Friday, August 25, 2023

ಚುನಾವಣೆ : ಸದಸ್ಯರಿಗೆ ಸೂಚನೆ


    ಭದ್ರಾವತಿ : ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆಸಲು ಆ.೨೩ರಂದು ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಕಛೇರಿಯ ಸೂಚನಾ ಫಲಕದಲ್ಲಿ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಮತ ಚಲಾಯಿಸಲು ಅರ್ಹತೆ ಇರುವ ಮತದಾರರ ಕರಡುಪಟ್ಟಿ ಮತ್ತು ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಇರುವ ಮತದಾರರ ಕರಡು ಪಟ್ಟಿ ಮತ್ತು ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಲು ಆರ್ಹತೆ ಇರುವ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಸದಸ್ಯರಿಂದ ಆಕ್ಷೇ ಪಣೆಗಳು ಇದ್ದಲ್ಲಿ ಸೆ.೬ರಂದು ಸಂಜೆ ೫ ಗಂಟೆಯೊಳಗಾಗಿ ಸಂಘದ ಕಛೇರಿಯಲ್ಲಿ ಕಾರ್ಯದರ್ಶಿಯವರಿಗೆ ಅರ್ಜಿ ಸಲ್ಲಿಸುವುದು.

ಆ.೨೬ರಂದು ವಿಶ್ವ ಜಾನಪದ ದಿನಾಚರಣೆ



    ಭದ್ರಾವತಿ, ಆ. ೨೫:   ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ವತಿಯಿಂದ ಆ.೨೬ರ ಶನಿವಾರ ಸಂಜೆ ೪ ಗಂಟೆಗೆ ಭಂಡಾರಹಳ್ಳಿ  ಶ್ರೀ ಕಣಿವೆ ಮಾರಮ್ಮ ದೇವಾಲಯದ ಆವರಣದಲ್ಲಿ ವಿಶ್ವ ಜಾನಪದ ದಿನಾಚರಣೆ ಆಯೋಜಿಸಲಾಗಿದೆ.
    ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್‌ ಕಾರ್ಯಕ್ರಮ  ಉದ್ಘಾಟಿಸುವರು. ಪರಿಷತ್‌ ತಾಲೂಕು ಅಧ್ಯಕ್ಷ  ಎಂ.ಆರ್.‌ ರೇವಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
    ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ  ಡಿ. ಮಂಜುನಾಥ್,  ನಗರಸಭೆ ಉಪಾಧ್ಯಕ್ಷೆ  ಸರ್ವಮಂಗಳಾ ಭೈರಪ್ಪ, ಪೌರಾಯುಕ್ತ  ಮನುಕುಮಾರ್, ಶ್ರೀ ಕಣಿವೆ ಮಾರಮ್ಮ ದೇವಾಲಯ ಸಮಿತಿ ಅಧ್ಯಕ್ಷ  ಪರಮೇಶ್ವರಪ್ಪ,  ಕೆ.ಬಿ.ಗಂಗಾಧರ್,  ಹನುಮಂತಪ್ಪ, ಕೆ.ಜಿ.ರವಿಕುಮಾರ್,  ಬಿ. ಗಂಗಾಧರ್, ರಾಜಣ್ಣ, ಕೋಡ್ಲು ಯಜ್ಜಯ್ಯ, ಸುಧಾಮಣಿ, ಗೊಂದಿ ಜಯರಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಕಲಾ ಪ್ರಕಾರಗಳಾದ ಡೊಳ್ಳು ಕುಣಿತ, ಚೌಡಿಕೆ ಪದ, ಜಾನಪದ ಗಾಯನ, ಗೀಗೀ ಪದ ಹಾಗೂ ಬಣಜಾರ್ ನೃತ್ಯ ಪ್ರದರ್ಶನ ನಡೆಯಲಿದೆ.   

ಬೆರಳುಮುದ್ರೆ ಪರಿಶೀಲನೆ ಮೂಲಕ ವ್ಯಕ್ತಿ ಪತ್ತೆ ಪ್ರಕರಣ

ಗ್ರಾಮಾಂತರ ಠಾಣೆ ಇಬ್ಬರು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗು ನ್ಯಾಯಾಲಯದ ವಿಚಾರಣೆಯಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯೋರ್ವನನ್ನು ಬೆರಳುಮುದ್ರೆ ಪರಿಶೀಲನೆ ಮೂಲಕ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಭದ್ರಾವತಿ ಗ್ರಾಮಾಂತರ ಪೊಲೀಸ್‌ಠಾಣೆಯ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್‌ವತಿಯಿಂದ ಅಭಿನಂದಿಸಲಾಯಿತು.
    ಭದ್ರಾವತಿ, ಆ. ೨೫:  ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗು ನ್ಯಾಯಾಲಯದ ವಿಚಾರಣೆಯಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯೋರ್ವನನ್ನು ಬೆರಳುಮುದ್ರೆ ಪರಿಶೀಲನೆ ಮೂಲಕ ಪತ್ತೆಹಚ್ಚುವಲ್ಲಿ ಯಶಸ್ವಿಯಾದ  ಗ್ರಾಮಾಂತರ ಪೊಲೀಸ್‌ಠಾಣೆಯ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್‌ವತಿಯಿಂದ ಅಭಿನಂದಿಸಲಾಯಿತು.
    ಗ್ರಾಮಾಂತರ ಠಾಣೆಯ ಸಿಬ್ಬಂದಿಗಳಾದ ಮಂಜುನಾಥ್ ಮತ್ತು  ಗಂಗಾಧರ್ ನಾಶಿರವರು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಅನುಮಾನಾಸ್ಪದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಆತನ ಬೆರಳು ಮುದ್ರೆ ಪರಿಶೀಲನೆ ನಡೆಸುವ ಮೂಲಕ ಆತ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಹಾಗು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವುದನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು.
    ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್‌ವತಿಯಿಂದ ಮಂಜುನಾಥ್‌ಮತ್ತು ಗಂಗಾಧರ್‌ನಾಶಿ ಅವರಿಗೆ ಸನ್ಮಾನಿಸಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್‌, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್‌ಭೂಮರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಆರ್‌ಎಸ್ ಪಕ್ಷದ ವತಿಯಿಂದ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಲು ಬೆಂಗಳೂರಿಗೆ ಪಾದಯಾತ್ರೆ

    ಭದ್ರಾವತಿ, ಆ. ೨೫ :  ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕೆಆರ್‌ಎಸ್‌ ಪಕ್ಷದಿಂದ ಆ.26 ರಂದು ಬೆಳ್ತಂಗಡಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಹಾಗೂ ತಾಲೂಕು ಉಸ್ತುವಾರಿ ಸಮೀರ್ ಹೇಳಿದರು.
    ಅವರು  ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಅ.2012 ರಂದು ಅತ್ಯಾಚಾರಕ್ಕೆ ಒಳಗಾಗಿ ಧಾರುಣವಾಗಿ ಕೊಲೆಯಾದ 17 ವರ್ಷದ ಯುವತಿಯ ದುರಂತ ಪ್ರಕರಣದಲ್ಲಿ ಇಲ್ಲಿಯವೆಗೂ ಯಾರಿಗೂ ಶಿಕ್ಷೆಯಾಗಿಲ್ಲ.  ಅಲ್ಲದೆ ಆರೋಪಿ ಎಂದು ಬಂಧಿಸಲಾಗಿದ್ದ ವ್ಯಕ್ತಿಯನ್ನು ಸೂಕ್ತ ಸಾಕ್ಷಾಧಾರಗಳಿಲ್ಲದೆ ಆರೋಪಮುಕ್ತ ವನ್ನಾಗಿಸಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ರಾಜ್ಯಾದ್ಯಂತ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೆಆರ್‌ಎಸ್ ಪಕ್ಷ ಸಹ ಸೌಜನ್ಯಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಂಡಿದೆ. ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು ಸೆ.8 ರಂದು ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದರು.
    ಬೆಳ್ತಂಗಡಿಯಿಂದ ಆರಂಭವಾಗುವ ಪಾದಯಾತ್ರೆಯು ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮೂಲಕ ಬೆಂಗಳೂರು ತಲುಪಲಿದ್ದು, ಸೌಜನ್ಯ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮರು ತನಿಖೆ ನಡೆಸಬೇಕು. ವಿಶೇಷ ಪೊಲೀಸ್ ತನಿಖಾ ತಂಡ ರಚಿಸಬೇಕು. ಮಕ್ಕಳ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಸಂತ್ರಸ್ಥ ಕುಟುಂಬಗಳಿಗೆ ಮಾನಸಿಕ ಹಾಗೂ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿʻಸೌಜನ್ಯ ಮಹಿಳಾ ಸುರಕ್ಷಾ ಆಯೋಗʼ ರಚಿಸ ಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗುತ್ತಿದ್ದು, ಇಲಾಖೆಯಲ್ಲಿನ ಲೋಪದೋಷ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರವು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಕರ್ನಾಟಕದ ಜನತೆಯ ಪರವಾಗಿ ಸರ್ಕಾರಕ್ಕೆ ಹಕ್ಕೊತ್ತಾಯಿಸಲಾಗುವುದು ಎಂದರು.
    ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜರಾವ್ ಸಿಂಧೆ ಮಾತನಾಡಿ, ಇತ್ತೀಚೆಗೆ ರಾಜ್ಯದಲ್ಲಿ ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ. ಜನರಿಗೆ ಕಾನೂನಿನ ಇಲ್ಲವಾಗಿದೆ. ಅದರಿಂದಾಗಿ ಮತ್ತಷ್ಟು ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಚ್ಚರಿಸುವ ಸಲುವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. ಪಕ್ಷದ ಪ್ರಮುಖರಾದ ತೀರ್ಥಕುಮಾರ್‌, ಯೋಗಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಆ.೩೦ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ : ಸಂವಾದ ಕಾರ್ಯಕ್ರಮ

ನಗರಸಭೆ ವ್ಯಾಪ್ತಿಯ ೯ ಸ್ಥಳಗಳಲ್ಲಿ ವ್ಯವಸ್ಥೆ : ಶೃತಿ ವಸಂತಕುಮಾರ್‌

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಶೃತಿ ವಸಂತಕುಮಾರ್‌ ಮಾತನಾಡಿದರು.
    ಭದ್ರಾವತಿ, ಆ. ೨೫: ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ೨,೦೦೦ ರು. ನೀಡುವ ಮಹತ್ವಾಕಾಂಕ್ಷೆ  ʻಗೃಹ ಲಕ್ಷ್ಮೀ ʼ ಯೋಜನೆಗೆ ಆ.೩೦ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಅಂದು ನಡೆಯಲಿರುವ ಫಲಾನುಭವಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ನಗರಸಭೆ ವ್ಯಾಪ್ತಿಯ ೯ ಸ್ಥಳಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್‌ಹೇಳಿದರು.
    ಅವರು ಈ ಕುರಿತು ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ ೧೨ ಗಂಟೆಗೆ  ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಹಾಯಧನ ಬಿಡುಗಡೆ ಮತ್ತು ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು.  
    ಈ ಸಂಬಂಧ ನಗರಸಭಾ ವ್ಯಾಪ್ತಿಯ ೯ ಸ್ಥಳಗಳಲ್ಲಿ ನೇರ ಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ʻಗೃಹ ಲಕ್ಷ್ಮೀʼ ಯೋಜನೆಯ ಫಲಾನುಭವಿಗಳು, ಸಾರ್ವಜನಿಕರು, ಜನಪ್ರತಿನಿದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ  ಕಾರ್ಯಕ್ರಮ ಯಶಸ್ವಿಗೊಳಿಬೇಕೆಂದು ಕೋರಿದರು.
    ಶಾಸಕರಿಂದ ಚಾಲನೆ:
    ನಗರದ ವೀರಶೈವ ಸಭಾ ಭವನದಲ್ಲಿ ಯೋಜನೆಗೆ ಶಾಸಕ ಬಿ.ಕೆ ಸಂಗಮೇಶ್ವರ್‌ ಚಾಲನೆ ನೀಡಲಿದ್ದು, ನಗರ ವ್ಯಾಪ್ತಿಯಲ್ಲಿ ೩೯,೮೮೩ ಹಾಗು ಗ್ರಾಮಾಂತರ ಭಾಗದಲ್ಲಿ ೩೦,೩೩೭ ಸೇರಿದಂತೆ ಒಟ್ಟು ೭೦,೨೨೦ ʻಗೃಹಲಕ್ಷ್ಮೀʼ ಫಲಾನುಭವಿಗಳಿದ್ದಾರೆ.  ಸರ್ಕಾರದ ಈ ಯೋಜನೆಯ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದರು.
    ನೇರ ಪ್ರಸಾರ ಕಾರ್ಯಕ್ರಮದ ಕೇಂದ್ರಗಳು:
    ವೀರಶೈವ ಸಭಾ ಭವನ, ತಾಲ್ಲೂಕು ಕಛೇರಿ ರಸ್ತೆ, ಭದ್ರಾವತಿ (03, 04, 05, 06), ಮಲ್ಲೇಶ್ವರ ಕಲ್ಯಾಣ ಮಂಟಪ, ಜನ್ನಾಪುರ, ಭದ್ರಾವತಿ(28, 29, 30, 31, 32), ಬಸವ ಮಂಟಪ, ಮಾಧವನಗರ, ತರೀಕೆರೆ ರಸ್ತೆ, ಭದ್ರಾವತಿ (13, 16, 17, 18),  ಶ್ರೀ ವಿದ್ಯಾದಿರಾಜ ಸಭಾ ಭವನ, ಕಡದಕಟ್ಟೆ, ಭದ್ರಾವತಿ (01, 02 33, 34, 35),  ಮದರಸಾ ಶಾದಿ ಮಹಲ್, ಅನ್ವರ್ ಕಾಲೋನಿ, ಭದ್ರಾವತಿ (07, 08, 09), ಹಿಂದೂ ಮಹಾಸಭಾ ಗಣಪತಿ ಸಮುದಾಯ ಭವನ, ಹೊಸಮನೆ, ಭದ್ರಾವತಿ (10, 11, 12, 14, 15), ಲಯನ್ಸ್ ಕಮ್ಯೂನಿಟಿ ಹಾಲ್, ಶುಗರ್ ಟೌನ್, ಜೆ.ಟಿ.ಎಸ್ ಶಾಲೆ ಪಕ್ಕ, ಭದ್ರಾವತಿ (25, 26, 27), ಡಾನ್ ಬೋಸ್ಕೊ ಐ.ಟಿ.ಐ ಅಡಿಟೋರಿಯಂ, ಉಜ್ಜನೀಪುರ, ಭದ್ರಾವತಿ (19, 20, 21, 22) ಮತ್ತು ಎಸ್.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜು, ಆಡಿಟೋರಿಯಂ, ಬೊಮ್ಮನಕಟ್ಟೆ (23, 24)
    ಪೌರಾಯುಕ್ತ ಎಚ್.ಎಂ ಮನುಕುಮಾರ್‌, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್‌, ನಗರಸಭಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.