Saturday, November 30, 2024

ಡಿ.೧ರಂದು ಸುರಗಿತೋಪು ವಿನಾಯಕ ಮೂರ್ತಿ ವಿಸರ್ಜನೆ

ಭದ್ರಾವತಿ ನಗರಸಭೆ ವ್ಯಾಪ್ತಿ ಸುರಗಿತೋಪಿನ ಅರಳಿಕಟ್ಟೆಯಲ್ಲಿ ಶ್ರೀ ವರಸಿದ್ದಿ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಡಿ.೧ರ ಭಾನುವಾರ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಶನಿವಾರ ರಾತ್ರಿ ಸ್ಥಳೀಯರಿಂದ ಅಂತಿಮ ದಿನ ಪೂಜೆ ವಿಶೇಷವಾಗಿ ನಡೆಯಿತು. ಡೊಳ್ಳು, ತಮಟೆ ವಾದ್ಯಗಳೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. 
ಭದ್ರಾವತಿ: ನಗರಸಭೆ ವ್ಯಾಪ್ತಿ ಸುರಗಿತೋಪಿನ ಅರಳಿಕಟ್ಟೆಯಲ್ಲಿ ಶ್ರೀ ವರಸಿದ್ದಿ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಡಿ.೧ರ ಭಾನುವಾರ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಶನಿವಾರ ರಾತ್ರಿ ಸ್ಥಳೀಯರಿಂದ ಅಂತಿಮ ದಿನ ಪೂಜೆ ವಿಶೇಷವಾಗಿ ನಡೆಯಿತು. 
ಪೂಜೆ ಸಂದರ್ಭದಲ್ಲಿ ಡೊಳ್ಳು, ತಮಟೆ ವಾದ್ಯಗಳೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. 
ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಇನ್ನಿತರ ಕಲಾತಂಡಗಳೊಂದಿಗೆ ರಾಜಬೀದಿ ಉತ್ಸವ ಮೆರವಣಿಗೆಯೊಂದಿಗೆ ಬೈಪಾಸ್ ರಸ್ತೆ, ಆನೇಕೊಪ್ಪ ಬಳಿ ಭದ್ರಾ ನದಿಯಲ್ಲಿ ವಿನಾಯಕ ಮೂರ್ತಿ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಕುಮಾರ್, ರಾಮಚಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ಶುಕ್ರವಾರ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಮಾರ್ ಮತ್ತು ರಾಮಚಾರಿ ಪ್ರಶಸ್ತಿ ಸ್ವೀಕರಿಸಿದರು.   
    ಭದ್ರಾವತಿ: ನಾಡು, ನುಡಿ, ಕಲೆ, ಸಾಹಿತ್ಯ, ಜನಪದ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಲಾಭೂಮಿ ಪ್ರತಿಷ್ಠಾನದ ವತಿಯಿಂದ ನೀಡುವ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನಗರದ ಜನ್ನಾಪುರ ನಿವಾಸಿ ಕುಮಾರ್ ಭದ್ರಾವತಿ ಹಾಗು ಭದ್ರಾವತಿ ರಾಮಚಾರಿ ಅವರಿಗೆ ಲಭಿಸಿದೆ. 
    ಗ್ರಂಥಾಲಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರ್‌ರವರು ಸಾಹಿತ್ಯ ಹಾಗು ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.  ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ಶುಕ್ರವಾರ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಮಾರ್ ಮತ್ತು ರಾಮಚಾರಿ ಪ್ರಶಸ್ತಿ ಸ್ವೀಕರಿಸಿದರು.   
    ಕಲಾಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಆಸ್ಕರ್ ಕೃಷ್ಣ ಸೇರಿದಂತೆ ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ, ವಿವಿಧ ಕ್ಷೇತ್ರಗಳ ೬೯ ಮಂದಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. 
    ಕುಮಾರ್ ಮತ್ತು ರಾಮಚಾರಿ ಅವರನ್ನು ಸಿದ್ಧರೂಢನಗರದ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 

