ಭದ್ರಾವತಿ : ನಗರಸಭೆ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಬಳಕೆಯನ್ನು ಜ.೧೬ರಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಆದರೆ ಸರ್ಕಾರಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಪ್ರಚಾರಕ್ಕೆ ಪ್ಲೆಕ್ಸ್ ಬಳಸಲು ವಿನಾಯಿತಿ ನೀಡಲಾಗಿದೆ. ಯಾವುದೇ ರಾಜಕೀಯ ಪಕ್ಷ ಹಾಗೂ ಖಾಸಗಿ ವ್ಯಕ್ತಿಗಳ ಭಾವಚಿತ್ರ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ತಿಳಿಸಿದರು.
ಅವರು ಬುಧವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ನಗರದಲ್ಲಿ ಅಳವಡಿಸಲಾಗಿರುವ ಪ್ಲೆಕ್ಸ್‌ಗಳನ್ನು ಜ.೧೫ರಿಂದ ತೆರವುಗೊಳಿಸಲಾಗುವುದು ಎಂದರು.
ಪ್ಲಾಸ್ಟಿಕ್ ಬ್ಯಾನರ್/ಫ್ಲೆಕ್ಸ್ ಮತ್ತು ಕಟೌಟ್‌ಗಳಿಂದ ಪರಿಸರ ಮತ್ತು ನಗರದ ಸೌಂದರ್ಯ ಹಾಳಾಗುತ್ತಿರುವುದಲ್ಲದೆ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ತೊಂದರೆಯಾಗುವುದರಿಂದ ಸಂಪೂರ್ಣವಾಗಿ ನಿಷೇಧಿಸಲು ಈ ಹಿಂದಿನ ಹಲವಾರು ಸಭೆಗಳಲ್ಲಿ ನಿರ್ಣಯವಾಗಿದ್ದರೂ ಸಹ ಕ್ರಮವಹಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಡಿ.೨೬ರಂದು ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿರುವಂತೆ ಜ.೧೬ರಿಂದ ಫ್ಲೆಕ್ಸ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದರು.
ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್‌ನಿಂದ ಸಿ.ಎನ್ ರಸ್ತೆ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ವರೆಗಿನ ರಸ್ತೆಗೆ ಡಾ. ರಾಜ್‌ಕುಮಾರ್ ರಸ್ತೆ ಹಾಗೂ ಮಾಧವಾಚಾರ್ ವೃತ್ತದಿಂದ ಬಾರಂದೂರು ಬೈಪಾಸ್‌ವರೆಗೆ ಮಹಾತ್ಮ ಗಾಂಧಿ ರಸ್ತೆ ಎಂದು ನಾಮಕರಣ ಮಾಡಲಾಗಿದ್ದು, ವರ್ತಕರು ಕಡ್ಡಾಯವಾಗಿ ಫಲಕಗಳಲ್ಲಿ ನಮೂದು ಮಾಡದಿದ್ದಲ್ಲಿ ನಗರಸಭೆ ವತಿಯಿಂದ ಕ್ರಮ ಜರುಗಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪೌರಾಯುಕ್ತರಾದ ಪಿ.ಎಂ ಚನ್ನಪ್ಪನವರ್, ನಗರಸಭಾ ಸದಸ್ಯರುಗಳಾದ ಬಿ.ಕೆ. ಮೋಹನ್, ಬಿ.ಟಿ. ನಾಗರಾಜ್, ವಿ. ಕದಿರೇಶ್, ಚನ್ನಪ್ಪ, ಮೋಹನ್‌ಕುಮಾರ್, ಉದಯ್‌ಕುಮಾರ್, ಲತಾಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.