Sunday, January 30, 2022

ಉಪ ವಲಯ ಅರಣ್ಯಾಧಿಕಾರಿಗಳು, ಮೋಜಣಿದಾರರ ಸಂಘದಿಂದ ದಿನಚರಿ ಬಿಡುಗಡೆ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಶುಗರ್ ಟೌನ್ ಕಣ್ಣಿನ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಮೋಜಣಿದಾರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೨೦೨೨ನೇ ಸಾಲಿನ ದಿನಚರಿ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ, ಜ. ೩೦: ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಮೋಜಣಿದಾರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೨೦೨೨ನೇ ಸಾಲಿನ ದಿನಚರಿ ಬಿಡುಗಡೆಗೊಳಿಸಲಾಯಿತು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ ಗಾಮನಗಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಭದ್ರಾವತಿ ಅರಣ್ಯ ವಿಭಾಗದ ವ್ಯವಸ್ಥಾಪಕ ಬಸವರಾಜ ಬಿ. ಹೊನ್ನಾರೆಡ್ಡಿ, ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ ಸುಬ್ರಹ್ಮಣ್ಯ, ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಆರ್.ಟಿ ಮಂಜುನಾಥ್, ಅಜ್ಜಂಪುರ ವಲಯ ಅರಣ್ಯಾಧಿಕಾರಿ ಮಹೇಶ್‌ನಾಯ್ಕ್, ಅರಣ್ಯ ಸಂಚಾರಿದಳದ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮೇಗಳಮನಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ, ಜಂಟಿ ಕಾರ್ಯದರ್ಶಿ ಬಿ.ಆರ್ ದಿನೇಶ್‌ಕುಮಾರ್, ರಾಜ್ಯ ಅರಣ್ಯ ರಕ್ಷಕರು ಮತ್ತು ವೀಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಚ್. ರಶೀದ್ ಬೇಗ್ ಮತ್ತು ಕ್ಷೇಮಾಭಿವೃದ್ಧಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಡಿ ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಮೋಜಣಿದಾರರ ಸಂಘದ ಗೌರವಾಧ್ಯಕ್ಷ ಎಂ. ವಿಜೇಂದ್ರ ಅಧ್ಯಕ್ಷತೆ ವಹಿಸಿದ್ದರು.

ರೈತ ಮುಖಂಡ ಟಿ. ಮಂಜಪ್ಪ ನಿಧನ

ಟಿ. ಮಂಜಪ್ಪ
    ಭದ್ರಾವತಿ, ಜ. ೩೦: ಜೇಡಿಕಟ್ಟೆ ಗ್ರಾಮದ ಹಿರಿಯ ರೈತ ಮುಖಂಡ, ಶ್ರೀ ಮರುಳ ಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಗೌರವ ಸಲಹೆಗಾರ ಟಿ. ಮಂಜಪ್ಪ ಶನಿವಾರ ನಿಧನ ಹೊಂದಿದರು.
    ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಮಂಜಪ್ಪ ಅವರು ಸಾಮಾಜಿಕ ಹೋರಾಟಗಾರರಾಗಿ ಸಹ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮರುಳ ಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಹಾಗು ಪದಾಧಿಕಾರಿಗಳು, ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭಾ ಸದಸ್ಯೆ ರೇಖಾ ಪ್ರಕಾಶ್, ಮಾಜಿ ಸದಸ್ಯರಾದ ಕೆ.ಬಿ ಗಂಗಾಧರ್, ಎಂ.ಎ ಅಜಿತ್ ಸೇರಿದಂತೆ ಇನ್ನಿತರರ ಗಣ್ಯರು ಸಂತಾಪ ಸೂಚಿಸಿದ್ದಾರೆ.  

ರೋಜ್ಗಾರ್ ದಿನಾಚರಣೆ : ನರೇಗಾ ಕೂಲಿ ಕಾರ್ಮಿಕರಿಗೆ ಮಾಹಿತಿ ಕಾರ್ಯಕ್ರಮ

ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ(ನರೇಗಾ)ಯಡಿ ದುಡಿಯುತ್ತಿರುವ ಕೂಲಿ ಕಾರ್ಮಿಕರಿಗೆ ವಿಶೇಷ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜ. ೩೦: ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ(ನರೇಗಾ)ಯಡಿ ದುಡಿಯುತ್ತಿರುವ ಕೂಲಿ ಕಾರ್ಮಿಕರಿಗೆ ವಿಶೇಷ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರೋಜ್ಗಾರ್ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೆಶ್ ಕಾರ್ಮಿಕರಿಗೆ ಮಾಹಿತಿ ನೀಡಿದರು.
    ಉದ್ಯೋಗ ಖಾತ್ರಿ ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಕೊರೋನಾ ಸಂದರ್ಭದಲ್ಲಿ ಎದುರಾದ ಸಂಕಷ್ಟಗಳಿಂದ ಹೊರಬರಲು ನರೇಗಾ ಯೋಜನೆ ಹೆಚ್ಚು ಸಹಕಾರಿಯಾಗುವ ಜೊತೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಸಹ ನಡೆದಿವೆ ಎಂದರು.
    ಕಾರ್ಯಕ್ರಮದಲ್ಲಿ ಕರಪತ್ರಗಳನ್ನು ವಿತರಿಸಿ ಹಿರಿಯ ನಾಗರೀಕರ ಸಹಾಯವಾಣಿ ಕುರಿತು ಮಾಹಿತಿ ನೀಡಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್. ಸುರೇಶ್, ಎಸ್‌ಡಿಎ ಭಾಸ್ಕರ್, ಡಿಇಓ ಬೈರೇಶ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಧರ್ಮಸ್ಥಳ ಸಂಘದಿಂದ ಗ್ರಾಹಕ ಸೇವಾ ಕೇಂದ್ರ ಆರಂಭ

ಭದ್ರಾವತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿದ್ಯಾಮಂದಿರ ವಲಯ ಲೋಯರ್ ಹುತ್ತಾ ಕಾರ್ಯಕ್ಷೇತ್ರದ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ಗ್ರಾಹಕ ಸೇವಾ ಕೇಂದ್ರ(ಸಿಎಸ್‌ಸಿ)ಕ್ಕೆ ನಗರಸಭಾ ಸದಸ್ಯ ಜಾರ್ಜ್ ಭಾನುವಾರ ಚಾಲನೆ ನೀಡಿದರು.
    ಭದ್ರಾವತಿ, ಜ. ೩೦: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿದ್ಯಾಮಂದಿರ ವಲಯ ಲೋಯರ್ ಹುತ್ತಾ ಕಾರ್ಯಕ್ಷೇತ್ರದ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ಗ್ರಾಹಕ ಸೇವಾ ಕೇಂದ್ರ(ಸಿಎಸ್‌ಸಿ)ಕ್ಕೆ ನಗರಸಭಾ ಸದಸ್ಯ ಜಾರ್ಜ್ ಭಾನುವಾರ ಚಾಲನೆ ನೀಡಿದರು.
    ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಒಟ್ಟು ೪೩ ಗ್ರಾಹಕ ಸೇವಾ ಕೇಂದ್ರಗಳು ಮಂಜೂರಾಗಿದ್ದು, ಗ್ರಾಮಾಂತರ ಹಾಗು ನಗರ ಪ್ರದೇಶ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಆರಂಭಗೊಳ್ಳಲಿವೆ. ಈ ಗ್ರಾಹಕ ಸೇವಾ ಕೇಂದ್ರಗಳು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ವಿವಿಧ ಸೇವೆಗಳನ್ನು ಒದಗಿಸಲಿವೆ.
    ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ಯೋಜನೆಯ ವಲಯ ಮೇಲ್ವಿಚಾರಕ ವೀರೇಶ್, ಕಛೇರಿ ಕಾರ್ಯಕರ್ತರಾದ ಅವಿನಾಶ್, ಪ್ರೀತಮ್, ಸೇವಾ ಪ್ರತಿನಿಧಿಗಳಾದ ರಾಧ, ಕಲ್ಪನಾ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸಂವಿಧಾನ ಶಿಲ್ಪಿಗೆ ಅವಮಾನ : ಮನುವಾದಿ ಮನಸ್ಥಿತಿ ಅನಾವರಣ

