Thursday, December 1, 2022

ಮಾನಸಿಕ ಒತ್ತಡವಿಲ್ಲದೆ, ಮುಕ್ತವಾಗಿ ವಿದ್ಯೆ ಕಲಿಯುವುದು ಇಂದಿನ ಅವಶ್ಯಕತೆ : ಬಸವರಾಜ ಬೊಮ್ಮಾಯಿ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿ ವಸತಿ ನಿಲಯದ ನಿರ್ಮಾಣಕ್ಕೆ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭೂಮಿ ಪೂಜೆ ನೆರವೇರಿಸಿದರು. 
    ಭದ್ರಾವತಿ, ಡಿ. ೧:  ಸಾಮಾನ್ಯ ಕುಟಂಬದ ಮಗು ಯಾವುದೇ ರೀತಿಯ ಮಾನಸಿಕ ಒತ್ತಡವಿಲ್ಲದೆ, ಮುಕ್ತವಾಗಿ ವಿದ್ಯೆ ಕಲಿಯುವುದು ೨೧ನೇ ಶತಮಾನದ ಅವಶ್ಯಕತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
    ಅವರು ಗುರುವಾರ ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿ ವಸತಿ ನಿಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಮ್ಮ ದೇಶ ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಶಿಕ್ಷಣ ಸಂಸ್ಥೆಗಳ ಕೊಡುಗೆ ಅನನ್ಯವಾಗಿದೆ. ಶಿಕ್ಷಣವನ್ನು ಇನ್ನಷ್ಟು ಸರಳಗೊಳಿಸಬೇಕು. ವಿದ್ಯೆಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕೆಲವು ನಿರ್ಬಂಧಗಳ ಅವಶ್ಯಕತೆ ಇದೆ. ಆದರೆ ಈ ಬಗ್ಗೆ ನಾವುಗಳು ಚಿಂತನೆ ಮಾಡಬೇಕು. ಇದೇ ದಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣದ ಸರಳೀಕರಣ ಮಾಡಿದ್ದಾರೆ. ಸರಳವಾಗಿ, ಸಹಜವಾಗಿ ಮತ್ತು ಸ್ಪಷ್ಟವಾಗಿ ಕಲಿಯಲು ಹಾಗೂ ಕಲಿಕೆಯಲ್ಲಿ ಹತ್ತು ಹಲವಾರು ಆಯ್ಕೆಗಳನ್ನು ನೀಡುವ ಅವಕಾಶವಿದೆ. ಬಹುವಿಧ ಕೋರ್ಸ್‌ಗಳನ್ನು ಒಂದೇ ಸಂದರ್ಭದಲ್ಲಿ ಪಡೆದುಕೊಳ್ಳಲು ಅವಕಾಶವಿರುವ ನೀತಿಯನ್ನು ಕರ್ನಾಟಕ ರಾಜ್ಯ ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸುತ್ತಿದೆ. ಈಗಾಗಲೇ ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಾರಂಭವಾಗಿದ್ದು, ಪ್ರಾಥಮಿಕ ವಲಯದಲ್ಲಿಯೂ ಪ್ರಾರಂಭ ಮಾಡುತ್ತಿದ್ದೇವೆ ಎಂದರು.
    ವಿಶ್ವಮಾನವರು :
    ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ೧.೨೫ ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಎಲ್ಲಾ ಮಕ್ಕಳಿಗೆ ಅನ್ನ, ವಿದ್ಯೆ, ಸಂಸ್ಕೃತಿಯ ದಾನ ನೀಡಿ, ತಂದೆತಾಯಿಯಂತೆ ಸಲಹುತ್ತಿದ್ದಾರೆ.  