗೊಂಡಿತು.  ಕಾರವಾರ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಡ್ಯುಮಿಂಗ್ ಡಯಾಸ್, ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೋ, ದೇವಾಲಯದ ಧರ್ಮ ಗುರು ಲ್ಯಾನ್ಸಿ ಡಿಸೋಜ, ವಿವಿಧ ಕ್ರೈಸ್ತ ದೇವಾಲಯಗಳ ಧರ್ಮಗುರು, ಭಗಿನಿಯರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.

ಮಕ್ಕಳನ್ನು ಸೃಜನಶೀಲ ಮನಸ್ಸುಗಳನ್ನು ಹೊಂದಿರುವ ಕ್ರಿಯಾಶೀಲರಾಗಿ ರೂಪಿಸಲು ಕಮ್ಮಟಗಳು ಸಹಕಾರಿ : ಡಿ. ಮಂಜುನಾಥ್

ಭದ್ರಾವತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕಾವ್ಯ, ಕಥೆ ಹಾಗು ಪ್ರಬಂಧ ರಚನಾ ಕಮ್ಮಟ ಆಯೋಜಿಸಲಾಗಿತ್ತು. 
    ಭದ್ರಾವತಿ : ನಮ್ಮ ಮಕ್ಕಳನ್ನು ಸೃಜನಶೀಲ ಮನಸ್ಸುಗಳನ್ನು ಹೊಂದಿರುವ ಕ್ರಿಯಾಶೀಲರಾಗಿ ರೂಪಿಸಲು ಕಮ್ಮಟಗಳು ಸಹಕಾರಿಯಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಡಿ. ಮಂಜುನಾಥ್ ಹೇಳಿದರು. 
    ಅವರು ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕಾವ್ಯ, ಕಥೆ ಹಾಗು ಪ್ರಬಂಧ ರಚನಾ ಕಮ್ಮಟ ಉದ್ಘಾಟಿಸಿ ಮಾತನಾಡಿದರು.  
    ಶಿಕ್ಷಣದ ಜೊತೆ ಭಾಷೆ, ಸಾಹಿತ್ಯ, ಸೃಜನಶೀಲ ಚಿಂತನೆ ಎಲ್ಲವೂ ಅನುಭವಕ್ಕೆ ಬರಬೇಕು. ಆದರೆ ಅಂಕಗಳ ಹಿಂದೆ ಓಡುವ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟ ಕಳಪೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. 
    ನಮ್ಮ ಮಕ್ಕಳು ಕವಿಯಾಗಿ, ಕಥೆಗಾರರಾಗಿ, ಪ್ರಬಂಧಕಾರರಾಗಿ ಸೃಜನಶೀಲ ಮನಸ್ಸುಗಳನ್ನು ಹೊಂದಿರುವ ಕ್ರಿಯಾಶೀಲರಾಗಿ ರೂಪಿಸಲು ಕಮ್ಮಟಗಳು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಕಳೆದ ೧೯ ವರ್ಷಗಳಿಂದ ಜಿಲ್ಲೆಯಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಕ್ರಿಯಾಶೀಲ ಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳ ಸಮಯ ಅಮೂಲ್ಯವಾಗಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು. 
        ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸಲು ಕಮ್ಮಟಗಳು ಉಪಯುಕ್ತವಾಗಿವೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬರೆಯಲು, ಮಾತನಾಡಲು ಸಾಧ್ಯವಾಗದಿದ್ದರೆ ಆಲಿಸುವ, ಮಾತನಾಡುವ ಕೌಶಲ್ಯ ಬೆಳೆಸಿಕೊಳ್ಳ ಬೇಕು. ಪ್ರಾಥಮಿಕ ಶಿಕ್ಷಣಕ್ಕೆ ಭದ್ರವಾದ ಬುನಾದಿ ಹಾಕಬೇಕು. ಅದು ಕೆಲವೆಡೆ ಆಗುತ್ತಿಲ್ಲ ಎನ್ನುವ ಕೊರಗಿದೆ ಎಂದರು. 
        ಸಂಪನ್ಮೂಲ ವ್ಯಕ್ತಿಗಳಾಗಿದ್ದ ಸಾಹಿತಿಗಳು, ವಿಶ್ರಾಂತ ಪ್ರಾಂಶುಪಾಲರಾದ ಡಾ. ಎಚ್. ಟಿ. ಕೃಷ್ಣಮೂರ್ತಿ ಅವರು ಕವಿತೆ ನಿಮ್ಮೊಳಗೆ ಹುಟ್ಟುತ್ತೆ. ಅದು ಹೇಗಿರುತ್ತೆ ಎಂದು ವಿವರಿಸಿದರು.
         ರಂಗಕರ್ಮಿ, ಸಹ ಪ್ರಾಧ್ಯಾಪಕ ಡಾ. ಜಿ. ಆರ್. ಲವ ಕಥೆ ರಚನೆ ಕುರಿತು ಹಾಗು ಸಾಹಿತಿ ಅಂಕಣಕಾರ ಬಿ. ಚಂದ್ರೇಗೌಡ ಪ್ರಬಂಧ ಸಾಹಿತ್ಯ ಕುರಿತು ಮಾಹಿತಿ ನೀಡಿದರು.
        ಉಪ ಪ್ರಾಂಶುಪಾಲ ದಯಾನಂದ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ರವೀಂದ್ರ, ಕಾಂತರಾಜ್ ಉಪಸ್ಥಿತರಿದ್ದರು.
ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉಮಾಪತಿ ಸ್ವಾಗತಿಸಿದರು. ತಾಲೂಕು ಕಸಾಪ ಕಟ್ಟಡ ಸಮಿತಿ ಅಧ್ಯಕ್ಷೆ ಡಾ. ವಿಜಯದೇವಿ, ರಂಗ ಕಲಾವಿದರಾದ ವೈ.ಕೆ ಹನುಮಂತಯ್ಯ, ಕಮಲಾಕರ ಹಾಗು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.