Friday, May 30, 2025

ಹಿರಿಯ ಸಾಹಿತಿ ಡಾ.ಎಚ್.ಎಸ್ ವೆಂಕಟೇಶ ಮೂರ್ತಿ ನಿಧನಕ್ಕೆ ನೋಟಿನ ಮೂಲಕ ಸಂತಾಪ

ಹಿರಿಯ ಸಾಹಿತಿ, ಲೇಖಕ, ಕಾದಂಬರಿಗಾರ ಡಾ. ಎಚ್.ಎಸ್ ವೆಂಕಟೇಶ ಮೂರ್ತಿ ಅವರ ನಿಧನಕ್ಕೆ ಭದ್ರಾವತಿ ನಗರದ ಹವ್ಯಾಸಿ ಹಿರಿಯ ಅಂಚೆ ಚೀಟಿ, ನೋಟು, ನಾಣ್ಯ ಸಂಗ್ರಹಗಾರ ಗಣೇಶ್‌ರವರು ೧೦ ರು. ಮುಖ ಬೆಲೆ ನೋಟಿನ ಮೂಲಕ ಸಂತಾಪ ಸೂಚಿಸಿದ್ದಾರೆ. 
    ಭದ್ರಾವತಿ: ಹಿರಿಯ ಸಾಹಿತಿ, ಲೇಖಕ, ಕಾದಂಬರಿಗಾರ ಡಾ. ಎಚ್.ಎಸ್ ವೆಂಕಟೇಶ ಮೂರ್ತಿ ಅವರ ನಿಧನಕ್ಕೆ ನಗರದ ಹವ್ಯಾಸಿ ಹಿರಿಯ ಅಂಚೆ ಚೀಟಿ, ನೋಟು, ನಾಣ್ಯ ಸಂಗ್ರಹಗಾರ ಗಣೇಶ್‌ರವರು ೧೦ ರು. ಮುಖ ಬೆಲೆ ನೋಟಿನ ಮೂಲಕ ಸಂತಾಪ ಸೂಚಿಸಿದ್ದಾರೆ. 
    ವೆಂಕಟೇಶ ಮೂರ್ತಿಯವರ ಜನ್ಮದಿನ ಹಾಗು ಮರಣ ದಿನಾಂಕದ ೧೦ ರು. ಮುಖ ಬೆಲೆ ನೋಟಿನ ಮೂಲಕ ವಿಶಿಷ್ಟವಾಗಿ ಸಂತಾಪ ಸೂಚಿಸಿದ್ದಾರೆ. ಗಣೇಶ್‌ರವರು ರಾಜಕೀಯ ಹಾಗು ಸಿನಿಮಾ ನಾಯಕರು, ವಿಜ್ಞಾನಿಗಳು, ಮಠಾಧೀಶರು ಸೇರಿದಂತೆ ಗಣ್ಯ ವ್ಯಕ್ತಿಗಳ ಹುಟ್ಟುಹಬ್ಬದಂದು ೧೦ ರು. ಮುಖ ಬೆಲೆಯ ಅವರ ಜನ್ಮ ದಿನದ ನೋಟು ನೀಡಿ ಶುಭ ಹಾರೈಸುವುದು, ನಿಧನ ಹೊಂದಿದ ಸಂದರ್ಭದಲ್ಲಿ ಆ ದಿನಾಂಕದ ನೋಟುಗಳ ಮೂಲಕ ಸಂತಾಪ ಸೂಚಿಸುವುದು. ಅಲ್ಲದೆ ಪ್ರಮುಖ ಘಟನಾವಳಿಗಳ ಸಂದರ್ಭದಲ್ಲಿ ಆ ದಿನಾಂಕದ ನೋಟುಗಳ ಮೂಲಕ ಸ್ಮರಿಸಿಕೊಳ್ಳುವುದನ್ನು ಇವರು ರೂಢಿಸಿಕೊಂಡು ಬಂದಿದ್ದಾರೆ. 
    ವೆಂಕಟೇಶ ಮೂರ್ತಿಯವರಿಗೆ ಉಕ್ಕಿನ ನಗರದ ನಂಟು : 
    ಹಿರಿಯ ಸಾಹಿತಿ ವೆಂಕಟೇಶ ಮೂರ್ತಿ ಅವರಿಗೂ ಉಕ್ಕಿನ ನಗರಕ್ಕೂ ಅವಿನಾಭಾವ ಸಂಬಂಧವಿದ್ದು, ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವ್ಯಾಸಂಗ ಮಾಡುವ ಮೂಲಕ ತಮ್ಮ ನೆನಪುಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ. 
ವೆಂಕಟೇಶ ಮೂರ್ತಿಯವರು ಪಾಲಿಟೆಕ್ನಿಕ್ ಶಿಕ್ಷಣ ಪಡೆದ ನಂತರ ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯಲ್ಲಿ ಕ್ರಾಫ್ಟ್ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಉನ್ನತ ಶಿಕ್ಷಣ ಪಡೆಯುವ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡು ಮನೆ ಮಾತಾಗಿದ್ದರು. ವೆಂಕಟೇಶ್ ಮೂರ್ತಿ ಅವರಿಗೂ ಉಕ್ಕಿನ ನಗರಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ ಇಂದಿಗೂ ಉಳಿದುಕೊಂಡು ಬಂದಿದೆ. ಇದಕ್ಕೆ ಪೂರಕ ಸಾಕ್ಷಿ ಎಂಬಂತೆ ಹವ್ಯಾಸಿ ಹಿರಿಯ ಅಂಚೆ ಚೀಟಿ, ನೋಟು, ನಾಣ್ಯ ಸಂಗ್ರಹಗಾರ ಗಣೇಶ್‌ರವರು ವಿಶೇಷವಾಗಿ ಸಂತಾಪ ಸೂಚಿಸಿರುವುದು. 

