Saturday, February 27, 2021

ಕ್ರಿಮಿನಲ್ ಪ್ರಕರಣಗಳಿಗೆ ಜಾಮೀನು ಕೊಡಿಸುತ್ತಿದ್ದ ದಲ್ಲಾಳಿಗೆ ಶಿಕ್ಷೆ

ದಲ್ಲಾಳಿ ಕುಮಾರ
    ಭದ್ರಾವತಿ, ಫೆ. ೨೭: ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿ ನ್ಯಾಯಾಲಯಕ್ಕೆ ಜಾಮೀನುದಾರರನ್ನು ಒದಗಿಸಿಕೊಡುತ್ತಿದ್ದ ದಲ್ಲಾಳಿಯೋರ್ವನಿಗೆ ೫ ತಿಂಗಳು ಸಾದ ಶಿಕ್ಷೆ ವಿಧಿಸಿರುವ ಘಟನೆ ನಡೆದಿದೆ.
   ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚನಮರಡಿ ನಿವಾಸಿ ಕುಮಾರ ಎಂಬಾತ ಶಿಕ್ಷೆಗೆ ಒಳಗಾಗಿದ್ದಾನೆ. ಈತ ನ್ಯಾಯಾಲಯದ ಆವರಣದಲ್ಲಿ ಕ್ರಿಮಿನಲ್ ಪ್ರಕರಣಗಳ ಆರೋಪಿಗಳಿಗೆ ಜಾಮೀನು ಕೊಡಿಸುವುದನ್ನು ರೂಢಿಗತ ಮಾಡಿಕೊಂಡಿದ್ದು, ಈತನಿಗೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಲಯದ ನ್ಯಾಯಾಧೀಶರಾದ ಹೇಮಾವತಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ತಾಲೂಕು ಮಟ್ಟದ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ

ಮೊದಲ ಪಂದ್ಯ ಎಂಜೆಎ-ಮಾರುತಿ ಟೈಗರ್‍ಸ್ ತಂಡಗಳ ನಡುವೆ ಸೆಣಸಾಟ


ಬಿ.ವೈ.ಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ತಾಲೂಕು ಮಟ್ಟದ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಶನಿವಾರ ಸಂಜೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. ಮೊದಲ ಪಂದ್ಯ ಎಂಜೆಎ-ಮಾರುತಿ ಟೈಗರ್‍ಸ್ ತಂಡಗಳ ನಡುವೆ ಸೆಣಸಾಟ ನಡೆಯಿತು.
   ಭದ್ರಾವತಿ, ಫೆ. ೨೭: ಬಿ.ವೈ.ಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ತಾಲೂಕು ಮಟ್ಟದ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಶನಿವಾರ ಸಂಜೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
   ಪ್ರಪಥಮ ಬಾರಿಗೆ ನಗರದಲ್ಲಿ ನಡೆಯುತ್ತಿರುವ ಮ್ಯಾಟ್ ಒಳಗೊಂಡ ಪ್ರೊ ಕಬಡ್ಡಿ ಪಂದ್ಯಾವಳಿ ಇದಾಗಿದ್ದು, ಮೊದಲ ಪಂದ್ಯ ಮಾರುತಿ ಟೈಗರ್‍ಸ್ ಮತ್ತು ಎಂಜೆಎ ತಂಡಗಳ ನಡುವೆ ಸೆಣಸಾಟ ನಡೆಯಿತು. ಪಂದ್ಯಾವಳಿ ಒಟ್ಟು ೮ ತಂಡಗಳು ಸೆಣಸಾಟ ನಡೆಸಲಿವೆ. ನಗರದ ವಿವಿಧ ಭಾಗಗಳಿಂದ ಪಂದ್ಯಾವಳಿ ವೀಕ್ಷಣೆಗೆ ಕಬಡ್ಡಿ ಅಭಿಮಾನಿಗಳು, ಕ್ರೀಡಾಪಟುಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವೀಕ್ಷಣೆಗೆ ಬೃಹತ್ ಎಲ್‌ಸಿಡಿ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.
   ಉದ್ಘಾಟನಾ ಸಭಾರಂಭದಲ್ಲಿ ವಿವಿಧ ಕಬಡ್ಡಿ ತಂಡಗಳ ಮಾಲೀಕರಾದ ಮಾರುತಿ ಮೆಡಿಕಲ್ ಆನಂದ್, ಬಾಲಕೃಷ್ಣ, ಪೊಲೀಸ್ ಉಮೇಶ್, ಮಂಗೋಟೆ ರುದ್ರೇಶ್, ಮಣಿ ಎಎನ್‌ಎಸ್ ಹಾಗು ಹಿರಿಯ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ, ಕ್ಲಬ್ ಅಧ್ಯಕ್ಷ ಎಚ್.ಎನ್ ಕೃಷ್ಣೇಗೌಡ, ಕಬ್ಲ್ ಪ್ರಧಾನ ಕಾರ್ಯದರ್ಶಿ ಎಚ್.ಆರ್ ರಂಗನಾಥ್, ಕಾರ್ಯದರ್ಶಿ ಮಾರ್ಕಂಡಯ್ಯ, ಖಜಾಂಚಿ ಎಸ್. ವಿಶ್ವನಾಥ್, ಉಪಾಧ್ಯಕ್ಷರಾದ ಚನ್ನಪ್ಪ, ಸಂಚಾಲಕರಾದ ಎಸ್.ಎನ್ ಸಿದ್ದಯ್ಯ, ವೈ. ವಸಂತಕುಮಾರ್, ಜಯರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಲಯನ್ಸ್ ಕ್ಲಬ್ ಶುಗರ್ ಟೌನ್ ೩೪ ವರ್ಷಗಳ ಸಾರ್ಥಕ ಸೇವೆ

