ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿ ವಸತಿ ನಿಲಯದ ನಿರ್ಮಾಣಕ್ಕೆ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭೂಮಿ ಪೂಜೆ ನೆರವೇರಿಸಿದರು.
ಭದ್ರಾವತಿ, ಡಿ. ೧: ಸಾಮಾನ್ಯ ಕುಟಂಬದ ಮಗು ಯಾವುದೇ ರೀತಿಯ ಮಾನಸಿಕ ಒತ್ತಡವಿಲ್ಲದೆ, ಮುಕ್ತವಾಗಿ ವಿದ್ಯೆ ಕಲಿಯುವುದು ೨೧ನೇ ಶತಮಾನದ ಅವಶ್ಯಕತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಗುರುವಾರ ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿ ವಸತಿ ನಿಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಮ್ಮ ದೇಶ ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಶಿಕ್ಷಣ ಸಂಸ್ಥೆಗಳ ಕೊಡುಗೆ ಅನನ್ಯವಾಗಿದೆ. ಶಿಕ್ಷಣವನ್ನು ಇನ್ನಷ್ಟು ಸರಳಗೊಳಿಸಬೇಕು. ವಿದ್ಯೆಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕೆಲವು ನಿರ್ಬಂಧಗಳ ಅವಶ್ಯಕತೆ ಇದೆ. ಆದರೆ ಈ ಬಗ್ಗೆ ನಾವುಗಳು ಚಿಂತನೆ ಮಾಡಬೇಕು. ಇದೇ ದಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣದ ಸರಳೀಕರಣ ಮಾಡಿದ್ದಾರೆ. ಸರಳವಾಗಿ, ಸಹಜವಾಗಿ ಮತ್ತು ಸ್ಪಷ್ಟವಾಗಿ ಕಲಿಯಲು ಹಾಗೂ ಕಲಿಕೆಯಲ್ಲಿ ಹತ್ತು ಹಲವಾರು ಆಯ್ಕೆಗಳನ್ನು ನೀಡುವ ಅವಕಾಶವಿದೆ. ಬಹುವಿಧ ಕೋರ್ಸ್‌ಗಳನ್ನು ಒಂದೇ ಸಂದರ್ಭದಲ್ಲಿ ಪಡೆದುಕೊಳ್ಳಲು ಅವಕಾಶವಿರುವ ನೀತಿಯನ್ನು ಕರ್ನಾಟಕ ರಾಜ್ಯ ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸುತ್ತಿದೆ. ಈಗಾಗಲೇ ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಾರಂಭವಾಗಿದ್ದು, ಪ್ರಾಥಮಿಕ ವಲಯದಲ್ಲಿಯೂ ಪ್ರಾರಂಭ ಮಾಡುತ್ತಿದ್ದೇವೆ ಎಂದರು.
ವಿಶ್ವಮಾನವರು :
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ೧.೨೫ ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಎಲ್ಲಾ ಮಕ್ಕಳಿಗೆ ಅನ್ನ, ವಿದ್ಯೆ, ಸಂಸ್ಕೃತಿಯ ದಾನ ನೀಡಿ, ತಂದೆತಾಯಿಯಂತೆ ಸಲಹುತ್ತಿದ್ದಾರೆ. ದೈಹಿಕ ಶಿಕ್ಷಣ ನೀಡಿ ವಿಶ್ವಮಾನವರನ್ನಾಗಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಈ ಸಂಸ್ಥಾನಕ್ಕೆ ಕೋಟಿ ನಮನಗಳು ಎಂದರು. ಯಾವುದೇ ಬೇಧಭಾವವಿಲ್ಲದೆ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇಲ್ಲಿಗೆ ಬಂದು ಇಂದು ನಾನು ಬಹಳ ಪುನೀತನಾಗಿದ್ದೇನೆ. ಪ್ರಸ್ತುತ ಆದಿಚುಂಚನಗಿರಿ ಸಂಸ್ಥೆ ತುಂಬಾ ದೊಡ್ಡಾಗಿ ಬೆಳೆದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕನ್ನಡನಾಡನ್ನು ಮರೆಯಬೇಡಿ :
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ೫೦೦ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಟ್ಟಿ, ಉತ್ಕೃಷ್ಟ ಶಿಕ್ಷಣ ನೀಡಿ, ಕರ್ನಾಟಕದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮಹಾನ್ ಕಾರ್ಯ ಅವರಿಂದಾಗಿದೆ. ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದು ಗುಣಾತ್ಮಕತೆ ಹಾಗೂ ಆಧ್ಯಾತ್ಮವನ್ನು ತುಂಬಿ, ಜಗತ್ತಿನಲ್ಲಿಯೇ ಸರ್ವ ಶ್ರೇಷ್ಠ ಮಠ, ಶಿಕ್ಷಣ ಸಂಸ್ಥಾನವನ್ನು ಬೆಳೆಸುತ್ತಿರುವ ಡಾ. ಶ್ರೀ ನಿರ್ಮಾಲಾನಂದನಾಥಸ್ವಾಮಿಗಳು ಮೇಧಾವಿಗಳು, ಖದ್ದು ಆಧ್ಯಾತ್ಮಿಕ ಚಿಂತಕರು. ಆಧ್ಯಾತ್ಮ, ತತ್ವಜ್ಞಾನ ಮತ್ತು ವಿಜ್ಞಾನವನ್ನು ಅರ್ಥಮಾಡಿಕೊಂಡಿದ್ದಾರೆ. ವಿಜ್ಞಾನ ಮತ್ತು ತತ್ವಜ್ಞಾನದ ಸಂಗಮ ಅವರು. ಅವರ ಆಶೀರ್ವಾದದೊಂದಿದೆ ಮಕ್ಕಳ ಬದುಕು ಹಸನುಗೊಳುತ್ತದೆ. ಎಷ್ಟೇ ಎತ್ತರಕ್ಕೆ ಹೋದರೂ ಕನ್ನಡನಾಡನ್ನು, ಆದಿಚುಂಚನಗಿರಿ ಮಠವನ್ನು ಹಾಗೂ ಜನ್ಮ ಕೊಟ್ಟ ತಂದೆತಾಯಿಯರನು ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
No comments:
Post a Comment