![](https://blogger.googleusercontent.com/img/a/AVvXsEiUeqm6dxjUIOfciA2WlnglHF9kebaTgmtowCcTifBHhqmDWVDJm128tsHcjLt7FhtEB8DbujuirQ5jCQmVLMV-EKCjirbKRgkyKh3eXSLTUMvs9KapKRTEqTJY7iWaKvzD4eVdQ1BS0wWnQ6oYKLXdc7xbcFPjhWudG1rgsKLlRgIFghcoXjdlgp5jGw=w400-h294-rw)
ಭದ್ರಾವತಿ ನಗರದ ಪ್ರಮುಖ ಸ್ಥಳಗಳಲ್ಲಿ ಒಂದಾದ ಸಿ.ಎನ್ ರಸ್ತೆಯ ರಂಗಪ್ಪ ವೃತ್ತ.
ಭದ್ರಾವತಿ, ಜು. ೬: ತಾಲೂಕು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಸಾಮಾನ್ಯವಾಗಿ ಬಿಟ್ಟಿವೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹಗಲಿರುಳು ಕಣ್ಣಿಡುವಂತಾಗಿದೆ. ಆದರೂ ಸಹ ನಿಯಂತ್ರಿಸುವುದು ಅಸಾಧ್ಯವಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಕಣ್ಗಾವಲಿನ ಜೊತೆಗೆ ಸಿ.ಸಿ ಕ್ಯಾಮೆರಾ ಅಳವಡಿಕೆ ಸಹ ಅಗತ್ಯವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಕೊಲೆ, ಸುಲಿಗೆ, ದೊಂಬಿ, ಗಲಾಟೆ, ಮಟ್ಕಾ, ಇಸ್ಪೀಟ್ ಜೂಜಾಟ, ಅಲ್ಲದೆ ಗುಂಪು ಘರ್ಷಣೆಗಳು, ರಸ್ತೆ ನಿಯಮ ಉಲ್ಲಂಘನೆ, ಮನೆಗಳ್ಳತನ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ನಗರ ವ್ಯಾಪ್ತಿಯಲ್ಲಿ ಪೇಪರ್‌ಟೌನ್, ನ್ಯೂಟೌನ್, ಹಳೇನಗರ ಹಾಗು ಹೊಸಮನೆಯಲ್ಲಿ ಒಟ್ಟು ೪ ಪೊಲೀಸ್ ಠಾಣೆಗಳಿವೆ. ಅಲ್ಲದೆ ೨ ಪೊಲೀಸ್ ಠಾಣೆಗಳನ್ನು ಇತ್ತೀಚೆಗೆ ಪಿಐ ಠಾಣೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಪ್ರಸ್ತುತ ಇರುವ ಸಿಬ್ಬಂದಿಗಳನ್ನು ಬಳಸಿಕೊಂಡು ಶಾಂತಿ ಸುವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಆದರೂ ಸಹ ಕಾನೂನು ಬಾಹಿರ ಕೃತ್ಯಗಳು ಹೆಚ್ಚಾಗುತ್ತಿವೆ. ಪ್ರಸ್ತುತ ಕಾನೂನು ಬಾಹಿರ ಕೃತ್ಯಗಳನ್ನು ನಿಯಂತ್ರಿಸಲು ಪೊಲೀಸ್ ಕಣ್ಗಾವಲಿನ ಜೊತೆಗೆ ಸಿ.ಸಿ ಕ್ಯಾಮೆರಾಗಳ ಅಳವಡಿಕೆ ಅಗತ್ಯವಾಗಿದೆ.
ನಗರದ ಪ್ರಮುಖ ವೃತ್ತಗಳಲ್ಲಿ ಇನ್ನೂ ಸಿ.ಸಿ ಕ್ಯಾಮೆರಾಗಳು ಸಮರ್ಪಕವಾಗಿ ಅಳವಡಿಕೆಯಾಗಿಲ್ಲ. ಅತಿ ಸೂಕ್ಷ್ಮ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆಗಳಲ್ಲಿ ಸಿ.ಸಿ ಕ್ಯಾಮೆರಾಗಳು ಅತಿಅವಶ್ಯಕವಾಗಿವೆ. ಉಳಿದಂತೆ ನಗರ ಪ್ರವೇಶಿಸುವ ಪ್ರಮುಖ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳ ಅಳವಡಿಕೆಯಾಗಬೇಕಾಗಿದೆ.