ಸ್ಪೋಟಕ ಸಿಡಿದು ಹಸು ಮೃತ : ಸ್ಪೋಟದ ಸದ್ದು ಕೇಳಿ ಬೆಚ್ಚಿ ಬಿದ್ದ ಜನ

ಭದ್ರಾವತಿ ನಗರದ ಬೊಮ್ಮನಕಟ್ಟೆ, ಮೂಲೆಕಟ್ಟೆ ಸಮೀಪ ನಗರಸಭೆ ನೀರಿನ ಪಂಪ್ ಹೌಸ್ ಬಳಿ ಶುಕ್ರವಾರ ಸ್ಪೋಟಕ ಸಿಡಿದು ಹಸು ಮೃತಪಟ್ಟಿರುವ ಘಟನೆ ನಡೆದಿದೆ. 
    ಭದ್ರಾವತಿ: ನಗರದ ಬೊಮ್ಮನಕಟ್ಟೆ, ಮೂಲೆಕಟ್ಟೆ ಸಮೀಪ ನಗರಸಭೆ ನೀರಿನ ಪಂಪ್ ಹೌಸ್ ಬಳಿ ಶುಕ್ರವಾರ ಸ್ಪೋಟಕ ಸಿಡಿದು ಹಸು ಮೃತಪಟ್ಟಿರುವ ಘಟನೆ ನಡೆದಿದೆ. 
    ತೋಟ, ಜಮೀನು, ಹೊಲಗಳಲ್ಲಿ ಹಂದಿ ಓಡಿಸಲು ಬಳಸುವ ಸ್ಪೋಟಕ ಹೆಚ್ಚಿನ ಪ್ರಮಾಣದಲ್ಲಿ ಒಂದೇ ಸ್ಥಳದಲ್ಲಿ ಭೂಮಿಯಲ್ಲಿ ಸಂಗ್ರಹಿಸಿಟ್ಟಿದ್ದ ಕಾರಣ ಅದರ ಮೇಲೆ ಹಸು ಕಾಲಿನಿಂದ ತುಳಿದಿದೆ ಇದರಿಂದಾಗಿ ಸ್ಪೋಟಗೊಂಡು ಹಸುವಿನ ಎರಡು ಕಾಲು ಕತ್ತರಿಸಿ ಹೋಗಿದ್ದು, ಹೊಟ್ಟೆ ಸೀಳಿ ಹೋಗಿ ಮೃತಪಟ್ಟಿದೆ. ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೇಪರ್ ಠಾಣೆ ಪೊಲೀಸರು, ಬಾಂಬು ನಿಷ್ಕ್ರಿಯ ದಳ, ಶ್ವಾನ ದಳ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಪೋಟದ ತೀವ್ರತೆ ವ್ಯಾಪಕವಾಗಿದ್ದು, ಬೊಮ್ಮನಕಟ್ಟೆ, ಹುಡ್ಕೋಕಾಲೋನಿ, ಬುಳ್ಳಾಪುರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸ್ಪೋಟದ ಸದ್ದು ಕೇಳಿ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. 
    ಸ್ಪೋಟಕ ಒಂದೆಡೆ ಸಂಗ್ರಹಿಡಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ನಂತರ ಸತ್ಯಾಂಶ ಹೊರ ಬೀಳಲಿದೆ. 

ಸರ್ಕಾರಿ ನೌಕರರು, ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ

ಭದ್ರಾವತಿ ಹಳೇನಗರ ಕನಕಮಂಟಪ ಮೈದಾನ ಮುಂಭಾಗ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್, ಪಠ್ಯ ಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ ವಿತರಿಸಲಾಯಿತು. 
    ಭದ್ರಾವತಿ : ಸರ್ಕಾರಿ ನೌಕರರು, ಅಧಿಕಾರಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಕೈಜೋಡಿಸಬೇಕೆಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು. 
    ಅವರು ಶುಕ್ರವಾರ ಹಳೇನಗರ ಕನಕಮಂಟಪ ಮೈದಾನ ಮುಂಭಾಗ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
    ಸರ್ಕಾರಿ ಶಾಲೆಗಳಲ್ಲಿ ಓದಿರುವ ಬಹಳಷ್ಟು ಜನರು ಮಹಾನ್ ವ್ಯಕ್ತಿಗಳಾಗಿ ರೂಪು ಗೊಂಡಿದ್ದಾರೆ. ಪ್ರಸ್ತುತ ಸರ್ಕಾರ ಶಕ್ತಿ ಮೀರಿ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಶ್ರಮಿಸುತ್ತಿದೆ. ಅಭಿವೃದ್ಧಿಗೆ ಪೂರಕವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಶಾಲೆಗಳಲ್ಲಿರುವ ಪ್ರತಿಭಾವಂತ ಹಾಗು ಅನುಭವಿ ಶಿಕ್ಷಕರು, ಗುಣಮಟ್ಟದ ಬೋಧನೆ ಹಾಗು ಸೌಲಭ್ಯಗಳು ಪ್ರಸ್ತುತ ಯಾವುದೇ ಖಾಸಗಿ ಶಾಲೆಗಳಲ್ಲೂ ಸಹ ಕಾಣಲು ಸಾಧ್ಯವಿಲ್ಲ ಎಂದರು. 
    ಯಾವುದೇ ಸರ್ಕಾರವಿರಲಿ ಮೊದಲು ಜನರ ಆರೋಗ್ಯ ಹಾಗು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಕರು ಮತ್ತು ವೈದ್ಯರು ಸಮಾಜದ ಎರಡು ಕಣ್ಣುಗಳು ಇದ್ದಂತೆ. ಶಾಲೆಯಲ್ಲಿ ಸ್ವಚ್ಛತೆ, ಉತ್ತಮ ಪರಿಸರ ಬಹಳ ಮುಖ್ಯ. ಶಿಕ್ಷಕರು ಮಕ್ಕಳಲ್ಲಿ ದೇಶಾಭಿಮಾನ, ಒಳ್ಳೆಯ ಸಂಸ್ಕೃತಿ, ಸಂಪ್ರದಾಯ, ಸನ್ನಡತೆ ಬೆಳೆಸಬೇಕು. ಮುಖ್ಯ ಶಿಕ್ಷಕರು ಇಂಜಿನ್ ಇದ್ದಂತೆ, ಸಹ ಶಿಕ್ಷಕರು ಬೋಗಿಗಳಿದ್ದಂತೆ ಶಾಲೆಯನ್ನು ಮುನ್ನಡೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು. 
    ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ರಮೇಶ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯೆ ಅನುಪಮ ಚನ್ನೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ, ಖಜಾಂಚಿ ಪ್ರಶಾಂತ್, ನಿರ್ದೇಶಕ ವೆಂಕಟೇಶ್, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಉಮಾ, ಕೆಡಿಪಿ ಸದಸ್ಯ ರಾಜೇಂದ್ರ, ಶಾಲೆಯ ಮುಖ್ಯ ಶಿಕ್ಷಕ ಮೊಹಿದ್ದಿನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಶಿಕ್ಷಕಿ ಶೀಲಾ ಪ್ರಾರ್ಥಿಸಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಚ್.ವಿ ಪಂಚಾಕ್ಷರಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜಾನಾಯ್ಕ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶೋಭಾ ವಂದಿಸಿದರು. ಆರಂಭದಲ್ಲಿ ಮಕ್ಕಳಿಗೆ ಸಿಹಿ ನೀಡಿ ಅದ್ದೂರಿಯಾಗಿ ಶಾಲೆಗೆ ಸ್ವಾಗತಿಸಲಾಯಿತು. 

ನಗರಸಭೆ ಮುಂಭಾಗ ಪೌರಕಾರ್ಮಿಕರಿಂದ ಅನಿರ್ಧಿಷ್ಟಾವಧಿ ಮುಷ್ಕರ

ಭದ್ರಾವತಿ ನಗರಸಭೆ ಮುಂಭಾಗ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಲಾಗಿದೆ. 
    ಭದ್ರಾವತಿ:  ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಹಲವಾರು ಬೇಡಿಕೆಗಳು ಹಲವು ದಶಕಗಳಿಂದ ಬಾಕಿ ಉಳಿದಿದ್ದು, ಬೇಡಿಕೆಗಳನ್ನು ಇದುವರೆಗೂ ಈಡೇರಿಸಿರುವುದಿಲ್ಲ. ಸರ್ಕಾರಕ್ಕೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಿರುವುದಿಲ್ಲ. ಕಳೆದ ಒಂದು ತಿಂಗಳ ಹಿಂದೆಯೇ ಮುಷ್ಕರ ನಡೆಸುವುದಾಗಿ ಸರ್ಕಾರಕ್ಕೆ ನೋಟಿಸ್ ನೀಡಿ ತಿಳಿಸಲಾಗಿದ್ದು, ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಈ ಹಿನ್ನಲೆಯಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು, ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಬೇಡಿಕೆಗಳನ್ನು ಈಡೇರಿಸುವಂತೆ ಪೌರಕಾರ್ಮಿಕರು ಆಗ್ರಹಿಸಿದರು. 
    ನಗರಸಭೆ ಮುಂಭಾಗ ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿರುವ ಪೌರಕಾರ್ಮಿಕರು, ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಪ್ರತಿಯೊಂದು ಸವಲತ್ತುಗಳನ್ನು ಪೌರಸೇವಾ ನೌಕರರಿಗೆ ಪ್ರತ್ಯೇಕ ಆದೇಶವಿಲ್ಲದೆ ವಿಸ್ತರಿಸುವುದು. ರಾಜ್ಯದ ನಗರಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ/ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಸಕ್ರಮಾತಿಗೊಳಿಸುವುದು. ನಗರಸಭೆಗಳಲ್ಲಿ ಶೇಕಡಾ ೧೦೦ ರಷ್ಟು ಪೌರಕಾರ್ಮಿಕರನ್ನು ವಿಶೇಷ ನೇಮಕಾತಿಯಡಿ ನೇಮಕಾತಿ ಮಾಡುವುದು. ೨೦೨೨ನೇ ಸಾಲಿನ ವಿಶೇಷ ನೇಮಕಾತಿ ಅಡಿ ಆಯ್ಕೆಯಾದ ಪೌರಕಾರ್ಮಿಕರು/ಲೋಡರ್ಸ್ ಗಳಿಗೆ  ಎಸ್.ಎಫ್.ಸಿ ವೇತನ ನಿಧಿಯಿಂದ ವೇತನ ಪಾವತಿಸುವುದು. ನಗರಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರುಗಳನ್ನು ವಿಶೇಷ ನೇಮಕಾತಿ ಮಾಡಿ ಪರಿಗಣಿಸುವುದು. .ಪೌರ ಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ/ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸುವುದು ಹಾಗು ಐ.ಟಿ ಸಿಬ್ಬಂದಿ/ಅಕೌಂಟ್ ಕನ್ಸಲ್ ಟೆಂಟ್/ಕಂಪ್ಯೂಟರ್ ಆಪರೇಟರ್/ವಾಹನ ಚಾಲಕ/ಸ್ಯಾನಿಟರಿ ಸೂಪರ್ ವೈಸರ್ ಹಾಗೂ ಇತರೆ ವೃಂದದ ನೌಕರರನ್ನು ಪೌರ ಸೇವಾ ನೌಕರರೆಂದು ಪರಿಗಣಿಸಿ ವಿಲೀನಗೊಳಿಸುವುದು ಸೇರಿದಂತೆ ಇತ್ಯಾದಿ ಬೇಡಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಅಧ್ಯಕ್ಷ ಬಿ. ಸಿದ್ದಬಸಪ್ಪ ಪಾಲ್ಗೊಂಡು ಮಾತನಾಡಿದರು. ಅಲ್ಲದೆ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಸಹ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು. 
    ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ತಾಲೂಕು ಶಾಖೆ ಅಧ್ಯಕ್ಷ ಎಸ್. ಚೇತನ್‌ಕುಮಾರ್ ನೇತೃತ್ವ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಿ. ರವಿಪ್ರಸಾದ್, ಜಿಲ್ಲಾಧ್ಯಕ್ಷ ಡಿ.ಎಸ್ ಹೇಮಂತ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ನರಸಿಂಹಮೂರ್ತಿ, ಉಪಾಧ್ಯಕ್ಷ ಎಸ್. ಪವನ್ ಕುಮಾರ್, ಖಜಾಂಚಿ ವಾಲಮಹೇಶ, ಸಹ ಸಂಘಟನಾ ಕಾರ್ಯದರ್ಶಿ ಪ್ರಸಾದ್, ಜಂಟಿ ಕಾರ್ಯದರ್ಶಿ ಪಿ.ಸಿ ಪ್ರಸಾದ್ ಸೇರಿದಂತೆ ಪದಾಧಿಕಾರಿಗಳು, ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.  

ಪ್ರಭಾರ ಪೌರಾಯುಕ್ತರಾಗಿ ಎಂ. ಸುನಿತಾಕುಮಾರಿ ಅಧಿಕಾರ ಸ್ವೀಕಾರ

ಎಂ. ಸುನಿತಾಕುಮಾರಿ 
ಭದ್ರಾವತಿ : ನಗರಸಭೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ಎಂ. ಚನ್ನಪ್ಪನವರ್ ೬ ದಿನಗಳ ಕಾಲ ರಜೆ ಮೇಲೆ ತೆರಳಿದ್ದು, ವ್ಯವಸ್ಥಾಪಕಿ ಎಂ. ಸುನಿತಾಕುಮಾರಿಯವರು ಶುಕ್ರವಾರ ಪ್ರಭಾರ ಅಧಿಕಾರ ವಹಿಸಿಕೊಂಡರು. 
ಸುಮಾರು ೧೮ ತಿಂಗಳು ನಗರಸಭೆ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸಿರುವ ಪ್ರಕಾಶ್ ಎಂ. ಚನ್ನಪ್ಪನವರ್ ಮುಂಬಡ್ತಿ ಪಡೆದು ಬೇರೆಡೆಗೆ ವರ್ಗಾವಣೆಗೊಳ್ಳಲಿದ್ದಾರೆಂಬ ಎಂಬ ಮಾಹಿತಿ ಒಂದೆಡೆ ಹರಿದಾಡುತ್ತಿದ್ದು, ಮತ್ತೊಂದೆಡೆ ೬ ದಿನಗಳ ಕಾಲ ರಜೆ ಮೇಲೆ ತೆರಳಿದ್ದಾರೆ ಎನ್ನಲಾಗಿದೆ. 
ಈ ನಡುವೆ ನಗರಸಭೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ಪುರಸಭೆ ಮುಖ್ಯಾಧಿಕಾರಿ ಗ್ರೇಡ್ ಹುದ್ದೆಯಲ್ಲಿಯೇ ಮೂಲ ವೇತನದೊಂದಿಗೆ ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುನಿತಾಕುಮಾರಿಯವರು ಪ್ರಭಾರ ಅಧಿಕಾರವಹಿಸಿಕೊಂಡಿದ್ದಾರೆ. 
ಸುನಿತಾಕುಮಾರಿಯವರು ಮೂಲತಃ ಕೆಎಂಎಸ್ ಶ್ರೇಣಿಯ ಅಧಿಕಾರಿಯಾಗಿದ್ದು, ಈ ಹಿಂದೆ ೨ ವರ್ಷ ಕಂದಾಯಾಧಿಕಾರಿ, ೬ ವರ್ಷ ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸಿ ಪುರಸಭೆ ಮುಖ್ಯಾಧಿಕಾರಿಯಾಗಿ ಮುಂಬಡ್ತಿ ಪಡೆದಿದ್ದರು. ಆದರೆ ಬೇರೆಡೆ ವರ್ಗಾವಣೆ ಬಯಸದೆ ವ್ಯವಸ್ಥಾಪಕಿ ಹುದ್ದೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಪ್ರಸ್ತುತ ಸುನಿತಾಕುಮಾರಿಯವರಿಗೂ ಸಹ ಪೌರಾಯುಕ್ತ ಗ್ರೇಡ್-೨ ಹುದ್ದೆ ಅಧಿಕಾರಿಯಾಗಿ ಮುಂಬಡ್ತಿ ಲಭಿಸಲಿದೆ ಎನ್ನಲಾಗಿದೆ.