Sunday, September 11, 2022

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಒಮ್ಮತ ವ್ಯಕ್ತಪಡಿಸಿ : ಮನವಿ

ಕರ್ನಾಟಕ ಕಾನೂನು ಆಯೋಗ ಸಿದ್ಧಪಡಿಸಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಒಮ್ಮತ ವ್ಯಕ್ತಪಡಿಸುವಂತೆ ಆಗ್ರಹಿಸಿ ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ, ಸೆ. ೧೧: ಕರ್ನಾಟಕ ಕಾನೂನು ಆಯೋಗ ಸಿದ್ಧಪಡಿಸಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಒಮ್ಮತ ವ್ಯಕ್ತಪಡಿಸುವಂತೆ ಆಗ್ರಹಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.  
    ಕನ್ನಡ ಭಾಷೆ, ನಾಡು-ನುಡಿ ಬಗ್ಗೆ ಹೆಚ್ಚಿನ ಅಭಿಮಾನ ಹೊಂದುವ ಜೊತೆಗೆ ಪರಿಷತ್ ಕಾರ್ಯ ಚಟುವಟಿಕೆಗಳಿಗೆ ಹೆಚ್ಚಿನ ಸಹಕಾರ ನೀಡುತ್ತಿರುವ ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ಮಂಡನೆಯಾಗಲಿರುವ ವಿಧೇಯಕ ಅಂಗೀಕಾರದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಕೋರಲಾಯಿತು.
ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಚ್. ತಿಮ್ಮಪ್ಪ, ಕೋಶಾಧ್ಯಕ್ಷ ಕೆ.ಟಿ ಪ್ರಸನ್ನ, ಸಂಘಟನಾ ಕಾರ್ಯದರ್ಶಿ ನಾಗೋಜಿರಾವ್ ಹಾಗೂ ಸದಸ್ಯ ಪ್ರಕಾಶ್ ಉಪಸ್ಥಿತರಿದ್ದರು.

ಬಂಜಾರರ ಶ್ರೀಮಂತ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಅಭಿಯಾನ

ಭದ್ರಾವತಿ ತಾಲೂಕಿನ ಗೊಂದಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ದೇವರುಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣವನ್ನು ಬಂಜಾರರ ಸಂಪ್ರದಾಯದಂತೆ ನೆರವೇರಿಸಲಾಯಿತು.
    ಭದ್ರಾವತಿ, ಸೆ. ೧೧:  ಬುಡಕಟ್ಟು ಸಮುದಾಯವಾಗಿರುವ ಬಂಜಾರರ ಶ್ರೀಮಂತ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಗೋರ್ ಸಿಕ್ವಾಡಿ ದೇಶಾದ್ಯಂತ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಗೋರ್ ಸಿಕ್ವಾಡಿಯ ರಾಜ್ಯ ಸಂಯೋಜಕ ಭೋಜರಾಜ್ ನಾಯ್ಕ್ ತಿಳಿಸಿದರು.
    ತಾಲೂಕಿನ ಗೊಂದಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ದೇವರುಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣವನ್ನು ಬಂಜಾರರ ಸಂಪ್ರದಾಯದಂತೆ ನೆರವೇರಿಸಿ, ನಂತರ ನಡೆದ ಸಂಸ್ಕೃತಿ ಜಾಗೃತ ಸಮಾವೇಶದಲ್ಲಿ ಮಾತನಾಡಿದರು.
    ಬಂಜಾರರ ಭಾಷೆ, ಆಚಾರ-ವಿಚಾರ, ಸಂಸ್ಕೃತಿ, ಸಂಸ್ಕಾರಗಳು ಇತರೆ ಸಮುದಾಯದವರಿಗಿಂತ ಭಿನ್ನವಾಗಿವೆ. ಇವರಲ್ಲಿರುವ ಶ್ರೀಮಂತ ಸಂಸ್ಕೃತಿ ವೈಜ್ಞಾನಿಕ ಮನೋಭಾವದಿಂದ ಕೂಡಿರುವುದರಿಂದ ಈ ಸಂಸ್ಕೃತಿ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಜಾಗೃತ ಅಭಿಯಾನಕ್ಕೆ  ಎಲ್ಲರು ಕೈಜೋಡಿಸಬೇಕೆಂದು ಕರೆ ನೀಡಿದರು.
  ಗೋರ್ ಸಿಕ್ವಾಡಿಯ ಗಾಯಕ ದೀಲ್ಯ ನಾಯ್ಕ್ ಮಾತನಾಡಿ, ಬಂಜಾರರ ಸಂಪ್ರದಾಯದ ವಿಧಿ ವಿಧಾನಗಳಂತೆ ಗೊಂದಿ ಗ್ರಾಮದಲ್ಲಿ ನಡೆಸಲಾಗುತ್ತಿರುವ ಇದು ಎರಡನೇ ಕಾರ್ಯಕ್ರಮವಾಗಿದೆ. ಕಸ್ನನಾಯ್ಕ್ ರವರ ಕುಟುಂಬದವರ ಗೃಹಪ್ರವೇಶ ಹಾಗೂ ಇವರದೇ ಕೆಳುತ್ ಮನೆತನದ ದೇವರುಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಬಂಜಾರ ಸಂಪ್ರದಾಯದಂತೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
  ದೇವರುಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣವನ್ನು ಶಿಕಾರಿಪುರ ತಾಲೂಕು ಸಾಲೂರಿನ ಶ್ರೀ ಸೈನಾ ಭಗತ್ ರವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ  ಗೋರ್ ಸಿಕ್ವಾಡಿಯ ಪ್ರಮುಖರಾದ ರವಿ ರಾಥೋಡ್ , ಡಾ. ನಾಗೇಂದ್ರನಾಯ್ಕ್ , ಗಣೇಶ್‌ನಾಯ್ಕ್ , ಪ್ರೇಮ್ ಕುಮಾರ್ , ಕೋಕಿಲಾ ಬಾಯಿ , ಶಾರದ ಬಾಯಿ ಹಾಗೂ ಕೆಳುತ್ ವಂಶಸ್ಥರು ಉಪಸ್ಥಿತರಿದ್ದರು .  
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕಿ ಕೋಕಿಲಾ ಬಾಯಿ ಅವರನ್ನು ಸನ್ಮಾನಿಸಲಾಯಿತು.

