Saturday, December 16, 2023

ಗೆಲುವು-ಸೋಲಿನ ಚಿಂತೆ ಬಿಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳಿ : ಮಹೇಶ್ವರಯ್ಯ

ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಶನಿವಾರ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ ಉದ್ಘಾಟಿಸಿದರು.
    ಭದ್ರಾವತಿ: ಕ್ರೀಡಾಕೂಟಗಳಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ ಮುಖ್ಯ. ಪಾಲ್ಗೊಳ್ಳುವ ಮೊದಲೆ ಗೆಲುವು-ಸೋಲಿನ ಬಗ್ಗೆ ಚಿಂತಿಸಬಾರದು. ಪಾಲ್ಗೊಳ್ಳುವಿಕೆಯಿಂದ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಮಹೇಶ್ವರಯ್ಯ ಹೇಳಿದರು.
    ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಶನಿವಾರ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ, ಅಂತರಾಷ್ಟ್ರೀಯ ಪವರ್ ಲಿಫ್ಟರ್ ಪ್ರಕಾಶ್ ಕಾರಂತ್ ಮಾತನಾಡಿ, ೮೦ರ ದಶಕದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಕ್ರೀಡಾಪಟುಗಳಿಗೆ ನೀಡಿದ ಪ್ರೋತ್ಸಾಹ ಇಂದು ದಂತಕಥೆ. ಅನೇಕ ಕ್ರೀಡಾಪಟುಗಳ ಬೆಳವಣಿಗೆಯಲ್ಲಿ ವಿಐಎಸ್‌ಎಲ್ ಕೊಡುಗೆ ಮಹತ್ವದ್ದಾಗಿದೆ ಎಂದು ಕಾರ್ಖಾನೆ ಸಹಕಾರ ಸ್ಮರಿಸಿದರು.
    ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್. ಹೊಸಳ್ಳೇರ ಮಾತನಾಡಿ,  ಕಾಲೇಜು ಹಲವಾರು ಪ್ರತಿಭಾನ್ವಿತ ಪವರ್ ಲಿಪ್ಟರ್ ಪ್ರತಿಭೆಗಳನ್ನು ಒಳಗೊಂಡಿದೆ. ಈ ಕಾಲೇಜಿಗೆ ಲಭಿಸಿರುವ ಬಹುಮಾನಗಳ ಪಟ್ಟಿಯನ್ನು ಗಮನಿಸಿದರೆ ಈ ಕಾಲೇಜಿನ ಕ್ರೀಡಾ ಸಾಧನೆ ತಿಳಿಯುತ್ತದೆ ಎಂದರು.
    ವೇದಿಕೆಯಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ, ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ವೈ. ನಟರಾಜ್, ಹಿರಿಯ ಕ್ರೀಡಾಪಟುಗಳಾ ವೀರಭದ್ರಯ್ಯ, ಮಸ್ತಾನ್, ವರದರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಚ್.ಎಸ್ ಶಿವರುದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ವಿಶಿಷ್ಟ ಚೇತನರಿಗೆ ಪೋಷಕರ ಸಹಕಾರ ಅತಿ ಮುಖ್ಯ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕೇಂದ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ೨೦೦೩ ರಿಂದ ೨೦೦೬ನೇ ಸಾಲಿನ ಹಳೇಯ ವಿದ್ಯಾರ್ಥಿಗಳ ಸ್ನೇಹ ಬಳಗದ ಸಹಯೋಗದೊಂದಿಗೆ ವಿಶಿಷ್ಟಚೇತನರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ: ವಿಶಿಷ್ಟ ಚೇತನರಿಗೆ ಪೋಷಕರ ಸಹಕಾರ ಅತಿ ಅವಶ್ಯಕವಾಗಿದ್ದು, ಇದರಿಂದ ವಿಶಿಷ್ಟ ಚೇತನರ ಆತ್ಮಬಲ ಮತ್ತಷ್ಟು ಹೆಚ್ಚುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶನಿವಾರ ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕೇಂದ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ೨೦೦೩ ರಿಂದ ೨೦೦೬ನೇ ಸಾಲಿನ ಹಳೇಯ ವಿದ್ಯಾರ್ಥಿಗಳ ಸ್ನೇಹ ಬಳಗದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶಿಷ್ಟಚೇತನರಿಗೆ ಅಗತ್ಯ ಸಾಮಗ್ರಿ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಮಾಜದ ಎಲ್ಲರೂ ವಿಶಿಷ್ಟ ಚೇತನರ ನೆರವಿಗೆ ಮುಂದಾಗಬೇಕು. ಅವರಿಗೆ ಇನ್ನೂ ಹೆಚ್ಚಿನ ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕು ಎಂದರು.    
    ಕ್ಷೇತ್ರ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಮಾತನಾಡಿ, ವಿಶಿಷ್ಟಚೇತನರ ಬಗ್ಗೆ ಅನುಕಂಪ ಪಡುವುದರಿಂದ ಉಪಯೋಗವಾಗುವುದಿಲ್ಲ. ಬದಲಾಗಿ ಅವರಿಗೆ ಅಗತ್ಯವಿರುವ ಸಹಾಯ, ಸಹಕಾರ ನೀಡುವುದು ಮುಖ್ಯ. ಎಲ್ಲರು ತಮ್ಮ ಸಂಪಾದನೆಯಲ್ಲಿ ಅಲ್ಪ ಮೊತ್ತದ ಹಣ ಈ ರೀತಿಯ ಸೇವಾ ಕಾರ್ಯಗಳಿಗೆ ಬಳಸಿದರೆ ಮಾನವತ್ವ ವೃದ್ಧಿಸುತ್ತದೆ ಎಂದರು.
    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್ ಮಾತನಾಡಿ, ಹಣವಿದ್ದರಿಗೆ ಮತ್ತಷ್ಟು ಹಣಮಾಡುವ ಆಸೆ ಇರುತ್ತದೆ. ಆದರೆ ಉತ್ತಮ ಮಾನವೀಯ ಮೌಲ್ಯ ಹೊಂದಿದವರಿಂದ ಮಾತ್ರ ಸೇವಾ ಕಾರ್ಯಗಳನ್ನು ಮಾಡಲು ಸಾಧ್ಯ ಎಂದರು.
    ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧಕ್ಷೆ ಎಸ್. ಉಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ್ರು, ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆ ಶಿಕ್ಷಣ ಸಂಯೋಜಕ ಪರಮೇಶ್ವರಪ್ಪ, ಸರ್.ಎಂ.ವಿ ಕಾಲೇಜಿನ ೨೦೦೩ ರಿಂದ ೨೦೦೬ನೇ ಸಾಲಿನ ಸ್ನೇಹ ಬಳಗದ ಸದಸ್ಯರಾದ ಸುಬ್ರಮಣ್ಯ, ವೀರೇಂದ್ರ ಪಾಟೀಲ್, ಹೇಮ, ಶ್ರೀಕಾಂತ್, ಶರತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ ಸ್ನೇಹಬಳಗದ ವತಿಂದ ವಿಶಿಷ್ಟಚೇತನ ವಿದ್ಯಾರ್ಥಿಗಳಿಗೆ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು. ಲತಾ ಪ್ರಾರ್ಥಿಸಿದರು. ಟಿ.ಎನ್ ಪ್ರತಿಭಾ ಸ್ವಾಗತಿಸಿದರು. ರೇಣುಕಾ ಸಿ.ಜಿ. ನಿರೂಪಿಸಿ ಡಿ.ಎಚ್ ತೀರ್ಥಪ್ಪ ವಂದಿಸಿದರು.