Monday, December 16, 2024

ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ತೊಡಗಿಸಿ, ಕೆಲಸದ ದಿನ ಹೆಚ್ಚಿಸಿ

ಸಂಸದರಿಗೆ ಗುತ್ತಿಗೆ ಕಾರ್ಮಿಕರ ನಿಯೋಗ ಮನವಿ 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ನೀಡುವ ನಿಟ್ಟಿನಲ್ಲಿ ಹಾಗು ಕಾರ್ಖಾನೆ ಅಭಿವೃದ್ಧಿಗೆ ಗಮನ ಹರಿಸುವಂತೆ ಸೋಮವಾರ ಗುತ್ತಿಗೆ ಕಾರ್ಮಿಕರ ನಿಯೋಗ ಸಂಸದ ಬಿ.ವೈ ರಾಘವೇಂದ್ರರನ್ನು ಭೇಟಿ ಮಾಡಿ ಮನವಿ ಮಾಡಿದೆ. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ನೀಡುವ ನಿಟ್ಟಿನಲ್ಲಿ ಹಾಗು ಕಾರ್ಖಾನೆ ಅಭಿವೃದ್ಧಿಗೆ ಗಮನ ಹರಿಸುವಂತೆ ಸೋಮವಾರ ಗುತ್ತಿಗೆ ಕಾರ್ಮಿಕರ ನಿಯೋಗ ಸಂಸದ ಬಿ.ವೈ ರಾಘವೇಂದ್ರರನ್ನು ಭೇಟಿ ಮಾಡಿ ಮನವಿ ಮಾಡಿದೆ. 
    ಗುತ್ತಿಗೆ ಕಾರ್ಮಿಕರ ನಿಯೋಗ ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರರನ್ನು ಭೇಟಿ ಮಾಡಿ, ಗುತ್ತಿಗೆ ಕಾರ್ಮಿಕರಿಗೆ ಯಾವುದೇ ರೀತಿಯ ಕೆಲಸದ ದಿನಗಳನ್ನು ಹೆಚ್ಚಿಸಿರುವುದಿಲ್ಲ ಮತ್ತು ಕಾರ್ಖಾನೆ ಯಾವುದೇ ರೀತಿಯಲ್ಲೂ ಅಭಿವೃದ್ಧಿ ಹೊಂದುವ ಲಕ್ಷಣಗಳು ಕಂಡು ಬರುತ್ತಿಲ್ಲ.  ಈ ಕುರಿತು ಗಮನ ಹರಿಸಬೇಕೆಂದು ಮನವಿ ಮಾಡಲಾಯಿತು. 
    ಇದಕ್ಕೆ ಸಂಸದರು ಪ್ರತಿಕ್ರಿಯಿಸಿ, ಮುಂದಿನ ಎರಡು ತಿಂಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಸಿಗುವಂತೆ ಮಾಡುತ್ತೇನೆ. ಅತಿಶೀಘ್ರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸುವಂತೆ ಪುನಃ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಮೂಲಕ ಕಾರ್ಖಾನೆಯನ್ನು ಉತ್ಪಾದನೆಯತ್ತ ಕೊಂಡೊಯ್ಯಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು ಎಂದು ಗುತ್ತಿಗೆ ಕಾರ್ಮಿಕರ ನಿಯೋಗ ತಿಳಿಸಿದೆ. 
    ನಿಯೋಗದಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಹಾಗು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಡಿ.೨೨ರಂದು ಅಂತರ ಜಿಲ್ಲಾ ಮುಕ್ತ ಚದುರಂಗ ಪಂದ್ಯಾವಳಿ

    ಭದ್ರಾವತಿ: ಅಂತರ ಜಿಲ್ಲಾ ಮುಕ್ತ ಚದುರಂಗ ಪಂದ್ಯಾವಳಿ ಡಿ.೨೨ರ ಭಾನುವಾರ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದಲ್ಲಿರುವ ಲಯನ್ಸ್ ಕ್ಲಬ್, ಶುಗರ್‌ಟೌನ್, ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.  
    ಪಂದ್ಯಾವಳಿಯಲ್ಲಿ ೧೬ ವರ್ಷ ವಯೋಮಿತಿಯವರಿಗೆ ಮಾತ್ರ ಅವಕಾಶವಿದ್ದು, ನೆರೆಹೊರೆ ಜಿಲ್ಲೆಯವರು ಈ ಪಂದ್ಯದಲ್ಲಿ ಭಾಗವಹಿಸಬಹುದು. ಮುಕ್ತ ವಿಭಾಗದಲ್ಲಿ ೫ ಟ್ರೋಫಿ ಹಾಗೂ ರು. ೫,೫೦೦ ನಗದು ಬಹುಮಾನಗಳಿದ್ದು, ಬಾಲಕ ಮತ್ತು ಬಾಲಕಿಯರ ವಯೋಮಿತಿ ವಿಭಾಗದಲ್ಲಿ ಯು-೧೬,೧೪,೧೨,೧೦ ಮತ್ತು ೮ ರಲ್ಲಿ ಪ್ರತಿ ವಿಭಾಗದಲ್ಲಿ ೫ ಟ್ರೋಫಿಗಳಿರುತ್ತದೆ. ಅತಿ ಚಿಕ್ಕ ಬಾಲಕ-ಬಾಲಕಿಗೆ ಪ್ರತ್ಯೇಕ ಟ್ರೋಫಿ, ಒಟ್ಟು ೫೭ ಟ್ರೋಫಿಗಳನ್ನು ನೀಡಲಾಗುವುದು. ಪಂದ್ಯ ಬೆಳಿಗ್ಗೆ ೯ ಗಂಟೆಗೆ ಪ್ರಾರಂಭಗೊಂದು ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳುತ್ತದೆ. ಭಾಗವಹಿಸಲು ಇಚ್ಛಿಸುವ ಸ್ಪರ್ಧಿಗಳು ಡಿ.೨೧ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. 

ಪುರಸಭೆ ಮಾಜಿ ಸದಸ್ಯ ಎನ್. ಕೃಷ್ಣಮೂರ್ತಿ ನಿಧನ

    ಎನ್. ಕೃಷ್ಣಮೂರ್ತಿ
    ಭದ್ರಾವತಿ : ನಗರದ ಹಿರಿಯ ಕಾಂಗ್ರೆಸ್ ಮುಖಂಡ, ಪುರಸಭೆ ಮಾಜಿ ಸದಸ್ಯ ಎನ್. ಕೃಷ್ಣಮೂರ್ತಿ(೭೮) ಸೋಮವಾರ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರರು ಇದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಕೃಷ್ಣಮೂರ್ತಿಯವರು ವಾರ್ಡ್ ನಂ.೩ರ ಚಾಮೇಗೌಡ ಏರಿಯಾದಲ್ಲಿ ವಾಸಿಸುತ್ತಿದ್ದು, ಹಲವು ವರ್ಷಗಳ ಕಾಲ ಹಳೇನಗರದ ಮಾಡಲ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪುರಸಭೆ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದರು. 
    ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮಾಡಲ್ ಕೋ-ಅಪರೇಟಿವ್ ಸೊಸೈಟಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಪುಟ್ಟಮ್ಮ ನಿಧನ

ಪುಟ್ಟಮ್ಮ 
    ಭದ್ರಾವತಿ: ನಗರದ ನಂಜಾಪುರ ನಿವಾಸಿ ಪುಟ್ಟಮ್ಮ(೬೫) ಸೋಮವಾರ ನಿಧನ ಹೊಂದಿದರು. ಇವರ ಅಂತ್ಯಕ್ರಿಯೆ ಸಂಜೆ ನೆರವೇರಿತು. 
    ಓರ್ವ ಪುತ್ರ, ಮೂವರು ಪುತ್ರಿಯರು, ಸೊಸೆ, ಅಳಿಯಂದಿರು ಹಾಗು ಮೊಮ್ಮಕ್ಕಳು ಇದ್ದರು. ಈ ಹಿಂದೆ ನಗರಸಭೆ ವ್ಯಾಪ್ತಿಯ ವೇಲೂರುಶೆಡ್‌ನಲ್ಲಿ ವಾಸವಾಗಿದ್ದರು. ಇವರ ಪತಿ ಚಲುವಯ್ಯ ಜನವರಿ ತಿಂಗಳಿನಲ್ಲಿ ನಿಧನ ಹೊಂದಿದ್ದರು. ಪುಟ್ಟಮ್ಮ ಕೆಲವು ವರ್ಷಗಳಿಂದ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು.