Wednesday, January 3, 2024

ಅದ್ದೂರಿಯಾಗಿ ಜರುಗುತ್ತಿರುವ ಶ್ರೀ ಮಾರಿಯಮ್ಮ ಜಾತ್ರಾ ಮಹೋತ್ಸವ

ಕಣ್ಮನ ಸೆಳೆಯುತ್ತಿರುವ ಅಮ್ಮನವರ ಅಲಂಕಾರ, ಬೃಹತ್ ಅನ್ನಸಂತರ್ಪಣೆ

ಭದ್ರಾವತಿ ನಗರದ ಬಿ.ಎಚ್ ರಸ್ತೆ ಮೀನುಗಾರರ ಬೀದಿ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿ ಸಹ ಕಳೆದ ೩ ದಿನಗಳಿಂದ ಅದ್ದೂರಿಯಾಗಿ ಜರುಗುತ್ತಿದ್ದು, ಸೋಮವಾರ ಸರಸ್ವತಿ ಅಲಂಕಾರ ಹಾಗು ಬುಧವಾರ ನೋಟುಗಳ ಮೂಲಕ ಲಕ್ಷ್ಮೀ ಅಲಂಕಾರ ಕೈಗೊಳ್ಳಲಾಗುತ್ತಿತ್ತು. ಅಮ್ಮನವರ ಅಲಂಕಾರ ಕಣ್ಮನ ಸೆಳೆಯಿತು.
    ಭದ್ರಾವತಿ: ನಗರದ ಬಿ.ಎಚ್ ರಸ್ತೆ ಮೀನುಗಾರರ ಬೀದಿ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿ ಸಹ ಕಳೆದ ೩ ದಿನಗಳಿಂದ ಅದ್ದೂರಿಯಾಗಿ ಜರುಗುತ್ತಿದ್ದು, ಬುಧವಾರ ಬೃಹತ್ ಅನ್ನಸಂತರ್ಪಣೆ ನೆರವೇರಿತು.
    ಸೋಮವಾರ ಭದ್ರಾ ನದಿಯಿಂದ ಶಕ್ತಿ ತೀರ್ಥದ ಬಿಂದಿಗೆ ತೆಗೆದುಕೊಂಡು ಅಮ್ಮನವರ ಗರ್ಭಗುಡಿಗೆ ಅಭಿಷೇಕ ಮಾಡಲಾಯಿತು. ಮಂಗಳವಾರ ಸಂಜೆ ಅಗ್ನಿಕುಂಡ ತ್ರಿಶೂಲ ಮುದ್ರೆಯೊಂದಿಗೆ ದೇವಸ್ಥಾನಕ್ಕೆ ಭದ್ರಾನದಿಯಿಂದ ಶಕ್ತಿ ಕರಗ ತರಲಾಯಿತು.
    ಬುಧವಾರ ಬೆಳಿಗ್ಗೆ ೫ ಗಂಟೆ ಸಮಯದಲ್ಲಿ ಪೊಂಗಲ್ ನಡೆಯಿತು. ಮಧ್ಯಾಹ್ನ ೧೨ ಗಂಟೆಯಿಂದ ಸಂಜೆ ೪ ಗಂಟೆವರೆಗೂ ಬೃಹತ್ ಅನ್ನ ಸಂತರ್ಪಣೆ ನೆರವೇರಿತು. ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಸಂಜೆ ೭ ಗಂಟೆಗೆ ಅಮ್ಮನವರ ರಾಜಬೀದಿ ಉತ್ಸವ ಮೆರವಣಿಗೆ ಹಾಗು ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಜ.೪ರ ಗುರುವಾರ ಸಂಜೆ ೭ ಗಂಟೆಗೆ ತಮಿಳುನಾಡಿನ ತಿರುಚಿ ಶಿವನ್ ಶಕ್ತಿ ನಾಟಕ ಮಂಡಳಿ ಚೆನ್ನೈ ಬಾಯ್ಸ್ ಹಾಗು ಸ್ನೇಹ ಆರ್ಕೇಸ್ಟ್ರಾ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
    ಅಮ್ಮನವರಿಗೆ ವಿಶೇಷ ಅಲಂಕಾರ :
    ಪ್ರತಿದಿನ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗುತ್ತಿದ್ದು, ಸೋಮವಾರ ಸರಸ್ವತಿ ಅಲಂಕಾರ ಹಾಗು ಬುಧವಾರ ನೋಟುಗಳ ಮೂಲಕ ಲಕ್ಷ್ಮೀ ಅಲಂಕಾರ ಕೈಗೊಳ್ಳಲಾಗುತ್ತಿತ್ತು. ಅಮ್ಮನವರ ಅಲಂಕಾರ ಕಣ್ಮನ ಸೆಳೆಯಿತು.
ಮಾರಿಯಮ್ಮ ದೇವಾಲಯ ಕಮಿಟಿ ಅಧ್ಯಕ್ಷ ಎ. ಮಾಧು ನೇತೃತ್ವದಲ್ಲಿ ಈ ಬಾರಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಪ್ರತಿ ದಿನ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಅಮ್ಮನವರ ದರ್ಶನ ಪಡೆಯುತ್ತಿದ್ದಾರೆ.

ಹೊಂಬಾಳಮ್ಮ ನಿಧನ

ಹೊಂಬಾಳಮ್ಮ
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಿವಾಸಿ, ಮೈಸೂರು ಕಾಗದ ಕಾರ್ಖಾನೆ ನಿವೃತ್ತ ನೌಕರ ಜಿ. ಬೊಮ್ಮಯ್ಯ ಅವರ ತಾಯಿ ಹೊಂಬಾಳಮ್ಮ(೮೫) ಬುಧವಾರ ನಿಧನ ಹೊಂದಿದರು.
    ಹೊಂಬಾಳಮ್ಮ ಅವರಿಗೆ ಜಿ. ಬೊಮ್ಮಯ್ಯ ಹಾಗು ಲಿಮ್ಕಾ ದಾಖಲೆ ಪ್ರಶಸ್ತಿ ಪುರಸ್ಕೃತ ಕಲಾವಿದ ಬಿ. ಗುರು ಸೇರಿದಂತೆ ಮೊಮ್ಮಕ್ಕಳು ಇದ್ದರು. ಉಜ್ಜನಿಪುರ ಬಣ್ಣದ ಮನೆಯಲ್ಲಿ ವಾಸವಾಗಿದ್ದರು. ಇವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಬೈಪಾಸ್ ರಸ್ತೆ, ಬುಳ್ಳಾಪುರ ಬಾಳೆಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯ ಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಮಿಳುನಾಡಿನಲ್ಲಿ ಭರತನಾಟ್ಯ : ಶಿವಮೊಗ್ಗ-ಭದ್ರಾವತಿ ನೃತ್ಯ ಕಲಾವಿದರಿಗೆ ಮೆಚ್ಚುಗೆ

ಭದ್ರಾವತಿ: ಜೆ.ಎಸ್ ಫೈನ್ ಆರ್ಟ್ಸ್ ಅಕಾಡೆಮಿ ವತಿಯಿಂದ ತಮಿಳುನಾಡಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ-ಭದ್ರಾವತಿ ಪುಷ್ಪಾಪರ್‌ಫಾರ್ಮಿಂಗ್ ಆರ್ಟ್ಸ್‌ಸೆಂಟರ್ ಭರತನಾಟ್ಯ ನೃತ್ಯ ಕಲಾವಿದರು ಭರತನಾಟ್ಯ ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    ಭದ್ರಾವತಿ: ಜೆ.ಎಸ್ ಫೈನ್ ಆರ್ಟ್ಸ್ ಅಕಾಡೆಮಿ ವತಿಯಿಂದ ತಮಿಳುನಾಡಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ-ಭದ್ರಾವತಿ ಭರತನಾಟ್ಯ ನೃತ್ಯ ಕಲಾವಿದರು ಭರತನಾಟ್ಯ ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    ತಮಿಳುನಾಡಿನ ವೆಲ್ಲೂರಿನ ಶ್ರೀ ಲಕ್ಷ್ಮೀನಾರಾಯಣಿ ಗೋಲ್ಡನ್ ಟೆಂಪಲ್‌ನಲ್ಲಿ ಜ.೧ರಂದು ಆಯೋಜಿಸಲಾಗಿದ್ದ ನೃತ್ಯ ವೈಭವ ಕಾರ್ಯಕ್ರಮದಲ್ಲಿ  ಶಿವಮೊಗ್ಗ-ಭದ್ರಾವತಿ ಪುಷ್ಪಾಪರ್‌ಫಾರ್ಮಿಂಗ್ ಆರ್ಟ್ಸ್‌ಸೆಂಟರ್ ಭರತನಾಟ್ಯ ಕಲಾವಿದರು ತಮ್ಮ ಪ್ರತಿಭೆ ಅನಾವರಣಗೊಳಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
    ವಿದೂಷಿ ಪುಷ್ಪಾಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಈ ಕಲಾವಿದರು ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ. ಇವರನ್ನು ಪುಷ್ಪಾಪರ್‌ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಹಾಗು ವಿವಿಧ ಸಂಘ-ಸಂಸ್ಥೆಗಳು, ಭರತನಾಟ್ಯ ಕಲಾವಿದರು ಅಭಿನಂದಿಸಿದ್ದಾರೆ.