ಪೊಲೀಸ್ ಇಲಾಖೆ ಸಿ.ಸಿ ಕ್ಯಾಮೆರಾಗಳ ಅಳವಡಿಕೆಗೆ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಿದ್ದು, ಅಲ್ಲದೆ ತಾಲೂಕು ಬಿಜೆಪಿ ಮಂಡಲವತಿಯಿಂದ ಸಹ ಮನವಿ ಸಲ್ಲಿಸಲಾಗಿದೆ. ಸಿ.ಸಿ ಕ್ಯಾಮೆರಾ ಅಳವಡಿಕೆಯಿಂದ ಪೊಲೀಸರಿಗೆ ಹೆಚ್ಚಿನ ನೆರವಾಗಲಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗಮನ ಹರಿಸಬೇಕಾಗಿದೆ.
ಈ ನಡುವೆ ಈಗಾಗಲೇ ಪೊಲೀಸ್ ಇಲಾಖೆ ವತಿಯಿಂದ ವಿವಿಧೆಡೆ ಅಳವಡಿಸಲಾಗಿರುವ ಸಿ.ಸಿ ಕ್ಯಾಮೆರಾಗಳ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕಾಗಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲವು ಸಿ.ಸಿ ಕ್ಯಾಮೆರಾ ಕಾರ್ಯ ನಿರ್ವಹಿಸುತ್ತಿಲ್ಲ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ.
ತಾಲೂಕು ಮೂಲತಃ ಸೂಕ್ಷ್ಮ ಪ್ರದೇಶವೆಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಎಲ್ಲಾ ಸ್ಥಳಗಳಲ್ಲೂ ಪೊಲೀಸರು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಪೊಲೀಸ್ ಕಣ್ಗಾವಲಿನ ಜೊತೆಗೆ ಸಿಸಿ ಕ್ಯಾಮೆರಾಗಳನ್ನು ಅತಿ ಸೂಕ್ಷ್ಮಗಳಲ್ಲಿ ಅಳವಡಿಸಬೇಕಾಗಿದೆ. ಇದರಿಂದ ಗಲಭೆಗಳು ಅಥವಾ ಸಮಾಜದಲ್ಲಿ ಆಶಾಂತಿ ವಾತಾವರಣ ಉಂಟು ಮಾಡುವ ಘಟನೆಗಳು ನಡೆದ ತಕ್ಷಣ ತಪ್ಪಿತಸ್ಥರನ್ನು ಪತ್ತೆ ಮಾಡುವ ಜೊತೆಗೆ ನಿಯಂತ್ರಣಕ್ಕೆ ತರಬಹುದಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಅತಿಸೂಕ್ಷ್ಮ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಬೇಕು.
- ಎಂ. ಪ್ರಭಾಕರ್, ಅಧ್ಯಕ್ಷ, ಬಿಜೆಪಿ ಮಂಡಲ, ಭದ್ರಾವತಿ.
ನಗರದ ಅತಿ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಅನಿವಾರ್ಯವಾಗಿದೆ. ಈ ಸಂಬಂಧ ಸುಮಾರು ೧೫ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸುವಂತೆ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಸಿ.ಸಿ ಕ್ಯಾಮೆರಾ ಅಳವಡಿಕೆಯಿಂದ ಪೊಲೀಸ್ ಇಲಾಖೆಗೆ ಹೆಚ್ಚಿನ ಅನುಕೂಲವಾಗಲಿದೆ.
- ರಾಘವೇಂದ್ರ ಕಾಂಡಿಕೆ, ಪೊಲೀಸ್ ನಗರ ವೃತ್ತ ನಿರೀಕ್ಷಕ, ಭದ್ರಾವತಿ.
ಈ ಹಿಂದೆ ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ಸಿ.ಸಿ ಕ್ಯಾಮೆರಾಗಳನ್ನು ನಗರಸಭೆ ವತಿಯಿಂದ ಅಳವಡಿಸಿಕೊಡಲಾಗಿದೆ. ಇದೀಗ ಪುನಃ ಸುಮಾರು ೧೫ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮನವಿ ಪತ್ರಗಳು ಸಲ್ಲಿಕೆಯಾಗಿವೆ. ಸುಮಾರು ೭೦ ರಿಂದ ೮೦ ಲಕ್ಷ ರು. ವ್ಯಯವಾಗಲಿದೆ. ಆದರೆ ಇಷ್ಟೊಂದು ಹಣ ನಮ್ಮ ಬಳಿ ಇಲ್ಲ. ಸದ್ಯಕ್ಕೆ ೧೫ ಲಕ್ಷ ರು. ಇದ್ದು, ಪೊಲೀಸ್ ಇಲಾಖೆ ಸಹ ಯಾವುದಾದರೂ ಅನುದಾನವನ್ನು ನೀಡಿದ್ದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಬಹುದಾಗಿದೆ.
- ಮನುಕುಮಾರ್, ಪೌರಾಯುಕ್ತರು, ನಗರಸಭೆ, ಭದ್ರಾವತಿ.
ಭದ್ರಾವತಿ ನಗರದ ಪ್ರಮುಖ ಸ್ಥಳಲ್ಲಿ ಒಂದಾದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತ.