ವಿವಿಧ ಬೇಡಿಕೆ ಈಡೇರಿಸಲು ಡಿಎಸ್‌ಎಸ್ ಸರ್ಕಾರಕ್ಕೆ ಮನವಿ
ಭದ್ರಾವತಿಯಲ್ಲಿ ವಿವಿಧ ಬೇಡಿಕೆ ಈಡೇರಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಘಟಕದ ಅಧ್ಯಕ್ಷ ಎಸ್. ಪುಟ್ಟರಾಜು ಪತ್ರಿಕಾಗೋಷ್ಠಿಯಲ್ಲಿ ಸರ್ಕಾರಕ್ಕೆ ಮನವಿ ಮಾಡಿದರು.
ಭದ್ರಾವತಿ : ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಕ್ಷೇತ್ರದ ಶಾಸಕರಾದ ಬಿ.ಕೆ ಸಂಗಮೇಶ್ವರ್‌ರವರಿಗೆ ಸಚಿವ ಸ್ಥಾನ ಹಾಗು ಮಾಜಿ ಸಚಿವ ಎಚ್. ಆಂಜನೇಯರವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಘಟಕ ಮನವಿ ಮಾಡಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಎಸ್. ಪುಟ್ಟರಾಜು ಮಾತನಾಡಿ, ಸಂಗಮೇಶ್ವರ್‌ರವರು ವಿಧಾನಸಭಾ ಕ್ಷೇತ್ರದಲ್ಲಿ ೪ ಬಾರಿ ಶಾಸಕರಾಗಿದ್ದಾರೆ. ಜಿಲ್ಲೆಯಲ್ಲಿ ಈಗಿನ ಹಿರಿಯ ನಾಯಕರಾಗಿರುವ ಇವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಹಾಗು ಶೋಷಿತ ಸಮುದಾಯಗಳ ಧ್ವನಿಯಾಗಿರುವ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಇಡೀ ಜೀವನ ಮುಡುಪಾಗಿಟ್ಟಿರುವ ರಾಜ್ಯದಲ್ಲಿ ಅತಿ ಹೆಚ್ಚು ವಸತಿ ಶಾಲೆಗಳನ್ನು ನಿರ್ಮಾಣ ಮಾಡಿದಂತಹ ಹೆಗ್ಗಳಿಕೆ ಹೊಂದಿರುವ ಸಮಾಜ ಕಲ್ಯಾಣ ಖಾತೆ ಮಾಜಿ ಸಚಿವ ಎಚ್. ಆಂಜನೇಯರವರಿಗೆ ಈ ಬಾರಿ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕೆಂದು ಮನವಿ ಮಾಡುವ ಮೂಲಕ ಒತ್ತಾಯಿಸಿದರು.
ಮುಂದಿನ ೨೦೨೫-೨೬ನೇ ಸಾಲಿನ ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನ ಎಲ್ಲಾ ಇಲಾಖೆಗಳು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಎಚ್ಚರಿಸಬೇಕು. ಅಲ್ಲದೆ ಶೋಷಿತ ಸಮಾಜದ ನಿಗಮಗಳಿಗೆ ಅತಿ ಹೆಚ್ಚಿನ ಅನುದಾನ ನೀಡಬೇಕು. ಪಿ.ಟಿ.ಸಿ.ಎಲ್ ಕಾಯ್ದೆ ಸರ್ಕಾರ ಯಥಾವತ್ತಾಗಿ ಅನುಷ್ಠಾನಗೊಳಿಸಿ ಜಾರಿಗೆ ತಂದರೂ ತಾಲೂಕಿನ ಅಧಿಕಾರಿಗಳು ದಲಿತರಿಗೆ ಭೂಮಿಯನ್ನು ಬಿಡಿಸಿಕೊಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಈ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಆಗ್ರಹಿಸಿದರು.
ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ರಹಿತ ಎಸ್.ಸಿ/ಎಸ್.ಟಿ ಜನಾಂಗದವರಿಗೆ ಮನೆಯನ್ನು ನಿರ್ಮಿಸಲು ಸರ್ಕಾರ ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ ೧.೮೦ ಲಕ್ಷ ರು. ನಗರದ ಪ್ರದೇಶದ ಫಲಾನುಭವಿಗಳಿಗೆ ೨.೭೦ ಲಕ್ಷ ರು. ನಿಗದಿಪಡಿಸಿದ್ದು, ಬದಲಾಗಿ ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಪ್ರದೇಶದವರೆಗೆ ೧೦ ಲಕ್ಷ ರು. ಮತ್ತು ನಗರ ಪ್ರದೇಶದವರಿಗೆ ೧೫ ಲಕ್ಷ ರು. ಅನುದಾನ ನೀಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ `ಒಳ ಮೀಸಲಾತಿ' ಅನುಷ್ಠಾನಕ್ಕೆ ತರಲು ಆಯಾ ರಾಜ್ಯಗಳಿಗೆ ಸೂಕ್ತ ನಿರ್ದೇಶನ ನೀಡಿದೆ. ಸರ್ಕಾರ ಸಾಮಾಜಿಕ ನ್ಯಾಯದ ಜನಸಂಖ್ಯಾನುಗುಣವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ನಿವೃತ್ತ ನ್ಯಾಯಮೂರ್ತಿಗಳು ಎಚ್.ಎನ್ ನಾಗಮೋಹನ್ ದಾಸ್‌ರವರ ನೇತೃತ್ವದಲ್ಲಿ ಸಮಿತಿ ರಚಿಸಿ ೩ ತಿಂಗಳೊಳಗೆ ವರದಿ ನೀಡುವಂತೆ ಆದೇಶಿಸಿದೆ. ವರದಿ ನೀಡಿದ ನಂತರ ಸರ್ಕಾರ ಅದನ್ನು ತಕ್ಷಣ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಸಾಮಾಜಿಕ ನ್ಯಾಯಕ್ಕಾಗಿ ಸರ್ಕಾರ ಕಾಂತರಾಜ್ ಆಯೋಗದ ವರದಿ ತಕ್ಷಣ ಜಾರಿಗೊಳಿಸಬೇಕು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರೂಪ್ "ಡಿ" ನೌಕರರುಗಳಿಗೆ ಏಜನ್ಸಿ ಬದಲಾಗಿ ಸರ್ಕಾರವೇ ನೇರವಾಗಿ ವೇತನ ಪಾವತಿಮಾಡಬೇಕೆಂದು ಒತ್ತಾಯಿಸಿದರು.
ಸಮಿತಿ ಹಿರಿಯ ಮುಖಂಡರಾದ ಮಾರುತಿ, ಪ್ರಭಾಕರ್ ಹೆಬ್ಬಂಡಿ, ರಾಮಣ್ಣ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಎಸ್. ಗೋವಿಂದರಾಜು, ಹಿರಿಯೂರು ಹೋಬಳಿ ಸಂಚಾಲಕ ಎಚ್.ಎಲ್ ಅಣ್ಣಪ್ಪ, ತಾಲೂಕು ಸಂಘಟನಾ ಸಂಚಾಲಕರಾದ ಟಿ. ರುದ್ರೇಶ್ ಅತ್ತಿಗುಂದ ಮತ್ತು ತಾಲೂಕು ವಿದ್ಯಾರ್ಥಿ ಒಕ್ಕೂಟದ ಮಹೇಶ್ ಅತ್ತಿಗುಂದ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.