ದೈಹಿಕ ಶಿಕ್ಷಣ ನೀಡಿ ವಿಶ್ವಮಾನವರನ್ನಾಗಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಈ ಸಂಸ್ಥಾನಕ್ಕೆ ಕೋಟಿ ನಮನಗಳು ಎಂದರು.  ಯಾವುದೇ ಬೇಧಭಾವವಿಲ್ಲದೆ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.  ಇಲ್ಲಿಗೆ ಬಂದು ಇಂದು ನಾನು ಬಹಳ ಪುನೀತನಾಗಿದ್ದೇನೆ.  ಪ್ರಸ್ತುತ ಆದಿಚುಂಚನಗಿರಿ ಸಂಸ್ಥೆ ತುಂಬಾ ದೊಡ್ಡಾಗಿ ಬೆಳೆದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
    ಕನ್ನಡನಾಡನ್ನು ಮರೆಯಬೇಡಿ :
    ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ೫೦೦ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಟ್ಟಿ, ಉತ್ಕೃಷ್ಟ ಶಿಕ್ಷಣ ನೀಡಿ, ಕರ್ನಾಟಕದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮಹಾನ್ ಕಾರ್ಯ ಅವರಿಂದಾಗಿದೆ. ಅದನ್ನು  ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದು ಗುಣಾತ್ಮಕತೆ ಹಾಗೂ ಆಧ್ಯಾತ್ಮವನ್ನು ತುಂಬಿ, ಜಗತ್ತಿನಲ್ಲಿಯೇ ಸರ್ವ ಶ್ರೇಷ್ಠ  ಮಠ,  ಶಿಕ್ಷಣ ಸಂಸ್ಥಾನವನ್ನು ಬೆಳೆಸುತ್ತಿರುವ ಡಾ. ಶ್ರೀ ನಿರ್ಮಾಲಾನಂದನಾಥಸ್ವಾಮಿಗಳು ಮೇಧಾವಿಗಳು, ಖದ್ದು ಆಧ್ಯಾತ್ಮಿಕ ಚಿಂತಕರು. ಆಧ್ಯಾತ್ಮ, ತತ್ವಜ್ಞಾನ ಮತ್ತು ವಿಜ್ಞಾನವನ್ನು ಅರ್ಥಮಾಡಿಕೊಂಡಿದ್ದಾರೆ.  ವಿಜ್ಞಾನ ಮತ್ತು ತತ್ವಜ್ಞಾನದ ಸಂಗಮ ಅವರು.  ಅವರ ಆಶೀರ್ವಾದದೊಂದಿದೆ ಮಕ್ಕಳ ಬದುಕು ಹಸನುಗೊಳುತ್ತದೆ. ಎಷ್ಟೇ ಎತ್ತರಕ್ಕೆ ಹೋದರೂ ಕನ್ನಡನಾಡನ್ನು, ಆದಿಚುಂಚನಗಿರಿ ಮಠವನ್ನು ಹಾಗೂ ಜನ್ಮ ಕೊಟ್ಟ ತಂದೆತಾಯಿಯರನು ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕೆಎಸ್‌ಆರ್‌ಟಿಸಿ ನಿವೃತ್ತ ಸಂಚಾರಿ ನಿಯಂತ್ರಕ ವೆಂಕಟಾಚಲ ಶೆಟ್ಟರು ನಿಧನ

ವೆಂಕಟಾಚಲ ಶೆಟ್ಟರು
    ಭದ್ರಾವತಿ, ಡಿ. ೧: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಸುಮಾರು ೧೫ಕ್ಕೂ ಹೆಚ್ಚು ವರ್ಷ ಸಂಚಾರಿ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ವೆಂಕಟಾಚಲ ಶೆಟ್ಟರು(೬೪) ನಿಧನ ಹೊಂದಿದ್ದಾರೆ.
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದರು. ಶಿವಮೊಗ್ಗದಲ್ಲಿ ವಾಸವಿದ್ದ ಶೆಟ್ಟರ್‌ರವರು ಬುಧವಾರ ರಾತ್ರಿ ನಿಧನ ಹೊಂದಿದ್ದು, ಇವರ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅವರ ಹುಟ್ಟೂರಿನಲ್ಲಿ ಗುರುವಾರ ನಡೆಯಿತು.
