Wednesday, May 26, 2021

ವಿಶಿಷ್ಟ ಸೇವೆ ಸಲ್ಲಿಸುತ್ತಿರುವವರಿಗೆ ನೆರವು

ಭದ್ರಾವತಿಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಕಾರ್ಯಗಳನ್ನು ಉಚಿತವಾಗಿ ನೆರವೇರಿಸುವ ಮೂಲಕ ವಿಶೇಷವಾಗಿ ಸೇವೆ ಸಲ್ಲಿಸುತ್ತಿರುವ ಬಜರಂಗದಳ ಕಾರ್ಯಕರ್ತರನ್ನು ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ೨೫ ಸಾವಿರ ರು. ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಲಾಯಿತು.
    ಭದ್ರಾವತಿ, ಮೇ. ೨೬: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿರುವವರ ನೆರವಿಗೆ ನಗರದ ವಿವಿಧ ಸಂಘ-ಸಂಸ್ಥೆಗಳು ಮುಂದಾಗುವ ಜೊತೆಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತಿವೆ.
    ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿಶೇಷವಾಗಿ ಸೇವೆ ಸಲ್ಲಿಸುತ್ತಿರುವ ಬಜರಂಗದಳ ಕಾರ್ಯಕರ್ತರನ್ನು ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಸುಮಾರು ೨೫ ಸಾವಿರ ರು. ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸಲಾಯಿತು.
    ಬಜರಂಗದಳ ಕಾರ್ಯಕರ್ತರು ವಾಹನವೊಂದನ್ನು ಬಾಡಿಗೆಗೆ ಪಡೆದು ಕೋವಿಡ್-೧೯ರ ಸೇವೆಗೆ ಮೀಸಲಿಡುವ ಜೊತೆಗೆ ಉಚಿತವಾಗಿ ಇದುವರೆಗೂ ಸುಮಾರು ೩೩ ಮೃತ ದೇಹಗಳ ಅಂತ್ಯಸಂಸ್ಕಾರವನ್ನು ಕೈಗೊಂಡಿದೆ.
     ಹಿಂದೂ ಮಹಾಸಭಾ, ಹಿಂದೂ ರಾಷ್ಟ ಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್, ಉಪಾಧ್ಯಕ್ಷರಾದ ಮಣಿ ಎಎನ್‌ಎಸ್, ಕೆ. ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಭವಾನಿ, ಚನ್ನಪ್ಪ, ಕಾರ್ಯದರ್ಶಿ ಕೆ. ಸುದೀಪ್ ಕುಮಾರ್,  ಪ್ರಮುಖರಾದ ಶೇಖರಪ್ಪ, ಗಿರೀಶ್, ಬಜರಂಗದಳ ಪ್ರಮುಖರಾದ ಸುನಿಲ್, ವಡಿವೇಲು, ದೇವರಾಜ್, ಕೃಷ್ಣ, ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಆರ್ಥಿಕವಾಗಿ ಸಂಕಷ್ಟದಲ್ಲಿರುವ ಗೃಹ ರಕ್ಷಕರಿಗೆ ಭದ್ರಾವತಿ ನ್ಯೂಟೌನ್‌ನಲ್ಲಿರುವ ಗೃಹ ರಕ್ಷಕರ ಕಛೇರಿ ಬಳಿ ಬುಧವಾರ ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಅಗತ್ಯವಿರುವ ದಿನಸಿ ಸಾಮಗ್ರಿ ಹಾಗು ತರಕಾರಿ ವಿತರಿಸಲಾಯಿತು.