ಡಿ.೧ರಂದು ಡಾ. ವಿಷ್ಣುವರ್ಧನ್, ಅಪೇಕ್ಷ ರಾಜ್ಯ ಪ್ರಶಸ್ತಿ ವಿತರಣೆ ಸಮಾರಂಭ


    ಭದ್ರಾವತಿ : ನಗರದ ಅಪೇಕ್ಷ ನೃತ್ಯ ಕಲಾವೃಂದ ಮತ್ತು ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಅಂಗವಾಗಿ ಡಿ.೧ರಂದು ಬೆಳಿಗ್ಗೆ ೧೦.೩೦ಕ್ಕೆ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಡಾ. ವಿಷ್ಣುವರ್ಧನ್ ಪ್ರಶಸ್ತಿ ಹಾಗು ಅಪೇಕ್ಷ ರಾಜ್ಯ ಪ್ರಶಸ್ತಿ ವಿತರಣೆ ಮತ್ತು ಸಂಗೀತ ನೃತ್ಯ ಸಂಭ್ರಮ ಸಮಾರಂಭ ಹಮ್ಮಿಕೊಳ್ಳಲಾಗಿದೆ. 
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಮಾರಂಭ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಡಾ. ವಿಷ್ಣುವರ್ಧನ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಅಪೇಕ್ಷ ನೃತ್ಯ ಕಲಾ ವೃಂದ ಅಧ್ಯಕ್ಷೆ ಭಾರತಿ ಗೋವಿಂದ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. 
    ಶ್ರೀ ಬಸವೇಶ್ವರ ಸಭಾ ಭವನ ಸಂಸ್ಥಾಪಕ ಶಿವಕುಮಾರ್ ಉಪಸ್ಥಿತರಿರುವರು. ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ದಿವಂಗತ ವೀರಯೋಧ ಮುರಳಿ ಪ್ರಶಸ್ತಿ ಹಾಗು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ದಿವಂಗತ ಜಯಶೀಲನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್ ಅಪೇಕ್ಷ ರಾಜ್ಯ ಪ್ರಶಸ್ತಿ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕನ್ನಡ ಕುವರ-ಕುವರಿ ಪ್ರಶಸ್ತಿ  ಪ್ರದಾನ ಮಾಡಲಿದ್ದಾರೆ. 
    ಅಪೇಕ್ಷ ನೃತ್ಯ ಕಲಾ ವೃಂದ ಕಾರ್ಯದರ್ಶಿ ಡಾ. ಅಪೇಕ್ಷ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ನಂಬಿರಾಜ್, ಉಮೇಶ್ ಹಾಲಾಡಿ, ಕಾಂತರಾಜ್, ಬಿ.ಟಿ ನಾಗರಾಜ್, ಸ್ನೇಹ ಜೀವಿ ಉಮೇಶ್, ಜ್ಯೋತಿ ಸೋಮಶೇಖರ್, ಸಿದ್ದಲಿಂಗಯ್ಯ, ಸೆಲ್ವರಾಜ್, ಎಸ್.ಆರ್ ನಾಗರಾಜ್ ಮತ್ತು ನಾಗೇಶ್ ಕಬಳಿಕಟ್ಟೆ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಪೇಕ್ಷ ಮಂಜುನಾಥ್ ಕೋರಿದ್ದಾರೆ. 

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಗ್ಯಾಸ್ ಸೋರಿಕೆ : ಅಗ್ನಿ ಅವಘಡ

ಹಳೇನಗರ ವ್ಯಾಪ್ತಿಯಲ್ಲಿ ಘಟನೆ, ಗಾಯಗೊಂಡಿರುವ ದಂಪತಿ 

ಭದ್ರಾವತಿ ಹಳೇನಗರದ ಕಾಳಿಕಾಂಬ ರಸ್ತೆಯಲ್ಲಿರುವ ಕೇಶವಮೂರ್ತಿಯವರ ಮನೆಯಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭಸಿದ್ದು, ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.  
    ಭದ್ರಾವತಿ: ಹಳೇನಗರದ ಕಾಳಿಕಾಂಬ ರಸ್ತೆಯಲ್ಲಿರುವ ಕೇಶವಮೂರ್ತಿಯವರ ಮನೆಯಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. 
    ಕೇಶವ ಹಾಗು ಇವರ ಪತ್ನಿ ಕನಕಲಕ್ಷ್ಮಿ ಅವರು ಗಾಯಗೊಂಡಿದ್ದು, ಇವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗೋಬಿ ಮಂಜೂರಿ ಅಂಗಡಿ ಮಾಲೀಕರಾಗಿರುವ ಕೇಶವರವರು ಸಂಜೆ ಅಂಗಡಿಗೆ ಸಾಮಗ್ರಿ ತೆಗೆದುಕೊಂಡು ಹೋಗುವ ಮೊದಲು ಬಚ್ಚಲು ಮನೆಯಲ್ಲಿ ಸಿಲಿಂಡರ್ ಆನ್ ಮಾಡಿದಾಗ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. 
    ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್, ಸಿಬ್ಬಂದಿಗಳಾದ ಬಾಬು ಗೌಡ, ಸುರೇಶ್, ರಾಜಾನಾಯ್ಕ ಮತ್ತು ಬಾಬಲು ಮಾನಿಕ ಬಾಯ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 
    ಮನೆಯ ಸ್ವತ್ತುಗಳು ಬೆಂಕಿಗಾಹುತಿಯಾಗಿ ಸುಮಾರು ೫೦ ಸಾವಿರ ರು. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.