: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರಿಗೆ ಉಂಟಾಗಿರುವ ಅನ್ಯಾಯ ಸರಿಪಡಿಸದೆ ನಿರ್ಲಕ್ಷ್ಯವಹಿಸಿರುವ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಜೂ.೨೫ರಂದು ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುತ್ತಿದೆ.
ಕಾರ್ಖಾನೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಮತ್ತು ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರಿಗೆ ಆಡಳಿತ ಮಂಡಳಿ ನೀಡಬೇಕಾಗಿರುವ ಹಲವಾರು ಬಾಕಿಗಳನ್ನು ಇಲ್ಲಿಯವರೆಗೂ ವಿತಸಿರುವುದಿಲ್ಲ. ಈ ಕುರಿತು ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಹಲವಾರು ಬಾರಿ ಮನದಟ್ಟು ಮಾಡಿದ ಮೇಲೆ ಸರ್ಕಾರಕ್ಕೆ ಪತ್ರ ಬರೆದಿರುತ್ತಾರೆ. ಆದರೆ ಇದುವರೆಗೂ ನ್ಯಾಯ ಲಭಿಸಿರುವುದಿಲ್ಲ. ಈಗಿನ ವ್ಯವಸ್ಥಾಪಕ ನಿರ್ದೇಶಕರು ಬಂದು ೧ ವರ್ಷಗಳಾಗಿದ್ದು, ನಿವೃತ್ತ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಲಿಖಿತವಾಗಿ ಮನವಿ ಕೊಟ್ಟರೂ ಸಹ ಯಾವುದನ್ನು ಪರಿಗಣಿಸದೆ ಅನ್ಯಾಯ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗುತ್ತಿದೆ.
ಅಲ್ಲದೆ ಕಾರ್ಖಾನೆಯನ್ನು ಪುನರ್ ಆರಂಭಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿ ೨ ವರ್ಷಗಳಾಗಿವೆ. ಆದರೂ ಸಹ ಕಾರ್ಖಾನೆ ಇದುವರೆಗೂ ಆರಂಭಗೊಂಡಿಲ್ಲ. ತಕ್ಷಣ ಕಾರ್ಖಾನೆ ಆರಂಭಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಗುತ್ತಿದೆ. ಮಧ್ಯಾಹ್ನ ೧೨.೪೫ಕ್ಕೆ ಬಸವೇಶ್ವರ ವೃತ್ತದಿಂದ ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮೂಲಕ ಶಾಸಕರ ಗೃಹ ಕಛೇರಿ ತೆರಳಿ ಶಾಸಕರ ಮೂಲಕ ಅಥವಾ ತಹಸೀಲ್ದಾರ್ ಕಛೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ನಿವೃತ್ತ ಕಾರ್ಮಿಕರು, ಕಾರ್ಮಿಕ ಮುಖಂಡರು ಸೇರಿದಂತೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ ಕೋರಿದ್ದಾರೆ.
No comments:
Post a Comment