ಭದ್ರಾವತಿ, ಆ. ೨೫ : ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕೆಆರ್‌ಎಸ್ ಪಕ್ಷದಿಂದ ಆ.26 ರಂದು ಬೆಳ್ತಂಗಡಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಹಾಗೂ ತಾಲೂಕು ಉಸ್ತುವಾರಿ ಸಮೀರ್ ಹೇಳಿದರು.
ಅವರು ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಅ.2012 ರಂದು ಅತ್ಯಾಚಾರಕ್ಕೆ ಒಳಗಾಗಿ ಧಾರುಣವಾಗಿ ಕೊಲೆಯಾದ 17 ವರ್ಷದ ಯುವತಿಯ ದುರಂತ ಪ್ರಕರಣದಲ್ಲಿ ಇಲ್ಲಿಯವೆಗೂ ಯಾರಿಗೂ ಶಿಕ್ಷೆಯಾಗಿಲ್ಲ. ಅಲ್ಲದೆ ಆರೋಪಿ ಎಂದು ಬಂಧಿಸಲಾಗಿದ್ದ ವ್ಯಕ್ತಿಯನ್ನು ಸೂಕ್ತ ಸಾಕ್ಷಾಧಾರಗಳಿಲ್ಲದೆ ಆರೋಪಮುಕ್ತ ವನ್ನಾಗಿಸಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ರಾಜ್ಯಾದ್ಯಂತ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೆಆರ್‌ಎಸ್ ಪಕ್ಷ ಸಹ ಸೌಜನ್ಯಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಂಡಿದೆ. ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು ಸೆ.8 ರಂದು ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದರು.
ಬೆಳ್ತಂಗಡಿಯಿಂದ ಆರಂಭವಾಗುವ ಪಾದಯಾತ್ರೆಯು ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮೂಲಕ ಬೆಂಗಳೂರು ತಲುಪಲಿದ್ದು, ಸೌಜನ್ಯ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮರು ತನಿಖೆ ನಡೆಸಬೇಕು. ವಿಶೇಷ ಪೊಲೀಸ್ ತನಿಖಾ ತಂಡ ರಚಿಸಬೇಕು. ಮಕ್ಕಳ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಸಂತ್ರಸ್ಥ ಕುಟುಂಬಗಳಿಗೆ ಮಾನಸಿಕ ಹಾಗೂ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿʻಸೌಜನ್ಯ ಮಹಿಳಾ ಸುರಕ್ಷಾ ಆಯೋಗʼ ರಚಿಸ ಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗುತ್ತಿದ್ದು, ಇಲಾಖೆಯಲ್ಲಿನ ಲೋಪದೋಷ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರವು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಕರ್ನಾಟಕದ ಜನತೆಯ ಪರವಾಗಿ ಸರ್ಕಾರಕ್ಕೆ ಹಕ್ಕೊತ್ತಾಯಿಸಲಾಗುವುದು ಎಂದರು.
ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜರಾವ್ ಸಿಂಧೆ ಮಾತನಾಡಿ, ಇತ್ತೀಚೆಗೆ ರಾಜ್ಯದಲ್ಲಿ ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ. ಜನರಿಗೆ ಕಾನೂನಿನ ಇಲ್ಲವಾಗಿದೆ. ಅದರಿಂದಾಗಿ ಮತ್ತಷ್ಟು ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಚ್ಚರಿಸುವ ಸಲುವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. ಪಕ್ಷದ ಪ್ರಮುಖರಾದ ತೀರ್ಥಕುಮಾರ್, ಯೋಗಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment