Friday, January 28, 2022

ಭಾವಸಾರ್ ಕ್ಷತ್ರಿಯಾ ಸಮಾಜದ ಹಿನ್ನಲೆ ಅರಿತುಕೊಂಡು ಸಂಘಟಿತರಾಗಿ : ಸತೀಶ್ ಎಂ. ಜಾಧವ್

ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ರ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್


ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ  ನೂತನ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್ ಪ್ರಮಾಣ ವಚನ ಸ್ವೀಕರಿಸಿದರು.
    ಭದ್ರಾವತಿ, ಜ. ೨೮: ಭಾವಸಾರ್ ಕ್ಷತ್ರಿಯಾ ಸಮಾಜದವರು ತಮ್ಮ ಸಮಾಜದ ಹಿನ್ನಲೆಯನ್ನು ಅರಿತುಕೊಂಡಾಗ ಮಾತ್ರ ಅದರ ವೈಭವವನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಭಾವಸಾರ್ ವಿಷನ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಎಂ ಜಾಧವ್ ಹೇಳಿದರು.
    ಅವರು ಶುಕ್ರವಾರ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಭಾವಸಾರ್ ಕ್ಷತ್ರಿಯಾ ಸಮಾಜದವರು ಪ್ರಸ್ತುತ ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಹರಿದು ಹಂಚಿಹೋಗಿದ್ದು, ಇದರಿಂದಾಗಿ ಬಹಳಷ್ಟು ಮಂದಿ ಸಮಾಜದ ಸಂಘಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಇದೀಗ ಎಲ್ಲರನ್ನು ಒಗ್ಗೂಡಿಸಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ. ಎಲ್ಲರೂ ಸೇವಾ ಮನೋಭಾವನೆ ರೂಢಿಸಿಕೊಳ್ಳುವ ಜೊತೆಗೆ ಸಮಾಜಕ್ಕೆ ತಮದೇ ಆದ ಕೊಡುಗೆಗಳನ್ನು ನೀಡುವಂತಾಗಬೇಕೆಂದರು.
    ನೂತನ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್:
    ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ರ ತಾಲೂಕು ನೂತನ ಅಧ್ಯಕ್ಷರಾಗಿ ಆಶಾ ದುಗ್ಗೇಶ್ ತೇಲ್ಕರ್ ಮತ್ತು ಕಾರ್ಯದರ್ಶಿಯಾಗಿ ಮಮತ ವಿಠಲ್‌ನಾಥ್ ಹಾಗು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಗೌರ್‍ನರ್ ಕೆ.ಎನ್ ಮಂಜುನಾಥರಾವ್ ಬಂಗ್ರೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು.
    ಉಪಗೌರ್‍ನರ್ ಡಿ.ಬಿ ವಿನಯ್‌ಕುಮಾರ್, ಸ್ಮಾರ್ಟ್ ವಿಷನ್ ಛೇರ್‍ಮನ್ ಗಜೇಂದ್ರನಾಥ್ ಮಾಲೋಡೆ, ಭಾವಸಾರ್ ಕ್ಷತ್ರಿಯಾ ಸಮಾಜ ಅಧ್ಯಕ್ಷ ಡಿ.ಎಚ್ ರಾಘವೇಂದ್ರರಾವ್, ಡಿ.ಟಿ ಶ್ರೀಧರ್, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ದುಗ್ಗೇಶ್ ತೇಲ್ಕರ್, ಲಕ್ಷ್ಮಿಕಾಂತ್ ಗುಜ್ಜರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಿಕಟಪೂರ್ವ ಅಧ್ಯಕ್ಷ ಶಂಕರ್ ಜಿಂಗಾಡೆ ಸ್ವಾಗತಿಸಿದರು. ಸಮಾರಂಭದಲ್ಲಿ ಭಾವಸಾರ್ ವಿಷನ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಎಂ. ಜಾಧವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.



ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭಾವಸಾರ್ ವಿಷನ್ ಇಂಡಿಯಾ ಏರಿಯಾ-೧೦೩ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ  ಭಾವಸಾರ್ ವಿಷನ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಎಂ ಜಾಧವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾಜಿ ಮುಖ್ಯಮಂತ್ರಿ ಮಾಯಾವತಿ ೬೬ನೇ ವರ್ಷದ ಹುಟ್ಟುಹಬ್ಬ ಆಚರಣೆ



ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಪಕ್ಷದ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪಕ್ಷದ ರಾಷ್ಟ್ರೀಯ ಮುಖ್ಯಸ್ಥರಾದ ಮಾಜಿ ಮುಖ್ಯಮಂತ್ರಿ ಮಾಯವತಿ ಅವರ ೬೬ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು.
    ಭದ್ರಾವತಿ, ಜ. ೨೮: ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಪಕ್ಷದ ವತಿಯಿಂದ ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪಕ್ಷದ ರಾಷ್ಟ್ರೀಯ ಮುಖ್ಯಸ್ಥರಾದ ಮಾಜಿ ಮುಖ್ಯಮಂತ್ರಿ ಮಾಯವತಿ ಅವರ ೬೬ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು.
    ಪಕ್ಷದ ತಾಲೂಕು ಅಧ್ಯಕ್ಷ ರಹಮತ್ ಉಲ್ಲಾಖಾನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಪ್ರಗತಿಪರ ಸಂಘಟನೆಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುಟ್ಟುಹಬ್ಬದ ಸಂಭ್ರಮ ಹಂಚಿಕೊಂಡರು.
    ಪಕ್ಷದ ತಾಲೂಕು ಸಂಚಾಲಕ ಎಂ. ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಬಿ.ಎ ನರಸಯ್ಯ, ಉಪಾಧ್ಯಕ್ಷ ವಿ. ಚಂದ್ರು, ಪೈಂಟರ್ ಸುಬ್ಬು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಪ್ರಗತಿಪರ ಸಂಘಟನೆಗಳಿಂದ ಬೃಹತ್ ರಸ್ತೆ ತಡೆ ಚಳುವಳಿ

ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್ ವಜಾಗೊಳಿಸಲು ಆಗ್ರಹಿಸಿ ಮನವಿ


ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಗೊಳಿಸಿರುವ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್‌ರವರನ್ನು ಹುದ್ದೆಯಿಂದ ತಕ್ಷಣ ವಜಾಗೊಳಿಸುವ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಭದ್ರಾವತಿಯಲ್ಲಿ ರಸ್ತೆ ತಡೆ ಚಳುವಳಿ ನಡೆಸಲಾಯಿತು.
    ಭದ್ರಾವತಿ, ಜ. ೨೮:  ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಗೊಳಿಸಿರುವ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್‌ರವರನ್ನು ಹುದ್ದೆಯಿಂದ ತಕ್ಷಣ ವಜಾಗೊಳಿಸುವ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಆಗ್ರಹಿಸಿದರು.
    ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಿಸಿರುವ ಘಟನೆಯನ್ನು ಖಂಡಿಸಿ ಶುಕ್ರವಾರ ನಗರದ ಅಂಡರ್ ಬ್ರಿಡ್ಜ್ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸ್ತೆ ತಡೆ ಚಳುವಳಿ ನೇತೃತ್ವ ವಹಿಸಿ ಮಾತನಾಡಿದ ಪ್ರಮುಖರು, ದೇಶದ ಸಂವಿಧಾನ ದಿನದಂದು ಈ ದೇಶಕ್ಕೆ ಸಂವಿಧಾನ ನೀಡಿದ ವಿಶ್ವಜ್ಞಾನಿ, ಮಹಾಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್‌ರವರಿಗೆ ಅಗೌರವ ಉಂಟು ಮಾಡಿರುವುದು ಪ್ರಜಾಪ್ರಭುತ್ವ ಸಮಾಜ ತಲೆ ತಗ್ಗಿಸುವಂತಾಗಿದೆ. ಸಂವಿಧಾನವಿಲ್ಲದೆ ಈ ದೇಶದಲ್ಲಿ ಏನನ್ನು ಸಹ ಮಾಡಲು ಸಾಧ್ಯವಿಲ್ಲ.  ದೇಶದ ಸಂವಿಧಾನ ನೀಡಿರುವ ಹುದ್ದೆಯಲ್ಲಿರುವ ನ್ಯಾಯಾಧೀಶ ಈ ರೀತಿ ನಡೆದುಕೊಂಡಿರುವುದು ಪುನಃ ಈ ದೇಶದಲ್ಲಿ ಮನುವಾದಿ ಸಂಸ್ಕೃತಿ ತಲೆ ಎತ್ತುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
    ಜಾತಿ ಆಧಾರದ ಮೇಲೆ ಅಂಬೇಡ್ಕರ್‌ರವರನ್ನು ಅವಮಾನಿಸಿರುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್‌ರಿಗೆ ಅಂಬೇಡ್ಕರ್‌ರವರ ಬಗ್ಗೆ ಇರಲಿ ಜಗಜ್ಯೋತಿ ಬಸವಣ್ಣನವರ ಬಗ್ಗೆ ಸಹ ಸರಿಯಾದ ಮಾಹಿತಿ ಗೊತ್ತಿಲ್ಲ ಎಂಬುದು ಈ ಘಟನೆಯಿಂದ ತಿಳಿದು ಬರುತ್ತದೆ. ಇಂತಹ ಅಜ್ಞಾನ ತುಂಬಿದ ವ್ಯಕ್ತಿ ನ್ಯಾಯಾಧೀಶ ಹುದ್ದೆ ಅಲಂಕರಿಸಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. ತಕ್ಷಣ ಮಲ್ಲಿಕಾರ್ಜುನ ಗೌಡ ಪಾಟೀಲ್‌ರನ್ನು ಹುದ್ದೆಯಿಂದ ವಜಾಗೊಳಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸತ್ಯ ಭದ್ರಾವತಿ, ಸುರೇಶ್(ಪ್ರಜಾಪ್ರತಿನಿಧಿ), ಚಿನ್ನಯ್ಯ, ಶಿವಬಸಪ್ಪ, ಜಿ. ರಾಜು(ಉಜ್ಜನಿಪುರ), ಕೆ. ರಂಗನಾಥ್, ಮುರ್ತುಜಾಖಾನ್, ಕೆ. ಮಂಜುನಾಥ್, ಕಾಣಿಕ್‌ರಾಜ್, ಜಿಂಕ್‌ಲೈನ್‌ಮಣಿ, ವಿ. ವಿನೋದ್, ಇ.ಪಿ ಬಸವರಾಜ್, ಜಯರಾಜ್, ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್‌ಪಿ ಪಕ್ಷಗಳು ಚಳುವಳಿಗೆ ಬೆಂಬಲ ವ್ಯಕ್ತಪಡಿಸಿದ್ದವು. ಜೆಡಿಎಸ್ ಪ್ರಮುಖರಾದ ಶಾರದ ಅಪ್ಪಾಜಿ, ಆರ್. ಕರುಣಾಮೂರ್ತಿ, ನಗರಸಭಾ ಸದಸ್ಯರಾದ ಬಸವರಾಜ ಬಿ. ಆನೇಕೊಪ್ಪ, ಮಂಜುಳ ಸುಬ್ಬಣ್ಣ, ಉದಯಕುಮಾರ್, ರೇಖಾಪ್ರಕಾಶ್, ರೂಪಾವತಿ, ಪ್ರೇಮಾ ಬದರಿನಾರಾಯಣ, ಡಿ.ಟಿ ಶ್ರೀಧರ್, ಸುಕನ್ಯ, ಭಾಗ್ಯಮ್ಮ, ಎಚ್.ಬಿ ರವಿಕುಮಾರ್, ಎಂ. ರಾಜು, ವೆಂಕಟೇಶ್ ಉಜ್ಜನಿಪುರ, ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ, ಬಿ.ಎಸ್ ಗಣೇಶ್, ಪ್ರವೀಣ್‌ನಾಯ್ಕ, ರವಿಕುಮಾರ್‌(ಬಿಪಿಎಲ್‌), ಬಿಎಸ್‌ಪಿ ಪಕ್ಷದ ರಹಮದುಲ್ಲಾ ಖಾನ್(ಸರ್ದಾರ್), ರಾಜೇಂದ್ರ, ತಮಿಳು ಆದಿದ್ರಾವಿಡ ಸಮಾಜದ ನಿತ್ಯಾನಂದ, ಮುಕುಂದ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್‌ರವರಿಗೆ ಮನವಿ ಸಲ್ಲಿಸಲಾಯಿತು. ಸುಮಾರು ಒಂದೂವರೆ ತಾಸು ರಸ್ತೆ ತಡೆ ಚಳುವಳಿ ನಡೆಸಿದ ಹಿನ್ನಲೆಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು.  ಇದಕ್ಕೂ ಮೊದಲು ಬಾಬಾ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.