ಗುರುವಾರ, ಏಪ್ರಿಲ್ 17, 2025

ಗುಜರಿ ವ್ಯಾಪಾರಿಯನ್ನು ಸುಲಿಗೆ ಮಾಡಿದ್ದ ನಾಲ್ವರ ಸೆರೆ : ಗ್ರಾಮಾಂತರ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಗುಜರಿ ವ್ಯಾಪಾರಿ ಅಡ್ಡಗಟ್ಟಿ ಲಕ್ಷಾಂತರ ರು. ಮೌಲ್ಯದ ಗುಜರಿ ವಸ್ತುಗಳನ್ನು ಸುಲಿಗೆ ಮಾಡಿದ್ದ ೪ ಜನರನ್ನು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಭದ್ರಾವತಿ: ಗುಜರಿ ವ್ಯಾಪಾರಿ ಅಡ್ಡಗಟ್ಟಿ ಲಕ್ಷಾಂತರ ರು. ಮೌಲ್ಯದ ಗುಜರಿ ವಸ್ತುಗಳನ್ನು ಸುಲಿಗೆ ಮಾಡಿದ್ದ ೪ ಜನರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಶಿವಮೊಗ್ಗ ಆರ್.ಎಂ.ಎಲ್ ನಗರ ನಿವಾಸಿ, ಗುಜರಿ ವ್ಯಾಪಾರಿ ಪಾಂಡುರಂಗ ಎಂಬುವರು ಮಾ.೨೫ರಂದು ತಾಲೂಕಿನ ರಾಮಿನಕೊಪ್ಪ ಕ್ರಾಸ್ ಹತ್ತಿರ ಓಮ್ನಿ ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಬೆಳಗಿನ ಜಾವ ಸುಮಾರು ೬.೩೫ರ ಸಮಯದಲ್ಲಿ ಯಾರೋ ೪ ಜನರು ೨ ಮೋಟಾರು ಬೈಕುಗಳಲ್ಲಿ ಬಂದು ಅಡ್ಡ ಹಾಕಿ ತಡೆದು ಸುಮಾರು ೩.೫೦ ಲಕ್ಷ ರು. ಮೌಲ್ಯದ ಸುಮಾರು ೯೦೦ ಕೆ.ಜಿ. ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು ಸುಲಿಗೆ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
    ಈ ಸುಲಿಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ ಹಾಗು ಕಾರ್ಯಪ್ಪರವರು ಪೊಲೀಸ್ ಉಪಾಧೀಕ್ಷಕ  ಕೆ.ಆರ್ ನಾಗರಾಜುರವರ ಮಾರ್ಗದರ್ಶನದಲ್ಲಿ  ಗ್ರಾಮಾಂತರ ಪೊಲೀಸ್ ಠಾಣೆ ನಿರೀಕ್ಷಕ ಜಗದೀಶ್ ಸಿ ಹಂಚಿನಾಳ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶ್ರೀಶೈಲಕೆಂಚಣ್ಣವರ, ಚಂದ್ರಶೇಖರ್, ದಿವಾಕರ್ ರಾವ್, ಮಂಜುನಾಥ್, ಈರಯ್ಯ, ರೇವಣ್ಣಸಿದ್ದಪ್ಪಗೌಡ, ವಿಜಯಕುಮಾರ ಡಿ.ಸಿ ಮತ್ತು ಸಂತೋಷಕುಮಾರ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು. 
    ಕಾರ್ಯಾಚರಣೆ ಕೈಗೊಂಡಿದ್ದ ತಂಡ ನಗರದ ಹೊಸಮನೆ ಭೋವಿ ಕಾಲೋನಿ ನಿವಾಸಿ, ಗುಜರಿ ವ್ಯಾಪಾರಿ ಕವಿರಾಜ್ (೨೧), ಶಿವಮೊಗ್ಗ ತುಂಗಾನಗರ ಗೋಪಾಲ ಎಕ್ಸ್‌ಟೆನ್ಸನ್ ನಿವಾಸಿ, ಜಿಮ್ ಟ್ರೈನರ್ ಮುಬಾರಕ್(೨೪), ಬಾರಂದೂರು ಗ್ರಾಮದ ನಿವಾಸಿ ಅಜಿತ್ @ ಘಟ್ಟ(೧೯) ಮತ್ತು  ಕಬಳಿಕಟ್ಟೆ ನಿವಾಸಿ, ಕೃಷಿಕ ಮಂಜುನಾಥ @ ಮಂಜು(೨೧) ಎಂಬುವರನ್ನು ಬಂಧಿಸಲಾಗಿದೆ. 
    ಬಂಧಿತರಿಂದ ಸುಲಿಗೆ ಮಾಡಿದ್ದ ೭೦೦ ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು, ಸುಮಾರು ೩ ಲಕ್ಷ ರು. ಮೌಲ್ಯದ ಒಂದು ಟಾಟಾ ಎಸಿಇ ವಾಹನ ಮತ್ತು ಸುಮಾರು ೮೫ ಸಾವಿರ ರು. ಮೌಲ್ಯದ  ಒಂದು ಪಲ್ಸರ್ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ೭.೩೫ ಲಕ್ಷ ರು. ಮೌಲ್ಯದ ಸ್ವತ್ತು ವಶಪಡಿಸಿಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಭಿನಂದಿಸಿದೆ. 