      ಗೃಹ ರಕ್ಷಕರಿಗೆ ನೆರವು:
    ಕೊರೋನಾ ಸಂಕಷ್ಟದ ಸಮಯದಲ್ಲೂ ಹಗಲಿರುಳು ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಗೃಹ ರಕ್ಷಕರ ನೆರವಿಗೆ ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟ ಮುಂದಾಗುವ ಮೂಲಕ ವಿಶೇಷತೆ ಮೆರೆದಿದೆ.
   ಆರ್ಥಿಕವಾಗಿ ಸಂಕಷ್ಟದಲ್ಲಿರುವ ಗೃಹ ರಕ್ಷಕರಿಗೆ ನ್ಯೂಟೌನ್‌ನಲ್ಲಿರುವ ಗೃಹ ರಕ್ಷಕರ ಕಛೇರಿ ಬಳಿ ಬುಧವಾರ ಅಗತ್ಯವಿರುವ ದಿನಸಿ ಸಾಮಗ್ರಿ ಹಾಗು ತರಕಾರಿ ವಿತರಿಸುವ ಮೂಲಕ ಸಮಾಜಕ್ಕೆ ಅವರ ಕೊಡುಗೆಯನ್ನು ವಿಶೇಷವಾಗಿ ಸ್ಮರಿಸಲಾಯಿತು.  
   ಲಾಕ್‌ಡೌನ್ ಮೊದಲ ಅವಧಿ ಮುಕ್ತಾಯಗೊಳ್ಳುವವರೆಗೂ ಒಕ್ಕೂಟದಿಂದ ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ನೀಡುವ ಸೇವಾ ಕಾರ್ಯ ಕೈಗೊಳ್ಳಲಾಗಿತ್ತು. ಇದೀಗ ೨ನೇ ಅವಧಿಯಲ್ಲಿ ದಿನಸಿ ಸಾಮಗ್ರಿ ವಿತರಿಸಲಾಗುತ್ತಿದೆ.
    ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪಾಸ್ಟರ್ ದೇವನೇಸನ್ ಸ್ಯಾಮ್ಯುವೆಲ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಯಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎಸ್ ಭೈರಪ್ಪ, ಪ್ರಮುಖರಾದ ನಗರಸಭೆ ಮಾಜಿ ಸದಸ್ಯ ಪ್ರಾನ್ಸಿಸ್, ಪ್ರಮುಖರಾದ ವಿಲ್ಸನ್ ಬಾಬು, ಎಂ.ಜಿ ರಾಮಚಂದ್ರ, ದಾಸ್, ಗೃಹ ರಕ್ಷಕದಳದ ಘಟಕಾಧಿಕಾರಿ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ೧೩೫ ಕೊರೋನಾ ಸೋಂಕು : ೩ ಮಂದಿ ಬಲಿ

ಭದ್ರಾವತಿ, ಮೇ. ೨೬: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಬುಧವಾರ ಒಟ್ಟು ೧೩೫ ಸೋಂಕು ಪತ್ತೆಯಾಗಿದ್ದು, ೩ ಮಂದಿ ಬಲಿಯಾಗಿದ್ದಾರೆ.
ಒಟ್ಟು ೩೫೦ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೧೩೫ ಮಂದಿಗೆ ಸೋಂಕು ದೃಢಪಟ್ಟಿದೆ. ಕೇವಲ ೩೫ ಮಂದಿ ಮಾತ್ರ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದು, ಇದುವರೆಗೂ ೧೦೪ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಒಟ್ಟು ೪೩೭ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ವ್ಯಾಪ್ತಿಯಲ್ಲಿ ೫೬ ಕಂಟೈನ್‌ಮೆಂಟ್ ಜೋನ್‌ಗಳ ಪೈಕಿ ೨೬ ತೆರವುಗೊಳಿಸಲಾಗಿದೆ. ಗ್ರಾಮೀಣ ಭಾಗದ ೨೭ ಕಂಟೈನ್‌ಮೆಂಟ್ ಜೋನ್‌ಗಳ ಪೈಕಿ ೨ ತೆರವುಗೊಳಿಸಲಾಗಿದೆ.

