Saturday, May 15, 2021

ವಿವಿಧ ಬೇಡಿಕೆ ಈಡೇರಿಕೆಗಾಗಿ ಕಟ್ಟಡ ಕಾರ್ಮಿಕರಿಂದ ವಿನೂತನ ಪ್ರತಿಭಟನೆ

ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಆತಂಕದ ನಡೆವೆಯೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಭದ್ರಾವತಿಯಲ್ಲಿ ಶನಿವಾರ ವಿನೂತನ ರೀತಿಯ ಪ್ರತಿಭಟನೆ ಕೈಗೊಳ್ಳುವ ಮೂಲಕ ಗಮನ ಸೆಳೆದರು.
     ಭದ್ರಾವತಿ, ಮೇ. ೧೫: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಆತಂಕದ ನಡೆವೆಯೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಶನಿವಾರ ವಿನೂತನ ರೀತಿಯ ಪ್ರತಿಭಟನೆ ಕೈಗೊಳ್ಳುವ ಮೂಲಕ ಗಮನ ಸೆಳೆದರು.
     ಲಾಕ್‌ಡೌನ್ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಕನಿಷ್ಠ ೩ ತಿಂಗಳು ಮಾಸಿಕ ೧೦ ಸಾವಿರ ರು. ಪರಿಹಾರ ನೀಡುವುದು, ಕೊರೋನಾ ಪೀಡಿತ ಕಟ್ಟಡ ಕಾರ್ಮಿಕರಿಗೆ ಹಾಗು ಕುಟುಂಬ ವರ್ಗದವರಿಗೆ ಉಚಿತ ಚಿಕಿತ್ಸೆ ನೀಡುವುದು ಹಾಗು ಕೊರೋನಾ ಸೋಂಕಿನಿಂದ ಮೃತಪಟ್ಟ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ರು. ೧೦ ಲಕ್ಷ ಹಾಗು ನೋಂದಾಯಿತರಲ್ಲದ ಕಾರ್ಮಿಕರಿಗೆ ರು. ೫ ಲಕ್ಷ ಪರಿಹಾರ ನೀಡುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ 'ಮನೆ ಮನೆಗಳಲ್ಲಿ ಪ್ರತಿಭಟನೆ' ಎಂಬ ವಿನೂತನ ಶೈಲಿಯ ಹೋರಾಟದ ಮೂಲಕ ಆಗ್ರಹಿಸಲಾಯಿತು. ರಾಜ್ಯಾದ್ಯಂತ ಈ ವಿನೂತನ ಪ್ರತಿಭಟನೆ ನಡೆದಿದ್ದು, ತಾಲೂಕಿನ ಹಲವೆಡೆ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.
    ನಗರದ ಕೂಲಿಬ್ಲಾಕ್ ಶೆಡ್ ಆಂಜನೇಯ ಅಗ್ರಹಾರದ ಶ್ರೀ ಮಾರಿಯಮ್ಮ ದೇವಸ್ಥಾನದ ಮುಂಭಾಗದಲ್ಲಿರುವ ಕರ್ನಾಟಕ ರಾಜ್ಯ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಮುಂಭಾಗ ಅಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಎಂ.ಪಿ ನಾರಾಯಣಸ್ವಾಮಿ, ತಾಂತ್ರಿಕ ಸಲಹೆಗಾರ ಕೆ.ಪಿ ಮೋಹನ್, ಗೌರವಾಧ್ಯಕ್ಷ ಅಂತೋಣಿ ಕ್ರೂಸ್, ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುಂದರ್ ಬಾಬು, ಜಿಲ್ಲಾ ಉಪಾಧ್ಯಕ್ಷ ಕೆ. ಚಂದ್ರಶೇಖರ್, ತಾಲೂಕು ಪದಾಧಿಕಾರಿಗಳಾದ ಸುಬ್ರಮಣ್ಯ, ಅಭಿಲಾಷ್, ನಾಗೇಂದ್ರರೆಡ್ಡಿ, ಶಿವಕುಮಾರ್, ಮಂಜಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇಂದಿರಾ ಕ್ಯಾಂಟಿನ್ ಉಪಹಾರ, ಊಟ ದುರ್ಬಳಕೆ ಆರೋಪ

