Monday, November 22, 2021

ಜಗತ್ತಿನ ಪ್ರಮುಖ ೨೫ ಭಾಷೆಗಳಲ್ಲಿ ಕನ್ನಡಕ್ಕೆ ಸ್ಥಾನ ಹೆಮ್ಮೆಯ ವಿಚಾರ : ಟಿ. ಮಲ್ಲಿಕಾರ್ಜುನ್

ಭದ್ರಾವತಿಯಲ್ಲಿ ಭೂಮಿಕಾ ವೇದಿಕೆ ವತಿಯಿಂದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಜಾನಪದ ಸಂಜೆ ಕಾರ್ಯಕ್ರಮದಲ್ಲಿ  ಶಿವಮೊಗ್ಗ ಜಾವಳ್ಳಿ ಜ್ಞಾನದೀಪ ಎಸ್.ಎಸ್ ಶಾಲೆಯ ಕನ್ನಡ ವಿಭಾಗದ ಮುಖ್ಯಸ್ಥ ಸಾಹಿತಿ, ಗಾಯಕ ಟಿ. ಮಲ್ಲಿಕಾರ್ಜುನ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ನ. ೨೨: ಕನ್ನಡ ಭಾಷೆಗೆ ಸುಮಾರು ೨೫೦೦ ವರ್ಷಗಳ ಇತಿಹಾಸವಿದ್ದು, ಜಗತ್ತಿನ ಪ್ರಮುಖ ೨೫ ಭಾಷೆಗಳಲ್ಲಿ ಕನ್ನಡ ಸಹ ಒಂದಾಗಿರುವುದು  ಹೆಮ್ಮೆಯ ವಿಚಾರವಾಗಿದೆ ಎಂದು ಶಿವಮೊಗ್ಗ ಜಾವಳ್ಳಿ ಜ್ಞಾನದೀಪ ಎಸ್.ಎಸ್ ಶಾಲೆಯ ಕನ್ನಡ ವಿಭಾಗದ ಮುಖ್ಯಸ್ಥ ಸಾಹಿತಿ, ಗಾಯಕ ಟಿ. ಮಲ್ಲಿಕಾರ್ಜುನ್ ಹೇಳಿದರು.
    ಭೂಮಿಕಾ ವೇದಿಕೆ ವತಿಯಿಂದ ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಜಾನಪದ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಕನ್ನಡದ ಅತ್ಯಂತ ಪ್ರಾಚೀನ ಗ್ರಂಥವಾಗಿರುವ ಕವಿರಾಜಮಾರ್ಗ, ಗದ್ಯ ಕೃತಿ ವಡ್ಡಾರಾಧನೆ, ಪಂಪ, ರನ್ನರ ಕಾವ್ಯಗಳು ಕನ್ನಡ ಭಾಷೆ, ಸಾಹಿತ್ಯ ಅತ್ಯಂತ ಪ್ರಾಚೀನ ವಾದ್ದದ್ದು ಎಂಬುದಕ್ಕೆ ಸಾಕ್ಷಿಗಳಾಗಿವೆ ಎಂದರು.
    ಈ ನಡುವೆ ೧೨ನೇ ಶತಮಾನದಲ್ಲಿ ಜನರ ಭಾವನೆಯನ್ನು, ಭಕ್ತಿಯನ್ನು ಸರಳವಾಗಿ ಹೇಳುವ ವಚನ ಸಾಹಿತ್ಯ, ಹರಿಹರ, ರಾಘವಾಂಕ, ಕನಕದಾಸ, ಪುರಂದರ ದಾಸರು ಸೇರಿದಂತೆ ದಾಸಾದಿಗಳ ಸಾಹಿತ್ಯ, ಕನ್ನಡದ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯನಾದ ರತ್ನಾಕರವರ್ಣಿಯವರ ಕೃತಿಗಳು, ಹಳೇಗನ್ನಡ, ಹೊಸಗನ್ನಡ, ನವೋದಯ, ನವ್ಯ, ಪ್ರಗತಿಶೀಲ ಹಾಗು ಜಾನಪದ ಸಾಹಿತ್ಯಗಳು ಕನ್ನಡ ಭಾಷೆ, ಸಾಹಿತ್ಯಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟಿವೆ ಎಂದರು.
    ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಾನಪದ ಗಾಯನ, ನೃತ್ಯ ರೂಪಕ, ಒಗಟು, ಕೋಲಾಟ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
    ಡಾ. ವೀಣಾಭಟ್ ಸ್ವಾಗತಿಸಿ, ಡಾ. ಎಚ್.ವಿ ನಾಗರಾಜ್ ವಂದಿಸಿದರು. ಶಾರದ ಶ್ರೀನಿವಾಸ್ ನಿರೂಪಿಸಿದರು. ವೇದಿಕೆ ಕಾರ್ಯದರ್ಶಿ ಮುನಿರಾಜ್ ಉಪಸ್ಥಿತರಿದ್ದರು. ಇದಕ್ಕೂ ಮೊದಲು ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಚಲನಚಿತ್ರ ನಟ, ಸಮಾಜಸೇವಕ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ  ಸಂತಾಪ ಸೂಚಿಸಿ ಗೌರವ ಸಲ್ಲಿಸಲಾಯಿತು.






ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ : ೨೦ ಜನರ ವಿರುದ್ಧ ಪ್ರಕರಣ ದಾಖಲು

    ಭದ್ರಾವತಿ, ನ. ೨೨: ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
    ಈ ಸಂಬಂಧ ಕಳೆದ ೩ ದಿನಗಳ ಹಿಂದೆ ನ.೧೯ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮದುವೆಗೆ ಸಹಕರಿಸಿದ ೨೦ ಜನರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಸೊರಬ ತಾಲೂಕಿನ ಅಪ್ರಾಪ್ತ ಬಾಲಕಿಯೊಂದಿಗೆ ತಾಲೂಕಿನ ಯುವಕನೋರ್ವ ನಾಗತಿಬೆಳಗಲು ಗ್ರಾಮದ ಸಮುದಾಯ ಭವನದಲ್ಲಿ ನ.೧೩ರಂದು ವಿವಾಹವಾಗಿದ್ದು, ಬಾಲ್ಯ ವಿವಾಹ ಎಂಬುದು ಖಚಿತವಾದ ಹಿನ್ನಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ ಹಾಗು ಪೊಲೀಸರು ಅಪ್ರಾಪ್ತ ಬಾಲಕಿ ರಕ್ಷಣೆಗೆ ಮುಂದ್ದಾಗಿದ್ದರು. ಆದರೆ ಸಂಬಂಧಿಕರು ಯಾವುದೇ ದೂರು ಕೊಡಲು ಮುಂದಾಗದ ಹಿನ್ನಲೆಯಲ್ಲಿ ಅಂತಿಮವಾಗಿ ಪೊಲೀಸರು ಬಾಲಕಿಯ ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ. ಬಾಲಕಿಯನ್ನು ಶಿವಮೊಗ್ಗ ಸುರಭಿ ಉಜ್ವಲ ಕೇಂದ್ರಕ್ಕೆ ದಾಖಲಿಸಲಾಗಿದೆ.
    ಮದುವೆಗೆ ಸಹಕರಿಸಿದ ಅಪ್ರಾಪ್ತೆ ಬಾಲಕಿ ಹಾಗು ಯುವಕನ ಪೋಷಕರು, ಸಂಬಂಧಕರು,  ಸಮುದಾಯ ಭವನದ ಆಡಳಿತ ಮಂಡಳಿ ಅಧ್ಯಕ್ಷರು, ಖಜಾಂಚಿ ಹಾಗು ವ್ಯವಸ್ಥಾಪಕರು ಮತ್ತು ಮದುವೆ ಶಾಸ್ತ್ರ ನೆರವೇರಿಸಿಕೊಟ್ಟಿರುವ ಅರ್ಚಕರು ಸೇರಿದಂತೆ ಒಟ್ಟು ೨೦ ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎನ್ನಲಾಗಿದೆ.  

