Tuesday, October 17, 2023

ಅ.೧೮ರಂದು ಕ್ಷೇತ್ರದ ಅಭಿವೃದ್ಧಿಗಾಗಿ ದುರ್ಗ ಸಪ್ತಶತಿ ಪಾರಾಯಣ


ಶ್ರೀ ವಿನಯ್ ಗುರೂಜಿ
    ಭದ್ರಾವತಿ: ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ನೇತೃತ್ವದಲ್ಲಿ ಅ.೧೮ರಂದು ಕ್ಷೇತ್ರದ ಅಭಿವೃದ್ಧಿಗಾಗಿ ದುರ್ಗ ಸಪ್ತಶತಿ ಪಾರಾಯಣ ಹಮ್ಮಿಕೊಳ್ಳಲಾಗಿದೆ.
    ನವರಾತ್ರಿ ಮಹೋತ್ಸವದ ಅಂಗವಾಗಿ ವಿನಯ್ ಗುರೂಜಿಯವರ ಭಕ್ತ ವೃಂದದಿಂದ ಹಮ್ಮಿಕೊಳ್ಳಲಾಗಿರುವ ೨ನೇ ವರ್ಷದ ಕಾರ್ಯಕ್ರಮ ಇದಾಗಿದ್ದು, ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಛತ್ರಪತಿ ಶಿವಾಜಿ ಸೇವಾ ಸಂಘಕ್ಕೆ ನೂತನ ೧೫ ನಿರ್ದೇಶಕರು ಆಯ್ಕೆ


ಭದ್ರಾವತಿ : ನಗರದ ಚನ್ನಗಿರಿ ರಸ್ತೆ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘಕ್ಕೆ ನೂತನವಾಗಿ ೧೫ ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಒಟ್ಟು ೧೫ ನಿರ್ದೇಶಕ ಸ್ಥಾನಕ್ಕೆ ಅ.೧೫ರಂದು ನಡೆದ ಚುನಾವಣೆಯಲ್ಲಿ ಒಟ್ಟು ೩೦ ಮಂದಿ ಸ್ಪರ್ಧಿಸಿದ್ದು, ಈ ಪೈಕಿ ಕೃಷ್ಣೋಜಿರಾವ್, ಎಂ.ಆರ್ ರಾಜಾರಾವ್, ಜಗನ್ನಾಥ್‌ರಾವ್ ಗಾಯ್ಕ್‌ವಾಡ್, ವಿ. ರಾಮನಾಥ್ ಬರ್ಗೆ, ಬಿ. ನಾಗಪ್ಪ, ಎಚ್.ಆರ್ ಲೋಕೇಶ್ವರ್‌ರಾವ್ ದೊಂಬಾಳೆ, ಆರ್. ನಾಗರಾಜ್‌ರಾವ್, ಬಿ.ಎಲ್ ಶಂಕರ್‌ರಾವ್ ಜಾದವ್, ಮಂಜುನಾಥ್‌ರಾವ್ ಪವಾರ್, ಎಸ್. ಶಾಂತಕುಮಾರ್ ಗಾಯ್ಕ್‌ವಾಡ್, ಮಹೇಶ್‌ರಾವ್ ಹಜಾರೆ, ಇ. ಸುನಿಲ್‌ಗಾರ್ಗೆ, ಎಚ್. ರಂಗನಾಥ್‌ರಾವ್, ಎಸ್. ಸುರೇಶ್‌ರಾವ್ ಮತ್ತು ಎಚ್.ಎಲ್ ರಂಗನಾಥ್‌ರಾವ್ ಚವ್ಹಾಣ್ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ ಭ್ರಷ್ಟಾಚಾರ : ಆರೋಪ

ಬಿಜೆಪಿ ಮಂಡಲ ಪ್ರತಿಭಟನೆ ನಡೆಸಿ ಧಿಕ್ಕಾರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹೆಚ್ಚಾಗಿದ್ದು, ಸಾರ್ವಜನಿಕರ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಭದ್ರಾವತಿಯಲ್ಲಿ ಬಿಜೆಪಿ ಮಂಡಲ ವತಿಯಿಂದ ನಗರದ ಮಾಧವಚಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹೆಚ್ಚಾಗಿದ್ದು, ಸಾರ್ವಜನಿಕರ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಬಿಜೆಪಿ ಮಂಡಲ ವತಿಯಿಂದ ನಗರದ ಮಾಧವಚಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಎಟಿಎಂ ಆಗಿದ್ದು, ಎಲ್ಲೆಡೆ ಭ್ರಷ್ಟಾಚಾರ ಹೆಚ್ಚಾಗಿದೆ. ಪಂಚ ರಾಜ್ಯಗಳ ಚುನಾವಣೆಗಾಗಿ ಸಾರ್ವಜನಿಕರ ಹಣ ಲೂಟಿ ಮಾಡಲಾಗುತ್ತಿದೆ. ಮೈಸೂರು ದಸರಾ ಕಲಾವಿದರ ಗೌರವಧನ ನೀಡಲು ಲಂಚ ಪಡೆಯುತ್ತಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸುವ ಜೊತೆಗೆ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಹಾಕಲಾಯಿತು.
    ಪಕ್ಷದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವ ವಹಿಸಿದ್ದರು. ಪ್ರಮುಖರಾದ ವಿ. ಕದಿರೇಶ್, ಎನ್. ವಿಶ್ವನಾಥರಾವ್, ಎಂ. ಮಂಜುನಾಥ್, ಸುರೇಶಪ್ಪ, ಚನ್ನೇಶ್, ಬಿ.ಎಸ್ ಶ್ರೀನಾಥ್, ಚಂದ್ರು, ಪ್ರಸನ್ನ ಬಾರಂದೂರು, ಛಲವಾದಿ ಕೃಷ್ಣ, ಗೋಕುಲ್ ಕೃಷ್ಣ, ಧನುಷ್ ಬೋಸ್ಲೆ, ರಾಜಶೇಖರ್ ಉಪ್ಪಾರ, ಹೇಮಾವತಿ ವಿಶ್ವನಾಥ್, ಅನ್ನಪೂರ್ಣ ಸಾವಂತ್, ಶೋಭಪಾಟೀಲ್, ಮಂಜುಳ, ಲತಾ ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದಸರಾ ಕ್ರೀಡಾಕೂಟ : ಬ್ಯಾಟ್ ಹಿಡಿದ ಅಧ್ಯಕ್ಷೆ, ಬೌಲಿಂಗ್ ಮಾಡಿದ ಪೌರಾಯುಕ್ತ

