Thursday, March 16, 2023

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಬೆಂಬಲ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ೫೭ನೇ ದಿನದ ಹೋರಾಟಕ್ಕೆ  ಕಾರುಣ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಗುರುವಾರ ಬೆಂಬಲ ಸೂಚಿಸಲಾಯಿತು.
    ಭದ್ರಾವತಿ, ಮೇ. ೧೬ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ೫೭ನೇ ದಿನದ ಹೋರಾಟಕ್ಕೆ  ಕಾರುಣ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಗುರುವಾರ ಬೆಂಬಲ ಸೂಚಿಸಲಾಯಿತು.
    ಸಂಜೆ ಜನ್ನಾಪುರ ಪ್ರಮುಖ ರಸ್ತೆಗಳಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಸಂಬಂಧ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಹಾಕುವ ಮೂಲಕ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗಳ ವಿರುದ್ಧ ಪ್ರತಿಭಟಿಸಲಾಯಿತು.  ನಂತರ ಮೇಣದ ಬತ್ತಿ ಬೆಳಗಿಸಿ ಬೆಂಬಲ ವ್ಯಕ್ತ ಪಡಿಸಲಾಯಿತು.
      ಟ್ರಸ್ಟ್  ಪದಾದಿಕಾರಿಗಳಾದ ಕೆ. ನಾಗರಾಜ್, ಸುರೇಶ್ ಕುಮಾರ್, ಟಿ. ಬಾಸ್ಕರ್, ಎನ್. ನಾಗವೇಣಿ, ಆರ್. ಮಂಜುಳಾ,  ಜೆ. ಕಾಂತಾ, ಕಾರ್ತಿಕ್, ವಿಲ್ಸನ್ ಬಾಬು  ಸೆಬಾಸ್ಟಿಯನ್, ಕವಿತಾ, ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದ ಸವಿತಾ, ಗುತ್ತಿಗೆ ಕಾರ್ಮಿಕರ ಸಂಘದ ಪ್ರಮುಖರಾದ ಸುರೇಶ್, ಎಂ. ನಾರಾಯಣ, ಆರ್. ಸ್ಪೂರ್ತಿ, ಸರವಣ, ಪ್ರಶಾಂತ್, ರಮೇಶ್ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

೧೦ ಮಂದಿಗೆ ಗುರು ಸೇವಾರತ್ನ ಪ್ರಶಸ್ತಿ : ಸನ್ಮಾನ, ಅಭಿನಂದನೆ

ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್, ಮೈಸೂರು ವತಿಯಿಂದ ನೀಡಲಾಗುವ ಗುರು ಸೇವಾರತ್ನ ಪ್ರಶಸ್ತಿಯನ್ನು ಈ ಬಾರಿ ಭದ್ರಾವತಿ ತಾಲೂಕಿನ ಒಟ್ಟು ೧೦ ಮಂದಿ ಸಿಆರ್‌ಪಿ, ಬಿಆರ್‌ಪಿ ಹಾಗು ಬಿಐಇಆರ್‌ಟಿಗಳು ಪಡೆದುಕೊಂಡಿದ್ದಾರೆ. ಇವರನ್ನು ಗುರುವಾರ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಮೇ. ೧೬ : ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್, ಮೈಸೂರು ವತಿಯಿಂದ ನೀಡಲಾಗುವ ಗುರು ಸೇವಾರತ್ನ ಪ್ರಶಸ್ತಿಯನ್ನು ಈ ಬಾರಿ ತಾಲೂಕಿನ ಒಟ್ಟು ೧೦ ಮಂದಿ ಸಿಆರ್‌ಪಿ, ಬಿಆರ್‌ಪಿ ಹಾಗು ಬಿಐಇಆರ್‌ಟಿಗಳು ಪಡೆದುಕೊಂಡಿದ್ದಾರೆ.
    ಬಿಐಇಆರ್‌ಟಿ ಡಿ.ಎಚ್ ತೀರ್ಥಪ್ಪ, ಹಿರಿಯೂರು ಸಿಆರ್‌ಪಿ ಜಿ.ಎಚ್ ವೇಣುಗೋಪಾಲ್, ಹೊಳೆಹೊನ್ನೂರು ಸಿಆರ್‌ಪಿ ಮಹಮದ್ ಜುಬಿಉಲ್ಲಾ, ಸಿದ್ದಾಪುರ ಸಿಆರ್‌ಪಿ ಜಿ. ಹರೀಶ್, ಬಿಆರ್‌ಪಿ ಪ್ರೌಢ ಬಿ.ಆರ್ ಪ್ರಭಾಕರ್, ಹೊಳೆಹೊನ್ನೂರು ಸಿಆರ್‌ಪಿ ಮಂಜಪ್ಪ, ಅರಳಿಹಳ್ಳಿ ಉರ್ದು ಸಿಆರ್‌ಪಿ ಆಸ್ಟಿಯಾನಾಜ್, ಬಿಆರ್‌ಪಿ ಶ್ವೇತಾ, ಅರಹತೊಳಲು ಸಿಆರ್‌ಪಿ ಪಿ.ಎಂ ವಾಣಿ ಮತ್ತು ಬಿಆರ್‌ಪಿ ಎಸ್.ಎಂ ಪ್ರಿಯಾಂಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
    ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮತ್ತು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಸೇರಿದಂತೆ ಇನ್ನಿತರರು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
    ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜಿ. ಪ್ರಭು, ಶಿಕ್ಷಣ ಸಂಯೋಜಕ ರವಿಕುಮಾರ್, ಸಿ. ಚನ್ನಪ್ಪ, ಹಿಂದಿ ಶಿಕ್ಷಕಿ ತ್ರಿವೇಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿಗೆ ರಾಜ್ಯಮಟ್ಟದ ತೃತೀಯ ಅತ್ಯುತ್ತಮ ತಾಲೂಕು ಪಂಚಾಯಿತಿ ಪುರಸ್ಕಾರ

ಭದ್ರಾವತಿ ತಾಲೂಕು ಪಂಚಾಯಿತಿ.
    ಭದ್ರಾವತಿ, ಮಾ. ೧೬ : ಕಳೆದ ಸುಮಾರು ಒಂದೂವರೆ ವರ್ಷದಿಂದ ಜನಪ್ರತಿನಿಧಿಗಳ ಆಡಳಿತವಿಲ್ಲದಿದ್ದರೂ ಸಹ ಕಾರ್ಯಾಂಗ ತನ್ನ ಜವಾಬ್ದಾರಿ ಅರಿತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಇಲ್ಲಿನ ತಾಲೂಕು ಪಂಚಾಯಿತಿಗೆ ಈ ಬಾರಿ ರಾಜ್ಯಮಟ್ಟದ ತೃತೀಯ ಅತ್ಯುತ್ಯಮ ತಾಲೂಕು ಪಂಚಾಯಿತಿ ಪುರಸ್ಕಾರ ಲಭಿಸಿದೆ.
    ಈ ಹಿಂದೆ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೪೧ ಗ್ರಾಮ ಪಂಚಾಯಿತಿ, ೧೯ ತಾಲೂಕು ಪಂಚಾಯಿತಿ ಕ್ಷೇತ್ರಗಳಿದ್ದು, ಸರ್ಕಾರ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡಿದ ನಂತರ ಪ್ರಸ್ತುತ ೩೯ ಗ್ರಾಮ ಪಂಚಾಯಿತಿ ಹಾಗು ೧೮ ತಾಲೂಕು ಪಂಚಾಯಿತಿ ಕ್ಷೇತ್ರಗಳಿವೆ. ಕಳೆದ ಸುಮಾರು ಒಂದೂವರೆ ವರ್ಷದಿಂದ ಚುನಾವಣೆ ನಡೆಯದ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದಿದ್ದರೂ ಸಹ ಕಾರ್ಯಾಂಗ ತನ್ನ ಜವಾಬ್ದಾರಿ ಅರಿತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ರವರ ನೇತೃತ್ವದಲ್ಲಿ ಸುಮಾರು ಒಂದೂವರೆ ವರ್ಷದಿಂದ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಇದೀಗ ರಾಜ್ಯದ ಗಮನ ಸೆಳೆದಿದೆ.
    ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳ ಸೃಜನೆ, ಕಾಮಗಾರಿ ಮುಕ್ತಾಯ, ಜಿಯೋಟ್ಯಾಗ್, ಮಹಿಳೆಯರ ಭಾಗವಹಿಸುವಿಕೆ, ಸಾಮಾಜಿಕ ಲೆಕ್ಕಾ ತಪಾಸಣೆ, ಕಡತ ನಿರ್ವಹಣೆ ಸೇರಿದಂತೆ ಇನ್ನಿತರ ಕಾರ್ಯನಿರ್ವಹಣೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯಮಟ್ಟದ ತೃತೀಯ ಅತ್ಯುತ್ಯಮ ತಾಲೂಕು ಪಂಚಾಯಿತಿ ಪುರಸ್ಕಾರ ಲಭಿಸಿದೆ.