ಫೆ.೨೮ರಂದು 'ಅನನ್ಯ' ಪ್ರಾಂತೀಯ ಸಮ್ಮೇಳನ : ಕೆ. ಅನಂತಕೃಷ್ಣನಾಯಕ್

ಭದ್ರಾವತಿಯ ಲಯನ್ಸ್ ಕ್ಲಬ್ ಶುಗರ್‌ಟೌನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತೀಯ ಅಧ್ಯಕ್ಷ ಕೆ. ಅನಂತಕೃಷ್ಣನಾಯಕ್ ಮಾತನಾಡಿದರು.
    ಭದ್ರಾವತಿ, ಫೆ. ೨೭: ಹಲವು ಸಮಾಜ ಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಗರದ ಲಯನ್ಸ್ ಕ್ಲಬ್ ಶುಗರ್ ಟೌನ್ ತನ್ನ ೩೪ನೇ ವರ್ಷದ ಸವಿ ನೆನಪಿನಲ್ಲಿ ಫೆ.೨೮ರಂದು ಪ್ರಾಂತೀಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಕೈಗೊಂಡಿದೆ ಎಂದು ಪ್ರಾಂತೀಯ ಅಧ್ಯಕ್ಷ ಕೆ. ಅನಂತಕೃಷ್ಣನಾಯಕ್ ತಿಳಿಸಿದರು.
  ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೭ ಆಗಸ್ಟ್ ೧೯೮೭ರಲ್ಲಿ ಆರಂಭಗೊಂಡ ಸ್ಥಾಪನೆಗೊಂಡ ಕ್ಲಬ್ ಜನಸೇವೆಯೇ ಜನಾರ್ಧನ ಸೇವೆ ಎಂಬ ಧ್ಯೇಯೋದ್ದೇಶದೊಂದಿಗೆ ಹಲವು ಸೇವಾ ಕಾರ್ಯಗಳೊಂದಿಗೆ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿಶೇಷವಾಗಿ ಸುಮಾರು ೧೫ ವರ್ಷಗಳ ಕಾಲ ನೇತ್ರ ಚಿಕಿತ್ಸಾ ಶಿಬಿರ ನಡೆಸಿಕೊಂಡು ಬರುವ ಜೊತೆಗೆ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಹುಟ್ಟುಹಾಕುವಲ್ಲಿ ನಾಂದಿಯಾಗಿದೆ. ಅಲ್ಲದೆ ಲಯನ್ಸ್ ಎಜುಕೇಷನ್ ಟ್ರಸ್ಟ್ ಎಂಬ ಅಂಗಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಸುಮಾರು ೩೨ ವರ್ಷಗಳಿಂದ ವಿಕಲಚೇತನ ಮಕ್ಕಳಿಗಾಗಿ 'ತರಂಗ ಕಿವುಡು, ಮೂಗ ಮಕ್ಕಳ ಶಾಲೆ' ನಡೆಸಿಕೊಂಡು ಬರಲಾಗುತ್ತಿದೆ. ಒಟ್ಟಾರೆ ಕ್ಲಬ್ ಸಮಾಜಕ್ಕೆ ತನ್ನದೇ ಆದ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿದೆ ಎಂದರು.
   ತಾವು ಪ್ರಾಂತೀಯ ಅಧ್ಯಕ್ಷರಾದ ನಂತರ ೧೦ ಕ್ಲಬ್‌ಗಳ ಜೊತೆಗೆ ಹೊಸದಾಗಿ ೩ ಕ್ಲಬ್‌ಗಳನ್ನು ರಚಿಸಲಾಗಿದೆ. ಪ್ರಸ್ತುತ ೪೩೫ ಸದಸ್ಯರಿದ್ದು, ಭವಿಷ್ಯದಲ್ಲಿ ಈ ಸದಸ್ಯರು ಮತ್ತಷ್ಟು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿಯಾಗಬೇಕೆಂಬ ಹಾಗು ಸದಸ್ಯರ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ 'ಅನನ್ಯ' ಹೆಸರಿನಲ್ಲಿ ಪ್ರಾಂತೀಯ ಸಮ್ಮೇಳನ ಫೆ.