Tuesday, November 19, 2024

ಪರಿಸರ ನಾಶದಿಂದ ಜೀವ ಸಂಕುಲಕ್ಕೆ ಅಪಾಯ : ಬಿ.ಎಲ್ ಚಂದ್ವಾನಿ

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಪರಿಸರ ಮಾಸಾಚರಣೆ 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಮಂಗಳವಾರ ಪರಿಸರ ಮಾಸಾಚರಣೆಗೆ ಚಾಲನೆ ನೀಡಲಾಯಿತು. 
    ಭದ್ರಾವತಿ: ಪರಿಸರ ನಾಶದಿಂದ ಭೂಮಿಯ ಅವನತಿ, ಮರುಭೂಮಿ ಮತ್ತು ಬರಗಾಲದ ಸಮಸ್ಯೆಗಳು ಉಲ್ಬಣಗೊಳ್ಳುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಎಚ್ಚರಿಸಿದರು. 
    ಅವರು ಮಂಗಳವಾರ ಪರಿಸರ ಮಾಸಾಚರಣೆ ಹಿನ್ನಲೆಯಲ್ಲಿ ಕಾರ್ಖಾನೆ ವತಿಯಿಂದ ಇಸ್ಪಾತ್ ಭವನದ ಮುಂಭಾಗ ಹಮ್ಮಿಕೊಳ್ಳದ್ದ ಕಾರ್ಯಕ್ರಮದಲ್ಲಿ ಪರಸರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 
    ಪರಿಸರ ನಾಶದಿಂದ ನೈಸರ್ಗಿಕ ಪರಿಸರ ವ್ಯವಸ್ಥೆಗೆ ಧಕ್ಕೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಮುದಾಯಗಳ ಜೀವನೋಪಾಯ, ಆರೋಗ್ಯ ಮತ್ತು ಯೋಗಕ್ಷೇಮಕ್ಕೂ ಸಂಕಷ್ಟ ಎದುರಾಗುತ್ತದೆ. ಈ ಹಿನ್ನಲೆಯಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಕುರಿತು ಹೆಚ್ಚಿನ ತಿಳುವಳಿಕೆ ಮೂಡಿಸುವ ಅಗತ್ಯವಿದೆ ಎಂದರು. 
    ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್, ಕಾರ್ಮಿಕರ ಸಂಘದ ಅಧ್ಯಕ್ಷ  ಜೆ. ಜಗದೀಶ್ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ, ಉಪಸ್ಥಿತರಿದ್ದರು. 
    ಮಹಾಪ್ರಬಂಧಕ(ಸುರಕ್ಷತೆ) ಹರಿಶಂಕರ್ ಪರಿಸರ ನೀತಿ ವಾಚಿಸಿದರು. ಮಹಾಪ್ರಬಂಧಕ(ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕಿ(ಹಣಕಾಸು ಮತ್ತು ಲೆಕ್ಕ) ಶೋಭಾ ಶಿವಶಂಕರನ್,  ಮತ್ತು  ಸಹಾಯಕ ಮಹಾಪ್ರಬಂಧಕ(ವಿಜಿಲೆನ್ಸ್) ಎಲ್. ಕುಥಲನಾಥನ್ ಪರಿಸರ ಪ್ರತಿಜ್ಞೆ ಬೋಧಿಸಿದರು. 
    ಸಹಾಯಕ ಮಹಾಪ್ರಬಂಧಕ(ಹಣಕಾಸು) ಉನ್ನೀಕೃಷ್ಣನ್ ಪ್ರಾರ್ಥಿಸಿದರು. ಸಹಾಯಕ ಮಹಾಪ್ರಬಂಧಕ(ನೀರು ಸರಬರಾಜು ಮತ್ತು ಪರಿಸರ ನಿರ್ವಹಣೆ) ವಿಕಾಸ ಬಸೇರ್ ಸ್ವಾಗತಿಸಿ, ಕಿರಿಯ ಪ್ರಬಂಧಕ ನಂದನ ವಂದಿಸಿದರು.
    ಪರಿಸರ ಮಾಸಾಚರಣೆ : ವಿವಿಧ ಸ್ಪರ್ಧೆಗಳು: 
    ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಪರಿಸರ ಮಾಸಾಚರಣೆ ನ.೧೯ ರಿಂದ ಡಿ.೧೮ರ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ, ಪರಿಸರ ರಸಪ್ರಶ್ನೆ ಮತ್ತು ಘೋಷವಾಕ್ಯ ಬರೆಯುವ ಸ್ಪರ್ಧೆಗಳನ್ನು ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದೆ. 
    ಶಾಲಾ ವಿಧ್ಯಾರ್ಥಿಗಳಿಗಾಗಿ ಆಯೋಜಿಸಿರುವ ಸ್ಪರ್ಧೆಗಳ ವಿವರ : 
    ೫ನೇ ತರಗತಿಯಿಂದ ೭ನೇ ತರಗತಿ ವಿದ್ಯಾರ್ಥಿಗಳಿಗೆ  ಪ್ರಬಂಧ ಸ್ಪರ್ಧೆ (ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ) ಹಾಗು ೮ನೇ ತರಗತಿಯಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ (ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ) ನ.೨೩ರಂದು ಮಧ್ಯಾಹ್ನ ೩ ಗಂಟೆಗೆ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.  ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: ೯೪೮೦೮೨೯೦೬೨ / ೯೪೮೦೮೨೯೨೦೨ ಸಂಪರ್ಕಿಸಬಹುದಾಗಿದೆ. 