ಪಿ.ಎಂ.ಶ್ರೀ ಯೋಜನೆಗೆ ಆಯ್ಕೆಯಾದ ತಾಲೂಕಿನ ೨ನೇ ಹಿರಿಯ ಪ್ರಾಥಮಿಕ ಶಾಲೆ

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದ ಎದುರು ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
    ಭದ್ರಾವತಿ: ಹಳೇನಗರದ ಕನಕಮಂಟಪ ಮೈದಾನದ ಎದುರು ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಬಾರಿ ಕೇಂದ್ರ ಸರ್ಕಾರದ ಪಿ.ಎಂ.ಶ್ರೀ ಯೋಜನೆಗೆ ಆಯ್ಕೆಯಾಗಿದೆ. 
    ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಧ್ಯೇಯದೊಂದಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ ತಾಲೂಕಿನಲ್ಲಿ ಒಂದೊಂದು ಶಾಲೆಯನ್ನು ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ(ಪಿ.ಎಂ.ಶ್ರೀ) ಯೋಜನೆಯಡಿ ಅಭಿವೃದ್ಧಿಪಡಿಸುತ್ತಿದೆ. ೨೦೨೩-೨೪ನೇ ಸಾಲಿನಲ್ಲಿ ತಾಲೂಕಿನ ಮೈದೊಳಲು ಗ್ರಾಮದ ಸರ್ಕಾರಿ ಶಾಲೆಯಈ ಯೋಜನೆಗೆ ಆಯ್ಕೆಯಾಗಿತ್ತು. ೨೦೨೪-೨೫ನೇ ಸಾಲಿನಲ್ಲಿ ಈ ಶಾಲೆ ಆಯ್ಕೆಯಾಗಿದೆ. 
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಶಾಲೆಯ ಮುಖ್ಯ ಶಿಕ್ಷಕ ಮೊಹಿದ್ದಿನ್‌ರವರು, ಈ ಶಾಲೆಯಲ್ಲಿ ಎಲ್‌ಕೆಜಿ ತರಗತಿಯಿಂದ ೮ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದು ಮಾದರಿ ಶಾಲೆಯಾಗಿದ್ದು, ಕಳೆದ ವರ್ಷ ಎಲ್‌ಕೆಜಿ ಮತ್ತು ೧ನೇ ತರಗತಿಗೆ ಆಂಗ್ಲ ಮಾಧ್ಯಮ ಆರಂಭಿಸಲಾಗಿತ್ತು. ಆದರೆ ಈ ಬಾರಿ ಪ್ರಸಕ್ತ ಸಾಲಿನಲ್ಲಿ ಎಲ್‌ಕೆಜಿ, ಯುಕೆಜಿ, ೧ ಮತ್ತು ೨ ಹಾಗು ೬ ತರಗತಿಗೆ ಆಂಗ್ಲ ಮಾಧ್ಯಮ ಆರಂಭಿಸಲಾಗುವುದು ಎಂದರು.   
    ಈ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪಿ.ಎಂ.ಶ್ರೀ ಯೋಜನೆ ಸಹಕಾರಿಯಾಗಿದೆ. ಶಾಲೆಯಲ್ಲಿ  ಸಮರ್ಪಕವಾಗಿ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಹಾಗು ಶಾಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ಅನುದಾನ ನೆರವಾಗಲಿದೆ. ಈ ಯೋಜನೆಗೆ ತಾಲೂಕಿನ ೨೫ ರಿಂದ ೩೦ ಶಾಲೆಗಳು ಪೈಪೋಟಿ ನಡೆಸಿದ್ದವು. ಈ ಯೋಜನೆ ಪಡೆಯುವ ನಿಟ್ಟಿನಲ್ಲಿ ಅನುಸರಿಸಬೇಕಾದ ಎಲ್ಲಾ ಮಾನದಂಡಗಳನ್ನು ಈ ಶಾಲೆ ಹೊಂದಿದೆ. ಈ ಹಿನ್ನಲೆಯಲ್ಲಿ ಈ ಶಾಲೆಯನ್ನು ಕೇಂದ್ರ ಸರ್ಕಾರವೇ ನೇರವಾಗಿ ಆಯ್ಕೆ ಮಾಡಿದೆ ಎಂದರು. 
    ಈ ಶಾಲೆ ಆಯ್ಕೆಯಾಗುವಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹಾಗು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿಯವರ ಮಾರ್ಗದರ್ಶನ ಹೆಚ್ಚಿನದ್ದಾಗಿದೆ. ಪೋಷಕರು ಈ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದ್ದಾರೆ. 

