ಭದ್ರಾವತಿ ಹಳೇನಗರ ಕನಕಮಂಟಪ ಮೈದಾನ ಮುಂಭಾಗ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್, ಪಠ್ಯ ಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ ವಿತರಿಸಲಾಯಿತು.
ಭದ್ರಾವತಿ : ಸರ್ಕಾರಿ ನೌಕರರು, ಅಧಿಕಾರಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಕೈಜೋಡಿಸಬೇಕೆಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
ಅವರು ಶುಕ್ರವಾರ ಹಳೇನಗರ ಕನಕಮಂಟಪ ಮೈದಾನ ಮುಂಭಾಗ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಓದಿರುವ ಬಹಳಷ್ಟು ಜನರು ಮಹಾನ್ ವ್ಯಕ್ತಿಗಳಾಗಿ ರೂಪು ಗೊಂಡಿದ್ದಾರೆ. ಪ್ರಸ್ತುತ ಸರ್ಕಾರ ಶಕ್ತಿ ಮೀರಿ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಶ್ರಮಿಸುತ್ತಿದೆ. ಅಭಿವೃದ್ಧಿಗೆ ಪೂರಕವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಶಾಲೆಗಳಲ್ಲಿರುವ ಪ್ರತಿಭಾವಂತ ಹಾಗು ಅನುಭವಿ ಶಿಕ್ಷಕರು, ಗುಣಮಟ್ಟದ ಬೋಧನೆ ಹಾಗು ಸೌಲಭ್ಯಗಳು ಪ್ರಸ್ತುತ ಯಾವುದೇ ಖಾಸಗಿ ಶಾಲೆಗಳಲ್ಲೂ ಸಹ ಕಾಣಲು ಸಾಧ್ಯವಿಲ್ಲ ಎಂದರು.
ಯಾವುದೇ ಸರ್ಕಾರವಿರಲಿ ಮೊದಲು ಜನರ ಆರೋಗ್ಯ ಹಾಗು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಕರು ಮತ್ತು ವೈದ್ಯರು ಸಮಾಜದ ಎರಡು ಕಣ್ಣುಗಳು ಇದ್ದಂತೆ. ಶಾಲೆಯಲ್ಲಿ ಸ್ವಚ್ಛತೆ, ಉತ್ತಮ ಪರಿಸರ ಬಹಳ ಮುಖ್ಯ. ಶಿಕ್ಷಕರು ಮಕ್ಕಳಲ್ಲಿ ದೇಶಾಭಿಮಾನ, ಒಳ್ಳೆಯ ಸಂಸ್ಕೃತಿ, ಸಂಪ್ರದಾಯ, ಸನ್ನಡತೆ ಬೆಳೆಸಬೇಕು. ಮುಖ್ಯ ಶಿಕ್ಷಕರು ಇಂಜಿನ್ ಇದ್ದಂತೆ, ಸಹ ಶಿಕ್ಷಕರು ಬೋಗಿಗಳಿದ್ದಂತೆ ಶಾಲೆಯನ್ನು ಮುನ್ನಡೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ರಮೇಶ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯೆ ಅನುಪಮ ಚನ್ನೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ, ಖಜಾಂಚಿ ಪ್ರಶಾಂತ್, ನಿರ್ದೇಶಕ ವೆಂಕಟೇಶ್, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಉಮಾ, ಕೆಡಿಪಿ ಸದಸ್ಯ ರಾಜೇಂದ್ರ, ಶಾಲೆಯ ಮುಖ್ಯ ಶಿಕ್ಷಕ ಮೊಹಿದ್ದಿನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶಿಕ್ಷಕಿ ಶೀಲಾ ಪ್ರಾರ್ಥಿಸಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಚ್.ವಿ ಪಂಚಾಕ್ಷರಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜಾನಾಯ್ಕ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶೋಭಾ ವಂದಿಸಿದರು. ಆರಂಭದಲ್ಲಿ ಮಕ್ಕಳಿಗೆ ಸಿಹಿ ನೀಡಿ ಅದ್ದೂರಿಯಾಗಿ ಶಾಲೆಗೆ ಸ್ವಾಗತಿಸಲಾಯಿತು.
No comments:
Post a Comment