ಬಡ್ತಿ, ಸೇವಾ ಸೌಲಭ್ಯಗಳಿಗಾಗಿ ಕುವೆಂಪು ವಿವಿ ಅಧ್ಯಾಪಕೇತರ ನೌಕರರ ಪ್ರತಿಭಟನೆ

ಭದ್ರಾವತಿ ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಬಡ್ತಿ ಹಾಗು ಸೇವಾ ಸೌಲಭ್ಯಗಳ ಈಡೇರಿಕೆಗಾಗಿ ಆಡಳಿತ ಮಂಡಳಿ ಭವನದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. 
    ಭದ್ರಾವತಿ: ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಬಡ್ತಿ ಹಾಗು ಸೇವಾ ಸೌಲಭ್ಯಗಳ ಈಡೇರಿಕೆಗಾಗಿ ಆಡಳಿತ ಮಂಡಳಿ ಭವನದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. 
    ಸಂಘದ ವತಿಯಿಂದ ನೌಕರರ ಬಡ್ತಿ ಹಾಗು ಸೇವಾ ಸೌಲಭ್ಯಗಳಿಗಾಗಿ ನಿರಂತವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ವಿಶ್ವವಿದ್ಯಾಲಯ ಬೇಡಿಕೆ ಈಡೇರಿಸುವಲ್ಲಿ ಹೆಚ್ಚಿನ ಆಸಕ್ತಿವಹಿಸಿಲ್ಲ. ಅಲ್ಲದೆ ಸೂಕ್ತ ಪ್ರತಿಕ್ರಿಯೆ ಸಹ ವ್ಯಕ್ತವಾಗುತ್ತಿಲ್ಲ. ಇದರಿಂದಾಗಿ ನೌಕರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ಈ ಸಂಬಂಧ ಕುಲಾಧಿಪತಿಗಳಾದ ರಾಜ್ಯಪಾಲರಿಗೆ, ಮುಖ್ಯಮಂತ್ರಿ ಹಾಗು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಯಿತು. 
      ಸಂಘದ ಅಧ್ಯಕ್ಷ ಶ್ರೀನಿವಾಸ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಅಧ್ಯಾಪಕೇತರ ನೌಕರರು ಪಾಲ್ಗೊಂಡಿದ್ದರು. 