ಅಪ್ರಾಪ್ತ ವಯಸ್ಸಿನ ಬಾಲಕ ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ : ೨೫ ಸಾವಿರ ರು. ದಂಡ



ಭದ್ರಾವತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಕಟಿಸಲಾಗಿರುವ ಚಿತ್ರ. 
    ಭದ್ರಾವತಿ : ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಹಿನ್ನಲೆಯಲ್ಲಿ ಸ್ಥಳೀಯ  ನ್ಯಾಯಾಲಯ ವಾಹನ ಮಾಲೀಕರಿಗೆ ೨೫ ಸಾವಿರ ರು. ದಂಡ ವಿಧಿಸಿದೆ. 
    ಕಳೆದ ಸುಮಾರು ಒಂದು ತಿಂಗಳ ಹಿಂದೆ ಸಿದ್ದರೂಢನಗರದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ರಾತ್ರಿ ವೇಳೆ ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದ್ದು, ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿಯ ತುಣುಕು ಶಿವಮೊಗ್ಗ ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ಪ್ರಕಟಿಸಲಾಗಿತ್ತು. ಇದನ್ನು ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸಂಚಾರಿ ಪೊಲೀಸರಿಗೆ ಆದೇಶಿಸಿದ್ದರು. 
    ಈ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ದಂಡ ವಿಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ವಾಹನ ಮಾಲೀಕರಿಗೆ ೨೫ ಸಾವಿರ ರು. ದಂಡ ವಿಧಿಸಿದ್ದಾರೆ. 
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ಶಾಂತಲರವರು, ಕಾನೂನು ಉಲ್ಲಂಘಿಸಿ ಅಥವಾ ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮಾಡುವುದು ತಪ್ಪು. ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಚಾಲನೆ ಮಾಡಲು ವಾಹನಗಳನ್ನು ನೀಡಬಾರದು. ಒಂದು ವೇಳೆ ಯಾರಿಗಾದರೂ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸೆರೆ ಹಿಡಿದಿರುವ ಘಟನೆಯ ದೃಶ್ಯಾವಳಿ ತುಣುಕು ಅಥವಾ ಚಿತ್ರ ಶಿವಮೊಗ್ಗ ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣಗಳಿಗೆ ಅಥವಾ ಹೊಸದಾಗಿ ಸ್ಥಳೀಯ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಆರಂಭಿಸಲಾಗಿರುವ ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದು. ಇತ್ತೀಚೆಗೆ ನಗರದಲ್ಲಿ ವಾಹನಗಳ ಮಿತಿ ೫೦ ಕಿ.ಲೋ. ಮೀಟರ್ ಮೀರಿದ್ದು, ಇಂತಹ ವಾಹನಗಳನ್ನು ಸ್ಪೀಡ್ ರಾಡರ್ ಗನ್ ಮೂಲಕ ಪತ್ತೆ ಹಚ್ಚಿ ೧೦೦೦ ರು. ದಂಡ ವಿಧಿಸಲಾಗುವುದು. ಸಾರ್ವಜನಿಕರು ಕಡ್ಡಾಯವಾಗಿ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ಸ್ಥಳೀಯ ಸಂಚಾರಿ ಠಾಣೆ ಸಂಪರ್ಕಿಸುವಂತೆ ಕೋರಿದ್ದಾರೆ. 

ಬಿಪಿಎಲ್ ಸಂಘದಿಂದ ಅಂಬೇಡ್ಕರ್‌ರವರ ೧೩೪ನೇ ಜನ್ಮ ದಿನ

ಪ್ರತಿವರ್ಷದಂತೆ ಈ ಬಾರಿ ಭದ್ರಾವತಿ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನೆ ಸಂಘ (ಬಿಪಿಎಲ್)ದ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೪ನೇ ಜನ್ಮ ದಿನ ಆಚರಿಸಲಾಯಿತು. 
    ಭದ್ರಾವತಿ: ಪ್ರತಿವರ್ಷದಂತೆ ಈ ಬಾರಿ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನೆ ಸಂಘ (ಬಿಪಿಎಲ್)ದ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೪ನೇ ಜನ್ಮ ದಿನ ಆಚರಿಸಲಾಯಿತು. 
    ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಹಿ ಹಂಚಲಾಯಿತು. ಸಂಘದ ಪ್ರಮುಖರಾದ ಶ್ಯಾಮ್, ಜಗದೀಶ್, ಡಿಎಸ್‌ಎಸ್ ಮುಖಂಡ ದಾಸ್, ಸ್ಟೀಫನ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು. 
    ಬಿಪಿಎಲ್ ಸಂಘ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳೊಂದಿಗೆ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಮಹಾಪುರುಷರ, ದಾರ್ಶನಿಕರ ಹಾಗು ಆದರ್ಶ ವ್ಯಕ್ತಿಗಳ ಜನ್ಮದಿನಾಚರಣೆ ಸಹ ಆಚರಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಸಂಘ ಈ ಭಾಗದಲ್ಲಿ ಗಮನ ಸೆಳೆಯುತ್ತಿದೆ.