Wednesday, May 6, 2020

ತುಂಬಿದ ಸಿಲಿಂಡರ್ ಸ್ಪೋಟ

ಭದ್ರಾವತಿ ತುಂಬಿದ ಅಡುಗೆ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿರುವ ಘಟನೆ ಬಿ.ಎಚ್ ರಸ್ತೆ ವೈಶಾಲಿ ಹೋಟೆಲ್ ಹಿಂಭಾಗ ಬುಧವಾರ ಸಂಜೆ ನಡೆದಿದೆ. 
ಭದ್ರಾವತಿ: ತುಂಬಿದ ಅಡುಗೆ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿರುವ ಘಟನೆ ಬಿ.ಎಚ್ ರಸ್ತೆ ವೈಶಾಲಿ ಹೋಟೆಲ್ ಹಿಂಭಾಗ ಬುಧವಾರ ಸಂಜೆ ನಡೆದಿದೆ.
ನೂರುಲ್ಲಾ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು,  ಮನೆಯಲ್ಲಿ ಯಾರು ಇಲ್ಲದಿರುವಾಗ ಈ ಘಟನೆ ನಡದಿದೆ. ಇದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯ ಗೋಡೆ ಹಾಗೂ ಮೇಲ್ಛಾವಣಿ ಜಖಂಗೊಂಡಿದೆ.


ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್, ಸಿಬ್ಬಂದಿಗಳಾದ ಅಶೋಕ್‌ಕುಮಾರ್, ವಿನೂತನ್, ಹರೀಶ್, ಸುರೇಶ್‌ಚಾರ್ ಅವರನ್ನೊಳಗೊಂಡ ತಂಡ ಆಗಮಿಸಿ ಯಾವುದೇ ದುರ್ಘಟನೆ ನಡೆಯದಂತೆ ಎಚ್ಚರ ವಹಿಸಿತು.  ಪೊಲೀಸ್ ನಗರ ವೃತ್ತ ನಿರೀಕ್ಷಕ ನಂಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಅಪಘಾತ : ಪಾದಚಾರಿ ವೃದ್ಧ ಸಾವು

ಭದ್ರಾವತಿ: ಪಾದಚಾರಿ ವೃದ್ಧರೊಬ್ಬರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ನ್ಯೂಟೌನ್ ಶ್ರೀ ಸತ್ಯ ಸಾಯಿ ಬಾಬಾ ಮಂದಿರ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.
ಟಿ.ಎನ್ ತಿಮ್ಮಪ್ಪ(೮೦) ಮೃತಪಟ್ಟಿದ್ದು, ಇವರು ಬೆಳಿಗ್ಗೆ ೮.೩೦ರ ಸಮಯದಲ್ಲಿ ವಾಯು ವಿಹಾರಕ್ಕೆ ತೆರಳಿದ್ದಾಗ ಶ್ರೀ ಸತ್ಯ ಸಾಯಿ ಬಾಬಾ ಮಂದಿರದ ಶಾಲಾ ಆಟದ ಮೈದಾನ ಎದುರು ಘಟನೆ ನಡೆದಿದೆ. ತಕ್ಷಣ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನ ಸವಾರ ಸಹ ತೀವ್ರ ಗಾಯಗೊಂಡಿದ್ದು, ಈ ಸಂಬಂಧ ಮೃತರ ಪುತ್ರ ಎ.ಟಿ ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಮೇ ಅಂತ್ಯದವರೆಗೆ ನಾಲೆಗಳಲ್ಲಿ ನೀರು ಹರಿಸಲು ಕಾಂಗ್ರೆಸ್ ಆಗ್ರಹ

ಎಚ್.ಎಸ್ ಶಂಕರ್‌ರಾವ್ 
ಭದ್ರಾವತಿ: ಭದ್ರಾ ಜಲಾಶಯದ ಎಡ ಮತ್ತು ಬಡ ದಂಡೆ ನಾಲೆಗಳಲ್ಲಿ ಮೇ ಅಂತ್ಯದವರೆಗೆ ನೀರು ಹರಿಸುವಂತೆ ತಾಲೂಕು ಕಾಂಗ್ರೆಸ್ ಸಮಿತಿ ಕಿಸಾನ್ ಮತ್ತು ಕೃಷಿ ಕಾರ್ಮಿಕರ ವಿಭಾಗ ಒತ್ತಾಯಿಸಿದೆ.
ಭದ್ರಾ ಜಲಾಯಶಯದಿಂದ ನಾಲೆಗಳಿಗೆ ಹರಿಸಲಾಗುತ್ತಿರುವ ನೀರನ್ನು ಮೇ.೭ರಂದು ನಿಲ್ಲಿಸಲು ಮುಂದಾಗಿರುವುದು ಸರಿಯಲ್ಲ. ಪ್ರಸ್ತುತ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ರೈತರು ಭತ್ತ ಬೆಳೆಯಲು ಮುಂದಾಗಿದ್ದಾರೆ. ಇದೀಗ ನಾಟಿ ಹಂತದಲ್ಲಿದ್ದು, ಭತ್ತ ಬೆಳೆ ಬೆಳೆಯಲು ಕನಿಷ್ಠ ೧೨೫ ರಿಂದ ೧೩೫ ದಿನಗಳ ಅಗತ್ಯವಿದೆ. ಇದೀಗ ನೀರು ನಿಲ್ಲಿಸುವುದರಿಂದ ತೋಟದ ಬೆಳೆಗಳಿಗೂ ಹಾಗೂ ಕಬ್ಬಿನ ಬೆಳೆಗೂ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
  ಯಾವುದೇ ಕಾರಣಕ್ಕೂ ನೀರು ನಿಲ್ಲಿಸದೆ ಮೇ ಅಂತ್ಯದವರೆಗೆ ನೀರು ಹರಿಸುವ ಮೂಲಕ ರೈತರ ಹಿತಕಾಪಾಡುವಂತೆ ವಿಭಾಗದ ತಾಲೂಕು ಅಧ್ಯಕ್ಷ ಎಚ್.ಎಸ್ ಶಂಕರ್‌ರಾವ್, ಪ್ರಧಾನ ಕಾರ್ಯದರ್ಶಿ ಸತೀಶ್ ಅಯ್ಯರ್, ಉಪಾಧ್ಯಕ್ಷ ಗೊಂದಿ ಬಾಷಾಸಾಬ್, ಅತ್ತಿಗುಂದ ತಿಮ್ಮಪ್ಪ ಸೇರಿದಂತೆ ಇನ್ನಿತರರು ಆಗ್ರಹಿಸಿದ್ದಾರೆ.

ಅಪಘಾತ : ದ್ವಿಚಕ್ರ ವಾಹನ ಸವಾರ ಸಾವು

ಭದ್ರಾವತಿ: ಕ್ಯಾಂಟರ್ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಬುಧವಾರ ನಗರದ ಜೇಡಿಕಟ್ಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಳಿ ನಡೆದಿದೆ.
ದ್ವಿಚಕ್ರ ವಾಹನ ಸವಾರ ಜೇಡಿಕಟ್ಟೆ ನಿವಾಸಿ ರಾಜ(೪೪) ಎಂಬುವರು ಮೃತಪಟ್ಟಿದ್ದು, ಹಿಂಬದಿ ಸವಾರ ಚನ್ನಪ್ಪ ಎಂಬುವರು ತೀವ್ರ ಗಾಯಗೊಂಡಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ಬುಧವಾರದಿಂದ ದಂಡ ವಿಧಿಸಲಾಗುತ್ತಿದೆ.
ಭದ್ರಾವತಿ, ಮೇ. ೬: ಸರ್ಕಾರದ ಆದೇಶದಂತೆ ನಗರಸಭೆ ವ್ಯಾಪ್ತಿಯಲ್ಲಿ ಮಾಸ್ಕ್ ಬಳಸದವರು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಬುಧವಾರದಿಂದ ತಂಡ ವಿಧಿಸಲಾಗುತ್ತಿದೆ.
ನಗರಸಭೆ ಸೇರಿದಂತೆ ಸರ್ಕಾರಿ ಕಛೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಬರುವ ಸಾರ್ವಜನಿಕರಿಗೆ ಹಾಗೂ ರಸ್ತೆಗಳಲ್ಲಿ ವಾಹನ ಚಲಾಯಿಸುವವರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ೧೦೦ ರು. ದಂಡ ವಿಧಿಸಲಾಗುತ್ತಿದೆ. ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಗೋವಿಂದ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡು ದಂಡ ವಿಧಿಸುತ್ತಿದೆ.
ಕೊರೋನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸರ್ಕಾರದ ಆದೇಶದಂತೆ  ದಂಡ ವಿಧಿಸಲಾಗುತ್ತಿದ್ದು, ಸಾರ್ವಜನಿಕರು ಕೊರೋನಾ ವೈರಸ್ ನಿರ್ಮೂಲನೆಗೆ ಸಹಕರಿಸುವಂತೆ ಕೋರಲಾಗಿದೆ.