Tuesday, June 24, 2025

ಜೂ.೨೫ರಂದು ಎಂಪಿಎಂ ವ್ಯವಸ್ಥಾಪಕರ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು


    : ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರಿಗೆ ಉಂಟಾಗಿರುವ ಅನ್ಯಾಯ ಸರಿಪಡಿಸದೆ ನಿರ್ಲಕ್ಷ್ಯವಹಿಸಿರುವ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಜೂ.೨೫ರಂದು ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುತ್ತಿದೆ. 
    ಕಾರ್ಖಾನೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಮತ್ತು ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರಿಗೆ ಆಡಳಿತ ಮಂಡಳಿ ನೀಡಬೇಕಾಗಿರುವ ಹಲವಾರು ಬಾಕಿಗಳನ್ನು ಇಲ್ಲಿಯವರೆಗೂ ವಿತಸಿರುವುದಿಲ್ಲ. ಈ ಕುರಿತು ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಹಲವಾರು ಬಾರಿ ಮನದಟ್ಟು ಮಾಡಿದ ಮೇಲೆ ಸರ್ಕಾರಕ್ಕೆ ಪತ್ರ ಬರೆದಿರುತ್ತಾರೆ. ಆದರೆ ಇದುವರೆಗೂ ನ್ಯಾಯ ಲಭಿಸಿರುವುದಿಲ್ಲ. ಈಗಿನ ವ್ಯವಸ್ಥಾಪಕ ನಿರ್ದೇಶಕರು ಬಂದು ೧ ವರ್ಷಗಳಾಗಿದ್ದು, ನಿವೃತ್ತ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಲಿಖಿತವಾಗಿ ಮನವಿ ಕೊಟ್ಟರೂ ಸಹ ಯಾವುದನ್ನು ಪರಿಗಣಿಸದೆ ಅನ್ಯಾಯ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗುತ್ತಿದೆ. 
    ಅಲ್ಲದೆ ಕಾರ್ಖಾನೆಯನ್ನು ಪುನರ್ ಆರಂಭಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿ ೨ ವರ್ಷಗಳಾಗಿವೆ. ಆದರೂ ಸಹ ಕಾರ್ಖಾನೆ ಇದುವರೆಗೂ ಆರಂಭಗೊಂಡಿಲ್ಲ. ತಕ್ಷಣ ಕಾರ್ಖಾನೆ ಆರಂಭಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಗುತ್ತಿದೆ. ಮಧ್ಯಾಹ್ನ ೧೨.೪೫ಕ್ಕೆ ಬಸವೇಶ್ವರ ವೃತ್ತದಿಂದ ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮೂಲಕ ಶಾಸಕರ ಗೃಹ ಕಛೇರಿ ತೆರಳಿ ಶಾಸಕರ ಮೂಲಕ ಅಥವಾ ತಹಸೀಲ್ದಾರ್ ಕಛೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ನಿವೃತ್ತ ಕಾರ್ಮಿಕರು, ಕಾರ್ಮಿಕ ಮುಖಂಡರು ಸೇರಿದಂತೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ ಕೋರಿದ್ದಾರೆ. 

ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ೨ ದಿನಗಳ ಕಾಲ ವಿಜೃಂಭಣೆಯಿಂದ ಜರುಗಿದ ವಿಶೇಷ ಧಾರ್ಮಿಕ ಆಚರಣೆಗಳು

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನದ ದೇವಿಯ ಆಲಯ ಪ್ರವೇಶ, ಸ್ಥಿರಬಿಂಬ ಪ್ರತಿಷ್ಠಾಪನೆ, ದೇವಿಯ ಗೋಪುರ ಪ್ರತಿಷ್ಠೆ, ಕಳಸಾರೋಹಣ ಮತ್ತು ದೀಪ ಸ್ತಂಭ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯ ೪೮ ದಿನ ಪೂರೈಸಿದ ಹಿನ್ನಲೆಯಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ೨ ದಿನಗಳ ಕಾಲ ವಿಶೇಷ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು.
ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನದ ದೇವಿಯ ಆಲಯ ಪ್ರವೇಶ, ಸ್ಥಿರಬಿಂಬ ಪ್ರತಿಷ್ಠಾಪನೆ, ದೇವಿಯ ಗೋಪುರ ಪ್ರತಿಷ್ಠೆ, ಕಳಸಾರೋಹಣ ಮತ್ತು ದೀಪ ಸ್ತಂಭ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯ ೪೮ ದಿನ ಪೂರೈಸಿದ ಹಿನ್ನಲೆಯಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ೨ ದಿನಗಳ ಕಾಲ ವಿಶೇಷ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು.
ಸೋಮವಾರ ಬೆಳಿಗ್ಗೆ ಕಲಾ ಹೋಮ ಹಾಗು ಮಧ್ಯಾಹ್ನ ಅನ್ನ ಸಂತರ್ಪಣೆ, ಮಂಗಳವಾರ ಬೆಳಿಗ್ಗೆ ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನದ ಆವರಣದಲ್ಲಿ ಉತ್ಸವಮೂರ್ತಿ ಮೆರವಣಿಗೆ ನಡೆಸಲಾಯಿತು. ಚೌಡೇಶ್ವರಿ ಅಮ್ಮನವರಿಗೆ ಹಾಗೂ ಮುನೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮತ್ತು ವಿಶೇಷ ಪೂಜೆ, ಮಧ್ಯಾಹ್ನ ಸಹಸ್ರರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.  
ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿಯವರು, ದೇವಸ್ಥಾನದ ಅರ್ಚಕರು, ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು, ಗಣ್ಯರು, ಸುರಗಿತೋಪು, ಕಾಗದನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 
 
 

Mob: 9738801478
: 9482007466

ಕೆಂಪೇಗೌಡ ಜಯಂತಿ ಅಂಗವಾಗಿ ಜೂ.೨೫ರಂದು ನೇತ್ರ ತಪಾಸಣೆ, ನೇತ್ರ ಪೊರೆ ಶಸ್ತ್ರ ಚಿಕಿತ್ಸೆ

    ಭದ್ರಾವತಿ : ತಾಲೂಕು ಒಕ್ಕಲಿಗರ ಸಂಘ, ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ನಾಡಪ್ರಭು ಕೆಂಪೇಗೌಡರ ೫೧೬ನೇ ಜಯಂತ್ಯೋತ್ಸವ ಅಂಗವಾಗಿ ಉಚಿತ ನೇತ್ರ ತಪಾಸಣೆ, ನೇತ್ರ ಪೊರೆ ಶಸ್ತ್ರ ಚಿಕಿತ್ಸೆ, ನೇತ್ರದಾನ ನೊಂದಣಿ ಹಾಗು ಮಸೂರ ಅಳವಡಿಕೆ ಶಿಬಿರ ಜೂ.೨೫ರಂದು ಹಮ್ಮಿಕೊಳ್ಳಲಾಗಿದೆ.
    ಅಪ್ಪರ್ ಹುತ್ತಾ ತಾಲೂಕು ಒಕ್ಕಲಿಗರ ಸಂಘದಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮೊ: ೭೨೫೯೪೫೮೪೧೯ ಅಥವಾ ತಾಲೂಕು ಒಕ್ಕಲಿಗರ ಸಂಘ ಪ್ರಧಾನ ಕಾರ್ಯದರ್ಶಿ ಮೊ: ೯೯೧೬೨೮೦೬೦೭  ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ಶ್ರೀಗಂಧ, ಇತರೆ ಜಾತಿ ಮರಗಳ ಕಡಿತಲೆ : ವಲಯ ಅರಣ್ಯಾಧಿಕಾರಿಗೆ ದೂರು

ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಶ್ರೀಗಂಧ ಮರ ಹಾಗೂ ಇತರೆ ಜಾತಿಯ ಮರಗಳನ್ನು ಕಡಿತಲೆ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು  ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. 
ಭದ್ರಾವತಿ: ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಶ್ರೀಗಂಧ ಮರ ಹಾಗೂ ಇತರೆ ಜಾತಿಯ ಮರಗಳನ್ನು ಕಡಿತಲೆ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು  ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. 
  ಎರಡು ಶ್ರೀಗಂಧ ಮರ ಹಾಗು ಇತರೆ ಜಾತಿಯ ಮರಗಳನ್ನು ಕಡಿತಲೆ ಮಾಡಲಾಗಿದ್ದು, ಈ ಘಟನೆಗೆ ಸಂಬಂಧಿಸಿದ ಸೂಕ್ತ ಸಾಕ್ಷಿಗಳು ಇವೆ. ಈ ಹಿನ್ನಲೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ಎಸ್ಟೇಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕವಾಗಿ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಲಾಗಿದೆ. 
ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ತೀರ್ಥೇಶ್, ಕರವೇ ಮುಖಂಡರಾದ ಮೊಹಮ್ಮದ್ ಸಲ್ಮಾನ್, ಅಮ್ಜದ್, ಮಂಜುನಾಥಗೌಡ ಮತ್ತು ಪ್ರಶಾಂತ್ ಉಪಸ್ಥಿತರಿದ್ದರು.