    sಶೆಟ್ಟರ್‌ರವರು ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ನಿರ್ವಾಹಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದು, ನಂತರ ಮುಂಬಡ್ತಿ ಹೊಂದಿ ಸಂಚಾರಿ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇವರ ನಿಧನಕ್ಕೆ ಕೆಎಸ್‌ಆರ್‌ಟಿಸಿ ಭದ್ರಾವತಿ ಘಟಕ ವ್ಯವಸ್ಥಾಪಕರು ಹಾಗು ಸಿಬ್ಬಂದಿ ವರ್ಗದವರು ಮತ್ತು ಮುಖ್ಯಬಸ್‌ನಿಲ್ದಾಣದ ಮಳಿಗೆಗಳ ವರ್ತಕರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಗೆಲುವಿನ ಸ್ಪೂರ್ತಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಿ : ಬಸವರಾಜ ಬೊಮ್ಮಾಯಿ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಅಂತರ್ ಶಾಲಾಕಾಲೇಜುಗಳ ರಜತ ಚುಂಚಾದ್ರಿ ಕ್ರೀಡೋತ್ಸವ, ೨೫ನೇ ರಾಜ್ಯಮಟ್ಟದ ಕ್ರೀಡಾಕೂಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
    ಭದ್ರಾವತಿ, ಡಿ. ೧: ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಸೋತಾಗ ಬೇಸರಗೊಳ್ಳದೆ ಪುನಃ ಗೆಲುವಿಗಾಗಿ ಪ್ರಯತ್ನಿಸಬೇಕು. ಪ್ರತಿಯೊಬ್ಬರಿಗೂ ಹಲವಾರು ಅವಕಾಶಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
    ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಅಂತರ್ ಶಾಲಾಕಾಲೇಜುಗಳ ರಜತ ಚುಂಚಾದ್ರಿ ಕ್ರೀಡೋತ್ಸವ, ೨೫ನೇ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರು ಗೆಲುವಿನ ಸ್ಪೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆ ಸಹ ಒಂದು ಬದುಕು ಎಂಬುದನ್ನು ಭಾವಿಸಿಕೊಳ್ಳಬೇಕು. ಭಗವಂತ ಗೆಲುವಿಗೆ ಹತ್ತಾರು ಅವಕಾಶಗಳನ್ನು ನೀಡಿರುತ್ತಾನೆ. ನಿರಂತರ ಪ್ರಯತ್ನದಿಂದ ಗೆಲುವು ಸಾಧ್ಯ. ಸೋತಾಗ ಬೇಸರಪಡಬಾರದು. ಪ್ರತಿಯೊಬ್ಬರಲ್ಲೂ ಕ್ರೀಡಾಸ್ಪೂರ್ತಿ ನಿರಂತರವಾಗಿರಬೇಕೆಂದರು.
    ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಶ್ರೀ ಕ್ಷೇತ್ರದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಗೃಹ ಸಚಿವ ಅರಗಜ್ಞಾನೇಂದ್ರ, ಆರೋಗ್ಯ ಸಚಿವ ಡಾ. ಡಿ. ಸುಧಾಕರ್, ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯರಾದ ಎಸ್.ಎಸ್ ಭೋಜೇಗೌಡ, ಡಿ.ಎಸ್ ಅರುಣ್, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಮುಖರು, ವಿವಿಧ ಶಾಲೆಗಳ ಆಡಳಿತ ಮಂಡಳಿಯವರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಜತ ಚುಂಚಾದ್ರಿ ಕ್ರೀಡೋತ್ಸವ, ೨೫ನೇ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಅಂತರ್ ಶಾಲಾಕಾಲೇಜುಗಳ ರಜತ ಚುಂಚಾದ್ರಿ ಕ್ರೀಡೋತ್ಸವ, ೨೫ನೇ ರಾಜ್ಯಮಟ್ಟದ ಕ್ರೀಡಾಕೂಟದ ವೇದಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರನ್ನು ವಿವಿಧ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
    ಭದ್ರಾವತಿ, ಡಿ. ೧ : ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಅಂತರ್ ಶಾಲಾಕಾಲೇಜುಗಳ ರಜತ ಚುಂಚಾದ್ರಿ ಕ್ರೀಡೋತ್ಸವ, ೨೫ನೇ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
    ಡಿ.೩ರವರೆಗೆ ನಡೆಯಲಿರುವ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಇದಕ್ಕೂ ಮೊದಲು ವಿದ್ಯಾರ್ಥಿ ವಸತಿ ನಿಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
    ನಂತರ ಕ್ರೀಡಾಕೂಟದ ವೇದಿಕೆಗೆ ಯಕ್ಷಗಾನ ಕಲಾತಂಡ, ಕೇರಳ ಚಂಡೆ ವಾದ್ಯ, ನವಿಲು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
    ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಶ್ರೀ ಕ್ಷೇತ್ರದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಗೃಹ ಸಚಿವ ಅರಗಜ್ಞಾನೇಂದ್ರ, ಆರೋಗ್ಯ ಸಚಿವ ಡಾ. ಡಿ. ಸುಧಾಕರ್, ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯ ಎಸ್.ಎಸ್ ಭೋಜೇಗೌಡ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ರಾಜ್ಯದ ವಿವಿಧೆಡೆಗಳಿಂದ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳು ಆಗಮಿಸಿದ್ದು, ಡಿ.೩ರಂದು ಮಧ್ಯಾಹ್ನ ೧೨ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.


ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಅಂತರ್ ಶಾಲಾಕಾಲೇಜುಗಳ ರಜತ ಚುಂಚಾದ್ರಿ ಕ್ರೀಡೋತ್ಸವ, ೨೫ನೇ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಥಸಂಚಲನದ ಗೌರವ ವಂದನೆ ಸ್ವೀಕರಿಸಸಲಾಯಿತು.