Wednesday, January 19, 2022

ಟಿ.ಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಅಭಿಯಾನದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಟಿ.ಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಅಭಿಯಾನದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜ. ೧೯: ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆರೋಗ್ಯ ಇಲಾಖೆ ವತಿಯಿಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಹಳೇವಿದ್ಯಾರ್ಥಿಗಳ ಸಂಘ ಮತ್ತು ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರದ ಸಹಯೋಗದೊಂದಿಗೆ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಟಿ.ಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಅಭಿಯಾನದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ವಹಿಸಿದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಗೌಡ ಹಾಗು ಆರೋಗ್ಯ ಇಲಾಖೆ ಸಿಬ್ಬಂದಿಗಳು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
    ಪ್ರಜ್ವಲ್ ನೇತೃತ್ವದ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

ನಗರಸಭೆಗೆ ಎಂ. ಪ್ರಭಾಕರ್ ಸೇರಿ ೫ ಮಂದಿ ನಾಮನಿರ್ದೇಶನ

    ಭದ್ರಾವತಿ, ಜ. ೧೯: ರಾಜ್ಯ ಸರ್ಕಾರ ನಗರಸಭೆಗೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಒಕ್ಕಲಿಗ ಸಮಾಜದ ಹಿರಿಯ ಮುಖಂಡ ಎಚ್. ಕರಿಗೌಡ ಸೇರಿದಂತೆ ೫ ಮಂದಿಯನ್ನು ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ.
    ಈ ಕುರಿತು ನಗರಾಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿಯವರು ಜಿಲ್ಲಾಧಿಕಾರಿಗಳಿಗೆ ಹಾಗು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಿಗೆ ಮಾಹಿತಿ ನೀಡಿದ್ದು, ಅದರಂತೆ ಯೋಜನಾ ನಿರ್ದೇಶಕರು ನಗರಸಭೆ ಪೌರಾಯುಕ್ತರಿಗೆ ಬುಧವಾರ ನೇಮಕಗೊಳಿಸಿರುವುದನ್ನು ಖಚಿತ ಪಡಿಸಿದ್ದಾರೆ.







    ಅಪ್ಪರ್ ಹುತ್ತಾ ನಿವಾಸಿ ಒಕ್ಕಲಿಗ ಸಮಾಜದ ಹಿರಿಯ ಮುಖಂಡ ಎಚ್. ಕರಿಗೌಡ, ಹೊಸಮನೆ ಎನ್‌ಎಂಸಿ ನಿವಾಸಿ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಹೊಸಸಿದ್ದಾಪುರ ನಿವಾಸಿ ಮಂಜುನಾಥ್, ಗಾಂಧಿನಗರದ ನಿವಾಸಿ ಎಚ್.ಎಂ ರವಿಕುಮಾರ್ ಮತ್ತು ಉಜ್ಜನಿಪುರ ನಿವಾಸಿ ಅನ್ನಪೂರ್ಣ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ೭೭ನೇ ಜನ್ಮದಿನ

ಅನ್ನಸಂತರ್ಪಣೆ, ದೀಪ ಬೆಳಗುವ ಮೂಲಕ ಶ್ರೀಗಳಿಗೆ ಗೌರವ


ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟುಹಬ್ಬದ ಅಂಗವಾಗಿ ಭದ್ರಾವತಿಯಲ್ಲಿ ಸ್ನೇಹಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