ಕನಕದಾಸರ ಸಂದೇಶ ಸಾರ್ಥಕಗೊಳಿಸುವ ಕಾರ್ಯ ಶ್ಲಾಘನೀಯ : ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ


ಭದ್ರಾವತಿಯಲ್ಲಿ ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ಸೋಮವಾರ ನಗರದ ರಂಗಪ್ಪ ವೃತ್ತದಲ್ಲಿ ಎಲ್ಲಾ ಜಾತಿ, ಸಮುದಾಯದವರೊಂದಿಗೆ ಒಗ್ಗೂಡಿ ಹಮ್ಮಿಕೊಳ್ಳಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ತಾವರೆಕರೆ ಶ್ರೀಗಳು ಹಾಗೂ ಬಿಳಿಕಿ ಶ್ರೀಗಳು ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ, ನ. ೧೧: ನಾವುಗಳು ಪುಸ್ತಕದಲ್ಲಿ ಓದಿ ತಿಳಿದುಕೊಂಡಿರುವ ಸಮಾಜದಲ್ಲಿ ಯಾವುದೇ ಜಾತಿ ಇಲ್ಲ. ಎಲ್ಲರೂ ಒಂದೇ ಎಂಬ ಕನಕದಾಸರ ಸಂದೇಶವನ್ನು ಉಕ್ಕಿನ ನಗರದಲ್ಲಿ ಇಂದು ಸನಾತನ ಹಿಂದೂ ಸಮಾಜ ಪರಿಷತ್ ಸಾರ್ಥಕಗೊಳಿಸುವ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದು ತಾವರೆಕರೆ ಶಿಲಾ ಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಶ್ರೀಗಳು ಸೋಮವಾರ ಸಂಜೆ ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ನಗರದ ರಂಗಪ್ಪವೃತ್ತದಲ್ಲಿ ಎಲ್ಲಾ ಜಾತಿ, ಸಮುದಾಯದವರೊಂದಿಗೆ ಒಗ್ಗೂಡಿ ಹಮ್ಮಿಕೊಳ್ಳಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
    ಜಗತ್ತಿಗೆ ಸಮಾನತೆ ಪರಿಕಲ್ಪನೆ ಸಾರಿದ ಕನಕದಾಸರು ಎಲ್ಲರಿಗೂ ಬೇಕು. ಭೂಮಿ ಇರುವುದು ಮಾನವ ಜಾತಿ ಮಾತ್ರ. ಮಾನವ ಜಾತಿಯಿಂದ ಮನುಷ್ಯ ಮಹಾದೇವನಾಗಿ ರೂಪುಗೊಳ್ಳಬೇಕು. ಈ ಮೂಲಕ ಸದೃಢ ಸಮಾಜ ನಿರ್ಮಾಣಗೊಳ್ಳಬೇಕು. ಈ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕಾರ್ಯ ನಿರಂತರವಾಗಿ ನಡೆಯಬೇಕೆಂದರು.
      ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜದ ಎಲ್ಲಾ ಜಾತಿ ಸಮುದಾಯಗಳನ್ನು ಒಂದು ಗೂಡಿಸುವ ಕಾರ್ಯ ರಾಜ್ಯದಲ್ಲಿಯೇ ಮೊದಲ ಬಾರಿಗೆ ಉಕ್ಕಿನ ನಗರದಿಂದ ಕೈಗೊಂಡಿರುವುದು ಹೆಮ್ಮೆಯವಾಗಿದೆ. ಯಾವುದೇ ಕಾರ್ಯಕ್ಕೂ ಸಂಘಟನೆ ಬಹಳ ಮುಖ್ಯವಾಗಿದೆ. ಸಂಘಟನೆ ಮೂಲಕ ನಮ್ಮ ಗುರಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಮತ್ತಷ್ಟು ಸಂಘಟಿತರಾಗಬೇಕು. ಪ್ರಸ್ತುತ ಹಿಂದೂ ಸಮಾಜದಲ್ಲಿ ಮತಾಂತರ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕೆಂದರು.  
    ಪರಿಷತ್ ತಾಲೂಕು ಸಂಚಲನ ಸಮಿತಿ ಸದಸ್ಯ ಕೆ.ಎನ್ ಶ್ರೀಹರ್ಷ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
    ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಕುರುಬ ಸಮಾಜದ ಅಧ್ಯಕ್ಷ ಬಿ.ಎಂ ಸತೋಷ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ವಾಲ್ಮೀಕ ನಾಯಕ ಸಮಾಜದ ಬಸವರಾಜ ಬಿ. ಆನೇಕೊಪ್ಪ, ಭೋವಿ ಸಮಾಜದ ಜಿ. ಆನಂದಕುಮಾರ್, ಬ್ರಾಹ್ಮಣ ಸಮಾಜದ ರಮಾಕಾಂತ್, ಬಲಿಜ ಸಮಾಜದ ಅಧ್ಯಕ್ಷ ಸುಬ್ರಮಣ್ಯ, ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ, ದೇವಾಂಗ ಸಮಾಜದ ಅಧ್ಯಕ್ಷ ಎಂ. ಪ್ರಭಾಕರ್, ಪ್ರಮುಖರಾದ ಮಂಗೋಟೆ ರುದ್ರೇಶ್, ನಟರಾಜ್, ಸುಬ್ರಮಣ್ಯ, ಎಚ್. ರವಿಕುಮಾರ್, ಕೋಗಲೂರು ತಿಪ್ಪೇಸ್ವಾಮಿ, ಎಚ್. ತಿಮ್ಮಪ್ಪ, ಸಿ. ಚನ್ನಪ್ಪ, ಶಿವಾಜಿರಾವ್, ಸುಭಾಷ್, ಶ್ರೀನಿವಾಸ್, ಜಿಲ್ಲಾ ಯೂನಿಯನ್ ಬ್ಯಾಂಕ್ ದುಗ್ಗೇಶ್, ನಗರಸಭಾ ಸದಸ್ಯರಾದ ಕಾಂತರಾಜ್, ಶ್ರೇಯಸ್, ಪವನ್‌ಕುಮಾರ್ ಉಡುಪ ಸೇರಿದಂತೆ ಎಲ್ಲಾ ಜಾತಿ, ಸಮುದಾಯಗಳ ಪ್ರಮುಖರು ಪಾಲ್ಗೊಂಡಿದ್ದರು.