ನ್ಯಾಯಾಧೀಶ ಹುದ್ದೆಯಿಂದ ವಜಾಗೊಳಿಸಿ, ಬಂಧಿಸಿ : ಎವೈವಿ ಆಗ್ರಹ


    ಭದ್ರಾವತಿ, ಜ. ೩೦:  ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಗೊಳಿಸಿರುವ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್‌ರವರನ್ನು ಹುದ್ದೆಯಿಂದ ತಕ್ಷಣ ವಜಾಗೊಳಿಸಿ ಬಂಧಿಸುವಂತೆ ಡಾ. ಬಿ.ಆರ್ ಅಂಬೇಡ್ಕರ್ ಯುವಜನ ವೇದಿಕೆ(ಎವೈವಿ) ಆಗ್ರಹಿಸಿದೆ.
    ಅಂಬೇಡ್ಕರ್‌ರವರ ಭಾವಚಿತ್ರ ತೆಗೆಸಿ ಗಣರಾಜ್ಯೋತ್ಸವ ಆಚರಿಸುವ ಮೂಲಕ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್ ದರ್ಪ ಮೆರೆದಿರುವುದು ಖಂಡನೀಯ. ಮಲ್ಲಿಕಾರ್ಜುನ ಗೌಡ ಪಾಟೀಲ್, ಪ್ರಸ್ತುತ ಜಾರಿಯಲ್ಲಿರುವ ಸರ್ಕಾರಿ ನಿಯಮಗಳಿಗೆ, ಆದೇಶಗಳಿಗೆ ಮತ್ತು ರಾಷ್ಟ್ರ ಲಾಂಛನಗಳಿಗೆ ಗೌರವ ತೋರಬೇಕೆಂಬ ನಿಯಮಗಳನ್ನು ಗಾಳಿಗೆ ತೂರಿ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಸಂವಿಧಾನ ಶಿಲ್ಪಿ, ಶೋಷಿತರ ಚೇತನ, ಮಹಾನ್ ಜ್ಞಾನಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ ವ್ಯಕ್ತಿ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಕಾನೂನಿಗಿಂತ ತನ್ನ ವೈಯಕ್ತಿಕ ಪೂರ್ವಗ್ರಹಗಳಾದ ಮನುವಾದವನ್ನು ಆಚರಿಸಿದ್ದಾರೆ. ಈ ಹಿನ್ನಲೆಯಲ್ಲಿ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಬೇಕು.
    ಬೆಂಗಳೂರು ಸಮೀಪದ ಶಾಲೆಯೊಂದರಲ್ಲಿ ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್‌ರವರ ಭಾವಚಿತ್ರ ಇಡದೆ ಆರ್‌ಎಸ್‌ಎಸ್ ರಚಿತ ಹಿಂದೂತ್ವ ಮಾತೆಯ ಭಾವಚಿತ್ರವನ್ನಿಟ್ಟು ಕಾರ್ಯಕ್ರಮ ಆಚರಿಸಲಾಗಿದೆ. ದೆಹಲಿ ಗಣರಾಜ್ಯೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರಬೋಸ್ ಹಾಗು ಎಲ್ಲರೂ ಒಂದೇ ಎಂದು ಮನುಕುಲಕ್ಕೆ ಸಂದೇಶ ಸಾರಿದ ಬ್ರಹ್ಮರ್ಷಿ ನಾರಾಯಣ ಗುರುರವರ ಸ್ತಬ್ದ ಚಿತ್ರಗಳಿಗೆ ಅವಕಾಶ ನೀಡದೆ ಸಾವರ್ಕರ್ ಸ್ತಬ್ದ ಚಿತ್ರಕ್ಕೆ ಅವಕಾಶ ಮಾಡಿಕೊಟ್ಟಿರುವುದು. ಈ ರೀತಿಯ ಸಂವಿಧಾನ ವಿರೋಧಿ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇವುಗಳ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವೇದಿಕೆ ಪ್ರಮುಖರಾದ ಗೌರವಾಧ್ಯಕ್ಷ ಶಿವರಾಜ್, ಅಧ್ಯಕ್ಷ ಶಿವಮಲ್ಲು, ಉಪಾಧ್ಯಕ್ಷ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ಕಾರ್ಯದರ್ಶಿ ಹರೀಶ್, ಸಹ ಕಾರ್ಯದರ್ಶಿಗಳಾದ ಸುನೀಲ್ ಮತ್ತು ಜಯರಾಮ ಮತ್ತು ಖಜಾಂಚಿ ಮಂಜುನಾಥ್ ಎಚ್ಚರಿಸಿದ್ದಾರೆ.