Monday, April 21, 2025

ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ, ಹಿಂದೂಗಳ ಮೇಲೆ ಹಲ್ಲೆ, ಕೊಲೆ ಘಟನೆಗೆ ವಿಪ್ರ ಬಳಗ ಖಂಡನೆ

ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಭವಿಷ್ಯಕ್ಕೆ ದಾರಿ ಮಾಡಿಕೊಡಿ, ಹಿಂದೂಗಳಿಗೆ ರಕ್ಷಣೆ ನೀಡಿ

ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ವಿಪ್ರಸಂಘಟನೆಯ ಬಳಗದಿಂದ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ವಿಪ್ರಸಂಘಟನೆಯ ಬಳಗದಿಂದ ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  
    ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತುಂಡರಿಸಿ ದೌರ್ಜನ್ಯ ಎಸಗಿರುವುದನ್ನು ಬಳಗ ಖಂಡಿಸುತ್ತದೆ. ಸಿಇಟಿ ಪರೀಕ್ಷೆ ನಿಬಂಧನೆಯಲ್ಲಿ ಜನಿವಾರ, ಶಿವದಾರ, ಕಾಶಿದಾರ, ತಾಳಿ ಮತ್ತು ಕಾಲುಂಗುರ ಸೇರಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಬರುವಂತಹ ಯಾವುದನ್ನೂ ಸಹ ತೆಗೆಯಬೇಕೆಂದು ಎಲ್ಲೂ ನಮೂದಿಸಿರುವುದಿಲ್ಲ. ಆದರೆ ಶಿವಮೊಗ್ಗ ಮತ್ತು ಬೀದರ್ ಇನ್ನಿತರ ಕಡೆಗಳಲ್ಲಿ ಜನಿವಾರ, ಕಾಶಿದಾರರವನ್ನು ಬಲವಂತವಾಗಿ ಕತ್ತರಿಸಿರುತ್ತಾರೆ. ಇದು ಧಾರ್ಮಿಕ ಭಾವನೆಗಳಿಗೆ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವಾಗಿರುತ್ತದೆ ಎಂದು ಆರೋಪಿಸಲಾಯಿತು. 
    ವಿದ್ಯಾರ್ಥಿಗಳ ಭವಿಷ್ಯದಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದೆ. ನಾವು ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ಇದಕ್ಕೆ ಅಡ್ಡಿಪಡಿಸುವಂತಹ ಕಾರ್ಯ ಸರ್ಕಾರದಿಂದ ನಡೆಸುತ್ತಿರುವಂತೆ ಕಾಣುತ್ತಿದೆ ಎಂಬ ಅನುಮಾನ ವ್ಯಕ್ತವಾಗಿರುತ್ತದೆ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡರೆ ಸಾಲದು ಅಮಾಯಕ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವುದರ ಜೊತೆಗೆ ಅವರ ಮುಂದಿನ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕೆಂದು ಆಗ್ರಹಿಸಲಾಯಿತು. 
    ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ಅಮಾನುಷವಾಗಿ ನಡೆಸುತ್ತಿರುವ ಕೊಲೆ ಹಾಗು ದೌರ್ಜನ್ಯ ಘಟನೆಗಳನ್ನು ಬಳಗ ಖಂಡಿಸುತ್ತದೆ. ಕೇಂದ್ರ ಸರ್ಕಾರ ತಕ್ಷಣ ಇದರ ಬಗ್ಗೆ ಗಮನ ಹರಿಸಿ ಹಿಂದೂಗಳಿಗೆ ರಕ್ಷಣೆ ನೀಡಬೇಕೆಂದು ಬಳಗ ಆಗ್ರಹಿಸಿದೆ. 
           ಶ್ರೀ ರಾಮೇಶ್ವರ ದೇವಸ್ಥಾನದ ಆಡಳಿತ ಮಂಡಳಿ,  ಶಂಕರ ಸೇವಾ ಸಮಿತಿ, ತಾಲೂಕು ಮಧ್ವ ಮಂಡಳಿ, ಶ್ರೀ ವೈಷ್ಣವ ಸಮಾಜ, ಕರಾವಳಿ ವಿಪ್ರ ಬಳಗ, ಬಬ್ಬೂರು ಸೇವಾ ಸಂಘ, ಹೊಯ್ಸಳ ಕರ್ನಾಟಕ ಸಂಘ ಲಲಿತಾ ಮಹಿಳಾ ಮಂಡಳಿ, ಹರಿದಾಸ ಮಹಿಳಾ ಮಂಡಳಿ ಮತ್ತು ಮಧ್ವ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಪ್ರಮುಖರು, ವಿಪ್ರ ಬಾಂಧವರು ಉಪಸ್ಥಿತರಿದ್ದರು.