Tuesday, May 24, 2022

ಕರ್ತವ್ಯಕ್ಕೆ ಅಡ್ಡಿ : ಸೂಕ್ತ ಕ್ರಮಕ್ಕೆ ಆಗ್ರಹಿಸಿ ವೈದ್ಯರು, ಸಿಬ್ಬಂದಿಗಳಿಂದ ಮನವಿ


   ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗು ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಅಸಾಧ್ಯವಾಗಿದ್ದು,  ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಅವರಿಗೆ ಮನವಿ ಸಲ್ಲಿಸಲಾಗಿದೆ
    ಭದ್ರಾವತಿ, ಮೇ. ೨೪: ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗು ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಅಸಾಧ್ಯವಾಗಿದ್ದು,  ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಅವರಿಗೆ ಮನವಿ ಸಲ್ಲಿಸಲಾಗಿದೆ.
    ಆರೋಗ್ಯ ಸೇವೆ ಪಡೆಯಲು ಆಸ್ಪತ್ರೆಗೆ ಪ್ರತಿದಿನ ಸಾವಿರಾರು ಮಂದಿ ಬರುತ್ತಿದ್ದು, ವೈದ್ಯರು ಹಾಗು ಸಿಬ್ಬಂದಿಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ರಾತ್ರಿ ವೇಳೆ ಆಸ್ಪತ್ರೆಗೆ ಬರುವ ಕೆಲವರು ರಾಜಕಾರಣಿಗಳು ಮತ್ತು ಪೊಲೀಸ್ ಸಿಬ್ಬಂದಿಗಳ ಸೋಗಿನಲ್ಲಿ ವೈದ್ಯರು ಹಾಗು ಸಿಬ್ಬಂದಿಗಳ ವಿರುದ್ಧ ಅಸಭ್ಯವಾಗಿ ವರ್ತಿಸುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ.  ಇದರಿಂದ ಭಯದ ವಾತಾವರಣ ನಿರ್ಮಾಣವಾಗುತ್ತಿದ್ದು, ಮುಂದೊಂದು ದಿನ ವೈದ್ಯರು, ಸಿಬ್ಬಂದಿಗಳ ಮೇಲೆ ಹಲ್ಲೆ ಸಹ ನಡೆಯುವ ಸಾಧ್ಯತೆಗಳು ಕಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ತಕ್ಷಣ ತುರ್ತು ಕ್ರಮ ಕೈಗೊಂಡು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ಕಲ್ಪಿಸಿಕೊಡಬೇಕೆಂದು ಆಗ್ರಹಿಸಲಾಗಿದೆ.
    ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ, ವೈದ್ಯರಾದ ಡಾ. ಡಿ.ಎಸ್ ಶಿವಪ್ರಕಾಶ್, ಡಾ. ಮಂಜುನಾಥ್, ಡಾ. ವರ್ಷ, ಕ್ಷ-ಕಿರಣ ತಂತ್ರಜ್ಞ  ಸಿದ್ದೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಕಾಂತ್ ಹಾಗು ಡಿ ಗ್ರೂಪ್ ನೌಕರರಾದ ಮುನಿರಾಜ್, ಶಶಿಕುಮಾರ್, ಸಿದ್ದಪ್ಪ, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೇ.೨೫ರಂದು ಮೆಸ್ಕಾಂ ಜನಸಂಪರ್ಕ ಸಭೆ

    ಭದ್ರಾವತಿ, ಮೇ. ೨೪: ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮೇ.೨೫ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ.
    ಗ್ರಾಮೀಣ ವ್ಯಾಪ್ತಿಯ ಗ್ರಾಹಕರು ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯುತ್ ಸಂಬಂಧಿತ ತಮ್ಮ ಕುಂದುಕೊರತೆ/ಅಹವಾಲುಗಳನ್ನು ಸಲ್ಲಿಸಿ ಬಗೆಹರಿಸಿಕೊಳ್ಳಲು ಕೋರಲಾಗಿದೆ. ಮೆಸ್ಕಾಂ ಅಧೀಕ್ಷಕ ಇಂಜನಿಯರ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
    ಕಾರೇಹಳ್ಳಿ, ಬಾರಂದೂರು, ಅಂತರಗಂಗೆ, ದೊಡ್ಡೇರಿ, ಬಿ.ಆರ್.ಪಿ, ದೊಣಬಘಟ್ಟ, ತಡಸ, ಬಿಳಿಕಿ, ಅರಳಿಕೊಪ್ಪ, ಕಂಬದಾಳ್ ಹೊಸೂರು, ಅರಳಿಹಳ್ಳಿ, ಕೂಡ್ಲಿಗೆರೆ, ಅತ್ತಿಗುಂದ, ವೀರಾಪುರ, ಕಲ್ಲಹಳ್ಳಿ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರು ಪಾಲ್ಗೊಳ್ಳಬಹುದಾಗಿದೆ ಎಂದು ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಬಸವೇಶ್ವರ ವೃತ್ತದಲ್ಲಿ ನಂದಿ ವಿಗ್ರಹ ಲೋಕಾರ್ಪಣೆ

ಭದ್ರಾವತಿ ನಗರಸಭೆ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಂದಿ ವಿಗ್ರಹವನ್ನು ಮಂಗಳವಾರ ತುಮಕೂರು ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.
    ಭದ್ರಾವತಿ, ಮೇ. ೨೪: ನಗರಸಭೆ ವತಿಯಿಂದ ಕೆಆರ್‌ಐಡಿಎಲ್ ಅನುದಾನದಲ್ಲಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಂದಿ ವಿಗ್ರಹವನ್ನು ಮಂಗಳವಾರ ತುಮಕೂರು ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.
    ಲೋಕಾರ್ಪಣೆ ಅಂಗವಾಗಿ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪವನ್‌ಕುಮಾರ್ ಉಡುಪ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು. ಮಹಿಳಾ ಕಲಾವಿದರ ಡೊಳ್ಳು ಕುಣಿತ ಗಮನ ಸೆಳೆಯಿತು. ಕಾರ್ಯಕ್ರಮಕ್ಕೂ ಮೊದಲು ಶ್ರೀಗಳನ್ನು ನಾದಸ್ವರ, ಕುಂಭ ಕಲಶಗಳೊಂದಿಗೆ ಬರಮಾಡಿಕೊಳ್ಳಲಾಯಿತು.
    ಪ್ರತಿಮೆ ವಿಶೇಷತೆ:
    ಒಟ್ಟು ೨೨ ಲಕ್ಷ ರು. ವೆಚ್ಚದಲ್ಲಿ ನಂದಿ ಪ್ರತಿಮೆ ಹಾಗು ಮೇಲ್ಛಾವಣಿ ಕಾಮಗಾರಿ ಕೈಗೊಳ್ಳಲಾಗಿದೆ.  ಪ್ರತಿಮೆ ೧೩.೫ ಅಡಿ ಎತ್ತರ ಹಾಗು ೨೪ ಅಡಿ ಉದ್ದ ವಿಸ್ತ್ರೀರ್ಣಹೊಂದಿದ್ದು, ಸೀಮೆಂಟ್ ಬಳಸಿ ಆಕರ್ಷಕವಾಗಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಕಾಗದನಗರದ ನಿವಾಸಿಗಳಾದ, ಶಿಲ್ಪಿಗಳಾದ ಎಸ್.ಬಿ ಬಾಲಾಜಿ ಮತ್ತು ವಿಷ್ಣುಕುಮಾರ್‌ರವರು ಈ ಪ್ರತಿಮೆ ನಿರ್ಮಿಸಿದ್ದಾರೆ.  
    ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್ ಹಾಗು ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಶಿಲ್ಪಿ ಹಾಗು ಗುತ್ತಿಗೆದಾರ ಎಸ್.ಬಿ ಬಾಲಾಜಿ, ವಿಷ್ಣುಕುಮಾರ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.

ಶ್ರೀ ಗುರುಸಿದ್ಧ ಶಿವಾಚಾರ್ಯರ ದಾಸೋಹ ಭವನಕ್ಕೆ ಭೂಮಿ ಪೂಜೆ

ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಲಿಂಗೈಕ್ಯ ಶ್ರೀ ಗುರುಸಿದ್ಧ ಶಿವಾಚಾರ್ಯರ ದಾಸೋಹ ಭವನಕ್ಕೆ ಮಂಗಳವಾರ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು.
    ಭದ್ರಾವತಿ, ಮೇ. ೨೪:  ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಲಿಂಗೈಕ್ಯ ಶ್ರೀ ಗುರುಸಿದ್ಧ ಶಿವಾಚಾರ್ಯರ ದಾಸೋಹ ಭವನಕ್ಕೆ ಮಂಗಳವಾರ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು.
    ಬಾಳೆಹೊನ್ನೂರು ಮಠ ಯಡಿಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗು ಬೆಟ್ಟಳ್ಳಿ ಮಠದ ಶ್ರೀಗಳು ಉಪಸ್ಥಿತರಿದ್ದರು.
    ಶಾಸಕ ಬಿ.ಕೆ ಸಂಗಮೇಶ್ವರ್, ಮಠದ ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯ, ಚಿದಾನಂದ ಸ್ವಾಮಿ, ಸಿದ್ದಲಿಂಗಯ್ಯ, ವಾಗೀಶ್, ಮಂಜುನಾಥ್, ಲೋಕೇಶ್ ರಾವ್, ಲಂಬೋದರ, ಅರ್ಜುನ್ ರಾವ್, ಶೈಲೇಶ್ ಕೋಠಿ, ದೂದಾ ನಾಯ್ಕ, ವಸಂತಕುಮಾರ್ ಹಾಗು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಪದಾಧಿಕಾರಿಗಳು ಹಾಗೂ ಶ್ರೀಮಠದ ಭಕ್ತರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೀ ಶಿವಕುಮಾರ ಸ್ವಾಮೀಜಿ ಸೇವೆ, ತ್ಯಾಗಗಳ ಪ್ರತಿರೂಪ : ಸಿದ್ದಲಿಂಗ ಸ್ವಾಮೀಜಿ


    ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ೧೧೫ನೇ ಜನ್ಮದಿನೋತ್ಸವ  ಸಮಾರಂಭವನ್ನು ಮಂಗಳವಾರ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು.
    ಭದ್ರಾವತಿ, ಮೇ. ೨೪: ಶ್ರೀ ಶಿವಕುಮಾರ ಸ್ವಾಮೀಜಿಯವರು ಸೇವೆ ಮತ್ತು ತ್ಯಾಗಗಳ ಪ್ರತಿರೂಪವಾಗಿದ್ದು, ಇವರಿಗೆ ಯಾರನ್ನು ಸಹ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ತುಮಕೂರು ಶ್ರೀ ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
    ಹಳೇನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ತಾಲೂಕು ವೀರಶೈವ ಲಿಂಗಾಯತ ಸಮಾಜ ಹೆಸರಿನಲ್ಲಿ ಲಿಂಗಾಯತ ಸಮಾಜದ ಎಲ್ಲಾ ಸಂಘಟನೆಗಳು ಒಗ್ಗೂಡಿ ಹಮ್ಮಿಕೊಂಡಿದ್ದ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ೧೧೫ನೇ ಜನ್ಮದಿನೋತ್ಸವ  ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ಶ್ರೀಗಳ ಸೇವೆ ಹಾಗು ತ್ಯಾಗದ ಮನೋಭಾವ ಬೇರೆ ಯಾರಲ್ಲೂ ಸಹ ಕಾಣಲು ಸಾಧ್ಯವಿಲ್ಲ.  ಸರ್ವ ಜನಾಂಗವನ್ನು ಪ್ರೀತಿಸಿ ಶಿಕ್ಷಣ ನೀಡುವ ಶ್ರೀಗಳ ಕಾರ್ಯ ಸ್ವಾಮಿ ವಿವೇಕಾನಂದರು, ಮಹಾತ್ಮಗಾಂಧಿಜೀ ಹಾಗು ಅಂಬೇಡ್ಕರ್‌ರವರು ಶಿಕ್ಷಣಕ್ಕೆ ನೀಡುತ್ತಿದ್ದ ಮಹತ್ವ ಹಾಗು ಆಶಯಗಳಿಗೆ ಅನುಗುಣವಾಗಿವೆ.  ಗುಣಮಟ್ಟದ ಮೌಲ್ಯಯುತವಾದ, ಸಂಸ್ಕಾರಯುತವಾದ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಇದನ್ನು ಶ್ರೀಗಳು ತೋರಿಸಿಕೊಟ್ಟಿದ್ದು, ಶ್ರೀ ಮಠದಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಶ್ರೀಮಠದಲ್ಲಿನ ಸೇವಾ ಕಾರ್ಯಗಳಿಂದ ಸ್ಪೂರ್ತಿಗೊಂಡು ವಿವಿಧ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದಕನ್ನು ಸಾರ್ಥಕಗೊಳಿಸಿಕೊಳ್ಳುವ ದಾರಿಯಲ್ಲಿ ಸಾಗುತ್ತಿದ್ದಾರೆ. ಅಲ್ಲದೆ ದಿವಂಗತ ಪುನೀತ್‌ರಾಜ್‌ಕುಮಾರ್ ಸೇರಿದಂತೆ ಅನೇಕರಿಗೆ ಶ್ರೀ ಮಠದ ಸೇವಾ ಕಾರ್ಯಗಳು ಪ್ರೇರಣೆಯನ್ನುಂಟುಮಾಡಿವೆ ಎಂದರು.
      ತ್ರಿವಿಧ ದಾಸೋಹದ ಮೂಲಕ ಬದುಕಿನುದ್ದಕ್ಕೂ ಸಾಧನೆಗಳ ದಾರಿಯಲ್ಲಿ ಸಾಗಿ ಬಂದಿರುವ ಶ್ರೀಗಳಿಗೆ ಸರಿಸಮಾನವಾಗಿ ಯಾರನ್ನು ಸಹ ಕಾಣಲು ಸಾಧ್ಯವಿಲ್ಲ.  ಭೂಮಿಗೆ ಭೂಮಿ, ಸೂರ್ಯನಿಗೆ ಸೂರ್ಯ, ಆಕಾಶಕ್ಕೆ ಆಕಾಶ, ಸಮುದ್ರಕ್ಕೆ ಸಮುದ್ರ ಹೋಲಿಕೆ ಮಾಡಿದಂತೆ ಶ್ರೀಗಳನ್ನು ಹೋಲಿಕೆ ಮಾಡಬಹುದು ಹೊರತು ಬೇರೆ ಯಾರನ್ನು ಸಹ ಹೋಲಿಕೆ ಮಾಡಲು ಸಾಧ್ಯವಿಲ್ಲ. ಶ್ರೀಗಳ ಬದುಕು ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ. ಪ್ರತಿಯೊಬ್ಬರು ತಮ್ಮ ಬದುಕಿನ ವ್ಯಾಪ್ತಿಯನ್ನು ಅರಿತು ಕಾಯಕವನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಬದುಕು ರೂಪಿಸಿಕೊಳ್ಳಬೇಕೆಂದರು.
    ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಶ್ರೀ ಮಠದ ಕುರಿತು ಹೇಳಿರುವ ಮಾತುಗಳು ಇಂದಿಗೂ ಸತ್ಯವಾಗಿವೆ. ಉತ್ತರದಲ್ಲಿ ಗಂಗೆ, ದಕ್ಷಿಣದಲ್ಲಿ ಸಿದ್ದಗಂಗಾ ನಮ್ಮ ದೇಶದ ಆಸ್ತಿಗಳಾಗಿವೆ. ಶ್ರೀಗಳ ಹೆಸರೇ ನಮ್ಮಲ್ಲಿ ಒಂದು ವಿಶಿಷ್ಟ ಭಕ್ತಿಯ ಭಾವನೆಯನ್ನು ಅರಳಿಸುತ್ತದೆ. ಭಕ್ತಿ, ಸೇವೆ, ನಾನಾ ಪ್ರಕಾರಗಳ ದಾಸೋಹದ ಮೂಲಕ ನಮ್ಮ ಬದುಕನ್ನು ಪರಿಪೂರ್ಣವಾಗಿಸಲು, ಸಾರ್ಥಕಗೊಳಿಸಿಕೊಳ್ಳಲು ಅದು ಪ್ರೇರೇಪಿಸುತ್ತದೆ. ಇಂತಹ ಶ್ರೀಗಳ ಜೊತೆಗಿನ ಒಡನಾಟದ ನೆನಪೇ ಸಾಕು, ನಾವೆಷ್ಟು ಅದೃಷ್ಟಶಾಲಿಗಳು ಎಂದರು.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬಡ ಜನರಿಗೆ ಉಚಿತವಾಗಿ ಆಹಾರ ಧ್ಯಾನಗಳನ್ನು ವಿತರಿಸಲು ಶ್ರೀ ಮಠದ ದಾಸೋಹ ಪರಿಕಲ್ಪನೆಯೇ ಪ್ರೇರಣೆಯಾಗಿದೆ. ಈ ನಾಡಿನಲ್ಲಿ ಹಸಿವಿಗೆ ಜಾಗವಿಲ್ಲ. ಇಂತಹ ಆದರ್ಶವನ್ನು ಸರ್ಕಾರ ಅನುಸರಿಸುತ್ತಿರವುದು ಈ ಮಠದ ಹೆಗ್ಗಳಿಕೆಯಾಗಿದೆ ಎಂದರು.
    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರರಾದ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಮಾತನಾಡಿ, ಶ್ರೀಗಳೊಂದಿಗಿನ ಸಂಬಂಧ ಹಾಗು ಮಠದ ಕಾರ್ಯ ವೈಖರಿಗಳ ಕುರಿತು ವಿವರಿಸಿದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ,  ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಸಮಾಜದ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
    ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಸ್ವಾಗತಿಸಿದರು. ಅಡವೀಶಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಬಿ.ಜಿ ಧನಂಜಯ ನಿರೂಪಿಸಿದರು.