Saturday, May 15, 2021

ಇಂದಿರಾ ಕ್ಯಾಂಟಿನ್ ಉಪಹಾರ, ಊಟ ದುರ್ಬಳಕೆ ಆರೋಪ

ನೂತನ ನಗರಸಭಾ ಸದಸ್ಯರು, ಬಿಜೆಪಿ ಮುಖಂಡರಿಂದ ಕ್ಯಾಂಟಿನ್‌ಗೆ ಮುತ್ತಿಗೆ


ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಉಪಹಾರ, ಊಟ ಯೋಜನೆ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿ ಭದ್ರಾವತಿಯಲ್ಲಿ ಬಿಜೆಪಿ ಮುಖಂಡರು ಹಾಗು ನೂತನ ನಗರಸಭಾ ಸದಸ್ಯರು ಕ್ಯಾಂಟಿನ್‌ಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ನಡೆದಿದೆ.
    ಭದ್ರಾವತಿ, ಮೇ. ೧೫: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ನಿರ್ಗತಿಕರು, ಅಸಹಾಯಕರು ಸೇರಿದಂತೆ ಬಡ ವರ್ಗದವರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಉಪಹಾರ ಹಾಗು ಊಟದ ವ್ಯವಸ್ಥೆ ಕೈಗೊಂಡಿದೆ. ಆದರೆ ಈ ಯೋಜನೆ ನಗರದಲ್ಲಿ ದುರ್ಬಳಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
   ನಗರದಲ್ಲಿ ವಾರ್ಡ್ ನಂ.೧೨ರ ಸಂತೆ ಮೈದಾನದಲ್ಲಿ ಹಾಗು ವಾರ್ಡ್ ನಂ.೩ರ ಖಾಸಗಿ ಬಸ್ ನಿಲ್ದಾಣದ ಬಳಿ ಒಟ್ಟು ೨ ಇಂದಿರಾ ಕ್ಯಾಂಟಿನ್‌ಗಳಿದ್ದು, ಸರ್ಕಾರ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟಿನ್‌ಗಳಲ್ಲಿ ಉಚಿತವಾಗಿ ಉಪಹಾರ ಹಾಗು ಊಟ ನೀಡುವಂತೆ ಆದೇಶ ಹೊರಡಿಸಿದ ನಂತರ  ಇಲ್ಲಿ ಸುಮಾರು ಒಂದು ಸಾವಿರ ಜನರಿಗೆ ಅಗತ್ಯವಿರುವಷ್ಟು ಉಪಹಾರ ಹಾಗು ಊಟ ತಯಾರಿಸಲಾಗುತ್ತಿದೆ. ಆದರೆ ನಗರದಲ್ಲಿ ಇಂದಿರಾ ಕ್ಯಾಂಟಿನ್‌ಗೆ ಬರುವವರ ಸಂಖ್ಯೆ ತೀರ ಕಡಿಮೆ ಇದೆ. ಇದರಿಂದಾಗಿ ಸಾಕಷ್ಟು ಉಳಿದುಕೊಳ್ಳಲಿದ್ದು, ಈ ಉಳಿಕೆ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ಇದರಿಂದಾಗಿ ದುರ್ಬಳಕೆಯಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
         ಇಂದಿರಾ ಕ್ಯಾಂಟಿನ್‌ಗೆ ಮುತ್ತಿಗೆ :
    ಯೋಜನೆ ದುರ್ಬಳಕೆಯಾಗುತ್ತಿರುವ ಅನುಮಾನಗಳು ವ್ಯಕ್ತವಾಗುತ್ತಿದ್ದಂತೆ ಸ್ಥಳೀಯ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವದಲ್ಲಿ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟಿನ್‌ಗೆ ಮುತ್ತಿಗೆ ಹಾಕಲಾಯಿತು. ಈ ಸಂದರ್ಭದಲ್ಲಿ ಉಚಿತವಾಗಿ ವಿತರಿಸಲು ಸಿದ್ದಗೊಳಿಸಲಾಗಿದ್ದ ಉಪಹಾರ ಹಾಗು ಊಟದ ಲೆಕ್ಕಚಾರದಲ್ಲಿ ವ್ಯತ್ಯಾಸಗಳು ಕಂಡು ಬಂದಿದ್ದು, ದುರ್ಬಳಕೆ ನಡೆದಿರುವುದು ತಿಳಿದು ಬಂದಿದೆ.
     ದುರ್ಬಳಕೆ ಹಿಂದೆ ನಗರಸಭೆ ಅಧಿಕಾರಿಗಳು ಶಾಮೀಲಾಗಿದ್ದು, ತಕ್ಷಣ ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಅಲ್ಲದೆ ಗುತ್ತಿಗೆದಾರರು ದುರ್ಬಳಕೆ ತಡೆಯುವಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದು ಎಚ್ಚರಿಸಲಾಯಿತು.
     ಬಿಜೆಪಿ ಪಕ್ಷದ ಪ್ರಮುಖರಾದ ಬಿ.ಕೆ ಶ್ರೀನಾಥ್, ಮಣಿ, ರಾಮನಾಥ ಬರ್ಗೆ, ಅವಿನಾಶ್, ಚನ್ನೇಶ್, ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರಾದ ಪಲ್ಲವಿ ದಿಲೀಪ್, ಸವಿತಾ ಉಮೆಶ್ ಹಾಗು ಪಕ್ಷೇತರ ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment