Thursday, January 2, 2025

ಎಚ್. ರವಿಕುಮಾರ್‌ಗೆ ಸೇವಾರತ್ನ ಪ್ರಶಸ್ತಿ

ಭದ್ರಾವತಿ ನಗರದ ಯುವ ಮುಖಂಡ, ಕಾರ್ಮಿಕ ಹೋರಾಟಗಾರ ಎಚ್. ರವಿಕುಮಾರ್‌ರವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
    ಭದ್ರಾವತಿ : ನಗರದ ಯುವ ಮುಖಂಡ, ಕಾರ್ಮಿಕ ಹೋರಾಟಗಾರ ಎಚ್. ರವಿಕುಮಾರ್‌ರವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಈ ಹಿಂದೆ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದು, ಹಲವಾರು ಕಾರ್ಮಿಕ ಹೋರಾಟಗಳ ನೇತೃತ್ವ ವಹಿಸಿದ್ದರು. ನಂತರ ರಾಜಕೀಯವಾಗಿ ಗುರುತಿಸಿಕೊಂಡು ಹಲವಾರು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದು, ಇವರ ಸೇವೆಯನ್ನು ಗುರುತಿಸಿ ಹಳೇನಗರದ ಸಂಚಿಯ ಹೊನ್ನಮ್ಮ ಬಾಲಕಿಯರ ಪದವಿಪೂರ್ವ ಕಾಲೇಜಿನ ವತಿಯಿಂದ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಸಿದ್ದಲಿಂಗಮೂರ್ತಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
 

ಪೇಜಾವರ ಶ್ರೀಗಳ ೫ನೇ ಆರಾಧನೆ ಮಹೋತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಐದನೇ ಆರಾಧನೆ ಮಹೋತ್ಸವ ಜರುಗಿತು. 
    ಭದ್ರಾವತಿ : ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಐದನೇ ಆರಾಧನೆ ಮಹೋತ್ಸವ ಜರುಗಿತು. 
    ಶ್ರೀ ಮಠದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ ಹಾಗೂ ಪವಮಾನ ಹೋಮ ನಡೆಯಿತು. ನಂತರ ಪೇಜಾವರ ಶ್ರೀಗಳ ಭಾವಚಿತ್ರದೊಂದಿಗೆ ಮೂರು ಪ್ರದಕ್ಷಿಣೆ ಜರುಗಿತು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನೆರವೇರಿತು. 
    ವೇ||ಬ್ರ|| ಶ್ರೀ ಗೋಪಾಲಚಾರ್, ಶ್ರೀ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್, ಖಜಾಂಚಿ ನಿರಂಜನಚಾರ್, ಸತ್ಯನಾರಾಯಣಚಾರ್, ಮಾಧುರಾವ್, ಶುಭ ಗುರುರಾಜ್, ಮಾಧ್ವ ಮಂಡಳಿ ಅಧ್ಯಕ್ಷ ಜಯತೀರ್ಥ, ಕೆ.ಎಸ್ ಸುಧೀಂದ್ರ, ವಿದ್ಯಾನಂದನಾಯಕ,  ಪ್ರಶಾಂತ್,  ಪ್ರಮೋದ್ ಕುಮಾರ್ ಹಾಗೂ ಪವನ್ ಕುಮಾರ್ ಉಡುಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ರಾಜ್ಯಾಧ್ಯಕ್ಷೆಯಾಗಿ ಅನುಸುಧಾ ಮೋಹನ್ ಪಳನಿ ನೇಮಕ

ಅನುಸುಧಾ ಮೋಹನ್ ಪಳನಿ  
    ಭದ್ರಾವತಿ : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರುನಾಡು ರಾಜ್ಯ ವನ್ನಿಕುಲ(ವಹ್ನಿಕುಲ) ಕ್ಷತ್ರಿಯ ಮಹಾಸಭಾ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾಗಿ ನಗರಸಭೆ ಮಾಜಿ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ ಅವರನ್ನು ನೇಮಕಗೊಳಿಸಲಾಗಿದೆ. 
    ಸಂಘಟನಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮುದಾಯದ ಸಬಲೀಕರಣ ಮತ್ತು ಏಳಿಗೆಗಾಗಿ ಹಾಗು ಸಂಘಟನೆಗಾಗಿ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕ ತನದಿಂದ ಸೇವೆ ಸಲ್ಲಿಸುತ್ತೀರಿ ಎಂಬ ವಿಶ್ವಾಸದೊಂದಿಗೆ ಡಿ.೨೯ರಂದು ಮಹಿಳಾ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು  ಕರುನಾಡು ರಾಜ್ಯ ವನ್ನಿಕುಲ(ವಹ್ನಿಕುಲ) ಕ್ಷತ್ರಿಯ ಮಹಾಸಭಾ ರಾಜ್ಯಾಧ್ಯಕ್ಷ ಕೆ. ನಂದಕುಮಾರ್ ಗೌಂಡರ್ ಮತ್ತು ಪ್ರಧಾನ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. 
    ಅನುಸುಧಾ ಮೋಹನ್ ಪಳನಿಯವರು ಪ್ರಸ್ತುತ ವಾರ್ಡ್ ನಂ.೧೩ರ ನಗರಸಭೆ ಸದಸ್ಯೆಯಾಗಿದ್ದು, ಪ್ರಸ್ತುತ ಕರುನಾಡು ರಾಜ್ಯ ವನ್ನಿಕುಲ(ವಹ್ನಿಕುಲ) ಕ್ಷತ್ರಿಯ ಮಹಾಸಭಾ ಮಹಿಳಾ ಘಟಕ ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಸಂಘಟಿಸಬೇಕಾಗಿದೆ. ನೂತನ ರಾಜ್ಯಾಧ್ಯಕ್ಷೆ ಅನುