ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸುವಲ್ಲಿ ಭದ್ರಾವತಿ ಗ್ರಾಮಾಂತರ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್ ನೇತೃತ್ವದ ತಂಡ ಯಶಸ್ವಿಯಾಗಿದೆ.
ಭದ್ರಾವತಿ, ಆ. ೧೯: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸುವಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್ ನೇತೃತ್ವದ ತಂಡ ಯಶಸ್ವಿಯಾಗಿದೆ.
ತಾಲೂಕಿನ ತಡಸ ಗ್ರಾಮದ ನಿವಾಸಿಗಳಾದ ಸೈಯದ್ ವಾರೀಸ್ ಮತ್ತು ಆಸೀಫ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ ೪೯ ಸಾವಿರ ರು. ನಗದು ಹಣ, ೧೫ ಸಾವಿರ ರು. ಬೆಲೆ ಬಾಳುವ ೬ ಗ್ರಾಂ. ತೂಕದ ಬಂಗಾರದ ಕಿವಿವಾಲೆ ಹಾಗು ೪ ಸಾವಿರ ರು. ಮೌಲ್ಯದ ಮೊಬೈಲ್ ಸೇರಿದಂತೆ ಒಟ್ಟು ೬೮ ಸಾವಿರ ರು. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಬಂಧಿತರಿಬ್ಬರು ಆ.೨ರಂದು ಗ್ರಾಮದ ಸಮೀವುಲ್ಲಾ ಎಂಬುವರ ಮನೆಯ ಕಿಟಕಿ ಗಾಜು ಒಡೆದು ನಗದು ಹಣ, ಬಂಗಾರದ ವಾಲೆ ಮತ್ತು ಮೊಬೈಲ್ ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ರಕ್ಷಣಾಧಿಕಾರಿಗಳು, ಹೆಚ್ಚುವರಿ ರಕ್ಷಣಾಧಿಕಾರಿಗಳು, ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್ ನಾಯಕರವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ದೇವರಾಜ್, ಸಿಬ್ಬಂದಿಗಳಾದ ನಾಗರಾಜ, ಆದರ್ಶಶೆಟ್ಟಿ, ಉದಯಕುಮಾರ್, ಚಂದ್ರಶೇಖರ್ ಪಾಲ್ಗೊಂಡಿದ್ದರು.