ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ
![](https://blogger.googleusercontent.com/img/a/AVvXsEi4FghAyjMAzB-OgYdnyyx7r5i5Ex1zJRjs4nShLjW7FvaiF9hyz7Gief6XNc72RohSJdaY5G8lJIdYQiD84XkpUPolKOMWrLYat9PRJFA4UdRZ2OjsjTg59JIqcSyBvj5c9YBZSg9q2E3PE46gnAtUuVyUCVsn9O1p2lQ_Zh99MIh-6GBy2lZf6yWZuw=w400-h161-rw)
ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ, ನೆಟ್ಟಕಲ್ಹಟ್ಟಿ ಗ್ರಾಮದ ಸ.ನಂ.೮/೨ರಲ್ಲಿ ಒಟ್ಟು ೯ ಎಕರೆ ೦೪ ಗುಂಟೆ ಜಾಗದಲ್ಲಿದ್ದ ವಿವಿಧ ಜಾತಿಯ ಮರಗಳನ್ನು ಅನಧಿಕೃತವಾಗಿ ಕಡಿತಲೆ ಮಾಡಿರುವವರ ವಿರುದ್ಧ ಹಾಗು ಇದಕ್ಕೆ ಅನುಮತಿ ನೀಡಿರುವ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಮಾ. ೨೦ : ತಾಲೂಕಿನ ಕೂಡ್ಲಿಗೆರೆ ಹೋಬಳಿ, ನೆಟ್ಟಕಲ್ಹಟ್ಟಿ ಗ್ರಾಮದ ಸ.ನಂ.೮/೨ರಲ್ಲಿ ಒಟ್ಟು ೯ ಎಕರೆ ೦೪ ಗುಂಟೆ ಜಾಗದಲ್ಲಿದ್ದ ವಿವಿಧ ಜಾತಿಯ ಮರಗಳನ್ನು ಅನಧಿಕೃತವಾಗಿ ಕಡಿತಲೆ ಮಾಡಿರುವವರ ವಿರುದ್ಧ ಹಾಗು ಇದಕ್ಕೆ ಅನುಮತಿ ನೀಡಿರುವ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವವಹಿಸಿದ್ದ ಸಮಿತಿ ಅಧ್ಯಕ್ಷ, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ ಮಾತನಾಡಿ, ತಾಲೂಕಿನ ಕೂಡ್ಲಿಗೆರೆ ಹೋಬಳಿ, ನೆಟ್ಟಕಲ್ಹಟ್ಟಿ ಗ್ರಾಮದಲ್ಲಿರುವ ಸ.ನಂ. ೯/೨ರಲ್ಲಿ ೭ ಎಕರೆ ೩೩ ಗುಂಟೆ ಜೊತೆಗೆ ನಕಾಶೆಯಲ್ಲಿ ಕಂಡ ಕೆರೆ ಮತ್ತು ದೇವಸ್ಥಾನ ಮತ್ತು ಸಿದ್ದರಹಳ್ಳಿಗೆ ಹೋಗುವ ಕಾಲು ದಾರಿಗೆ ಸೇರಿದ ೧ ಎಕರೆ ೧೧ ಗುಂಟೆ ಜಾಗದಲ್ಲಿ ಒಟ್ಟು ೯ ಎಕರೆ ೦೪ ಗುಂಟೆ ಜಾಗದಲ್ಲಿದ್ದ ೧೧೪ಕ್ಕೂ ಹೆಚ್ಚಿನ ವಿವಿಧ ಜಾತಿಯ ಕೋಟ್ಯಾಂತರ ರು. ಮೌಲ್ಯದ ಮರಗಳನ್ನು ನಾಗರಾಜ್ ಬಿನ್ ಬೆಟ್ಟೇಗೌಡರವರು ಎಂಬುವರು ಅನಧಿಕೃತವಾಗಿ ಕಡಿತಲೆ ಮಾಡಿದ್ದು, ಈ ವಿಚಾರ ಈಗಾಗಲೇ ತಮ್ಮ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ದೂರಿದರು.