ವಿಐಎಸ್‌ಎಲ್ ಸಹಕಾರ ಬ್ಯಾಂಕ್ ವತಿಯಿಂದ ಕ್ರೀಡಾಪಟು ಬಿ.ಎಂ ವೇದಾಂತ್‌ಗೆ ಸನ್ಮಾನ

ನೇಪಾಳದ ಪೊಖಾರದಲ್ಲಿ ಜರುಗಿದ ೨ನೇ ಇಂಡೋ ನೇಪಾಳ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿರುವ ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್ ಶಾಲೆ) ವಿದ್ಯಾರ್ಥಿ ಬಿ.ಎಂ ವೇದಾಂತ್ ಅವರನ್ನು ಭಾನುವಾರ ವಿಐಎಸ್‌ಎಲ್ ಉದ್ಯೋಗಿಗಳ ಸಹಕಾರ ಬ್ಯಾಂಕ್ ನಿಯಮಿತದಿಂದ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಸೆ. ೧೧: ನೇಪಾಳದ ಪೊಖಾರದಲ್ಲಿ ಜರುಗಿದ ೨ನೇ ಇಂಡೋ ನೇಪಾಳ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿರುವ ತಾಲೂಕಿನ ಕಾರೇಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್ ಶಾಲೆ) ವಿದ್ಯಾರ್ಥಿ ಬಿ.ಎಂ ವೇದಾಂತ್ ಅವರನ್ನು ಭಾನುವಾರ ವಿಐಎಸ್‌ಎಲ್ ಉದ್ಯೋಗಿಗಳ ಸಹಕಾರ ಬ್ಯಾಂಕ್ ನಿಯಮಿತದಿಂದ ಸನ್ಮಾನಿಸಿ ಗೌರವಿಸಲಾಯಿತು.
    ನ್ಯೂಟೌನ್ ಶಾರದ ಮಂದಿರದಲ್ಲಿ ನಡೆದ ಬ್ಯಾಂಕಿನ ೯೮ನೇ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಉದ್ಯೋಗಿ ಮಂಜುನಾಥ್ ಅವರ ಪುತ್ರರಾಗಿರುವ ಬಿ.ಎಂ ವೇದಾಂತ್ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಉಪಾಧ್ಯಕ್ಷೆ ಕೆ. ಚಂದ್ರಾವತಿ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಸ್ ರಾಘವೇಂದ್ರ, ಆರ್. ಪ್ರೇಮ್‌ಕುಮಾರ್, ಬಿ. ಸಂತೋಷ್‌ಕುಮಾರ್, ಪಿ. ರಾಜು, ಕೆ.ಎಸ್ ರಾಘವೇಂದ್ರ, ಎಚ್.ಆರ್ ದಿವಾಕರ್, ವೈ.ಎಸ್ ನಾಗೇಶ್, ಸಿ. ವಿನಯ್‌ಕುಮಾರ್ ಮತ್ತು ಕೆ.ಎಚ್ ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಲ್ಯಾಣಮ್ಮ ನಿಧನ

ಕಲ್ಯಾಣಮ್ಮ
    ಭದ್ರಾವತಿ, ಸೆ. ೧೧: ತಾಲೂಕಿನ ಭಂಡಾರಹಳ್ಳಿ ನಿವಾಸಿ ಕಲ್ಯಾಣಮ್ಮ(೯೨) ಭಾನುವಾರ ಬೆಳಿಗ್ಗೆ ನಿಧನ ಹೊಂದಿದರು.
    ೩ ಪುತ್ರರು, ೪ ಪುತ್ರಿಯರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಸಂಜೆ ಹುತ್ತಾಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಹಕಾರಸಂಘಗಳಲ್ಲಿ ನಂಬಿಕೆ, ವಿಶ್ವಾಸ ಹಾಗು ಪ್ರಾಮಾಣಿಕತೆ ಬಹಳ ಮುಖ್ಯ : ಕಾಗಿನೆಲೆ ಶ್ರೀ

ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಶ್ರೀ ಕನಕ ಪತ್ತಿನ ಸಹಕರ ಸಂಘ ನಿಯಮಿತದ ದಶಮಾನೋತ್ಸವ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರಿಗೆ ಗುರು ವಂದನೆ ಸಲ್ಲಿಸಲಾಯಿತು.    
    ಭದ್ರಾವತಿ, ಸೆ. ೧೧: ಸಹಕಾರ ಸಂಘಗಳಲ್ಲಿ ನಂಬಿಕೆ, ವಿಶ್ವಾಸ ಹಾಗು ಪ್ರಾಮಾಣಿಕತೆ ಬಹಳ ಮುಖ್ಯ ಎಂದು ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
    ಶ್ರೀಗಳು ಭಾನುವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ಕನಕ ಪತ್ತಿನ ಸಹಕರ ಸಂಘ ನಿಯಮಿತದ ದಶಮಾನೋತ್ಸವ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ಸಹಕಾರ ಸಂಘ ಮುನ್ನಡೆಸುವವರಲ್ಲಿ ನಂಬಿಕೆ, ವಿಶ್ವಾಸ ಹಾಗು ಪ್ರಾಮಾಣಿಕತೆ ಎಂಬುದು ಬಹಳ ಮುಖ್ಯವಾಗಿದೆ. ಆಗ ಮಾತ್ರ ಸಹಕಾರ ಸಂಘ ನಿರೀಕ್ಷೆಗೂ ಮೀರಿದ ಬೆಳವಣಿಗೆ ಹೊಂದುತ್ತದೆ. ಕನಕದಾಸರು ತಮ್ಮ ವಚನಗಳಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಎಲ್ಲಿ ವಿಶ್ವಾಸ, ನಂಬಿಕೆ ಕಳೆದುಕೊಳ್ಳುತ್ತೇವೆಯೋ ಅಲ್ಲಿ ಬೆಳವಣಿಗೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
    ಸಮಾಜದಲ್ಲಿ ಸಹಕಾರ ಸಂಘಗಳು ಅಗತ್ಯವಾಗಿದ್ದು, ಹಿಂದುಳಿದ ಸಮಾಜಗಳು ಸದೃಢಗೊಳ್ಳಲು ಹೆಚ್ಚು ಸಹಕಾರಿಯಾಗಿವೆ. ಸಹಕಾರ ಸಂಘಗಳ ಬೆಳವಣಿಗೆಗೆ ಎಲ್ಲರೂ ಸಹ ಕೈಜೋಡಿಸಬೇಕು. ನಮ್ಮ ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣಹಾಕಬೇಕು. ಸಮುದಾಯಗಳಲ್ಲಿನ ಕೆಲವು ಮೂಡನಂಬಿಕೆ, ಮೌಢ್ಯ ಆಚರಣೆಗಳಿಂದ ದೂರ ಉಳಿಯಬೇಕು. ಆರ್ಥಿಕ ಶಿಸ್ತಿನ ವಿವೇಚನೆ ಬೆಳೆಸಿಕೊಳ್ಳಬೇಕು. ಅನಗತ್ಯವಾಗಿ ವ್ಯಯ ಮಾಡುವ ಹಣವನ್ನು ಸಹಕಾರ ಸಂಘಗಳಲ್ಲಿ ತೊಡಗಿಸಿದಾಗ ಭವಿಷ್ಯದಲ್ಲಿ ಅದು ನಿಮ್ಮ ನೆರವಿಗೆ ಬರುತ್ತದೆ. ಅಲ್ಲದೆ ಸಮಾಜದಲ್ಲಿ ಮುಂದುವರೆದ ಸಮುದಾಯಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ನಿರ್ದೇಶಕ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸತೋಷ್, ಕಳೆದ ೧೦ ವರ್ಷಗಳ ಹಿಂದೆ ಆರಂಭಗೊಂಡ ಸಹಕಾರ ಸಂಘ ಪ್ರಸ್ತುತ ೧೦ ಕೋ.ರು. ಗಳಿಗೂ ಹೆಚ್ಚಿನ ವಹಿವಾಟು ಹೊಂದಿದೆ. ಅಲ್ಲದೆ ಸಮಾಜದಲ್ಲಿ ಇತರೆ ಸಂಘಗಳಿಗೆ ಮಾದರಿಯಾಗಿ ಗುರುತಿಸಿಕೊಂಡಿದ್ದು, ಇದಕ್ಕೆ ಸಂಘದ ಹಿರಿಯರ ಮಾರ್ಗದರ್ಶನ, ಮುನ್ನಡೆಸುತ್ತಿರುವವರಲ್ಲಿನ ಪ್ರಾಮಾಣಿಕತೆ, ಬದ್ಧತೆ  ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆ ಹೊಂದುವ ವಿಶ್ವಾಸವಿದೆ ಎಂದರು.
    ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್ ಶೇಖರಪ್ಪ, ಸಂಘದ ಉಪಾಧ್ಯಕ್ಷ ಡಾ. ಎಚ್.ಆರ್ ನರೇಂದ್ರ, ನಗರಸಭಾ ಸದಸ್ಯರಾದ ಕಾಂತರಾಜ್, ಅನಿತಾ ಮಲ್ಲೇಶ್, ಆರ್. ಶ್ರೇಯಸ್(ಚಿಟ್ಟೆ), ಶಶಿಕಲಾ ನಾರಾಯಣಪ್ಪ, ಮಂಜುಳ ಸುಬ್ಬಣ್ಣ, ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಸ್ ದುಗ್ಗೇಶ್, ಸಂಘದ ನಿರ್ದೇಶಕರಾದ ಬಿ.ಎಚ್ ವಸಂತ, ಬಿ.ಎಸ್ ಗೋಪಾಲ್, ವೈ. ನಟರಾಜ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

"ನಾನು ಯಾವುದೇ ಆಹಾರ ಪದ್ದತಿಗೆ ವಿರೋಧವಿಲ್ಲ. ಆಹಾರ ಪದ್ದತಿ ಅವರವರ ಆಯ್ಕೆ. ಆದರೆ ಆಹಾರ ಸೇವನೆಯಲ್ಲಿನ ಇತಿಮಿತಿ ಬಗ್ಗೆ ಎಲ್ಲರೂ ಅರಿವು ಹೊಂದಿರಬೇಕು.  ಸಂಪ್ರದಾಯದ ಆಚರಣೆ ನೆಪದಲ್ಲಿ ಅನಗತ್ಯವಾಗಿ ದುಂದು ವೆಚ್ಚ ಮಾಡಬಾರದು."
   - ಶ್ರೀ ನಿರಂಜನಾನಂದಪುರಿ ಸ್ವಾಮೀಜಿ

    ಸಂಘದ ಅಧ್ಯಕ್ಷ ಡಿ. ಪ್ರಭಾಕರ ಬೀರಯ್ಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಎಂ. ರಾಜು ಸ್ವಾಗತಿಸಿದರು. ಪ್ರಶಾಂತ್ ಸಣ್ಣಕ್ಕಿ ಕಾರ್ಯಕ್ರಮ ನಿರೂಪಿಸಿದರು.