Sunday, April 3, 2022

೫ನೇ ಇಂಟರ್‌ನ್ಯಾಷನಲ್ ಯೂತ್ ಗೇಮ್ಸ್ ಪಂದ್ಯಾವಳಿ : ಸಮರ್ಥ ಎಂ. ಪಟೇಲ್ ಆಯ್ಕೆ

    ಭದ್ರಾವತಿ, ಏ. ೩: ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ಮಹಾವಿದ್ಯಾಲಯದ ವಿದ್ಯಾರ್ಥಿ ಸಮರ್ಥ ಎಂ. ಪಟೇಲ್ ದಿ ಅಸೋಸಿಯೇಷನ್ ಫಾರ್ ಟ್ರೆಡಿಷನಲ್ ಯೂತ್ ಗೇಮ್ಸ್ ಅಂಡ್ ಸ್ಪೋರ್ಟ್ಸ್ ಇಂಡಿಯಾ(ಟಿಎಎಫ್‌ಟಿವೈಜಿಎಎಸ್) ವತಿಯಿಂದ ಏ.೨೧ ರಿಂದ ೨೫ರವರೆಗೆ ನಡೆಯಲಿರುವ ೫ನೇ ಇಂಟರ್‌ನ್ಯಾಷನಲ್ ಯೂತ್ ಗೇಮ್ಸ್ ಪಂದ್ಯಾವಳಿಗೆ ಕಬಡ್ಡಿ ಆಟಗಾರನಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾನೆ.
    ಪಂದ್ಯಾವಳಿ ನೇಪಾಳದ ಪೊಖಾರದಲ್ಲಿ ನಡೆಯಲಿದ್ದು,  ಕಬಡ್ಡಿ ಕ್ರೀಡೆಯಲ್ಲಿ ಆಯ್ಕೆಯಾಗಿರುವ ಒಟ್ಟು ೪ ವಿದ್ಯಾರ್ಥಿಗಳ ಪೈಕಿ ಸಮರ್ಥ ಎಂ. ಪಟೇಲ್ ಸಹ ಒಬ್ಬನಾಗಿದ್ದು, ಈತ ಬಾರಂದೂರು ನಿವಾಸಿ ಎಚ್. ಮಂಜುನಾಥ್‌ರವರ ಪುತ್ರ. ಈ ವಿದ್ಯಾರ್ಥಿಯನ್ನು ಬಿಜಿಎಸ್ ಕೇಂದ್ರಿಯ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಹಾಗು ಸಿಬ್ಬಂದಿ ವೃಂದದವರು ಅಭಿನಂದಿಸಿದ್ದಾರೆ.

ಏ.೧೧ರಂದು ‘ನನ್ನೊಳಗೆ’ ಕವನ ಸಂಕಲನ ಬಿಡುಗಡೆ, ಸಾಧಕರಿಗೆ ಪ್ರಶಸ್ತಿ ಪ್ರದಾನ

    ಭದ್ರಾವತಿ, ಏ. ೩: ತಾಲೂಕಿನ ಸುಲ್ತಾನ್ ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಅಂತರಾಷ್ಟ್ರೀಯ ಜಾನಪದ ಕಲಾವಿದ ಎಂ.ಆರ್ ರೇವಣಪ್ಪನವರ 'ನನ್ನೊಳಗೆ' ಕವನ ಸಂಕಲನ ಬಿಡುಗಡೆ ಹಾಗು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಏ.೧೧ರಂದು ಹೊಸನಗರ ತಾಲೂಕಿನ ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂಜೆ ೪ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಶಿವಮೊಗ್ಗ ಜಾನಪದ ಕಲಾ ಮತ್ತು ಸಾಹಿತ್ಯ ವೇದಿಕೆ ಹಾಗು ಮಾದಾಪುರ ಶ್ರೀ ಶನಿಪರಮೇಶ್ವರ ಯುವಕ ಸಂಘದ ವತಿಯಿಂದ ಸಮಾರಂಭ ಆಯೋಜಿಸಲಾಗಿದೆ.
    ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್, ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ,  ಶಿಕ್ಷಕಿ ಭಾರತಿ ಗೋವಿಂದಸ್ವಾಮಿ, ಮಹಾಬಲೇಶ್ವರ ಹೆಗಡೆ, ಹುಚ್ಚಪ್ಪ ಮಾಸ್ಟರ್, ಲಕ್ಷ್ಮಣ್ ರಾವ್ ಬೋರತ್, ನಿಸ್ಸಾರ್ ಖಾನ್ ಕೆಂಚಾಯಿಕೊಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
    ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಶಿಕ್ಷಣದ ಹಿನ್ನಲೆಯಲ್ಲಿ ಜಾನಪದ ಸಾಹಿತ್ಯ ಕುರಿತು ಉಪನ್ಯಾಸ ನೀಡಲಿದ್ದು, ಜ್ಯೂನಿಯರ್ ಶಂಕರ್‌ನಾಗ್, ಜ್ಯೂನಿಯರ್ ವಿಷ್ಣುವರ್ಧನ್ ಮತ್ತು ಜ್ಯೂನಿಯರ್ ಪುನೀತ್ ರಾಜ್‌ಕುಮಾರ್ ಕಲಾವಿದರಿಂದ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ.