ಭದ್ರಾವತಿ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕ್ರೀಡಾಕೂಟದ ಆರಂಭದಲ್ಲಿ ನಗರಸಭೆ ಅಧ್ಯಕ್ಷೆ ಬ್ಯಾಟ್ ಹಿಡಿದು ಆಡುವ, ಪೌರಾಯುಕ್ತ ಬೌಲಿಂಗ್ ಮಾಡುವ ಮೂಲಕ ಸಂಭ್ರಮಿಸಿ ಕ್ರೀಡಾಪಟುಗಳಿಗೆ ಉತ್ಸಾಹ ತುಂಬಿದರು.
    ಭದ್ರಾವತಿ: ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕ್ರೀಡಾಕೂಟದ ಆರಂಭದಲ್ಲಿ ನಗರಸಭೆ ಅಧ್ಯಕ್ಷೆ ಬ್ಯಾಟ್ ಹಿಡಿದು ಆಡುವ, ಪೌರಾಯುಕ್ತ ಬೌಲಿಂಗ್ ಮಾಡುವ ಮೂಲಕ ಸಂಭ್ರಮಿಸಿ ಕ್ರೀಡಾಪಟುಗಳಿಗೆ ಉತ್ಸಾಹ ತುಂಬಿದರು.
    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ ಸೇರಿದಂತೆ ಮಹಿಳಾ ಸದಸ್ಯರು ಒಂದೆಡೆ ಬ್ಯಾಟ್ ಹಿಡಿದು ಆಡುವ ಮೂಲಕ ಹಾಗು ಪೌರಾಯುಕ್ತ ಎಚ್.ಎಂ ಮನುಕುಮಾರ್, ಸದಸ್ಯರಾದ ಜಾರ್ಜ್, ಬಷೀರ್ ಅಹಮದ್, ಆರ್. ಮೋಹನ್‌ಕುಮಾರ್ ಸೇರಿದಂತೆ ಇನ್ನಿತರ ಸದಸ್ಯರು ಬೌಲಿಂಗ್ ಮಾಡುವ ಮೂಲಕ ಸಂಭ್ರಮಿಸಿದರು.
    ದಸರಾ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆರಂಭಿಕ ಕ್ರೀಡೆಯಾಗಿದ್ದು,  ಪುರುಷರಿಗೆ ಕ್ರಿಕೆಟ್, ಕಬ್ಬಡಿ, ಕುಸ್ತಿ, ಹಗ್ಗ-ಜಗ್ಗಾಟ ಮತ್ತು ಮಹಿಳೆಯರಿಗೆ ಹಗ್ಗ-ಜಗ್ಗಾಟ, ಗುಂಡು ಎಸೆತ, ಟೈರ್ & ಸ್ಟಿಕ್ ಮತ್ತು ಲೆಮೆನ್ ಇನ್ ಸ್ಪೂನ್ ಸ್ಪರ್ಧೆಗಳು ನಡೆಯಲಿವೆ.

ದಸರಾ ಕ್ರೀಡಾಕೂಟ ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ

ಕನಕಮಂಟಪ ಮೈದಾನದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶೃತಿ ಸಿ. ವಸಂತಕುಮಾರ್ ಕೆ.ಜಿ

ಭದ್ರಾವತಿ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿರುವ ಕ್ರೀಡಾಕೂಟಕ್ಕೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ಮಂಗಳವಾರ ಚಾಲನೆ ನೀಡಿದರು.
    ಭದ್ರಾವತಿ: ಕ್ರೀಡಾಪಟುಗಳು ದಸರಾ ಕ್ರೀಡಾಕೂಟ ಸದ್ಭಳಕೆಮಾಡಿಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಬೇಕೆಂದು ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ಹೇಳಿದರು.
  ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿರುವ ಕ್ರೀಡಾಕೂಟಕ್ಕೆ ಅವರು ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
    ವಿವಿಧ ಕ್ರೀಡೆಗಳಿಗೆ ದಸರಾ ಕ್ರೀಡಾಕೂಟ ಉತ್ತಮ ವೇದಿಕೆಯಾಗಿದೆ. ಕೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದರು.  
    ಪೌರಾಯುಕ್ತ ಎಚ್.ಎಂ ಮನುಕುಮಾರ್ ಮಾತನಾಡಿ, ಕ್ರೀಡಾಪಟುಗಳಿಗೆ ಶಿಸ್ತು ಬಹಳ ಮುಖ್ಯ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಕೇವಲ ದೇಹ ಸದೃಢವಾಗುವುದಿಲ್ಲ. ಮಾನಸಿಕವಾಗಿಯೂ ಗಟ್ಟಿಗೊಳ್ಳಲು ಸಾಧ್ಯ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸುದೀಪ್ ಕುಮಾರ್ ಮಾತನಾಡಿ, ಕ್ರೀಡಾಪಟುಗಳಲ್ಲಿ ಕ್ರೀಡಾ ಮನೋಭಾವ ಬಹಳ ಮುಖ್ಯವಾಗಿದ್ದು, ಕ್ರೀಡೆಯಲ್ಲಿ ಸೋಲು ಗೆಲುವಿಗಿಂತಲೂ ಪಾಲ್ಗೊಳ್ಳುವಿಕೆ ಮುಖ್ಯ ಎಂದರು.
    ಇದಕ್ಕೂ ಮೊದಲು ಏಕಲವ್ಯ ಪ್ರಶಸ್ತಿ ಪುರಸ್ಕೃತ ಖೋ ಖೋ ಕ್ರೀಡಾಪಟು ಮುನೀರ್ ಬಾಷಾ ನಗರಸಭೆ ಮುಂಭಾಗದಿಂದ ಕನಕಮಂಟಪ ಮೈದಾನದವರೆಗೂ ಕ್ರೀಡಾಜ್ಯೋತಿಯೊಂದಿಗೆ ಆಗಮಿಸಿ ವೇದಿಕೆಯಲ್ಲಿ ಹಸ್ತಾಂತರಿಸಿದರು. ಕ್ರೀಡಾ ಪ್ರತಿಜ್ಞೆ ಸ್ವೀಕರಿಸಲಾಯಿತು.