     ಭದ್ರಾವತಿ, ಜ. ೧೯: ನಗರದ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಜದ್ಗುರುಗಳಾದ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ೭೭ನೇ ಜನ್ಮ ಆಚರಿಸಲಾಯಿತು.
    ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ದೀಪ ಬೆಳಗುವ ಮೂಲಕ ಗೌರವ ಸಲ್ಲಿಸಲಾಯಿತು. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣೆ ಹಾಗು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
    ಅನ್ನಸಂತರ್ಪಣೆ:
    ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟುಹಬ್ಬದ ಅಂಗವಾಗಿ ಸ್ನೇಹಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
    ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಸ್ನೇಹಜೀವಿ ಬಳಗದ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಸ್ವಾಮೀಜಿಯವರ ಹುಟ್ಟುಹಬ್ಬದ ಅಂಗವಾಗಿ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಜೊತೆಗೆ ಅನ್ನಸಂತರ್ಪಣೆ ನಡೆಸುವ ಮೂಲಕ ಗೌರವ ಸಲ್ಲಿಸಲಾಯಿತು. ಸ್ನೇಹಜೀವಿ ಬಳಗದ ಮುಳ್ಕೆರೆ ಲೋಕೇಶ್, ಸುಹಾಸ್, ಯಶವಂತ್, ಚೇತನ್, ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಜದ್ಗುರುಗಳಾದ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ೭೭ನೇ ಜನ್ಮ ಆಚರಿಸಲಾಯಿತು. ದೀಪ ಬೆಳಗುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಲಾಯಿತು.

ಭದ್ರಾ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎಚ್ ವಸಂತ್, ಉಪಾಧ್ಯಕ್ಷರಾಗಿ ಬಸವರಾಜ ಅವಿರೋಧ ಆಯ್ಕೆ

ಭದ್ರಾವತಿ ಹಳೇನಗರದ ಭೂತನಗುಡಿ ಭದ್ರಾ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಚ್ ವಸಂತ್ ಮಜ್ಜಿಗೇನಹಳ್ಳಿ ಹಾಗು ಉಪಾಧ್ಯಕ್ಷರಾಗಿ ಬಸವರಾಜ ಬಿ. ಆನೇಕೊಪ್ಪ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಜ. ೧೯: ಹಳೇನಗರದ ಭೂತನಗುಡಿ ಭದ್ರಾ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಚ್ ವಸಂತ್ ಮಜ್ಜಿಗೇನಹಳ್ಳಿ ಹಾಗು ಉಪಾಧ್ಯಕ್ಷರಾಗಿ ಬಸವರಾಜ ಬಿ. ಆನೇಕೊಪ್ಪ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಒಟ್ಟು ೧೫ ನಿರ್ದೇಶಕರ ಸ್ಥಾನಗಳಿಗೆ ಜ.೧೬ರಂದು ಚುನಾವಣೆ ನಡೆದು ದೂದನಾಯ್ಕ, ಬಿ.ಎಂ ಸಂತೋಷ್, ಎನ್. ಸತೀಶ್, ಎಂ.ಎಸ್ ಸುನಿತ ನಂಬಿಯಾರ್, ಜಿ. ಮೀನಾಕ್ಷಿ, ಎನ್. ನಾಗೇಶ್, ಕೆ.ಎಚ್ ಶಿವಲಿಂಗಪ್ಪ, ಹನುಮಂತನಾಯ್ಕ, ಜೆ. ಪ್ರಕಾಶ್, ಮೌನೇಶ್, ಅನಂತರಾವ್ ನಿಕ್ಕಂ, ಎಚ್. ತಿಪ್ಪೇಶ್, ಬಸವರಾಜ ಬಿ. ಆನೇಕೊಪ್ಪ ಮತ್ತು ಬಿ.ಎಚ್ ವಸಂತ ಮಜ್ಜಿಗೇನಹಳ್ಳಿ ಆಯ್ಕೆಯಾಗಿದ್ದರು.
    ಸಹಕಾರ ಸಂಘಗಳ ಹಿರಿಯ ನಿರೀಕ್ಷಕಿ ಎಸ್. ಸುಮಾ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಬಿ.ಎಚ್. ವಸಂತ್ ಮತ್ತು ಉಪಾಧ್ಯಕ್ಷ ಬಸವರಾಜ, ಸಂಘದ ಮೂಲಕ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗುವುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರಿಯಾಶೀಲವಾಗಿ ಸಂಘವನ್ನು ಮುನ್ನಡೆಸಿಕೊಂಡು ಹೋಗುವ ಜೊತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಸಾಧ್ಯವಾದಷ್ಟು ನೆರವಾಗುವುದಾಗಿ ಭರವಸೆ ನೀಡಿದರು.
    ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿದರು. ಈ ಹಿಂದೆ ವಸಂತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.