ಬುಧವಾರ, ಅಕ್ಟೋಬರ್ 15, 2025

ಅ.೨೬ರಂದು ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಚುನಾವಣೆ


    ಭದ್ರಾವತಿ : ಎಐಟಿಯುಸಿ ಕಾರ್ಮಿಕ ಸಂಘಟನೆಯ ನಗರದ ನ್ಯೂಟೌನ್ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಚುನಾವಣೆ ಅ.೨೬ರಂದು ನಡೆಯಲಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ. 
    ಅ.೧೭ ನಾಮಪತ್ರ ಹಿಂಪಡೆಯುವ ದಿನವಾಗಿದ್ದು, ನಂತರ ೧೯ರಂದು ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ. ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಕಛೇರಿಯಲ್ಲಿ ೨೬ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಚುನಾವಣೆ ನಡೆಯಲಿದೆ. ಇದೆ ದಿನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿ, ನ್ಯಾಯವಾದಿ ಎಸ್. ರವಿಕುಮಾರ್ ತಿಳಿಸಿದ್ದಾರೆ. 

ಅಸಂಘಟಿತ ಕಾರ್ಮಿಕರ ಸಂಘ : ನೂತನ ಪದಾಧಿಕಾರಿಗಳ ಪದಗ್ರಹಣ

ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಭದ್ರಾವತಿ ಗ್ರಾಮಾಂತರ ಮತ್ತು ನಗರ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜಿಲ್ಲಾಧ್ಯಕ್ಷ ರಮೇಶ್ ಮಡಿವಾಳ ಬಂದಗದ್ದೆರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. 
    ಭದ್ರಾವತಿ : ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಗ್ರಾಮಾಂತರ ಮತ್ತು ನಗರ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜಿಲ್ಲಾಧ್ಯಕ್ಷ ರಮೇಶ್ ಮಡಿವಾಳ ಬಂದಗದ್ದೆರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. 
    ರಾಜ್ಯಾಧ್ಯಕ್ಷ ಪ್ರದೀಪ್ ಹೊನ್ನಪ್ಪ, ರಾಜ್ಯ ಕಾರ್ಯದರ್ಶಿ ಸುರೇಖಾ ಪಾಲಾಕ್ಷಪ್ಪ, ಜಿಲ್ಲಾ ಉಪಾಧ್ಯಕ್ಷೆ ಅಶ್ವಿನಿ ಗೌಡ, ತಾಲೂಕು ನಗರ ಅಧ್ಯಕ್ಷೆ ರೂಪ ನಾಗರಾಜ್, ಗ್ರಾಮಾಂತರ ಅಧ್ಯಕ್ಷೆ ಶಕುಂತಲಾ ಪ್ರದೀಪ್ ಅರಳಿಹಳ್ಳಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಡ್ರೈವರ್, ಕ್ಲೀನರ್, ಹೆಲ್ಪರ್, ಮೆಕ್ಯಾನಿಕ್, ಬ್ಯೂಟಿಷಿಯನ್, ಪೈಂಟರ್, ಹಮಾಲಿ, ಹೋಟೆಲ್ ಕೂಲಿ ಕಾರ್ಮಿಕರುಗಳು, ದಿನಗೂಲಿ ಕಾರ್ಮಿಕರು ಸೇರಿದಂತೆ ಎಲ್ಲಾ ತರಹದ ಅಸಂಘಟಿತ ಕಾರ್ಮಿಕರಿಗೆ ಇಲಾಖೆಯಿಂದ ಲಭ್ಯವಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು
    ತಾಲೂಕು ಗ್ರಾಮಾಂತರ ಸಮಿತಿ ನೂತನ ಪದಾಧಿಕಾರಿಗಳು : 
    ಅಧ್ಯಕ್ಷೆ ಶಕುಂತಲಾ ಪ್ರದೀಪ್ ಅರಳಿಹಳ್ಳಿ, ಪ್ರಧಾನ ಕಾರ್ಯದರ್ಶಿ ಶಶಿಕಲಾ ಕುಮಾರ್, ಉಪಾಧ್ಯಕ್ಷರು ಟಿ. ಶಿವಮೂರ್ತಿ ತಳ್ಳಿಕಟ್ಟೆ. ಸೈಯದ್ ಜಬಿವುಲ್ಲಾ ಗೌಡರಹಳ್ಳಿ. ಸರಸ್ವತಿ ವಿಜಯಕುಮಾರ್ ಗುಡ್ಡದನೇರಳೆಕೆರೆ. ಚನ್ನಪ್ಪ ನಾಗತಿಬೆಳಗಲು, ಕಾರ್ಯದರ್ಶಿ ಜಯಶೀಲ ಅತ್ತಿಗುಂದ, ಧನಿಕ್ ಕುಮಾರ್ ತಳ್ಳಿಕಟ್ಟೆ, ಪಾರ್ವತಿ ಸೀಗೆಬಾಗಿ, ಪದ್ಮಪ್ರಿಯ ಸೀತಾರಾಮಪುರ, ಅಫ್ರೋಜ್ ಗುಡ್ಡದನೇರಳೆಕೆರೆ. ಸಂಘಟನಾ ಕಾರ್ಯದರ್ಶಿ ನೇತ್ರಾವತಿ ಎಡೇಹಳ್ಳಿ. 