ಕೊಲೆ ಪ್ರಕರಣ : ೫ ಜನರ ಬಂಧನ

ಭದ್ರಾವತಿ ಜೈ ಭೀಮಾ ನಗರದಲ್ಲಿ ಮಂಗಳವಾರ ಸಂಜೆ ನಡೆದಿರುವ ನಗರಸಭೆ ಗುತ್ತಿಗ ನೌಕರ ಸುನಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ೫ ಜನರನ್ನು ಬಂಧಿಸಿರುವುದು.
    ಭದ್ರಾವತಿ, ಮೇ. ೨೬: ಇಲ್ಲಿನ ಜೈ ಭೀಮಾ ನಗರದಲ್ಲಿ ಮಂಗಳವಾರ ಸಂಜೆ ನಡೆದಿರುವ ನಗರಸಭೆ ಗುತ್ತಿಗ ನೌಕರ ಸುನಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ೫ ಜನರನ್ನು ಬಂಧಿಸಿದ್ದಾರೆ.
    ಕೋವಿಡ್ ಸಂಕಷ್ಟದ ಸಮಯದಲ್ಲೂ  ಪೊಲೀಸರು ಕೊಲೆಯಾದ ೨೪ ಗಂಟೆಯೊಳಗೆ ಮುಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ೫ ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
   ನಗರದ ಅನ್ವರ್ ಕಾಲೋನಿ ನಿವಾಸಿ ಸಾಬೀತ್(೨೦), ಶಿವಮೊಗ್ಗ ಆರ್.ಎಂ.ಎಲ್ ನಗರದ ಇದಾಯತ್(೨೦), ಮಹಮದ್ ಜುನೇದ್(೨೦), ಬುದ್ದಾ ನಗರದ ನಿಶಾದ್ ಪಾಷಾ(೨೧) ಮತ್ತು ತಬ್ರೇಜ್ ಪಾಷಾ(೨೧) ಅವರನ್ನು ಬಂಧಿಸಲಾಗಿದೆ ಹಾಗು ಕೃತಕ್ಕೆ ಬಳಸಿದ ಆಯುಧ ಮತ್ತು ೨ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ನಗರಸಭೆ ಗುತ್ತಿಗೆ ನೌಕರ ಕೊಲೆ : ಮತ್ತೊಬ್ಬನಿಗೆ ಗಾಯ

ಸ್ಥಳಕ್ಕೆ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ ಭೇಟಿ

ಭದ್ರಾವತಿ ಜೈಭೀಮಾ ನಗರದಲ್ಲಿ ಕೊಲೆಯಾದ ನಗರಸಭೆ ಗುತ್ತಿಗೆ ನೌಕರ ಸುನಿಲ್
ಭದ್ರಾವತಿ, ಮೇ. ೨೬: ಕೊರೋನಾ ಹಿನ್ನಲೆಯಲ್ಲಿ ಲಾಕ್‌ಡೌನ್ ಘೋಷಿಸಿದ್ದರೂ ಸಹ ನಗರಸಭೆ ವ್ಯಾಪ್ತಿಯ ಜೈ ಭೀಮಾ ನಗರದಲ್ಲಿ ಹೊರಗಿನಿಂದ ಬಂದು ವಿನಾಕಾರಣ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದವರನ್ನು ಪ್ರಶ್ನಿಸಿದ ಅಲ್ಲಿನ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
    ನಗರಸಭೆ ಗುತ್ತಿಗೆ ನೌಕರ ಸುನಿಲ್(೨೫) ಕೊಲೆಯಾಗಿದ್ದು, ಶ್ರೀಕಂಠ ಎಂಬ ಯುವಕ ಹಲ್ಲೆಗೊಳಗಾಗಿದ್ದಾನೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
        ಘಟನೆ ವಿವರ:
    ಹಳೇನಗರದ ನಿರ್ಮಲಾ ಆಸ್ಪತ್ರೆ ಹಿಂಭಾಗ ಲಕ್ಷ್ಮೀ ಸಾಮಿಲ್‌ಗೆ ಹೋಗುವ ರಸ್ತೆಗೆ ಜೈ ಭೀಮಾ ನಗರದ ರಸ್ತೆ ಸಂಪರ್ಕಗೊಂಡಿದ್ದು, ಇಲ್ಲಿನ ನಿವಾಸಿಗಳಾದ ಸುನಿಲ್, ಶ್ರೀಕಂಠ ಮತ್ತು ರಹೀಂ ರಸ್ತೆ ಸಂಪರ್ಕಗೊಂಡಿರುವ ಸ್ಥಳದ ಸಮೀಪದಲ್ಲಿ ಮಾತನಾಡಿಕೊಂಡು ನಿಂತಿರುವ ಸಂದರ್ಭದಲ್ಲಿ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ವಿನಾಕಾರಣ ಜೈಭೀಮಾ ನಗರದಲ್ಲಿ ಸುತ್ತಾಡುವುದನ್ನು ಕಂಡು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಜಗಳ ಉಂಟಾಗಿದೆ.  ಈ ಜಗಳ ಇಷ್ಟಕ್ಕೆ ಮುಗಿಯದೆ ಪುನಃ ಇಬ್ಬರು ಇನ್ನಿಬ್ಬರೊಂದಿಗೆ ಜೈ ಭೀಮಾ ನಗರಕ್ಕೆ  ಆಗಮಿಸಿ ಸುನಿಲ್ ಮೇಲೆ ಜಾಕುವಿನಿಂದ ಹಲ್ಲೆ ನಡೆಸಿದ್ದು,  ಈ ಸಂದರ್ಭದಲ್ಲಿ ಬಿಡಿಸಲು ಬಂದ ಶ್ರೀಕಂಠ ಮತ್ತು ರಹೀಂ ಇಬ್ಬರ ಮೇಲೂ ಸಹ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಸುನಿಲ್ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
     ಹಲ್ಲೆಗೊಳಗಾಗಿರುವ ಶ್ರೀಕಂಠ ಈ ಸಂಬಂಧ ಪೊಲೀಸರಿಗೆ ನೀಡಿರುವ ದೂರಿನಲ್ಲಿ ೪ ಜನರ ಪೈಕಿ ಓರ್ವನನ್ನು ನಗರದ ಮೋಮಿನ್ ಮೊಹಲ್ಲಾ ನಿವಾಸಿ ಸಾಬೀತ್ ಎಂದು ತಿಳಿಸಿದ್ದು, ಉಳಿದ ಮೂವರ ಬಗ್ಗೆ ಯಾವುದೇ ಮಾಹಿತಿ ಇಲ್ಲ.


