ಭದ್ರಾವತಿ ನಗರಸಭೆ ಮುಂಭಾಗ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಲಾಗಿದೆ.
ಭದ್ರಾವತಿ: ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಹಲವಾರು ಬೇಡಿಕೆಗಳು ಹಲವು ದಶಕಗಳಿಂದ ಬಾಕಿ ಉಳಿದಿದ್ದು, ಬೇಡಿಕೆಗಳನ್ನು ಇದುವರೆಗೂ ಈಡೇರಿಸಿರುವುದಿಲ್ಲ. ಸರ್ಕಾರಕ್ಕೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಿರುವುದಿಲ್ಲ. ಕಳೆದ ಒಂದು ತಿಂಗಳ ಹಿಂದೆಯೇ ಮುಷ್ಕರ ನಡೆಸುವುದಾಗಿ ಸರ್ಕಾರಕ್ಕೆ ನೋಟಿಸ್ ನೀಡಿ ತಿಳಿಸಲಾಗಿದ್ದು, ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಈ ಹಿನ್ನಲೆಯಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು, ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಬೇಡಿಕೆಗಳನ್ನು ಈಡೇರಿಸುವಂತೆ ಪೌರಕಾರ್ಮಿಕರು ಆಗ್ರಹಿಸಿದರು.
ನಗರಸಭೆ ಮುಂಭಾಗ ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿರುವ ಪೌರಕಾರ್ಮಿಕರು, ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಪ್ರತಿಯೊಂದು ಸವಲತ್ತುಗಳನ್ನು ಪೌರಸೇವಾ ನೌಕರರಿಗೆ ಪ್ರತ್ಯೇಕ ಆದೇಶವಿಲ್ಲದೆ ವಿಸ್ತರಿಸುವುದು. ರಾಜ್ಯದ ನಗರಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ/ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಸಕ್ರಮಾತಿಗೊಳಿಸುವುದು. ನಗರಸಭೆಗಳಲ್ಲಿ ಶೇಕಡಾ ೧೦೦ ರಷ್ಟು ಪೌರಕಾರ್ಮಿಕರನ್ನು ವಿಶೇಷ ನೇಮಕಾತಿಯಡಿ ನೇಮಕಾತಿ ಮಾಡುವುದು. ೨೦೨೨ನೇ ಸಾಲಿನ ವಿಶೇಷ ನೇಮಕಾತಿ ಅಡಿ ಆಯ್ಕೆಯಾದ ಪೌರಕಾರ್ಮಿಕರು/ಲೋಡರ್ಸ್ ಗಳಿಗೆ ಎಸ್.ಎಫ್.ಸಿ ವೇತನ ನಿಧಿಯಿಂದ ವೇತನ ಪಾವತಿಸುವುದು. ನಗರಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರುಗಳನ್ನು ವಿಶೇಷ ನೇಮಕಾತಿ ಮಾಡಿ ಪರಿಗಣಿಸುವುದು. .ಪೌರ ಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ/ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸುವುದು ಹಾಗು ಐ.ಟಿ ಸಿಬ್ಬಂದಿ/ಅಕೌಂಟ್ ಕನ್ಸಲ್ ಟೆಂಟ್/ಕಂಪ್ಯೂಟರ್ ಆಪರೇಟರ್/ವಾಹನ ಚಾಲಕ/ಸ್ಯಾನಿಟರಿ ಸೂಪರ್ ವೈಸರ್ ಹಾಗೂ ಇತರೆ ವೃಂದದ ನೌಕರರನ್ನು ಪೌರ ಸೇವಾ ನೌಕರರೆಂದು ಪರಿಗಣಿಸಿ ವಿಲೀನಗೊಳಿಸುವುದು ಸೇರಿದಂತೆ ಇತ್ಯಾದಿ ಬೇಡಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಅಧ್ಯಕ್ಷ ಬಿ. ಸಿದ್ದಬಸಪ್ಪ ಪಾಲ್ಗೊಂಡು ಮಾತನಾಡಿದರು. ಅಲ್ಲದೆ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಸಹ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ತಾಲೂಕು ಶಾಖೆ ಅಧ್ಯಕ್ಷ ಎಸ್. ಚೇತನ್‌ಕುಮಾರ್ ನೇತೃತ್ವ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಿ. ರವಿಪ್ರಸಾದ್, ಜಿಲ್ಲಾಧ್ಯಕ್ಷ ಡಿ.ಎಸ್ ಹೇಮಂತ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ನರಸಿಂಹಮೂರ್ತಿ, ಉಪಾಧ್ಯಕ್ಷ ಎಸ್. ಪವನ್ ಕುಮಾರ್, ಖಜಾಂಚಿ ವಾಲಮಹೇಶ, ಸಹ ಸಂಘಟನಾ ಕಾರ್ಯದರ್ಶಿ ಪ್ರಸಾದ್, ಜಂಟಿ ಕಾರ್ಯದರ್ಶಿ ಪಿ.ಸಿ ಪ್ರಸಾದ್ ಸೇರಿದಂತೆ ಪದಾಧಿಕಾರಿಗಳು, ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
No comments:
Post a Comment