ವಿನಾಯಕ ಮೂರ್ತಿ ಪ್ರತಿಷ್ಠಾಪನೆ : ರಕ್ತದಾನ ಶಿಬಿರ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ೪ನೇ ತಿರುವಿನ ರಸ್ತೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿಯಿಂದ ಸುಮಾರು ೫೦ ವರ್ಷಗಳಿಂದ ಪ್ರತಿ ವರ್ಷ ವಿಭಿನ್ನವಾದ, ಆಕರ್ಷಕವಾದ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ವಿಶೇಷ ಎಂದರೆ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಕ್ತದಾನ ಕುರಿತು ಜಾಗೃತಿ ಮೂಡಿಸಲಾಯಿತು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪು ೪ನೇ ತಿರುವಿನ ರಸ್ತೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿಯಿಂದ ಸುಮಾರು ೫೦ ವರ್ಷಗಳಿಂದ ಪ್ರತಿ ವರ್ಷ ವಿಭಿನ್ನವಾದ, ಆಕರ್ಷಕವಾದ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ವಿಶೇಷ ಎಂದರೆ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಕ್ತದಾನ ಕುರಿತು ಜಾಗೃತಿ ಮೂಡಿಸಲಾಯಿತು. 
    ಬುಧವಾರ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ರಕ್ತಕೇಂದ್ರದ ಸಹಯೋಗದೊಂದಿಗೆ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಸುಮಾರು ೧೯ ಮಂದಿ ರಕ್ತದಾನ ಮಾಡಿದರು. ಈ ಭಾಗದ ವಾರ್ಡ್ ನಗರಸಭೆ ಸದಸ್ಯೆ ಜಯಶೀಲ ಸುರೇಶ್, ರಕ್ತ ಕೇಂದ್ರದ ಸಿಬ್ಬಂದಿಗಳು, ಶ್ರೀ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿ ಪದಾಧಿಕಾರಿಗಳು, ಸೇವಾಕರ್ತರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. 
    ಅ.೧೬ರ ಗುರುವಾರ ಬೆಳಿಗ್ಗೆ ಗಣಹೋಮ ಹಾಗು ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಛಾಯಾಗ್ರಾಹಕರ ಪತ್ತಿನ ಸೌಹಾರ್ದ ಸಹಕಾರಿ ಸಂಘ : ಅಧ್ಯಕ್ಷರಾಗಿ ಅರುಣ್ ಕುಮಾರ್ ಆಯ್ಕೆ

ಭದ್ರಾವತಿ ತಾಲೂಕಿನ ಛಾಯಾಗ್ರಾಹಕರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಹಾಗು ಉಪಾಧ್ಯಕ್ಷರಾಗಿ ಚಲುವರಾಜ್ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ತಾಲೂಕಿನ ಛಾಯಾಗ್ರಾಹಕರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಹಾಗು ಉಪಾಧ್ಯಕ್ಷರಾಗಿ ಚಲುವರಾಜ್ ಆಯ್ಕೆಯಾಗಿದ್ದಾರೆ. 
    ನಿರ್ದೇಶಕರಾದ ಎಚ್. ಶ್ರೀನಿವಾಸ್, ಸಿ. ಶೇಖರ್, ಬಿ.ಸಿ ಶಿವಾನಂದ, ಪಿ. ಸುರೇಶ್, ಕೆಂಪಯ್ಯ, ಎಚ್.ಆರ್ ಸುರೇಶ್, ಕೃಷ್ಣ ಮೂರ್ತಿ, ಜಿ. ಅರುಣ್, ಎಂ.ಆರ್ ಶೈಲೇಶ್ ಕುಮಾರ್ ಮತ್ತು ಕೆ. ಗೀತಾರವರು ನೂತನ ಅಧ್ಯಕ್ಷರು ಹಾಗು ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. 
    ನೂತನ ಅಧ್ಯಕ್ಷ ಅರಣ್‌ಕುಮಾರ್ ಹಾಗೂ ಉಪಾಧ್ಯಕ್ಷ ಚಲುವರಾಜ್ ಅವರಿಗೆ ತಾಲೂಕಿನ ಛಾಯಾ ಗ್ರಾಹಕರು, ವಿವಿಧ  ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.  

