Tuesday, May 13, 2025

ಸಿ.ಬಿ.ಎಸ್.ಇ ೧೦ನೇ ತರಗತಿ ಪರೀಕ್ಷೆ : ಶ್ರೀ ಸತ್ಯ ಸಾಯಿ ಜ್ಞಾನಪೀಠ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ

ಎ. ಅನನ್ಯ 


ಜಿ.ಎನ್ ಭುವನ
    ಭದ್ರಾವತಿ: ೨೦೨೪-೨೫ನೇ ಶೈಕ್ಷಣಿಕ ಸಾಲಿನ ಸಿ.ಬಿ.ಎಸ್.ಇ  ೧೦ನೇ ತರಗತಿ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಜ್ಞಾನಪೀಠ-ಸಿ.ಬಿ.ಎಸ್.ಇ ಶಾಲೆ ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ. .
    ಈ ಬಾರಿ ಪರೀಕ್ಷೆಗೆ ಶಾಲೆಯ ಒಟ್ಟು ೨೯ ವಿದ್ಯಾರ್ಥಿಗಳು ಹಾಜರಿದ್ದು, ಈ ಪೈಕಿ ೧೨ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ಹಾಗು  ೧೫ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು  ೨ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. 


ಎಸ್. ಹಿಮೇಶ್


ಆರ್. ದರ್ಶನ್ 
    ವಿದ್ಯಾರ್ಥಿನಿ ಎ. ಅನನ್ಯ ಶೇ.೯೦, ಜಿ.ಎನ್ ಭುವನ ಶೇ.೮೯, ಎಸ್. ಹಿಮೇಶ್ ಶೇ.೮೮, ಆರ್. ದರ್ಶನ್ ಶೇ.೮೭.೬ ಹಾಗು ಎಂ. ದಿಯಾ ಶೇ.೮೭.೨ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾಗಿದ್ದಾರೆ. 
    ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತಾಧಿಕಾರಿ ಡಿ. ಪ್ರಭಾಕರ್ ಬೀರಯ್ಯ, ಜಂಟಿ ಆಡಳಿತಾಧಿಕಾರಿ ಸೌಮ್ಯ ರೂಪ ಮತ್ತು ಪ್ರಾಂಶುಪಾಲರು ಹಾಗೂ ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.

ಭಾರತ-ಪಾಕಿಸ್ತಾನ ಯುದ್ಧ ಮುಂದುವರೆಯಲಿ : ಭಯೋತ್ಪಾದನೆ ನಿರ್ಮೂಲನೆಯಾಗಲಿ

ನ್ಯಾಯವಾದಿ ಮಂಗೋಟೆ ರುದ್ರೇಶ್ 
    ಭದ್ರಾವತಿ: ಭಾರತ-ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಬಾರದು. ಪಿಓಕೆ ನಮ್ಮ ದೇಶಕ್ಕೆ ಸೇರಬೇಕು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಸೈನ್ಯ ಕೈಗೊಳ್ಳುತ್ತಿರುವ ನಿರ್ಧಾರಗಳು ಹಾಗು ನಡೆಸುತ್ತಿರುವ ಕಾರ್ಯಾಚರಣೆ ಸರಿಯಾಗಿದೆ ಎಂದು ನ್ಯಾಯವಾದಿ ಮಂಗೋಟೆ ರುದ್ರೇಶ್ ತಿಳಿಸಿದ್ದಾರೆ. 
    ನಗರದ ಹಿರಿಯ ಸಮಾಜವಾದಿ ನಾಯಕರು, ಪ್ರಸಿದ್ದ ನ್ಯಾಯವಾದಿಗಳಾಗಿ ಗುರುತಿಸಿಕೊಂಡಿದ್ದ ದಿವಂಗತ ಮಂಗೋಟೆ ಮುರುಗೆಪ್ಪನವರ ಪುತ್ರ, ನ್ಯಾಯವಾದಿ ಮಂಟೋಟೆ ರುದ್ರೇಶ್‌ರವರು ಭಾರತ-ಪಾಕಿಸ್ತಾನ ಯುದ್ಧ ಕುರಿತು ಸಾಮಾನ್ಯ ನಾಗರಿಕನಾಗಿ ಈ ಯುದ್ಧ ಮುಂದುವರೆಯಬೇಕೆಂದು ಬಯಸುತ್ತೇನೆ ಎಂದರು. 
    ಪಾಕಿಸ್ತಾನ ಭಯೋತ್ಪಾದಕರನ್ನು ರೂಪಿಸುವ ದೇಶವಾಗಿದ್ದು, ಪ್ರಪಂಚದಲ್ಲಿ ಭಯೋತ್ದಾದನೆ ಎಂದ ತಕ್ಷಣ ಮೊದಲಿಗೆ ಪ್ರಸ್ತಾಪಿಸುವ ಹೆಸರು ಪಾಕಿಸ್ತಾನವಾಗಿದೆ. ಈ ಹಿನ್ನಲೆಯಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡಬೇಕೆಂಬ ಆಶಯ ನನ್ನದಾಗಿದೆ. ಅಲ್ಲದೆ ಪಾಕಿಸ್ತಾನದ ವ್ಯಾಪ್ತಿಯಲ್ಲಿರುವ ಪಿಓಕೆ ನಮ್ಮ ದೇಶ ವಶಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸೈನ್ಯ ಕೈಗೊಳ್ಳುವ ನಿರ್ಧಾರಗಳು ಹಾಗು ನಡೆಯುತ್ತಿರುವ ಕಾರ್ಯಾಚರಣೆಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಅಲ್ಲದೆ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಮೇಲೆ ಯಾರಿಗೂ ಯಾವುದೇ ರೀತಿ ಅನುಕಂಪ ಬೇಡ. ದೇಶದ ಪ್ರತಿಯೊಬ್ಬರು ಒಂದೇ ನಿಟ್ಟಿನಲ್ಲಿ ಯೋಚಿಸಿ ಇಂತಹ ಕಾರ್ಯಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.  

