Saturday, December 16, 2023

ಗೆಲುವು-ಸೋಲಿನ ಚಿಂತೆ ಬಿಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳಿ : ಮಹೇಶ್ವರಯ್ಯ

ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಶನಿವಾರ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ ಉದ್ಘಾಟಿಸಿದರು.
    ಭದ್ರಾವತಿ: ಕ್ರೀಡಾಕೂಟಗಳಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ ಮುಖ್ಯ. ಪಾಲ್ಗೊಳ್ಳುವ ಮೊದಲೆ ಗೆಲುವು-ಸೋಲಿನ ಬಗ್ಗೆ ಚಿಂತಿಸಬಾರದು. ಪಾಲ್ಗೊಳ್ಳುವಿಕೆಯಿಂದ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಮಹೇಶ್ವರಯ್ಯ ಹೇಳಿದರು.
    ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಶನಿವಾರ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ, ಅಂತರಾಷ್ಟ್ರೀಯ ಪವರ್ ಲಿಫ್ಟರ್ ಪ್ರಕಾಶ್ ಕಾರಂತ್ ಮಾತನಾಡಿ, ೮೦ರ ದಶಕದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಕ್ರೀಡಾಪಟುಗಳಿಗೆ ನೀಡಿದ ಪ್ರೋತ್ಸಾಹ ಇಂದು ದಂತಕಥೆ. ಅನೇಕ ಕ್ರೀಡಾಪಟುಗಳ ಬೆಳವಣಿಗೆಯಲ್ಲಿ ವಿಐಎಸ್‌ಎಲ್ ಕೊಡುಗೆ ಮಹತ್ವದ್ದಾಗಿದೆ ಎಂದು ಕಾರ್ಖಾನೆ ಸಹಕಾರ ಸ್ಮರಿಸಿದರು.
    ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್. ಹೊಸಳ್ಳೇರ ಮಾತನಾಡಿ,  ಕಾಲೇಜು ಹಲವಾರು ಪ್ರತಿಭಾನ್ವಿತ ಪವರ್ ಲಿಪ್ಟರ್ ಪ್ರತಿಭೆಗಳನ್ನು ಒಳಗೊಂಡಿದೆ. ಈ ಕಾಲೇಜಿಗೆ ಲಭಿಸಿರುವ ಬಹುಮಾನಗಳ ಪಟ್ಟಿಯನ್ನು ಗಮನಿಸಿದರೆ ಈ ಕಾಲೇಜಿನ ಕ್ರೀಡಾ ಸಾಧನೆ ತಿಳಿಯುತ್ತದೆ ಎಂದರು.
    ವೇದಿಕೆಯಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ, ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ವೈ. ನಟರಾಜ್, ಹಿರಿಯ ಕ್ರೀಡಾಪಟುಗಳಾ ವೀರಭದ್ರಯ್ಯ, ಮಸ್ತಾನ್, ವರದರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಚ್.ಎಸ್ ಶಿವರುದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

No comments:

Post a Comment