Wednesday, March 16, 2022

ಕ್ಷೇತ್ರದ ರಾಜಕಾರಣದಲ್ಲಿ ಪುನಃ ಇತಿಹಾಸ ಮರುಕಳುಹಿಸುವುದೇ ?

ಎಸ್. ನಾರಾಯಣ್ ಕಾಂಗ್ರೆಸ್ ಸೇರ್ಪಡೆ : ಸಂಗಮೇಶ್ವರ್‌ಗೆ ಟಿಕೇಟ್ ಕೈ ತಪ್ಪುವ ಆತಂಕ

ಶಾಸಕ ಬಿ.ಕೆ ಸಂಗಮೇಶ್ವರ್

* ಅನಂತಕುಮಾರ್
    ಭದ್ರಾವತಿ: ವಿಧಾನಸಭಾ ಚುನಾವಣೆ ಒಂದು ವರ್ಷ ಬಾಕಿ ಇರುವಾಗಲೇ ಕ್ಷೇತ್ರದ ರಾಜಕಾರಣ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಈ ಹಿಂದಿನ ಇತಿಹಾಸ ಮರುಕಳುಹಿಸುವ ಲಕ್ಷಣಗಳು ಎದ್ದು ಕಾಣುತ್ತಿವೆ.
    ಪ್ರಮುಖ ರಾಜಕೀಯ ಪಕ್ಷಗಳು ಈ ಬಾರಿ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ಬದಲಾವಣೆ ತರಬೇಕೆಂಬ ಉದ್ದೇಶದೊಂದಿಗೆ ಹಲವು ತಂತ್ರಗಾರಿಕೆಗಳನ್ನು ಈಗಿನಿಂದಲೇ ಆರಂಭಿಸಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್‌ರವರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿ ಸ್ನೇಹಿತ ಸಿ.ಎಂ ಇಬ್ರಾಹಿಂರವರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಬ್ರಾಹಿಂ ನಿರೀಕ್ಷೆಯಂತೆ ಗೆಲುವು ಸಾಧಿಸದೆ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಸಂಗಮೇಶ್ವರ್ ೨ನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು. ನಂತರದ ಬೆಳವಣಿಗೆಯಲ್ಲಿ ಸ್ವಲ್ಪ ದಿನದ ಮಟ್ಟಿಗೆ ಸಂಗಮೇಶ್ವರ್ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಅಂದು ಪಕ್ಷದ ವರಿಷ್ಠರು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ಪಕ್ಷ ಸಾಕಷ್ಟು ಹಿನ್ನಡೆ ಅನುಭವಿಸುವಂತಾಯಿತು. ಈ ಹಿನ್ನಲೆಯಲ್ಲಿ ನಂತರದ ಚುನಾವಣೆಯಲ್ಲಿ ಪುನಃ ಸಂಗಮೇಶ್ವರ್‌ಗೆ ಕಾಂಗ್ರೆಸ್ ಟಿಕೇಟ್ ನೀಡಲಾಗಿತ್ತು. ಇದೀಗ ಕ್ಷೇತ್ರದವರೇ ಆದ ನಟ, ನಿರ್ಮಾಪಕ ಎಸ್. ನಾರಾಯಣ್ ಏಕಾಏಕಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಈ ಹಿಂದಿನ ಇತಿಹಾಸ ಪುನಃ ಮರುಕಳುಹಿಸುವ ಲಕ್ಷಣಗಳು ಕಂಡು ಬರುತ್ತಿವೆ.
    ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಂಗಮೇಶ್ವರ್‌ಗೆ ಟಿಕೇಟ್ ತಪ್ಪಿಸಿ ನಾರಾಯಣ್‌ರವರಿಗೆ ಟಿಕೇಟ್ ನೀಡುವ ಲೆಕ್ಕಾಚಾರ ನಡೆಸಲಾಗುತ್ತಿದೆ ಎನ್ನುವ ಸುದ್ದಿ ಇದೀಗ ಕ್ಷೇತ್ರದಲ್ಲಿ ಹರಿದಾಡುತ್ತಿದ್ದು, ಒಂದು ವೇಳೆ ಇದು ನಿಜವಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರ ನಡುವಿನ ಪ್ರತಿಷ್ಠೆ ಸಂಗಮೇಶ್ವರ್ ರಾಜಕೀಯ ಭವಿಷ್ಯಕ್ಕೆ ಮುಳ್ಳಾಗುವ ಸಾಧ್ಯತೆ ಹೆಚ್ಚಾಗಿದೆ.