ರಮೇಶ್, ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯಿತಿ, ಭದ್ರಾವತಿ.
  ಪುರಸ್ಕಾರ ಲಭಿಸಿರುವ ಹಿನ್ನಲೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ರವರು ಸಹಾಯಕ ನಿರ್ದೇಶಕರು(ಗ್ರಾ.ಉ), ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್‌ಡಿಎಎ,  ಡಿಇಓ,  ಗ್ರಾ.ಪಂ. ಸಿಬ್ಬಂಧಿಗಳು, ತಾಂತ್ರಿಕ ಸಹಾಯಕರು, ಬಿಎಫ್‌ಟಿ ಸೇರಿದಂತೆ  ಎಲ್ಲಾ ಸಿಬ್ಬಂಧಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


ಮೊದಲ ಬಾರಿಗೆ ತಾಲೂಕು ಪಂಚಾಯಿತಿಗೆ ರಾಜ್ಯಮಟ್ಟದ ತೃತೀಯ ಅತ್ಯುತ್ತಮ ತಾಲೂಕು ಪಂಚಾಯಿತಿ ಪುರಸ್ಕಾರ ಲಭಿಸಿರುವುದು ಸಂತಸ ತಂದಿದೆ. ಮಾ.೨೪ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಈ ಸಾಧನೆಗೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
                             -ರಮೇಶ್, ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯಿತಿ, ಭದ್ರಾವತಿ.



