ಶನಿವಾರ, ಫೆಬ್ರವರಿ 19, 2022

ಜೆಡಿಎಸ್‌ನಲ್ಲಿ ಪಕ್ಷಾಂತರ ಪರ್ವ : ಶಾಸಕ ಸಂಗಮೇಶ್ವರ್‌ಗೆ ಮತ್ತಷ್ಟು ಬಲ

ಬಿಜೆಪಿ ಸೇರಿದ ಅಪ್ಪಾಜಿ ಶಿಷ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್

ಭದ್ರಾವತಿಯಲ್ಲಿ ಅಪ್ಪಾಜಿ ಬೆಂಬಲಿಗರಲ್ಲಿ ಪ್ರಮುಖರಾದ ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಮಾಜಿ ಅಧ್ಯಕ್ಷ ಫೀರ್ ಷರೀಫ್ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಶಾಸಕ ಬಿ.ಕೆ ಸಂಗಮೇಶ್ವರನ್ನು ಬೆಂಬಲಿಸಿರುವುದು.

    * ಅನಂತಕುಮಾರ್
    ಭದ್ರಾವತಿ, ಫೆ. ೧೯: ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ನಿಧನದ ನಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಹೆಣಕಾಡುತ್ತಿದ್ದು, ಈ ನಡುವೆ ಇದೀಗ ಅಪ್ಪಾಜಿಯೊಂದಿಗೆ ಬಹಳ ವರ್ಷಗಳಿಂದ ಒಡನಾಟ ಹೊಂದಿದ್ದ ಮುಖಂಡರುಗಳು ಪಕ್ಷಾಂತರಗೊಳ್ಳುತ್ತಿದ್ದಾರೆ. ಇದರಿಂದಾಗಿ ಮುಂಬರುವ ವಿಧಾನಸಭಾ ಚುನಾವಣೆ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುವ ಲಕ್ಷಣಗಳು ಎದ್ದು ಕಾಣುತ್ತಿವೆ.
    ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನ ಹೊಂದಿದ್ದ ನಂತರ ಕ್ಷೇತ್ರದ ರಾಜಕೀಯ ವಿದ್ಯಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿದ್ದು, ಲಿಂಗಾಯಿತ ಮತ್ತು ಒಕ್ಕಲಿಗ ಪ್ರಮುಖ ಸಮುದಾಯಗಳು ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಕಳೆದ ೩ ದಶಕಗಳಿಂದ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಇದಕ್ಕೂ ಮೊದಲು ಮುಸ್ಲಿಂ ಸಮುದಾಯದವರು ನಿರ್ಣಾಯಕ ಪಾತ್ರ ವಹಿಸುತ್ತಿದ್ದರು.
    ಕ್ಷೇತ್ರದಲ್ಲಿ ಅಪ್ಪಾಜಿಯನ್ನು ಒಕ್ಕಲಿಗ ಸಮುದಾಯದ ಜೊತೆಗೆ ದಲಿತ ಹಾಗು ಹಿಂದುಳಿದ ಸಮುದಾಯಗಳು ಸಹ ಬೆಂಬಲಿಸುತ್ತಿದ್ದವು. ಸುಮಾರು ೪೦ ಸಾವಿರಕ್ಕೂ ಹೆಚ್ಚಿನ ವರ್ಚಸ್ಸಿನ ಮತಗಳನ್ನು ಅಪ್ಪಾಜಿ ಹೊಂದಿದ್ದರು. ಇದೆ ರೀತಿ ಶಾಸಕ ಸಂಗಮೇಶ್ವರನ್ನು ಲಿಂಗಾಯಿತ ಸಮುದಾಯದ ಜೊತೆಗೆ ಮುಸ್ಲಿಂ ಹಾಗು ದಲಿತ ಸಮುದಾಯಗಳು ಬೆಂಬಲಿಸುತ್ತಿವೆ. ಸಂಗಮೇಶ್ವರ್ ಸಹ ಸುಮಾರು ೪೦ ಸಾವಿರಕ್ಕೂ ಹೆಚ್ಚಿನ ವರ್ಚಸ್ಸಿನ ಮತಗಳನ್ನು ಹೊಂದಿದ್ದಾರೆ. ಇದೀಗ ಅಪ್ಪಾಜಿ ಇಲ್ಲವಾಗಿದ್ದು, ಅವರ ವರ್ಚಸ್ಸಿನ ಮತಗಳು ಯಾರಿಗೆ ಎಂಬ ಪ್ರಶ್ನೆಗಳು ಎದುರಾಗಿವೆ. ಈ ನಡುವೆ ಆರಂಭದಿಂದಲೂ ಅಪ್ಪಾಜಿಯೊಂದಿಗೆ ಗುರುತಿಸಿಕೊಂಡಿರುವ ಬೆಂಬಲಿಗರು ಇದೀಗ ಪಕ್ಷಾಂತರಗೊಳ್ಳುತ್ತಿರುವುದು ಜೆಡಿಎಸ್‌ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
    ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಶಾರದ ಅಪ್ಪಾಜಿಯವರನ್ನು ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲಾಗಿದ್ದು, ಈ ನಡುವೆ ನಡೆಯುತ್ತಿರುವ ಬೆಳವಣಿಗೆಗಳು ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ವ್ಯಾಪಕ ಪರಿಣಾಮ ಉಂಟು ಮಾಡುವ ಲಕ್ಷಣಗಳು ಕಂಡು ಬರುತ್ತಿವೆ.


ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್

    ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ :
ಬಹಳ ವರ್ಷಗಳಿಂದ ಅಪ್ಪಾಜಿಯೊಂದಿಗೆ ಗುರುತಿಸಿಕೊಂಡಿದ್ದ ಪ್ರಮುಖರಾದ ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಮಾಜಿ ಅಧ್ಯಕ್ಷ ಫೀರ್ ಷರೀಫ್, ನಗರಸಭೆ ಮಾಜಿ ಸದಸ್ಯ ಶಿವರಾಜ್, ಮಡಿವಾಳ ಸಮಾಜದ ಶಿವಮಾದು ಸೇರಿದಂತೆ ಇನ್ನಿತರರು ಸಂಗಮೇಶ್ವರ್ ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
    ಗ್ರಾಮ ಪಂಚಾಯಿತಿ ಚುನಾವಣೆ ನಂತರ ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸಿರುವ ಸಂಗಮೇಶ್ವರ್ ಇದೀಗ ನಗರ ವ್ಯಾಪ್ತಿಯಲ್ಲೂ ಮತ್ತಷ್ಟು ಪ್ರಾಬಲ್ಯ ಸಾಧಿಸಲು ಮುಂದಾಗಿದ್ದಾರೆ. ಈಗಾಗಲೇ ನಗರಸಭೆ ಆಡಳಿತ ಚುಕ್ಕಾಣಿ ಸಹ ಹಿಡಿದಿದ್ದು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ಅಪ್ಪಾಜಿ ಬೆಂಬಲಿಗರಿಗೆ ತಕ್ಷಣವೇ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಂಬಲಿಗರು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಇದರಿಂದಾಗಿ ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಸಂಗಮೇಶ್ವರ್ ಪ್ರಾಬಲ್ಯ ಮತ್ತುಷ್ಟು ಹೆಚ್ಚಾಗುವ ಸಾಧ್ಯತೆ ಇದೀಗ ಕಂಡು ಬರುತ್ತಿದೆ.
    ಬಿಜೆಪಿ ಸೇರಿದ ಅಪ್ಪಾಜಿ ಶಿಷ್ಯ ಎಸ್. ಕುಮಾರ್:
    ಅಪ್ಪಾಜಿಯವರ ಬಹಳ ವರ್ಷಗಳ ಒಡನಾಡಿ, ಅವರ ಶಿಷ್ಯ ಎಸ್. ಕುಮಾರ್ ಇದೀಗ ರಾಜಕೀಯ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಹಿಂದೆ ಶಿವಮೊಗ್ಗ ಹಾಲು ಒಕ್ಕೂಟದ ಚುನಾವಣೆ ಸಂದರ್ಭದಲ್ಲಿ ಅಪ್ಪಾಜಿಯೊಂದಿಗೆ ವೈಷಮ್ಯ ಬೆಳೆಸಿಕೊಂಡಿದ್ದ ಕುಮಾರ್ ಹಂತ ಹಂತವಾಗಿ ಅಪ್ಪಾಜಿಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು. ಈ ನಡುವೆಯೂ ಅಪ್ಪಾಜಿ ಕುಮಾರ್‌ರವರ ಪತ್ನಿ ಜ್ಯೋತಿಯವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ಮಾಡಿದ್ದರು. ಇದರ ನಡುವೆಯೂ ಕುಮಾರ್ ಜೆಡಿಎಸ್ ತೊರೆಯುವ ಲಕ್ಷಣಗಳು ಕಂಡು ಬಂದಿದ್ದವು. ಅಪ್ಪಾಜಿ ನಿಧನದ ನಂತರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಂಗಮೇಶ್ವರ್ ಬೆಂಬಲಿಸಿದ್ದರು. ಆದರೂ ಸಹ ಜೆಡಿಎಸ್ ಕುಮಾರ್ ಅವರನ್ನು ಕಡೆಗಣಿಸದೆ ನಗರಸಭೆ ಚುನಾವಣೆ ಜವಾಬ್ದಾರಿಯನ್ನು ವಹಿಸಿತ್ತು. ಆದರೆ ನಿರೀಕ್ಷೆಯಂತೆ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಎಸ್. ಕುಮಾರ್ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಈ ನಡುವೆ ಕರ್ನಾಟಕ ರಾಜ್ಯ ಒಕ್ಕಲಿಗರ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿ ಕುಮಾರ್ ಸೋಲು ಕಂಡಿದ್ದಾರೆ. ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ವ್ಯಾಪಕ ಪರಿಣಾಮ ಉಂಟು ಮಾಡಲಿದೆ ಎನ್ನಲಾಗಿದೆ.