೨೮ರಂದು ಸಂಜೆ ೪ ಗಂಟೆಗೆ ನಡೆಸಲಾಗುತ್ತಿದೆ.  ಈ ಸಮ್ಮೇಳನದಲ್ಲಿ ವ್ಯಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಹಾಗು ಡಾ.ಕೆ.ಪಿ ಪುತ್ತುರಾಯ ಪಾಲ್ಗೊಳ್ಳಲಿದ್ದಾರೆ. ಪಿಡಿಜಿ ದಿವಾಕರ್, ವಿಡಿಜಿ-೧ ವಿಶ್ವನಾಥಶೆಟ್ಟಿ, ವಿಡಿಜಿ-೨ ಕೆ.ಸಿ ವೀರಭದ್ರಪ್ಪ, ರಿಜಿಯನ್ ಫೈಲಟ್ ಎಂ.ಎಸ್ ಜರ್ನಾಧನ ಅಯ್ಯಂಗಾರ್, ಪಾಲಾಕ್ಷಪ್ಪ, ಜಿ.ಎಸ್ ಕುಮಾರ್, ಕ್ಲಬ್ ಅಧ್ಯಕ್ಷ ಬಿ. ನಿತ್ಯಾನಂದ ಪೈ, ಕಾರ್ಯದರ್ಶಿ ತಮ್ಮೇಗೌಡ ಮತ್ತು ಖಜಾಂಚಿ ಎಂ.ಸಿ ಯೋಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸುಮಾರು ೪೫೦ ರಿಂದ ೫೦೦ ಲಯನ್ಸ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
   ಕಾನ್ಫರೆನ್ಸ್ ಕಮಿಟಿ ಛೇರ್‌ಮನ್ ಡಾ. ಟಿ. ನರೇಂದ್ರಭಟ್ ಮಾತನಾಡಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸಮಾಜಮುಖಿ ಚಿಂತನೆಗಳು ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಈ ನಿಟ್ಟಿನಲ್ಲಿ ಆರಂಭಗೊಂಡ ಕ್ಲಬ್‌ಗೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧ ಎಕರೆ, ೨೦ ಗುಂಟೆ ಜಾಗವನ್ನು ಲೀಸ್ ಆಧಾರದಲ್ಲಿ ಕ್ಲಬ್‌ಗೆ ನೀಡಿದ್ದು, ೧೯೯೦ರಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಕ್ಲಬ್ ನಿರ್ಮಿಸಿಕೊಂಡಿತು. ಇದರ ಜೊತೆಗೆ ಸರ್‌ಎಂವಿ ಸ್ಪೂರ್ತಿವನ ಹಾಗು ಕೋಟಾ ಶಿವರಾಮಕಾರಂತ ವನ ಎಂಬ ಎರಡು ವನಗಳನ್ನು ರೂಪಿಸಲಾಗಿದ್ದು, ಇದೀಗ ಕ್ಲಬ್ ಆವರಣದಲ್ಲಿ ಹಸಿರು ಕಂಗೊಳಿಸುತ್ತಿದೆ. ಇದು ಕ್ಲಬ್‌ನ ಮತ್ತೊಂದು ಮಹತ್ವದ ಕಾರ್ಯವಾಗಿದೆ ಎಂದರು.
   ಇತ್ತೀಚೆಗೆ ಸುಮಾರು ೧೮ ಲಕ್ಷ ರು. ವೆಚ್ಚದಲ್ಲಿ ಕ್ಲಬ್‌ನ ಕಟ್ಟಡ ಹಾಗು ತರಂಗ ಶಾಲಾ ಕಟ್ಟಡಗಳನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
  ಕ್ಲಬ್ ಅಧ್ಯಕ್ಷ ಬಿ. ನಿತ್ಯಾನಂದಪೈ, ಕಾರ್ಯದರ್ಶಿ ತಮ್ಮೇಗೌಡ, ಜಿ.ಎಸ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.