ಶಾಶ್ವತವಾಗಿ ಕಾರ್ಖಾನೆ ಮುಚ್ಚುವ ಆದೇಶ ಕೇಂದ್ರ ಸರ್ಕಾರ ಹಿಂಪಡೆಯಲಿ : ಪತ್ರಿಕಾಗೋಷ್ಠಿಯಲ್ಲಿ ಆಗ್ರಹ
ಭದ್ರಾವತಿಯಲ್ಲಿ ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ವತಿಯಿಂದ ಬುಧವಾರ ಪತ್ರಿಕಾಗೋಷ್ಠಿ ನಡೆಸಲಾಯಿತು.
ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ೧೬ ಜನವರಿ ೨೦೨೩ರಂದು ಉಕ್ಕು ಪ್ರಾಧಿಕಾರ ತೀರ್ಮಾನ ತೆಗೆದುಕೊಂಡಿದ್ದು, ಇದನ್ನು ವಿರೋಧಿಸಿ ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ವತಿಯಿಂದ ಅಂದಿನಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಹೋರಾಟ ೧ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಜ.೧೬ರಂದು `ಭದ್ರಾವತಿಯ ಕರಾಳ ದಿನ' ಆಚರಿಸಲಾಗುತ್ತಿದೆ ಎಂದು ಯೂನಿಯನ್ ಅಧ್ಯಕ್ಸ ಎಚ್.ಜಿ ಸುರೇಶ್ ತಿಳಿಸಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯೊಬ್ಬರು ಸಹಕಾರ ನೀಡಿದ್ದಾರೆ. ಮುಂದೆ ಸಹ ಇದೆ ರೀತಿ ಸಹಕಾರ ನಿರೀಕ್ಷಿಸಲಾಗುತ್ತಿದೆ. ಹೋರಾಟವನ್ನು ಪಕ್ಷಾತೀತವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದು, ಕೇಂದ್ರ ಸರ್ಕಾರ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಜ.೧೬ರಂದು `ಭದ್ರಾವತಿಯ ಕರಾಳ ದಿನ' ಆಚರಿಸಲಾಗುತ್ತಿದ್ದು, ಅಂದು ಸಂಜೆ ೫ ಗಂಟೆಗೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಪ್ರಮುಖ ರಸ್ತೆಗಳು ಸೇರಿದಂತೆ ನಗರಾದ್ಯಂತ ಪಂಜಿನ ಮೆರವಣಿಗೆ ನೆಡೆಸಲಾಗುವುದು. ಜ.೧೮ರಂದು ಮಧ್ಯಾಹ್ನ ೧ ಗಂಟೆಗೆ ಕಾರ್ಖಾನೆ ಮುಂಭಾಗದಿಂದ ಶಿವಮೊಗ್ಗದಲ್ಲಿರುವ ಸಂಸದ ಬಿ.ವೈ ರಾಘವೇಂದ್ರ ಅವರ ನಿವಾಸದವರೆಗೂ ಬೈಕ್ ರ್‍ಯಾಲಿ ನಡೆಸಲಾಗುವುದು. ನಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ವಿವಿಧ ಸಂಘ-ಸಂಸ್ಥೆಗಳು, ಮಹಿಳೆಯರು, ರೈತರು, ಕಾರ್ಮಿಕರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
ಯೂನಿಯನ್ ಪ್ರಧಾನ ಕಾರ್ಯದರ್ಶಿ ಪಿ. ರಾಕೇಶ್, ಉಪಾಧ್ಯಕ್ಷ ವಿನೋದ್‌ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಗುಣಶೇಖರ್, ವಿನಯ್ ಕುಮಾರ್, ಖಜಾಂಚಿ ಜಿ. ಆನಂದ್, ಎಐಟಿಯುಸಿ ಸಂಘಟನೆ ಅಧ್ಯಕ್ಷ ಕುಮಾರಸ್ವಾಮಿ, ಐಸಾಕ್ ಲಿಂಕನ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿಗೆ ಬಹಿರಂಗ ಮನವಿ ಪತ್ರ:
ವಿಧಾನಸಭಾ ಕ್ಷೇತ್ರದ ೨೦೧೮ ಮತ್ತು ೨೩ರ ಪರಾಜಿತ ಪಕ್ಷೇತರ ಅಭ್ಯರ್ಥಿ ಜಾನ್‌ಬೆನ್ನಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಬಹಿರಂಗ ಮನವಿ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯರವರು ಜ. ೧೨ರ ಶುಕ್ರವಾರ ಶಿವಮೊಗ್ಗ ನಗರಕ್ಕೆ ಸಚಿವ ಸಂಪುಟದ ಸಹೋದ್ಯೋಗಿಳೊಂದಿಗೆ ಆಗಮಿಸಿ ೫ನೇ ಗ್ಯಾರಂಟಿ ಯೋಜನೆಯಾದ `ಯುವನಿಧಿ'ಗೆ ಚಾಲನೆ ನೀಡುವ ಮೂಲಕ ವಿದ್ಯಾವಂತ ನಿರುದ್ಯೋಗಿಗಳಿಗೆ ನೆರವಾಗುತ್ತಿರುವುದು ಸ್ವಾಗತಾರ್ಹವಾಗಿದೆ.
ದೇಶದ ಕೈಗಾರಿಕಾ ಭೂ ಪುಟದಲ್ಲಿ ಮಹತ್ವದ ಸ್ಥಾನ ಪಡೆದು ಗಮನ ಸೆಳೆದಿದ್ದ ಹಾಗೂ ಜಿಲ್ಲೆಯ ಜನರ ಜೀವನಾಡಿಯಾಗಿದ್ದ ಪ್ರತಿಷ್ಠಿತ ವಿಐಎಸ್‌ಎಲ್ ಮತ್ತು ಎಂಪಿಎಂ ಅವಳಿ ಕಾರ್ಖಾನೆಗಳ ಅಳಿವಿನಿಂದಾಗಿ ಕ್ಷೇತ್ರದಲ್ಲಿ ಆರ್ಥಿಕ ಚಟುವಟಿಕೆ ಸಂಪೂರ್ಣ ಕುಂಠಿತ ಗೊಂಡಿದ್ದು, ವಿದ್ಯಾವಂತ ಯುವಕರು ಹೊಟ್ಟೆ ಪಾಡಿಗಾಗಿ ಬೇರೆಡೆ ಗುಳೆಹೋಗುವ, ಎಷ್ಟೋ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರದಾಡುವಂಥಹ ಸ್ಥಿತಿ ನಿರ್ಮಾಣವಾಗಿದೆ.
ವಿಧಾನಸಭಾ ಕ್ಷೇತ್ರದ ೨೦೧೮ ಮತ್ತು ೨೩ರ ಪರಾಜಿತ ಪಕ್ಷೇತರ ಅಭ್ಯರ್ಥಿ ಜಾನ್‌ಬೆನ್ನಿ
ಸಿದ್ದರಾಮಯ್ಯರವರು ಮೂಲತಃ ಮೈಸೂರು ಪ್ರಾಂತ್ಯದವರೇ ಆಗಿದ್ದು, ಯದುವಂಶಜರಿಂದ ಸ್ಥಾಪನೆಯಾದ ಅವಳಿ ಕಾರ್ಖಾನೆಗಳ ದು:ಸ್ಥಿತಿ ನಿಜಕ್ಕೂ ನೋವಿನ ಸಂಗತಿಯಾಗಿದೆ. ಪ್ರತಿ ಬಾರಿ ವಿಧಾನಸಭೆ ಹಾಗು ಲೋಕಸಭೆ ಚುನಾವಣೆಗಳ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸುಳ್ಳು ಭರವಸೆ ನೀಡಿ ಮತದಾರರನ್ನು ವಂಚಿಸಿ ಅಧಿಕಾರದ ಗದ್ದುಗೆ ಹಿಡಿಯುವುದನ್ನು ಕರಗತಮಾಡಿಕೊಂಡಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ.
ಎಂಪಿಎಂ ಕಾರ್ಖಾನೆ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿದ್ದು, ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಸ್ವಯಂ ನಿವೃತ್ತಿ ಘೋಷಣೆಯಾಗಿ ಕಾರ್ಖಾನೆ ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾದದ್ದು ನೋವಿನ ಸಂಗತಿಯಾಗಿರುತ್ತದೆ. ಇದೀಗ ತಾವು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಗೆ ಆಗಮಿಸುತ್ತಿದ್ದು, ಎಂಪಿಎಂ ಕಾರ್ಖಾನೆ ಕಾಯಕಲ್ಪಕ್ಕೆ ಮುಂದಾಗುವಂತೆ ಜನತೆಯ ಪರವಾಗಿ ಒತ್ತಾಯಿಸುತ್ತೇನೆ.
ಶತಮಾನ ಪೂರೈಸಿರುವ ವಿಐಎಸ್‌ಎಲ್ ಪರಿಸ್ಥಿತಿ ಸಹ ಶೋಚನೀಯವಾಗಿದ್ದು, ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಕಾರ್ಖಾನೆಯನ್ನು ರಾಜ್ಯ ಸರ್ಕಾರ ಕೇವಲ ಒಂದು ರೂಪಾಯಿ ಮುಖಬೆಲೆಗೆ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ್ದು, ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿಯೇ ಬಂಡವಾಳ
ತೊಡಗಿಸಿ ಪುನರುಜೀವನ ಗೊಳಿಸುವ ಬಗ್ಗೆ ಕೇಂದ್ರದ ಮೇಲೆ ಒತ್ತಡ ತರುವಂತೆ ಅಥವಾ ವಾಪಾಸ್ಸು ಪಡೆದು ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿಯೇ ಕಾರ್ಖಾನೆಯನ್ನು ಪೂರ್ಣ ಪ್ರಮಾಣದಲ್ಲಿ ಮುಂದುವರೆಸುವ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಜಾನ್‌ಬೆನ್ನಿ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.