೧೯೪೭-೪೮ನೇ ಸಾಲಿನಲ್ಲಿ ಲೇಟ್ ಪಟೇಲ್ ಚಂದ್ರಪ್ಪ ಬಿನ್ ಬಸಪ್ಪ ಇವರ ಹೆಸರಿಗೆ ನೈಸರ್ಗಿಕವಾಗಿ ಹುಲುಸಾಗಿ ಬೆಳೆದಿರುವ ವಿವಿಧ ಜಾತಿಯ ಮರಗಳು ಇರುವಾಗಲೇ ಫೆ.೨, ೨೦೨೨ರಂದು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಅಲ್ಲದೆ ೧ ಎಕರೆ ೧೧ ಗುಂಟೆ ಜಾಗ ಸೇರಿದಂತೆ ಒಟ್ಟು ೯ ಎಕರೆ ೦೪ ಗುಂಟೆ ಜಾಗದಲ್ಲಿದ್ದ ವಿವಿಧ ಜಾತಿಯ ಮರಗಳನ್ನು ಅನಧಿಕೃತವಾಗಿ ಕಡಿತಲೆ ಮಾಡಿರುವ ಹಿನ್ನಲೆಯಲ್ಲಿ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ನಾಗರಾಜ್ ಬಿನ್ ಬೆಟ್ಟೇಗೌಡರವರಿಗೆ ಜ.೭, ೨೦೨೩ರಂದು ಮರಗಳನ್ನು ಕಡಿತಲೆ ಮಾಡಲು ಇಲಾಖೆ ವತಿಯಿಂದ ಅನುಮತಿ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಅನುಮತಿ ನೀಡಿರುವ ವಲಯ ಅರಣ್ಯಾಧಿಕಾರಿ ಕೆ.ಆರ್ ರಾಜೇಶ್ ಹಾಗು ಉಪವಲಯ ಅರಣ್ಯಾಧಿಕಾರಿಗಳು ಮತ್ತು ಬೀಟ್ ಫಾರೆಸ್ಟರ್‌ಗಳ ಮೇಲೆ ಇಲಾಖಾ ಶಿಸ್ತು ಕ್ರಮಕ್ಕೆ ಒಳಪಡಿಸಿ ಅವರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಲ್ಲದೆ ಮರಗಳನ್ನು ಅನಧಿಕೃತವಾಗಿ ಕಡಿತಲೆ ಮಾಡಿರುವ ನಾಗರಾಜ್ ಬಿನ್ ಬೆಟ್ಟೇಗೌಡರ ವಿರುದ್ಧ ಸಹ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕಡಿತಲೆ ಮಾಡಿರುವ ಎಲ್ಲಾ ಮರಗಳನ್ನು ಇಲಾಖೆ ವಶಕ್ಕೆ ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ಮಾತನಾಡಿ, ಜಾಗ ಒಂದು ವೇಳೆ ಅರಣ್ಯ ಪ್ರದೇಶವಾಗಿದ್ದಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಕಡಿತಲೆ ಮಾಡಲು ಅವಕಾಶವಿಲ್ಲ. ೭ ಎಕರೆ ೩೩ ಗುಂಟೆ ಖಾಸಗಿ ಜಾಗದಲ್ಲಿ ಬೆಳೆದಿರುವ ಮರಗಳನ್ನು ಮಾತ್ರ ಕಡಿತಲೆ ಮಾಡಲು ಅವಕಾಶವಿದೆ. ಖಾಸಗಿ ಜಾಗ ಹೊರತುಪಡಿಸಿ ೧ ಎಕರೆ ೧೧ ಗುಂಟೆ ಜಾಗದಲ್ಲಿ ಬೆಳೆದಿರುವ ಮರಗಳನ್ನು ಕಡಿತಲೆ ಮಾಡಿರುವ ಕುರಿತು ದೂರು ಸಲ್ಲಿಕೆಯಾಗಿರುವ ಹಿನ್ನಲೆಯಲ್ಲಿ ಈ ಸಂಬಂಧ ತನಿಖೆ ನಡೆಸಲಾಗುವುದು. ಒಂದು ವೇಳೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಂದ ತಪ್ಪಾಗಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ವಕೀಲರ ಸಂಘದ ಮಾಜಿ ಅಧ್ಯಕ್ಷ ವಿ. ವೆಂಕಟೇಶ್, ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್, ಚಂದ್ರಶೇಖರ್, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಮಾಜಿ ಸದಸ್ಯ ರಮೇಶ್, ರಾಜೇಂದ್ರ, ಹಾವು ಮಂಜ ಹಾಗು ನೆಟ್ಟಕಲ್ಹಟ್ಟಿ ಗ್ರಾಮದ ನಿವಾಸಿಗಳು, ಮಹಿಳೆಯರು, ದೇವಸ್ಥಾನದ ಭಕ್ತರು ಪಾಲ್ಗೊಂಡಿದ್ದರು.