ವೀರಶೈವ ಲಿಂಗಾಯಿತ ಸಮುದಾಯಕ್ಕೆ ಲಿಂಗೈಕ್ಯ ಹಾನಗಲ್ ಕುಮಾರೇಶ್ವರ ಶಿವಯೋಗಿಗಳ ಕೊಡುಗೆ ಅಪಾರ : ಬಿಳಿಕಿ ಶ್ರೀ

ಭದ್ರಾವತಿ ಸಿದ್ಧರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಾನಗಲ್ ಕುಮಾರೇಶ್ವರ ಶಿವಯೋಗಿಗಳ ಪುಣ್ಯಸ್ಮರಣೆ ಹಾಗು ಸಮಾಜದ ನೂತನ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭದಲ್ಲಿ ಹಾನಗಲ್ ಕುಮಾರೇಶ್ವರ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೧೯: ವೀರಶೈವ ಲಿಂಗಾಯಿತ ಸಮುದಾಯಕ್ಕೆ ಲಿಂಗೈಕ್ಯ ಹಾನಗಲ್ ಕುಮಾರೇಶ್ವರ ಶಿವಯೋಗಿಗಳ ಕೊಡುಗೆ ಅಪಾರವಾಗಿದ್ದು, ಸಮುದಾಯ ಒಗ್ಗೂಡಿಸುವಲ್ಲಿ ಶ್ರೀಗಳ ಶ್ರಮ ಹೆಚ್ಚಿನದ್ದಾಗಿದೆ ತಾಲೂಕಿನ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸ್ಮರಿಸಿದರು.
    ಶ್ರೀಗಳು ಶನಿವಾರ ಸಿದ್ಧರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಾನಗಲ್ ಕುಮಾರೇಶ್ವರ ಶಿವಯೋಗಿಗಳ ಪುಣ್ಯಸ್ಮರಣೆ ಹಾಗು ಸಮಾಜದ ನೂತನ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ವೀರಶೈವ ಲಿಂಗಾಯಿತ ಸಮಾಜದ ಎಲ್ಲಾ ಪಂಗಡಗಳನ್ನು ಒಗ್ಗೂಡಿಸಿ ಸಮುದಾಯವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಶ್ರೀಗಳು ಹೆಚ್ಚಿನ ಆಸಕ್ತಿವಹಿಸಿದ್ದರು. ಶ್ರೀಗಳ ಆಶಯದಂತೆ ಎಲ್ಲರೂ ಒಗ್ಗಟ್ಟಾಗಿ ಬಲಿಷ್ಠ ಸಮುದಾಯವನ್ನು ಕಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಪ್ರಸ್ತುತ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಕಂಡು ಬರುತ್ತಿದೆ. ಎಲ್ಲರೂ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಆಗ ಮಾತ್ರ ಸಮಾಜದಲ್ಲಿ ಬಲಿಷ್ಠವಾಗಲು ಸಾಧ್ಯ. ಮಹಾಸಭಾ ಬೇಡಿಕೆಯಂತೆ ಅಗತ್ಯವಿರುವ ಆರ್ಥಿಕ ನೆರವಿನ ಜೊತೆಗೆ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
    ಸಾಹಿತಿ ಚಟ್ನಹಳ್ಳಿ ಮಹೇಶ್ ಉಪನ್ಯಾಸ ನೀಡಿದರು. ನೂತನ ಚುನಾಯಿತ ಪ್ರತಿನಿಧಿಗಳಾದ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ಬಿ.ಎಂ ಮಂಜುನಾಥ್(ಟೀಕು), ಅನುಪಮ ಚನ್ನೇಶ್, ನಾಮನಿರ್ದೇಶಕ ಸದಸ್ಯ ರವಿಕುಮಾರ್ ಮತ್ತು ಹಟ್ಟಿ ಚಿನ್ನದ ಗಣಿ ನಿಗಮದ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್ ಹಾಗು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾ ಪ್ರಧಾನ ಕಾರ್ಯದರ್ಶಿ ಅರಳಿಹಳ್ಳಿ ರವಿ(ರೇವಪ್ಪ), ಉಪಾಧ್ಯಕ್ಷ ಎಸ್. ವಾಗೀಶ್, ಸಂಘಟನಾ ಕಾರ್ಯದರ್ಶಿ ಬಾರಂದೂರು ಎಚ್. ಮಂಜುನಾಥ್, ಖಜಾಂಚಿ ಜಿ.ಎಂ ಮೂರ್ತಿ, ಸಹಕಾರ್ಯದರ್ಶಿ ಶಕುಂತಲಮ್ಮ, ಜಿಲ್ಲಾ ನಿರ್ದೇಶಕರಾದ ವೇದ ಬಸವರಾಜ್, ಪೂರ್ಣಿಮಾ, ಯುವ ಘಟಕದ ಅಧ್ಯಕ್ಷ ಎಚ್. ಮಂಜುನಾಥ್, ಉಪಾಧ್ಯಕ್ಷರಾದ ಮಹಾದೇವ್, ಶ್ರೀಕಾಂತ್, ರುದ್ರೇಶ್ ಆರ್.ಎನ್, ಪ್ರಧಾನ ಕಾರ್ಯದರ್ಶಿ ಕೆ.ಆರ್ ಆನಂದ, ಮಹಿಳಾ ಘಟಕದ ಅಧ್ಯಕ್ಷೆ ಎಲ್.ಎಚ್ ರೂಪ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್ ಕವಿತ ಸುರೇಶ್, ಖಜಾಂಚಿ ಶೋಭಾ ಅಶೋಕ್ ಪಾಟೀಲ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಗದೀಶ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.


ಭದ್ರಾವತಿ ಸಿದ್ಧರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಾನಗಲ್ ಕುಮಾರೇಶ್ವರ ಶಿವಯೋಗಿಗಳ ಪುಣ್ಯಸ್ಮರಣೆ ಹಾಗು ಸಮಾಜದ ನೂತನ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭದಲ್ಲಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.

ಶಿವಾಜಿ ಮಹಾರಾಜರ ಹೋರಾಟಗಳು, ಆದರ್ಶಗಳು ಇಂದಿನ ಪೀಳಿಗೆಗೆ ಅವಶ್ಯಕ : ರಂಗನಾಥರಾವ್

ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಆಚರಿಸಲಾಯಿತು.
    ಭದ್ರಾವತಿ, ಫೆ. ೧೯ : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಆಚರಿಸಲಾಯಿತು.
  ತಹಸೀಲ್ದಾರ್ ಆರ್. ಪ್ರದೀಪ್ ಅಧ್ಯಕ್ಷತೆಯಲ್ಲಿ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯೂಟೌನ್ ಸರ್.ಎಂ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಉಪನ್ಯಾಸಕ ರಂಗನಾಥರಾವ್ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಮಾತನಾಡಿ, ಶಿವಾಜಿ ಮಹಾರಾಜರು ನಡೆಸಿದ ಹೋರಾಟಗಳು, ಅವರ ಆದರ್ಶತನಗಳು ಇಂದಿನ ಯುವ ಪೀಳಿಗೆಗೆ ಅವಶ್ಯಕವಾಗಿದೆ ಎಂದರು.
    ಮರಾಠ ಸಮಾಜದ ಅಧ್ಯಕ್ಷ ಯಶವಂತರಾವ್ ಘೋರ್ಪಡೆ, ಉಪಾಧ್ಯಕ್ಷ ಸಚಿನ್ ಸಿಂಧ್ಯಾ, ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ರಾವ್ ದುರೆ, ಖಜಾಂಚಿ ವಿಶ್ವೇಶ್ವರ ರಾವ್, ನಿರ್ದೇಶಕರಾದ ಮಂಜುನಾಥ್ ರಾವ್, ಮಲ್ಲೇಶ್ ರಾವ್,  ಶಿವಾಜಿರಾವ್ ಗಾಯಕ್‌ವಾಡ್, ಅಣ್ಣೋಜಿರಾವ್, ಎಸ್.ಬಿ ಮೋಹನ್ ರಾವ್, ಧನುಷ್ ಬೋಸ್ಲೆ, ಪರಶುರಾಮರಾವ್, ಗ್ರೇಡ್ -೨ ತಹಸೀಲ್ದಾರ್ ರಂಗಮ್ಮ, ಉಪತಹಸೀಲ್ದಾರ್ ಮಂಜಾನಾಯ್ಕ, ಅರಸು, ರಾಜಸ್ವ ನಿರೀಕ್ಷಕ ಪ್ರಶಾಂತ್, ಶಿರಸ್ತೇದಾರ್ ರಾಧಕೃಷ್ಣ ಭಟ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.