ಭದ್ರಾವತಿ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿರುವ ಕ್ರೀಡಾಕೂಟಕ್ಕೆ ಏಕಲವ್ಯ ಪ್ರಶಸ್ತಿ ಪುರಸ್ಕೃತ ಖೋ ಖೋ ಕ್ರೀಡಾಪಟು ಮುನೀರ್ ಬಾಷಾ ನಗರಸಭೆ ಮುಂಭಾಗದಿಂದ ಕನಕಮಂಟಪ ಮೈದಾನದವರೆಗೂ ಕ್ರೀಡಾಜ್ಯೋತಿಯೊಂದಿಗೆ ತೆರಳಿದರು.
    ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ ಹಾಗು ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರಾದ ಬಸವರಾಜ್, ಜಾರ್ಜ್, ಆರ್. ಮೋಹನ್ ಕುಮಾರ್, ಬಷೀರ್ ಅಹಮದ್, ಅನುಸುಧಾ ಮೋಹನ್ ಪಳನಿ, ಲತಾ ಚಂದ್ರಶೇಖರ್, ಪ್ರೇಮ ಬದರಿನಾರಾಯಣ, ಶಶಿಕಲಾ ನಾರಾಯಣಪ್ಪ, ಗೀತಾ ರಾಜ್‌ಕುಮಾರ್, ಅನುಪಮ ಚನ್ನೇಶ್, ಕಾಂತರಾಜ್, ಕೋಟೇಶ್ವರರಾವ್, ಉದಯ್‌ಕುಮಾರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭು, ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಲಿಂಗೇಗೌಡ, ಚರಣ್ ಸಿಂಗ್, ಇಮ್ರಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಇಸ್ಮಾಯಿಲ್ ಖಾನ್ ನಿಧನ

ಇಸ್ಮಾಯಿಲ್ ಖಾನ್
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ತಾಲೂಕು ಗ್ರಾಮಾಂತರ ಅಧ್ಯಕ್ಷ, ಬಾಬಳ್ಳಿ ನಿವಾಸಿ ಇಸ್ಮಾಯಿಲ್ ಖಾನ್(೭೩) ನಿಧನ ಹೊಂದಿದರು.
    ಪುತ್ರಿ ಹಾಗು ಮೂವರು ಪುತ್ರರು ಇದ್ದರು. ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ, ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷರಾಗಿ, ಮಂಡಲ ಪಂಚಾಯತ್ ಹಾಗು ಗ್ರಾಮ ಪಂಚಾಯತ್ ಸದಸ್ಯರಾಗಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಹಾಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಡಿಸಿಸಿ) ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
    ಇವರ ನಿಧನಕ್ಕೆ ಇವರ ಸಹೋದರ, ಉಪನ್ಯಾಸಕ ಡಾ.ಬಿ.ಎಂ ನಾಸಿರ್‌ಖಾನ್, ಶಾಸಕ ಬಿ.ಕೆ ಸಂಗಮೇಶ್ವರ್ ಹಾಗೂ ಬ್ಲಾಕ್ ಕಾಂಗ್ರೆಸ್ ನಗರ ಹಾಗು ಗ್ರಾಮಾಂತರ ಘಟಕಗಳ ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ,  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್.‌ ಕೃಷ್ಣಪ್ಪ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.