ಭದ್ರಾವತಿ ಜೈಭೀಮಾ ನಗರದಲ್ಲಿ ನಡೆದಿರುವ ಘಟನೆಯಲ್ಲಿ ಹಲ್ಲೆಗೊಳಗಾಗಿರುವ ಶ್ರೀಕಂಠ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.

      ಸ್ಥಳಕ್ಕೆ ಭೇಟಿ ನೀಡಿದ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ:
   ಘಟನಾ ಸ್ಥಳಕ್ಕೆ ಬುಧವಾರ ಬೆಳಿಗ್ಗೆ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ ರವಿ, ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ ಲಕ್ಷ್ಮಿಪ್ರಸಾದ್ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರಿಂದ ಮಾಹಿತಿ ಪಡೆದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಿದ್ದಾರೆ. ಕೊರೋನಾ ಲಾಕ್‌ಡೌನ್ ನಡುವೆಯೂ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
       ಗಾಂಜಾ, ಮಟ್ಕಾ, ಇಸ್ಪೀಟ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ಹೆಚ್ಚಳ :
    ಘಟನೆ ಕುರಿತು ನಗರದ ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಎಂ ಖಾದರ್ ಹಳೇನಗರ ಪೊಲೀಸರ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕೊಲೆ ಪ್ರಕರಣ ಕಾನೂನು ಬಾಹಿರ ಚಟುವಟಿಕೆಗಳ ಹಿನ್ನಲೆಯಲ್ಲಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
    ಈ ಕುರಿತು ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕರಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದ್ವನಿ ಮುದ್ರಣ ರವಾನಿಸಿದ್ದು, ಹಳೇನಗರ ಭಾಗದ ಹಲವೆಡೆ ಗಾಂಜಾ, ಮಟ್ಕಾ, ಇಸ್ಪೀಟ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿದೆ. ಈ ಸಂಬಂಧ ಸುಮಾರು ೬ ತಿಂಗಳ ಹಿಂದೆಯೇ ಸಾಕ್ಷ್ಯಾಧಾರಗಳೊಂದಿಗೆ ದೂರು ನೀಡಲಾಗಿತ್ತು. ಆದರೆ ಹಳೇನಗರ ಠಾಣೆ ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರ ಈ ನಿರ್ಲಕ್ಷ್ಯತನವೇ ಈ ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.