ಏಕಾಏಕಿ ನೀರೂರು ಪೊಲೀಸ್ ಠಾಣೆಯಾಗಿ ಬದಲಾದ ಲೇಡಿಸ್ ಕ್ಲಬ್

ಲಾಫಿಂಗ್ ಬುದ್ಧ ಚಲನಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ  

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಲಾಫಿಂಗ್ ಬುದ್ಧ ಚಿತ್ರದ ಚಿತ್ರೀಕರಣ ನಡೆಯುತ್ತಿರುವುದು.
    ಭದ್ರಾವತಿ, ಮಾ. ೧೬ : ನಗರದ ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್ ಇದೀಗ ಕೆಲವೇ ದಿನಗಳಲ್ಲಿ ನೀರೂರು ಪೊಲೀಸ್ ಠಾಣೆಯಾಗಿ ಪರಿವರ್ತನೆಯಾಗಿದ್ದು, ಇಲ್ಲಿನ ನಿವಾಸಿಗಳನ್ನು ಬೆರಗುಗೊಳಿಸಿದೆ.
    ಲೇಡಿಸ್ ಕ್ಲಬ್ ಸುಮಾರು ೫-೬ ದಶಕಗಳಿಂದ ಈ ಭಾಗದಲ್ಲಿ ಮನೆ ಮಾತಯಾಗಿದ್ದು, ಏಕಾಏಕಿ ನೀರೂರು ಪೊಲೀಸ್ ಠಾಣೆಯಾಗಿ ರೂಪುಗೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕಳೆದ ೨-೩ ದಿನಗಳಿಂದ ನಿವಾಸಿಗಳ ಕುತೂಹಲಕ್ಕೆ ಕಾರಣವಾಗಿದೆ. ಹೌದು ಹಳೇಯದಾದ ಲೇಡಿಸ್ ಕ್ಲಬ್ ಕಟ್ಟಡದಲ್ಲಿ ಲಾಫಿಂಗ್ ಬುದ್ಧ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರಕ್ಕೆ ಪೊಲೀಸ್ ಠಾಣೆಯಾಗಿ ಬಳಸಿಕೊಳ್ಳಲಾಗಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಕಲಾವಿದರು, ತಂತ್ರಜ್ಞರ ತಂಡ ಆಗಮಿಸಿ ಬೀಡು ಬಿಟ್ಟಿದೆ.
    ನಟ, ನಿರ್ದೇಶಕ ರಿಷಬ್‌ಶೆಟ್ಟಿರವರ ನಿರ್ಮಾಣದಲ್ಲಿ ತಾಲೂಕಿನ ಸುತ್ತಮುತ್ತ ಚಲನಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದ್ದು, ಮಾ.೧೧ರಂದು ನಗರದ ಲೋಯರ್ ಹುತ್ತಾ ಶ್ರೀಚಂಡಿಕಾ ದುರ್ಗಾ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಿತು. ನಂತರ ಲೇಡಿಸ್ ಕ್ಲಬ್‌ನಲ್ಲಿ ನಿರ್ಮಿಸಲಾಗಿರುವ ನೀರೂರು ಪೊಲೀಸ್ ಠಾಣೆ ಶೆಡ್‌ನಲ್ಲಿ ಚಿತ್ರೀಕರಣ ಆರಂಭಗೊಂಡಿದೆ.


ಅಪರಂಜಿ ಶಿವರಾಜ್, ರಂಗ ಕಲಾವಿದ, ಕಿರುತೆರೆ ನಟ
    ಚಿತ್ರದ ನಾಯಕ ನಟನಾಗಿ ಪ್ರಮೋದ್ ಶೆಟ್ಟಿ ಹಾಗು ನಾಯಕಿಯಾಗಿ ತೇಜೂ ಬೆಳವಾಡಿ ನಟಿಸುತ್ತಿದ್ದು, ಕಥೆ ಮತ್ತು ನಿರ್ದೇಶನ ಭರತ್‌ರಾಜ್ ಹಾಗು ಛಾಯಾಗ್ರಾಹಣ ಚಂದ್ರಶೇಖರ್ ಮತ್ತು ಚಿತ್ರದ ನಿರ್ವಹಣೆ ಹಾಗು ವ್ಯವಸ್ಥಾಪಕರಾಗಿ ನಗರದ ರಂಗಕಲಾವಿದ, ಕಿರುತೆರೆ ನಟ ಅಪರಂಜಿ ಶಿವರಾಜ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಪರಂಜಿ ಶಿವರಾಜ್‌ರವರು ಇದುವರೆಗೂ ೨೧ ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದು, ಈ ಪೈಕಿ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.


ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮಾ.೨೩ರವರೆಗೆ ನಡೆಯಲಿದೆ. ೨ನೇ ಹಂತದ ಚಿತ್ರೀಕರಣ ಏಪ್ರಿಲ್‌ನಲ್ಲಿ ನಡೆಯಲಿದೆ. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಭದ್ರಾವತಿ ಸುತ್ತಮುತ್ತ ನಡೆಯಲಿದ್ದು, ಆರಂಭಿಕ ಹಂತದ ಚಿತ್ರೀಕರಣ ಇದೀಗ ಆರಂಭಗೊಂಡಿದೆ. ಈ ಹಿಂದೆ ಕನ್ನಡದ ಹಲವು ಪ್ರಸಿದ್ದ ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದು, ಈ ಚಿತ್ರದ ನಿರ್ವಹಣೆ ಹಾಗು ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
                                                                - ಅಪರಂಜಿ ಶಿವರಾಜ್, ರಂಗ ಕಲಾವಿದ, ಕಿರುತೆರೆ ನಟ.