ನೂತನ ತಾ.ಪಂ. ಕಟ್ಟಡ ನಿರ್ಮಾಣಕ್ಕೆ, ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿ

ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆಗೆ ಶಾಸಕ ಬಿ.ಕೆ ಸಂಗಮೇಶರ್ ಮನವಿ

ಭದ್ರಾವತಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗು ತಾಲೂಕುಪಂಚಾಯಿತಿ ಕಟ್ಟಡಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಮನವಿ ಸಲ್ಲಿಸಿದ್ದಾರೆ.

    ಭದ್ರಾವತಿ : ತಾಲೂಕಿನ ಗ್ರಾಮೀಣ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗು ತಾಲೂಕುಪಂಚಾಯಿತಿ ಕಟ್ಟಡಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಮನವಿ ಸಲ್ಲಿಸಿದ್ದಾರೆ. 
    ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದ ಶಾಸಕರು, ಪ್ರಸ್ತುತ ತಾಲೂಕು ಪಂಚಾಯಿತಿ ಕಟ್ಟಡ ತುಂಬಾ ಹಳೇಯದಾಗಿದ್ದು, ಈ ಕಟ್ಟಡ ನವೀಕರಣಗೊಳಿಸುವುದು ಸಹ ಕಷ್ಟಕರವಾಗಿದೆ. ಈ ಹಿನ್ನಲೆಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾತಿ ಮಾಡುವಂತೆ ಶಾಸಕರು ಕೋರಿದ್ದಾರೆ. 
    ತಾಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಹಳಷ್ಟು ರಸ್ತೆಗಳು ಹಾಳಾಗಿದ್ದು, ಗ್ರಾಮಗಳಲ್ಲಿ ಗುಣಮಟ್ಟದ ರಸ್ತೆಗಳು ನಿರ್ಮಾಣಗೊಂಡಲ್ಲಿ ಭವಿಷ್ಯದಲ್ಲಿ ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗೆ ರಸ್ತೆಗಳು ಸಹಕಾರಿಯಾಗಲಿವೆ. ಈ ಹಿನ್ನಲೆಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ.

ಭದ್ರಾ ನದಿಗೆ ಕಾಲು ಜಾರಿ ಬಿದ್ದು ಪೊಲೀಸ್ ದಫೇದಾರ್ ಮೃತ

ದಫೇದಾರ್ ಚಂದ್ರಶೇಖರ್ 
    ಭದ್ರಾವತಿ : ನಗರದ ಹೊಸಮನೆ ನಿವಾಸಿ, ಶಿವಮೊಗ್ಗ ಕೆಎಸ್‌ಆರ್‌ಪಿ ಬೆಟಾಲಿಯನ್ ದಫೇದಾರ್ ಚಂದ್ರಶೇಖರ್(೪೪)ರವರು ಕಳೆದ ೪ ದಿನಗಳ ಹಿಂದೆ ಆಕಸ್ಮಿಕವಾಗಿ ಕಾಲು ಜಾರಿ ಭದ್ರಾ ನದಿಗೆ ಬಿದ್ದು ಮೃತಪಟ್ಟಿದ್ದಾರೆಂದು ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
    ಶನಿವಾರ ರಾತ್ರಿ ಚಂದ್ರಶೇಖರ್ ನಗರದ ಬೈಪಾಸ್ ರಸ್ತೆ, ಉಜ್ಜಿನೀಪುರ ನಗರಸಭೆ ಪಂಪ್‌ಹೌಸ್ ಬಳಿ ಭದ್ರಾ ನದಿ ಸೇತುವೆಯ ಕೆಳಭಾಗಕ್ಕೆ ಬಹಿರ್ದೆಸೆಗೆ ತೆರಳಿದ್ದಾಗ, ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಭಾನುವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಮೃತರಿಗೆ ಪತ್ನಿ, ಒಬ್ಬ ಗಂಡು ಮತ್ತು ಮೂವರು ಹೆಣ್ಣು ಮಕ್ಕಳು ಇದ್ದಾರೆ.