ಬೈಪಾಸ್ ರಸ್ತೆ ಸಿದ್ದಾಪುರ ಮಾರ್ಗದಲ್ಲಿ ಶಿವಮೊಗ್ಗ-ಭದ್ರಾವತಿ ನಡುವಿನ ಸಂಚಾರಕ್ಕೆ ೪ ಬಸ್‌ಗಳ ವ್ಯವಸ್ಥೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಭದ್ರಾವತಿ ಘಟಕ, ನಗರ ಸಾರಿಗೆ ವಿಭಾಗದಿಂದ  ಬೈ ಪಾಸ್ ರಸ್ತೆ ಸಿದ್ದಾಪುರ ಮಾರ್ಗದಲ್ಲಿ ಶಿವಮೊಗ್ಗ-ಭದ್ರಾವತಿ ನಡುವಿನ ಸಂಚಾರಕ್ಕೆ ಅಧಿಕೃತವಾಗಿ ಹೊಸದಾಗಿ ೪ ಬಸ್‌ಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. 
    ಭದ್ರಾವತಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಭದ್ರಾವತಿ ಘಟಕ, ನಗರ ಸಾರಿಗೆ ವಿಭಾಗದಿಂದ  ಬೈ ಪಾಸ್ ರಸ್ತೆ ಸಿದ್ದಾಪುರ ಮಾರ್ಗದಲ್ಲಿ ಶಿವಮೊಗ್ಗ-ಭದ್ರಾವತಿ ನಡುವಿನ ಸಂಚಾರಕ್ಕೆ ಅಧಿಕೃತವಾಗಿ ಹೊಸದಾಗಿ ೪ ಬಸ್‌ಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. 
    ನಗರದ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನಲೆಯಲ್ಲಿ ಕಳೆದ ೩ ವರ್ಷಗಳಿಂದ ನಗರದ ಮುಖ್ಯ ಬಸ್ ನಿಲ್ದಾಣದಿಂದ ಉಂಬ್ಳೇಬೈಲ್ ರಸ್ತೆ, ಜಯಶ್ರೀ ವೃತ್ತ, ಮಿಲ್ಟ್ರಿಕ್ಯಾಂಪ್ ಕೃಷ್ಣಪ್ಪ ವೃತ್ತ ಮೂಲಕ ಸಿದ್ದಾಪುರ ಬೈಪಾಸ್ ಮಾರ್ಗವಾಗಿ ಜೇಡಿಕಟ್ಟೆಯಿಂದ ಶಿವಮೊಗ್ಗ-ಭದ್ರಾವತಿ ನಡುವೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚರಿಸುತ್ತಿದ್ದವು. ಇದರಿಂದ ಸಿದ್ದಾಪುರ, ಹುಡ್ಕೋ ಕಾಲೋನಿ,  ಕಾಗದನಗರ, ಮಿಲ್ಟ್ರಿಕ್ಯಾಂಪ್, ಬುಳ್ಳಾಪುರ, ನ್ಯೂಟೌನ್, ಆಂಜನೇಯ ಅಗ್ರಹಾರ, ವಿದ್ಯಾಮಂದಿರ, ಗಣೇಶ್ ಕಾಲೋನಿ, ಜನ್ನಾಪುರ ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು.
    ಇತ್ತೀಚೆಗೆ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಎಲ್ಲಾ ವಾಹನಗಳು ರೈಲ್ವೆ ಮೇಲ್ಸೇತುವೆ ಮೇಲೆ ಸಂಚರಿಸುತ್ತಿವೆ. ಇದರಿಂದ ಬೈಪಾಸ್ ರಸ್ತೆ ಸಿದ್ದಾಪುರ ಮಾರ್ಗದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಘಟಕದ ನಗರ ಸಾರಿಗೆ ವಿಭಾಗ ೪ ಬಸ್‌ಗಳ  ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರ ಸದುಪಯೋಗಪಡೆದುಕೊಳ್ಳುವಂತೆ ಘಟಕದ ಅಧಿಕಾರಿಗಳು ಮನವಿ ಮಾಡಿದ್ದಾರೆ.