ವಿವಿಧೆಡೆ ದಾಸ ಶ್ರೇಷ್ಠ ಕನಕದಾಸರ ಜಯಂತಿ : ರೋಗಿಗಳಿಗೆ ಬ್ರೆಡ್, ಬಿಸ್ಕತ್ ವಿತರಣೆ, ಅನ್ನಸಂತರ್ಪಣೆ


ದಾಸ ಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಬ್ರೆಡ್ ಮತ್ತು ಬಿಸ್ಕತ್ ವಿತರಿಸಲಾಯಿತು.
    ಭದ್ರಾವತಿ, ನ. ೨೨:  ದಾಸ ಶ್ರೇಷ್ಠ ಕನಕದಾಸರ ಜಯಂತಿ ನಗರದ ವಿವಿಧೆಡೆ ಅದ್ದೂರಿಯಾಗಿ ಜರುಗಿತು. ಜಯಂತಿ ಅಂಗವಾಗಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಬ್ರೆಡ್ ಮತ್ತು ಬಿಸ್ಕತ್ ವಿತರಿಸಲಾಯಿತು.
    ಕನಕ ಯುವಪಡೆ ಮತ್ತು ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ತಾಲೂಕು ಶಾಖೆ ವತಿಯಿಂದ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ರೋಗಿಗಳಿಗೆ ಬ್ರೆಡ್ ಮತ್ತು ಬಿಸ್ಕತ್ ವಿತರಿಸಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ, ನಗರಸಭಾ ಸದಸ್ಯರಾದ ಶ್ರೇಯಸ್, ಕಾಂತರಾಜ್, ಅನಿತಾ ಮಲ್ಲೇಶ್, ಸುದೀಪ್‌ಕುಮಾರ್, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಕಾರ್ಯಾಧ್ಯಕ್ಷ ಅಭಿಲಾಷ್, ತಾಂತ್ರಿಕ ಸಲಹೆಗಾರ ಮನೋಹರ್, ಶಿವಣ್ಣಗೌಡ್ರು, ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್‌ಕುಮಾರ್, ಕನಕ ಯುವಪಡೆ ಅಧ್ಯಕ್ಷ ಕುಮಾರ್(ಡೈರಿ) ಗೌರವಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಕೇಶವ, ಕಾರ್ಯದರ್ಶಿ ಲೋಕೇಶ್, ಕಾನೂನು ಸಲಹೆಗಾರ ಹನುಮಂತ, ಸಹ ಕಾರ್ಯದರ್ಶಿ ಮಹಾದೇವ್ ಮತ್ತು  ಕಾರ್ಯದರ್ಶಿ ಶರತ್  ಹಾಗು ಕುರುಬ ಸಮಾಜ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
    ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಘಟಕ ಸಮೀಪದ ವೃತ್ತದಲ್ಲಿ ಹಾಗು ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
        ಕನಕ ಆಟೋ ನಿಲ್ದಾಣದಲ್ಲಿ ಕನಕ ಜಯಂತಿ:
    ನಗರದ ತಾಲೂಕು ಪಂಚಾಯಿತಿ ಕಛೇರಿ ಸಮೀಪದಲ್ಲಿರುವ ಕನಕ ಆಟೋ ನಿಲ್ದಾಣದಲ್ಲಿ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಅಚರಿಸಲಾಯಿತು. ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಸ್ವರ ಸಂಗೀತ ಹಾಗು ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.



ಭದ್ರಾವತಿ ತಾಲೂಕು ಪಂಚಾಯಿತಿ ಕಛೇರಿ ಸಮೀಪದಲ್ಲಿರುವ ಕನಕ ಆಟೋ ನಿಲ್ದಾಣದಲ್ಲಿ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಅಚರಿಸಲಾಯಿತು. ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಸ್ವರ ಸಂಗೀತ ಹಾಗು ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.
    ಕನಕ ಆಟೋ ಚಾಲಕರ ಸಂಘದ ಅಧ್ಯಕ್ಷ ಸುರೇಶ್, ರವಿ, ರಮೇಶ್, ಚೇತನ್, ವೆಂಕಟೇಶ್, ತ್ಯಾಗರಾಜ್, ಮಂಜುನಾಥ್, ರಘು ದೇವರಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
      ತಾಲೂಕು ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ :
    ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಕನಕದಾಸರ ಜಯಂತಿಯನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರಳವಾಗಿ ಆಚರಿಸಲಾಯಿತು.


ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಕನಕದಾಸರ ಜಯಂತಿಯನ್ನು ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರಳವಾಗಿ ಆಚರಿಸಲಾಯಿತು.

    ತಹಸೀಲ್ದಾರ್ ಆರ್ ಪ್ರದೀಪ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭಾ ಸದಸ್ಯರಾದ ಜಾರ್ಜ್, ಟಿಪ್ಪುಸುಲ್ತಾನ್, ಸುದೀಪ್‌ಕುಮಾರ್, ಮೋಹನ್, ಬಿ. ಗಂಗಾಧರ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಉಪತಹಸೀಲ್ದಾರ್‌ಗಳಾದ ಮಂಜಾನಾಯ್ಕ, ಅರಸು, ರಾಧಕೃಷ್ಣಭಟ್ ಸೇರಿದಂತೆ ಕಛೇರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.