ಬುಧವಾರ, ಸೆಪ್ಟೆಂಬರ್ 24, 2025

ಪ್ರೇಯಸಿಯನ್ನು ಭದ್ರಾ ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಆರೋಪ : ಪ್ರಿಯಕರ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು : ಪ್ರಿಯಕರ, ಆತನ ತಂದೆ ವಶಕ್ಕೆ ಪಡೆದ ಪೊಲೀಸರು

ಕೊಲೆಯಾದ ಸ್ವಾತಿ, ಭದ್ರಾ ಕಾಲುವೆ
    ಭದ್ರಾವತಿ:  ಪ್ರೇಯಸಿಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಆರೋಪದ ಮೇಲೆ ಪ್ರಿಯಕರ ಹಾಗು ಆತನ ತಂದೆಯನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 
    ತಾಲೂಕಿನ ಉಕ್ಕುಂದ ಗ್ರಾಮದ ಸಮೀಪದ ಭದ್ರಾ ಕಾಲುವೆಯಲ್ಲಿ ಕಳೆದ ೩ ದಿನಗಳ ಹಿಂದೆ ಘಟನೆ ನಡೆದಿದ್ದು, ಪ್ರೇಯಸಿ ಸ್ವಾತಿಯನ್ನು ಸೂರ್ಯ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಸ್ವಾತಿಯನ್ನು ಕಾಲುವೆಗೆ ತಳ್ಳಿದ ನಂತರ ವಿಷ ಸೇವಿಸಿ ತಾನೂ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಹೈಡ್ರಾಮಾವೇ ನಡೆಸಿದ್ದ ಎನ್ನಲಾಗಿದೆ. ಸದ್ಯ ಆತನ ಬಣ್ಣ ಬಯಲಾಗಿದ್ದು, ಸೂರ್ಯ ಮತ್ತು ಆತನ ತಂದೆ ಸ್ವಾಮಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
    ಪ್ರಕರಣದ ವಿವರ: 
    ಸೂರ್ಯ ಮತ್ತು ಸ್ವಾತಿ ಇಬ್ಬರು ಪ್ರೀತಿಸುತ್ತಿದ್ದರು. ಸ್ವಾತಿ ಪದವಿ ಎರಡನೇ ವರ್ಷ ವ್ಯಾಸಾಂಗ ಮಾಡುತ್ತಿದ್ದಳು. ಸೂರ್ಯ ಮದುವೆ ಆಗುವುದಕ್ಕೆ ಪೀಡಿಸುತ್ತಿದ್ದ. ಆದರೆ ಇತ್ತ ಸ್ವಾತಿ ಮನೆಯವರು ಓದು ಮುಗಿಯುವವರೆಗೆ ಮದುವೆ ಬೇಡ ಅಂದಿದ್ದಾರೆ. ಸೆ. ೨೧ ರಂದು ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಕೂಡ ನಡೆದಿತ್ತು.
    ಸೆ.೨೧ರಂದು ಸ್ವಾತಿಯನ್ನು ಸೂರ್ಯ ಮನೆಯಿಂದ ಭದ್ರಾ ಕಾಲುವೆಗೆ ಕರೆದೊಯ್ದು ಅಲ್ಲಿಂದ ತಳ್ಳಿ ಕೊಲೆ ಮಾಡಿರುವ ಆರೋಪ ಮಾಡಲಾಗಿದೆ. ಮಂಗಳವಾರ ಸಂಜೆ ಯುವತಿಯ ಶವ ಪತ್ತೆಯಾಗಿದೆ. ಸ್ವಾತಿ ಕುಟುಂಬಸ್ಥರಿಂದ ಸೂರ್ಯ ಮತ್ತು ಕೊಲೆಗೆ ಕುಮ್ಮಕ್ಕು ಹಿನ್ನಲೆ ಆತನ ತಂದೆ ಸ್ವಾಮಿ ಮೇಲೆ ಸೆ. ೨೩ ರಂದು ಠಾಣೆಗೆ ದೂರು ನೀಡಿದ್ದರು.
    ಸದ್ಯ ಗ್ರಾಮಾಂತರ ಪೊಲೀಸರು ಎ೧ ಸೂರ್ಯ ಮತ್ತು ಎ೨ ಸ್ವಾಮಿ ವಿರುದ್ಧ ಕೊಲೆ ಕೇಸ್ ದಾಖಲಿಸಿ, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿದ್ದಾರ್ಥ ಅಂಧರ ಕೇಂದ್ರ, ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ಆರ್‌ಎಎಫ್ ಸ್ವಚ್ಛತಾ ಕಾರ್ಯ

ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್ ಕ್ಷಿಪ್ರ ಕಾರ್ಯ ಪಡೆ-೯೭ ಬೆಟಾಲಿಯನ್ ವತಿಯಿಂದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. 
    ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್ ಕ್ಷಿಪ್ರ ಕಾರ್ಯ ಪಡೆ-೯೭ ಬೆಟಾಲಿಯನ್ ವತಿಯಿಂದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. 
    ಆರ್‌ಎಎಫ್ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸೇರಿದಂತೆ ಸುಮಾರು ೪೦ಕ್ಕೂ ಹೆಚ್ಚು ಮಂದಿ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮಕ್ಕಳ ಶಾಲಾ ಆವರಣದಲ್ಲಿ ಬೆಳೆದುನಿಂತ ಗಿಡಗಂಟಿಗಳನ್ನು ಕಿತ್ತು ಹಾಕಿ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಿದರು. ಅಲ್ಲದೆ ತೆಂಗು, ಅಡಕೆ, ಹಣ್ಣು ಹಾಗು ಹೂವಿನ ಗಿಡಗಳಿಗೆ ನೀರೆರೆದರು. 
    ಆರ್‌ಎಎಫ್ ಕಮಾಂಡೆಂಟ್ ಕಮಲೇಶ್ ಕುಮಾರ್, ಉಪ ಕಮಾಂಡೆಂಟ್ ಸುನಿಲ್ ಕುಮಾರ್ ಹಾಗೂ ನಿರೀಕ್ಷಕ ದೀಪಕ್ ಕುಮಾರ್ ಹಾಗು ಸೇರಿದಂತೆ ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಅಂಧ ವಿಕಲಚೇತನರು, ಕಿವುಡು ಮಕ್ಕಳ ಶಾಲೆ ಕಾರ್ಯದರ್ಶಿ ಸುಭಾಷ್ ಮತ್ತು ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಗುಂಡಿ ಬಿದ್ದ ರಸ್ತೆಗೆ ಮರಳು-ಸೀಮೆಂಟ್ ಸುರಿದು ದುರಸ್ತಿಪಡಿಸಿ ವಿಶಿಷ್ಟ ಪ್ರತಿಭಟನೆ

ಬಿಜೆಪಿ ಮುಖಂಡರು, ಕಾರ್ಯಕರ್ತರಿಂದ ರಾಜ್ಯ ಸರ್ಕಾರದ ವಿರೋಧ ಆಕ್ರೋಶ

ಭದ್ರಾವತಿ ನಗರದ ಪ್ರಮುಖ ರಸ್ತೆಯಾಗಿರುವ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ) ರೈಲ್ವೆ ನಿಲ್ದಾಣ ಸಮೀಪ ತಿಮ್ಮಯ್ಯ ಮಾರುಕಟ್ಟೆ ಮುಂಭಾಗ ಗುಂಡಿ ಬಿದ್ದ ರಸ್ತೆಗೆ ಮರಳು-ಸೀಮೆಂಟ್ ಸುರಿದು ದುರಸ್ತಿಪಡಿಸುವ ಮೂಲಕ ಬಿಜೆಪಿ ನಗರ ಮಂಡಲದ ವತಿಯಿಂದ ಬುಧವಾರ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು. 
    ಭದ್ರಾವತಿ : ನಗರದ ಪ್ರಮುಖ ರಸ್ತೆಯಾಗಿರುವ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ) ರೈಲ್ವೆ ನಿಲ್ದಾಣ ಸಮೀಪ ತಿಮ್ಮಯ್ಯ ಮಾರುಕಟ್ಟೆ ಮುಂಭಾಗ ಗುಂಡಿ ಬಿದ್ದ ರಸ್ತೆಗೆ ಮರಳು-ಸೀಮೆಂಟ್ ಸುರಿದು ದುರಸ್ತಿಪಡಿಸುವ ಮೂಲಕ ಬಿಜೆಪಿ ನಗರ ಮಂಡಲದ ವತಿಯಿಂದ ಬುಧವಾರ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು. 
    ರಾಜ್ಯಾದ್ಯಂತ ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡದೆ ನಿರ್ಲಕ್ಷತನವಹಿಸಲಾಗಿದೆ ಎಂದು ಆರೋಪಿಸಿ ಪಕ್ಷದ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
    ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ಗ್ಯಾರಂಟಿ ನೆಪದಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಗ್ಯಾರಂಟಿಯನ್ನು ಸಹ ಸರಿಯಾಗಿ ನೀಡದೆ, ಯಾವುದೇ ಅಭಿವೃದ್ಧಿ ಕಾರ್ಯವನ್ನು ಸಹ ಕೈಗೊಳ್ಳದೆ ಜನರ ಜನರ ಹಿತಕಾಪಾಡುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. 
    ಈ ನಡುವೆ ಪ್ರತಿಭಟನಾ ಸ್ಥಳದಲ್ಲಿಯೇ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಕರೆ ಮಾಡಿ ಚರ್ಚಿಸಲಾಯಿತು. ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ಪ್ರತಿಭಟನೆಯಿಂದ ಕೆಲ ನಿಮಿಷ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. 
    ಪ್ರತಿಭಟನೆಗೂ ಮೊದಲು  ಸರ್ ಎಂ. ವಿಶ್ವೇಶ್ವರಾಯ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. 
    ಹಿರಿಯ ಕಾರ್ಯಕರ್ತರಾದ ಎನ್ ವಿಶ್ವನಾಥರಾವ್, ಉಕ್ಕುಂದ ಶಾಂತಣ್ಣ, ಸಿದ್ದಾಪುರ ಪರಮೇಶಣ್ಣ, ಕರುಣಾಕರ್, ರಾಘವೇಂದ್ರ, ಸುಬ್ರಮಣಿ, ಎಂ.ಎಸ್ ಸುರೇಶಪ್ಪ, ಸಿದ್ದಾಪುರ ನಂಜಪ್ಪ,  ಸುಲೋಚನ ಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಬಿ.ಎಸ್ ಶ್ರೀನಾಥ್, ಧನುಷ್ ಬೋಸ್ಲೆ, ಅನ್ನಪೂರ್ಣ, ರೇಖಾ ಪದ್ಮಾವತಿ, ಶಕುಂತಲ, ಪ್ರೇಮ ಸೇರಿದಂತೆ ಮಂಡಲ ಪದಾಧಿಕಾರಿಗಳು, ಮಹಿಳಾ ಕಾರ್ಯಕರ್ತರು, ಹಿರಿಯ ಮುಖಂಡರು, ವಿವಿಧ ಮೋರ್ಚಗಳ, ಮಹಾಶಕ್ತಿ ಕೇಂದ್ರಗಳ  ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.