ನೂತನ ನಗರಸಭಾ ಸದಸ್ಯರು, ಬಿಜೆಪಿ ಮುಖಂಡರಿಂದ ಕ್ಯಾಂಟಿನ್‌ಗೆ ಮುತ್ತಿಗೆ


ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಉಪಹಾರ, ಊಟ ಯೋಜನೆ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿ ಭದ್ರಾವತಿಯಲ್ಲಿ ಬಿಜೆಪಿ ಮುಖಂಡರು ಹಾಗು ನೂತನ ನಗರಸಭಾ ಸದಸ್ಯರು ಕ್ಯಾಂಟಿನ್‌ಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ನಡೆದಿದೆ.
    ಭದ್ರಾವತಿ, ಮೇ. ೧೫: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ನಿರ್ಗತಿಕರು, ಅಸಹಾಯಕರು ಸೇರಿದಂತೆ ಬಡ ವರ್ಗದವರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಉಪಹಾರ ಹಾಗು ಊಟದ ವ್ಯವಸ್ಥೆ ಕೈಗೊಂಡಿದೆ. ಆದರೆ ಈ ಯೋಜನೆ ನಗರದಲ್ಲಿ ದುರ್ಬಳಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
   ನಗರದಲ್ಲಿ ವಾರ್ಡ್ ನಂ.೧೨ರ ಸಂತೆ ಮೈದಾನದಲ್ಲಿ ಹಾಗು ವಾರ್ಡ್ ನಂ.೩ರ ಖಾಸಗಿ ಬಸ್ ನಿಲ್ದಾಣದ ಬಳಿ ಒಟ್ಟು ೨ ಇಂದಿರಾ ಕ್ಯಾಂಟಿನ್‌ಗಳಿದ್ದು, ಸರ್ಕಾರ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟಿನ್‌ಗಳಲ್ಲಿ ಉಚಿತವಾಗಿ ಉಪಹಾರ ಹಾಗು ಊಟ ನೀಡುವಂತೆ ಆದೇಶ ಹೊರಡಿಸಿದ ನಂತರ  ಇಲ್ಲಿ ಸುಮಾರು ಒಂದು ಸಾವಿರ ಜನರಿಗೆ ಅಗತ್ಯವಿರುವಷ್ಟು ಉಪಹಾರ ಹಾಗು ಊಟ ತಯಾರಿಸಲಾಗುತ್ತಿದೆ. ಆದರೆ ನಗರದಲ್ಲಿ ಇಂದಿರಾ ಕ್ಯಾಂಟಿನ್‌ಗೆ ಬರುವವರ ಸಂಖ್ಯೆ ತೀರ ಕಡಿಮೆ ಇದೆ. ಇದರಿಂದಾಗಿ ಸಾಕಷ್ಟು ಉಳಿದುಕೊಳ್ಳಲಿದ್ದು, ಈ ಉಳಿಕೆ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ಇದರಿಂದಾಗಿ ದುರ್ಬಳಕೆಯಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
         ಇಂದಿರಾ ಕ್ಯಾಂಟಿನ್‌ಗೆ ಮುತ್ತಿಗೆ :
    ಯೋಜನೆ ದುರ್ಬಳಕೆಯಾಗುತ್ತಿರುವ ಅನುಮಾನಗಳು ವ್ಯಕ್ತವಾಗುತ್ತಿದ್ದಂತೆ ಸ್ಥಳೀಯ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವದಲ್ಲಿ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟಿನ್‌ಗೆ ಮುತ್ತಿಗೆ ಹಾಕಲಾಯಿತು. ಈ ಸಂದರ್ಭದಲ್ಲಿ ಉಚಿತವಾಗಿ ವಿತರಿಸಲು ಸಿದ್ದಗೊಳಿಸಲಾಗಿದ್ದ ಉಪಹಾರ ಹಾಗು ಊಟದ ಲೆಕ್ಕಚಾರದಲ್ಲಿ ವ್ಯತ್ಯಾಸಗಳು ಕಂಡು ಬಂದಿದ್ದು, ದುರ್ಬಳಕೆ ನಡೆದಿರುವುದು ತಿಳಿದು ಬಂದಿದೆ.
     ದುರ್ಬಳಕೆ ಹಿಂದೆ ನಗರಸಭೆ ಅಧಿಕಾರಿಗಳು ಶಾಮೀಲಾಗಿದ್ದು, ತಕ್ಷಣ ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಅಲ್ಲದೆ ಗುತ್ತಿಗೆದಾರರು ದುರ್ಬಳಕೆ ತಡೆಯುವಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದು ಎಚ್ಚರಿಸಲಾಯಿತು.
     ಬಿಜೆಪಿ ಪಕ್ಷದ ಪ್ರಮುಖರಾದ ಬಿ.ಕೆ ಶ್ರೀನಾಥ್, ಮಣಿ, ರಾಮನಾಥ ಬರ್ಗೆ, ಅವಿನಾಶ್, ಚನ್ನೇಶ್, ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರಾದ ಪಲ್ಲವಿ ದಿಲೀಪ್, ಸವಿತಾ ಉಮೆಶ್ ಹಾಗು ಪಕ್ಷೇತರ ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಮಕೃಷ್ಣೇಗೌಡ ನಿಧನ

