Sunday, August 21, 2022

ಡಿಚ್ಚಿ ಮುಬಾರಕ್ ವಿರುದ್ಧ ಗಾಂಜಾ ಸೇವನೆ ಪ್ರಕರಣ ದಾಖಲು

ಡಿಚ್ಚಿ ಮುಬಾರಕ್
    ಭದ್ರಾವತಿ, ಆ. ೨೧ : ಇತ್ತಿಚೆಗೆ ನೆಹರು ನಗರದಲ್ಲಿ ವೈಯಕ್ತಿಕ ಕಾರಣಕ್ಕೆ ನಡೆದಿದ್ದ ಗಲಾಟೆ ಪ್ರಕರಣದ ಪ್ರಮುಖ ಆರೋಪಿ ಡಿಚ್ಚಿ ಮುಬಾರಕ್ ವಿರುದ್ಧ ಗಾಂಜಾ ಸೇವನೆ ಪ್ರಕರಣ ದಾಖಲಾಗಿದೆ.
    ನೆಹರೂ ನಗರದ ರಾಜೇಶ್ವರಿ ದೇವಾಲಯದ ಬಳಿ ನಡೆದುಕೊಂಡು ಹೋಗುತ್ತಿದ್ದ ಸುನಿಲ್ ಮೇಲೆ ಮುಬಾರಕ್ ವೈಯಕ್ತಿಕ ಕಾರಣಕ್ಕೆ ಹಲ್ಲೆ ನಡೆಸಿದ್ದನು.  ಈ ಸಂಬಂಧ ಪೊಲೀಸರು ಮುಬಾರಕ್‌ನನ್ನು ಬಂಧಿಸಿದ್ದರು.
    ವಿಚಾರಣೆ ಸಂದರ್ಭದಲ್ಲಿ ಗಾಂಜಾ ಸೇವನೆ ಅನುಮಾನದಲ್ಲಿ ಪೊಲೀಸರು ಮುಬಾರಕ್‌ನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದರು. ತಪಾಸಣಾ ವರದಿಯಲ್ಲಿ ಮುಬಾರಕ್ ಗಾಂಜಾ ಸೇವಿಸಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅದ್ದೂರಿಯಾಗಿ ಜರುಗಿದ ಓಂ ಶಕ್ತಿ ಉತ್ಸವ ಮೆರವಣಿಗೆ

ಭದ್ರಾವತಿ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಸಮೀಪದ ಅಂಬೇಡ್ಕರ್ ನಗರದಲ್ಲಿರುವ ಓಂ ಶಕ್ತಿ ದೇವಸ್ಥಾನದಲ್ಲಿ ಭಾನುವಾರ ಉತ್ಸವ ಮೆರವಣಿಗೆ ನಡೆಯಿತು.
    ಭದ್ರಾವತಿ, ಆ. ೨೧: ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಸಮೀಪದ ಅಂಬೇಡ್ಕರ್ ನಗರದಲ್ಲಿರುವ ಓಂ ಶಕ್ತಿ ದೇವಸ್ಥಾನದಲ್ಲಿ ಭಾನುವಾರ ಉತ್ಸವ ಮೆರವಣಿಗೆ ನಡೆಯಿತು.
    ಬಿ.ಎಚ್ ರಸ್ತೆಯಲ್ಲಿ ಓಂ ಶಕ್ತಿ ಉತ್ಸವ ಮೂರ್ತಿಯೊಂದಿಗೆ ಕಲಾ ತಂಡಗಳು ಹಾಗು ಹರಕೆಯೊತ್ತ ಭಕ್ತರು ಕೆಂಡ ತುಂಬಿದ ಮಡಕೆಯೊಂದಿಗೆ ಸಾಗಿದರು. ಕೊನೆಯಲ್ಲಿ ಕೆಂಡಾರ್ಪಣೆಯೊಂದಿಗೆ ಅಂತ್ಯಗೊಳಿಸಲಾಯಿತು.


    ಓಂ ಶಕ್ತಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ಜರುಗಿದವು. ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿದವು.  

ಭೋವಿ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಗಾಂಧಿನಗರದ ಕೇಶವಪುರ ಬಡಾವಣೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಭೋವಿ ಸಮುದಾಯ ಭವನ ನಿರ್ಮಾಣದ ಗುದ್ದಲಿ ಪೂಜೆ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಆ. ೨೧ : ತಾಲೂಕಿನಲ್ಲಿ ಭೋವಿ ಸಮಾಜದವರ ಬಹಳ ವರ್ಷಗಳ ಕನಸು ಈಡೇರುತ್ತಿದ್ದು, ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜದ ಎಲ್ಲರೂ ಕೈಜೋಡಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
    ಅವರು ಭಾನುವಾರ ನಗರಸಭೆ ವ್ಯಾಪ್ತಿಯ ಗಾಂಧಿನಗರದ ಕೇಶವಪುರ ಬಡಾವಣೆಯಲ್ಲಿ ಭೋವಿ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
    ಭೋವಿ ಸಮಾಜದವರು ಶ್ರಮ ಜೀವಿಗಳಾಗಿದ್ದು, ಕ್ಷೇತ್ರದಲ್ಲಿ ಸುಮಾರು ೧೦ ರಿಂದ ೧೫ ಸಾವಿರ ಜನಸಂಖ್ಯೆ ಹೊಂದಿದ್ದಾರೆ. ಈ ಸಮಾಜಕ್ಕೆ ಸುಸಜ್ಜಿತವಾದ ಸಮುದಾಯ ಭವನದ ಅವಶ್ಯಕತೆ ಮನಗಂಡು ಜಾಗ ಮಂಜೂರಾತಿ ಮಾಡಿಸಿಕೊಡಲಾಗಿದೆ. ಸಮುದಾಯ ಭವನದ ನಿರ್ಮಾಣಕ್ಕೆ ಸಮಾಜದ ಉಳ್ಳವರು ಹೆಚ್ಚಿನ  ಆರ್ಥಿಕ ನೆರವು ನೀಡುವ ಮೂಲಕ ಸಹಕರಿಸಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್,  ಸಮುದಾಯ ಭವನ ನಿರ್ಮಾಣಕ್ಕೆ ಸಮಾಜಕ್ಕೆ ಜಾಗದ ಕೊರತೆ ಇತ್ತು. ಈ ಸಂಬಂಧ ಶಾಸಕರಿಗೆ ಮನವಿ ಮಾಡಿಕೊಂಡ ಪರಿಣಾಮ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಜಾಗವನ್ನು ಮಂಜೂರಾತಿ ಮಾಡಿಸಿಕೊಡುವ ಜೊತೆಗೆ ಆರ್ಥಿಕವಾಗಿ ಹೆಚ್ಚಿನ ನೆರವು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಸಮಾಜದ ಜಿಲ್ಲಾಧ್ಯಕ್ಷ ರವಿಕುಮಾರ್, ಭೋವಿ ಸಮಾಜದವರು ಸ್ವಾಭಿಮಾನಿಗಳಾಗಿ ಸಮಾಜದಲ್ಲಿ ಎಲ್ಲರೊಂದಿಗೆ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಸಮಾಜದ ಎಲ್ಲರೂ ನಮ್ಮ ಸಮುದಾಯ ಭವನ ಅಭಿಮಾನ ಬೆಳೆಸಿಕೊಳ್ಳುವ ಜೊತೆಗೆ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.  
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರಿ, ಭೋವಿ ಅಭಿವೃದ್ಧಿ ನಿಗಮದ ಸದಸ್ಯ ಜಿ. ಆನಂದಕುಮಾರ್, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಕಾರ್ಯದರ್ಶಿ ಎಸ್.ಕೆ ಮೋಹನ್, ಶಿವಬಸಪ್ಪ, ಕೃಷ್ಣಮೂರ್ತಿ, ಚೌಡಪ್ಪ, ರವಿಕಿಶೋರ್, ಬಿ.ಎಸ್ ಗಣೇಶ್, ರವಿರಾಜ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.