ಏ.೫ರಂದು ನಗರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

    ಭದ್ರಾವತಿ, ಏ. ೩:  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಏ.೫ರಂದು ನಗರಕ್ಕೆ ಆಗಮಿಸುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ ನಡೆಸಲಾಗಿರುವ ಪಕ್ಷದ ಡಿಜಿಟಲ್ ನೋಂದಾಣಿ ಸದಸ್ಯತ್ವ ಅಭಿಯಾನ ಕುರಿತು ಮಾಹಿತಿ ಪಡೆಯಲಿದ್ದಾರೆ.
    ಅಂದು ಮಧ್ಯಾಹ್ನ ೩ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹ ಕಚೇರಿಗೆ ಭೇಟಿ ನೀಡಲಿದ್ದು, ಪಕ್ಷದ ಜಿಲ್ಲಾ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.



ಬೌದ್ಧ ವಿಹಾರದಲ್ಲಿ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

    
ಭದ್ರಾವತಿ ಹೊಸ ನಂಜಾಪುರ ಗ್ರಾಮದಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿರುವ ಬೌದ್ಧವಿಹಾರದಲ್ಲಿ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. 
    ಭದ್ರಾವತಿ, ಏ. ೩:  ಹೊಸ ನಂಜಾಪುರ ಗ್ರಾಮದಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿರುವ ಬೌದ್ಧವಿಹಾರದಲ್ಲಿ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. 
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ, ಬೌದ್ಧ ಧರ್ಮದ ಅನುಯಾಯಿಯಾಗಿರುವ ಶ್ರೀನಿವಾಸ್‌ರವರು ತಮ್ಮ ಸ್ವಂತ ಜಮೀನಿನಲ್ಲಿ ೨ ಎಕರೆ ಜಾಗ ಬೌದ್ಧ ವಿಹಾರ ನಿರ್ಮಾಣಕ್ಕೆ ಉಚಿತವಾಗಿ ನೀಡಿದ ಹಿನ್ನಲೆಯಲ್ಲಿ ‘ಸಂಬುದ್ಧ ಧಮ್ಮಾಂಕುರ ಟ್ರಸ್ಟ್’ ಅಸ್ತಿತ್ವಕ್ಕೆ ಬರುವ ಮೂಲಕ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 
ಇದೀಗ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಟ್ರಸ್ಟ್ ಅಧ್ಯಕ್ಷ, ಬೌದ್ಧ ಧರ್ಮ ಉಪಾಸಕ ಪ್ರೊ. ಎಚ್. ರಾಚಪ್ಪ ಬೌದ್ಧ ಧರ್ಮದ ಆಚರಣೆಗಳನ್ನು ನೆರವೇರಿಸಿಕೊಟ್ಟರು. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದು, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಬಿ.ಕೆ ಮೋಹನ್, ಪ್ರೇಮಾ, ಉದಯಕುಮಾರ್, ಎಂಜಿನಿಯರ್ ರಂಗರಾಜಪುರೆ,  ಟ್ರಸ್ಟ್ ಪ್ರಮುಖರಾದ ಸುರೇಶ್, ಬದರಿನಾರಾಯಣ, ಶಿವಬಸಪ್ಪ, ಬಿ.ಡಿ ಸಾವಕ್ಕನವರ್, ಬಿ.ಎಸ್  ಗಣೇಶ್, ಶಾಂತಿ, ಅನಿಲ್‌ಕುಮಾರ್, ಪುಟ್ಟರಾಜು, ಕಿರಣ್, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.