ಕುವೆಂಪು ವಿ.ವಿಯಲ್ಲಿ ಭರ್ತಿಯಾಗದೆ ಉಳಿದಿರುವ ಪ್ರವೇಶಾತಿಗಳಿಗೆ ಅವಕಾಶ ನೀಡಿ

ಕುಲಪತಿ, ಸಿಂಡಿಕೇಟ್ ಸದಸ್ಯರಿಗೆ ಎನ್‌ಎಸ್‌ಯುಐ ಮನವಿ 

ವಿವಿಧ ಮೀಸಲಾತಿಯಡಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಭರ್ತಿಯಾಗದೆ ಉಳಿದಿರುವ ಸ್ನಾತಕೋತ್ತರ ತರಗತಿ ಪ್ರವೇಶಗಳಿಗೆ ಇತರೆ ಮೀಸಲಾತಿಯಡಿ ವಂಚಿತರಾಗಿವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವಂತೆ ಕೋರಿ ಭದ್ರಾವತಿಯಲ್ಲಿ ಎನ್‌ಎಸ್‌ಯುಐ ವತಿಯಿಂದ ಮಂಗಳವಾರ ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಹಾಗೂ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ವಿವಿಧ ಮೀಸಲಾತಿಯಡಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಭರ್ತಿಯಾಗದೆ ಉಳಿದಿರುವ ಸ್ನಾತಕೋತ್ತರ ತರಗತಿ ಪ್ರವೇಶಗಳಿಗೆ ಇತರೆ ಮೀಸಲಾತಿಯಡಿ ವಂಚಿತರಾಗಿವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವಂತೆ ಕೋರಿ ಎನ್‌ಎಸ್‌ಯುಐ ವತಿಯಿಂದ ಮಂಗಳವಾರ ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಹಾಗೂ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಿಗೆ ಮನವಿ ಸಲ್ಲಿಸಲಾಯಿತು. 
    ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಸ್ನಾತಕೋತ್ತರ ತರಗತಿ ಪ್ರವೇಶ ಮುಕ್ತಾಯವಾಗಿದ್ದು, ಪರಿಶಿಷ್ಟ ಜಾತಿ/ಪಂಗಡದ ಹಾಗೂ ವಿಕಲಚೇತನರ ಮೀಸಲಾತಿಯಡಿ ನಿಗದಿಪಡಿಸಿದಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದಿಲ್ಲ. ಈ ಹಿನ್ನಲೆಯಲ್ಲಿ ವಂಚಿತರಾಗಿರುವ ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡುವುದು. ವರ್ಷದಿಂದ ವರ್ಷಕ್ಕೆ ವಿಶ್ವವಿದ್ಯಾಲಯದ ಎಲ್ಲಾ ವಿಭಾಗದಲ್ಲೂ ಪ್ರವೇಶಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು,  ಪ್ರವೇಶ ಸಿಗದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾಭಾಸದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಹೆಚ್ಚಿಸುವಂತೆ ಕೋರಲಾಗಿದೆ. 
    ಎನ್‌ಎಸ್‌ಯುಐ ಅಧ್ಯಕ್ಷ ಮುಸ್ವೀರ್ ಬಾಷಾ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಗೌರವಾಧ್ಯಕ್ಷ ಮುರುಗೇಶ್, ಉಪಾಧ್ಯಕ್ಷರಾದ ಕೀರ್ತಿ, ಮಾದೇಶ, ಮುಖಂಡರಾದ ಟಿ.ಡಿ ಶಶಿಕುಮಾರ್, ವೇಲು ಹಾಗು ಪ್ರವೇಶಾತಿಯಿಂದ ವಂಚಿತರಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಸಾಹಿತಿ ಶಿಕ್ಷಕ ಸಿ.ಎಚ್ ನಾಗೇಂದ್ರಪ್ಪ ಪ್ರಶಸ್ತಿಗೆ ಆಯ್ಕೆ

ಸಾಹಿತಿ ಶಿಕ್ಷಕ ಸಿ.ಎಚ್ ನಾಗೇಂದ್ರಪ್ಪ 
    ಭದ್ರಾವತಿ:  ಕಡದಕಟ್ಟೆ ನವಚೇತನ ಕನ್ನಡ ಶಾಲೆಯ ಸಾಹಿತಿ ಶಿಕ್ಷಕ ಸಿ.ಎಚ್ ನಾಗೇಂದ್ರಪ್ಪಯವರ ಕನ್ನಡ ನಾಡು-ನುಡಿ, ಸಾಹಿತ್ಯ ಸೇವೆ ಗುರುತಿಸಿ ರಾಣಿಬೆನ್ನೂರಿನ ರಂಗಕಲಾ ಕುಸುಮ ಪ್ರಕಾಶನದಿಂದ ಕೊಡಮಾಡುವ ೨೦೨೪ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 
    ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ನ.೨೪ರಂದು ನಡೆಯಲಿರುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ  ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ, ಪ್ರಕಾಶಕ, ಸಾಹಿತಿ ಶಿಕ್ಷಕ ವೆಂಕಟೇಶ್ ಈಡಿಗರ್ ಯವರು ತಿಳಿಸಿದ್ದಾರೆ. 
ಪ್ರಶಸ್ತಿಗೆ ಆಯ್ಕೆಯಾಗಿರುವ ನಾಗೇಂದ್ರಪ್ಪರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.