ನಟ, ನಿರ್ಮಾಪಕ ಎಸ್. ನಾರಾಯಣ್
    ನಾರಾಯಣ್‌ರವರು ಇಲ್ಲಿಯೇ ಹುಟ್ಟಿ ಬೆಳೆದಿದ್ದರೂ ಸಹ ಕಳೆದ ಸುಮಾರು ೩ ದಶಕದಿಂದ ಕ್ಷೇತ್ರದಿಂದ ದೂರ ಉಳಿದಿದ್ದು, ಇದೀಗ ನಟ, ನಿರ್ಮಾಪಕರಾಗಿ ಮಾತ್ರ ಕ್ಷೇತ್ರದ ಜನತೆಗೆ ಪರಿಚಿತರಾಗಿದ್ದಾರೆ. ಕಳೆದ ಸುಮಾರು ೫-೬ ವರ್ಷಗಳ ಹಿಂದೆ ಕ್ಷೇತ್ರದಲ್ಲಿ ಪುತ್ರ ಪಂಕಜ್ ಅಭಿನಯದ ಚಲನಚಿತ್ರ ದುಷ್ಟ ನಿರ್ಮಾಣ ಚಿತ್ರೀಕರಣಕ್ಕಾಗಿ ನಗರಕ್ಕೆ ಬಂದಿದ್ದು ಬಿಟ್ಟರೇ ಉಳಿದಂತೆ ಕ್ಷೇತ್ರದ ಕಡೆ ತಿರುಗಿಯೂ ನೋಡಿಲ್ಲ. ಇಂದಿನ ತಲೆಮಾರಿನ ಬಹುತೇಕ ಮಂದಿಗೆ ನಾರಾಯಣ್ ಭದ್ರಾವತಿಯವರು ಎಂಬುದೇ ತಿಳಿದಿಲ್ಲ.  ಈ ನಡುವೆ ಏಕಾಏಕಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ನಾರಾಯಣ್‌ರವರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಇವರ ವರ್ಚಸ್ಸನ್ನು ಕಾಂಗ್ರೆಸ್ ರಾಜ್ಯದೆಲ್ಲೆಡೆ ಪಕ್ಷ ಸಂಘಟನೆಗಾಗಿ ಬಳಸಿಕೊಳ್ಳುತ್ತದೆಯೋ ಅಥವಾ ಕೇವಲ ಭದ್ರಾವತಿ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.
    ಈ ನಡುವೆ ಬಿಜೆಪಿ ಈ ಬಾರಿ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಎರಡು ಪಕ್ಷಗಳ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಪರಿಗಣಿಸುವ ಮೂಲಕ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಪ್ರತಿ ಬಾರಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ವಿಫಲವಾಗುತ್ತಿದ್ದು, ಅದರಲ್ಲೂ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿಯುತ್ತಿರುವವರನ್ನು ದೂರವಿಟ್ಟು ಹೊರಗಿನವರಿಗೆ ಟಿಕೇಟ್ ನೀಡುತ್ತಿದೆ. ಮುಂಬರುವ ಚುನಾವಣೆಗೂ ಇದೆ ಮಾದರಿ ಅನುಸರಿಸುವ ಲಕ್ಷಣಗಳು ಕಂಡು ಬರುತ್ತಿದೆ.  
    ಇದೀಗ ಕ್ಷೇತ್ರದಲ್ಲಿ ಜೆಡಿಎಸ್‌ನಲ್ಲಿ ಆತಂಕದ ಬೆಳವಣಿಗೆಗಳು ಕಂಡು ಬರುತ್ತಿದ್ದು, ಈಗಾಗಲೇ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪತ್ನಿ ಶಾರದ ಅಪ್ಪಾಜಿಯನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲಾಗಿದ್ದರೂ ಸಹ ಪಕ್ಷದ ವರಿಷ್ಠರು ಕೆಲವು ಬಾರಿ ಕೈಗೊಳ್ಳುವ ನಿರ್ಧಾರಗಳು ಮುಳ್ಳಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಶಾರದ ಅಪ್ಪಾಜಿ ಸಹ ಪಕ್ಷದ ವರಿಷ್ಠರ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು,  ಶಾರದ ಅಪ್ಪಾಜಿ ಸಹ ಬದಲಾದ ಸಂದರ್ಭಗಳಿಗೆ ತಕ್ಕಂತೆ ಬದಲಾಗುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ.

ನೂತನ ವಿಮಾನ ನಿಲ್ದಾಣಕ್ಕೆ ಬಿಎಸ್‌ವೈ ಹೆಸರು ನಾಮಕರಣಗೊಳಿಸಿ

ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಸರು ನಾಮಕರಣಗೊಳಿಸಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಗ್ರೇಡ್-೨ ತಹಶೀಲ್ದಾರ್ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೧೬: ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಸರು ನಾಮಕರಣಗೊಳಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಗ್ರೇಡ್-೨ ತಹಶೀಲ್ದಾರ್ ರಂಗಮ್ಮ ಮೂಲಕ ಬುಧವಾರ ಮನವಿ ಸಲ್ಲಿಸಲಾಯಿತು. 
      ಮಹಾಸಭಾ ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ್, ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮತ್ತು ಸದಸ್ಯ ಬಿ.ಕೆ ಮೋಹನ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮಹಾಸಭಾದ ಪ್ರಮುಖರಾದ ಬಿ.ಎಸ್ ಮಹೇಶ್ ಕುಮಾರ್, ಬಾರಂದೂರು ಮಂಜುನಾಥ್, ರವಿ, ವಾಗೀಶ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ನಾಗರಾಜ್,  ಬಿ.ಎಸ್.ಕಲ್ಪನ, ಶೋಭಾ ಪಾಟೀಲ್, ಆರ್.ಎಸ್.ಶೋಭಾ, ಕವಿತಾ ಸುರೇಶ್, ಸೌಭಾಗ್ಯ, ಉಷಾ ವೀರಶೇಖರ್, ಜಗದೀಶ್ ಕೂಡ್ಲಿಗೆರೆ,  ಆರ್.ಮಹೇಶ್ ಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬ, ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಸಕಲ ಸಿದ್ದತೆ

ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ-ವೆಂಕಟೇಶ್ವರ(ಸತ್ಯ) ಚಿತ್ರ ಮಂದಿರದ ಬಳಿ ಅಳವಡಿಸಲಾಗಿರುವ ಪುನೀತ್‌ರಾಜ್‌ಕುಮಾರ್‌ರವರ ೫೦ ಅಡಿ ಎತ್ತರದ ಕಟೌಟ್.
    ಭದ್ರಾವತಿ, ಮಾ. ೧೬: ನಗರದಲ್ಲೆಡೆ ಪವರ್‌ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಲನಚಿತ್ರ ಬಿಡುಗಡೆ ಹಾಗು ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಭರದ ಸಿದ್ದತೆಗಳು ನಡೆದಿದ್ದು, ಹಲವು ಸಂಘಟನೆಗಳು ಒಗ್ಗಟ್ಟಾಗಿ ಅದ್ದೂರಿ ಆಚರಣೆಗೆ ಮುಂದಾಗಿವೆ.
    ನಗರದ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ-ವೆಂಕಟೇಶ್ವರ(ಸತ್ಯ) ಚಿತ್ರ ಮಂದಿರದಲ್ಲಿ ಗುರುವಾರ ಜೇಮ್ಸ್  ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು, ಈಗಾಗಲೇ ಚಿತ್ರಮಂದಿರ ಸುತ್ತಮುತ್ತ ಜೇಮ್ಸ್ ಚಲನಚಿತ್ರದ ಪೋಸ್ಟರ್‌ಗಳು ಹಾಗು ಪುನೀತ್‌ರಾಜ್‌ರವರ ಕಟೌಟ್‌ಗಳು ರಾರಾಜಿಸುತ್ತಿವೆ. ಪುನೀತ್‌ರಾಜ್‌ಕುಮಾರ್‌ರವರ ಅಭಿಮಾನಿ ಬಳಗದ ವಿವಿಧ ಸಂಘಟನೆಗಳು ಚಿತ್ರ ಪ್ರದರ್ಶನಕ್ಕೆ ಶುಭ ಕೋರಿವೆ.
    ೫೦ ಅಡಿ ಎತ್ತರ ಕಟೌಟ್‌ಗೆ ಪುಷ್ಪಾಲಂಕಾರ-ಹಾಲಿನ ಅಭಿಷೇಕ:
    ನಗರದ ಬಿ.ಎಚ್ ರಸ್ತೆ ೩ನೇ ವಾರ್ಡ್ ವ್ಯಾಪ್ತಿಯ ಚಾಮೇಗೌಡ ಏರಿಯಾದ ಡಾ. ರಾಜ್‌ಕುಮಾರ್ ಅಭಿಮಾನಿಗಳು ಮತ್ತು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಬುಧವಾರವಾರ ಸಂಜೆ ನಗರದ ಬಿ.ಎಚ್ ರಸ್ತೆ ಹುತ್ತಾ ಬಸ್‌ನಿಲ್ದಾಣದಿಂದ ಸತ್ಯ ಚಿತ್ರ ಮಂದಿರದವರೆಗೂ ಜೇಮ್ಸ್ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಚಿತ್ರಮಂದಿರದ ಆವರಣದಲ್ಲಿ ಪುನೀತ್‌ರಾಜ್‌ಕುಮಾರ್‌ರವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಸಿಡಿಮದ್ದು ಸಿಡಿಸುವ ಮೂಲಕ ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಲಾಯಿತು.
ಗುರುವಾರ ಬೆಳಿಗ್ಗೆ ಚಿತ್ರಮಂದಿರ ಮುಂಭಾಗದಲ್ಲಿರುವ ೫೦ ಅಡಿ ಎತ್ತರ ಕಟೌಟ್‌ಗೆ ಹೂವಿನ ಅಲಂಕಾರ ಹಾಗು ಹಾಲಿನ ಅಭಿಷೇಕ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.


ಭದ್ರಾವತಿ ತಾಲೂಕು ಕಚೇರಿ ರಸ್ತೆ ನಿರ್ಮಲ ಆಸ್ಪತ್ರೆ ಬಳಿ ಕನಕ ಆಟೋ ನಿಲ್ದಾಣದ ವತಿಯಿಂದ ಪ್ರತಿಷ್ಠಾಪನೆಗೆ ಸಿದ್ದಗೊಂಡಿರುವ ಪುನೀತ್‌ರಾಜ್‌ಕುಮಾರ್‌ರವರ ಪ್ರತಿಮೆ.
ಪುನೀತ್ ರಾಜ್‌ಕುಮಾರ್ ಪತ್ರಿಮೆ ಅನಾವರಣಕ್ಕೆ ಸಿದ್ದತೆ :
ತಾಲೂಕು ಕಚೇರಿ ರಸ್ತೆ ನಿರ್ಮಲ ಆಸ್ಪತ್ರೆ ಬಳಿ ಕನಕ ಆಟೋ ನಿಲ್ದಾಣದ ವತಿಯಿಂದ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಪುನೀತ್‌ರಾಜ್‌ಕುಮಾರ್‌ರವರ ಪತ್ರಿಮೆ ಅನಾವರಣಗೊಳ್ಳಲಿದೆ.
೩ ಅಡಿ ಎತ್ತರದ ಸಿಮೆಂಟ್‌ನಿಂದ ತಯಾರಿಸಲಾದ ಪ್ರತಿಮೆ ಸಿದ್ದಗೊಂಡಿದ್ದು, ಪ್ರಸ್ತುತ ಸುಮಾರು ಒಟ್ಟು ೧೮ ಸಾವಿರ ರು. ವೆಚ್ಚದಲ್ಲಿ ಪ್ರತಿಷ್ಠಾಪನೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಮಧ್ಯಾಹ್ನ ೧೨.೩೦ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸ್ವರ ಸಂಗೀತ ಹಾಗು ಅನ್ನಸಂತರ್ಪಣೆ ಸಹ ನಡೆಯಲಿದೆ. ಆಟೋ ನಿಲ್ದಾಣದ ಬಳಿ ಕಟೌಟ್‌ಗಳು ರಾರಾಜಿಸುತ್ತಿವೆ. ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಆಟೋ ಚಾಲಕರು ಕೋರಿದ್ದಾರೆ.
    ಅಭಿಮಾನಿಯಿಂದ ನಗರದೆಲ್ಲೆಡೆ ಫ್ಲೆಕ್ಸ್, ಉಚಿತ ಟಿಕೇಟ್:
ನಗರಸಭೆ ೩೩ನೇ ವಾರ್ಡ್ ಸದಸ್ಯ, ಪುನೀತ್‌ರಾಜ್‌ಕುಮಾರ್ ಅಭಿಮಾನಿ ಆರ್. ಮೋಹನ್‌ಕುಮಾರ್ ತಮ್ಮ ಸ್ವಂತ ಖರ್ಚಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ, ವೃತ್ತಗಳಲ್ಲಿ ಹಾಗು ಸತ್ಯ ಚಿತ್ರ ಮಂದಿರ ಬಳಿ ಸುಮಾರು ಒಂದು ವಾರದ ಹಿಂದೆಯೇ ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಶುಭಕೋರಿ ಫ್ಲೆಕ್ಸ್‌ಗಳನ್ನು ಅಳವಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಸುಮಾರು ೫೦ಕ್ಕೂ ಹೆಚ್ಚು ಟಿಕೇಟ್ ಖರೀದಿಸಿ ಕುಟುಂಬ ಸದಸ್ಯರು, ಸ್ನೇಹಿತರು, ಹಿತೈಷಿಗಳಿಗೆ ಉಚಿತವಾಗಿ ನೀಡಿದ್ದಾರೆ.
     ಉಚಿತ ಆರೋಗ್ಯ ತಪಾಸಣೆ :
    ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಪವೃಕ್ಷ ಸೇವಾ ಟ್ರಸ್ಟ್ ಉದ್ಘಾಟನೆ ಹಾಗು ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಅಂಗವಾಗಿ ಗುರುವಾರ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಲಾಜರ್ ಅಧ್ಯಕ್ಷತೆ ವಹಿಸಲಿದ್ದಾರೆ. ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಸುರಜಿತ್‌ಮಿಶ್ರಾ, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸಮಾಜ ಸೇವಕ ಬಾಲಕೃಷ್ಣ, ನಗರಸಭಾ ಸದಸ್ಯ ಕಾಂತರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
    ಒಂದು ಚಿತ್ರಮಂದಿರ ಭರ್ತಿ:
    ನಗರದ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ-ವೆಂಕಟೇಶ್ವರ(ಸತ್ಯ) ಚಿತ್ರ ಮಂದಿರದಲ್ಲಿ ಜೇಮ್ಸ್ ಚಿತ್ರ ಪ್ರದರ್ಶನಗೊಳ್ಳಲಿದ್ದು, ಚಿತ್ರಮಂದಿರದಲ್ಲಿ ಭಾನುವಾರದಿಂದ ಟಿಕೇಟ್ ಕಾಯ್ದಿರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ೨ ಚಿತ್ರಮಂದಿರಗಳಿಂದ ಒಟ್ಟು ೮೦೦ ಆಸನಗಳಿದ್ದು, ಈ ಪೈಕಿ ನೇತ್ರಾವತಿ ಭರ್ತಿಯಾಗಿದೆ. ಉಳಿದಂತೆ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಸ್ವಲ್ಪ ಟಿಕೇಟ್ ಮಾತ್ರ ಉಳಿದು ಕೊಂಡಿವೆ.

ಬಿದರೆ ಗ್ರಾಮದಲ್ಲಿ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ

ಶಿವಮೊಗ್ಗ ಬಿದರೆ ಗ್ರಾಮದಲ್ಲಿರುವ  ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಬುಧವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅಂಗವಾಗಿ ಧಾರ್ಮಿಕ ಆಚರಣೆಗಳು ನೆರವೇರಿದವು.
    ಭದ್ರಾವತಿ, ಮಾ. ೧೬: ಶಿವಮೊಗ್ಗ ಬಿದರೆ ಗ್ರಾಮದಲ್ಲಿರುವ  ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಬುಧವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅಂಗವಾಗಿ ಧಾರ್ಮಿಕ ಆಚರಣೆಗಳು ನೆರವೇರಿದವು.
    ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿಗೆ ರುದ್ರಾಭಿಷೇಕ, ಅಷ್ಟೋತ್ತರ ರುದ್ರಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬಿದರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.