ರಾಮಕೃಷ್ಣೇಗೌಡ(ಕ್ಯಾಂಟಿನ್ ಗೌಡ)
      ಭದ್ರಾವತಿ, ಮೇ. ೧೫: ನಗರಸಭೆ ಮಾಜಿ ಸದಸ್ಯ, ಕಂಚಿನಬಾಗಿಲು ಸಮೀಪದ ಹನುಮಂತನಗರದ ನಿವಾಸಿ ರಾಮಕೃಷ್ಣೇಗೌಡ(೬೯) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
   ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಹೊಂದಿದ್ದರು. ರಾಮಕೃಷ್ಣೇಗೌಡರವರು ಕ್ಯಾಂಟಿನ್ ಗೌಡ ಎಂದು ಚಿರಪರಿಚಿತರಾಗಿದ್ದರು. ಈ ಹಿಂದೆ ಸಮಾಜವಾದಿ ಜನತಾ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು.
       ಸಮಾಜ ಸೇವೆ:
  ರಾಮಕೃಷ್ಣಗೌಡರವರು ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೆ ಹಲವು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ದೀನದಲಿತರು, ನಿರ್ಗತಿಕರು, ಅಸಹಾಯಕರು, ವಿಕಲಚೇತನರು ಸೇರಿದಂತೆ ಬಡ ವರ್ಗದವರಿಗೆ  ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಉಚಿತವಾಗಿ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
     ಸಂತಾಪ:
   ಕಾಂಗ್ರೆಸ್ ಪಕ್ಷದ  ಹಿರಿಯ ಮುಖಂಡ ರಾಮಕೃಷ್ಣೇಗೌಡರವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ ಹಾಗು ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಕ್ಮಾಬಾಯಿ ನಿಧನ

ರಕ್ಮಾಬಾಯಿ
    ಭದ್ರಾವತಿ, ಮೇ. ೧೫: ಹಳೇನಗರದ ದೊಡ್ಡಕುರುಬರ ಬೀದಿ ನಿವಾಸಿ ರಕ್ಮಾಬಾಯಿ(೮೫) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು. 
ಪತಿ ನಿವೃತ್ತ ಮುಖ್ಯ ಪೇದೆ ಟಿ.ಟಿ ರಂಗಪ್ಪ, ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳು, ಮೊಮ್ಮಕ್ಕಳನ್ನು ಹಾಗು ಮರಿಮೊಮ್ಮಕ್ಕಳನ್ನು ಹೊಂದಿದ್ದರು. ಹಳೇನಗರ ಭಾಗದಲ್ಲಿ ಚಿರಪರಿಚಿತರಾಗಿದ್ದರು. ಮೃತರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.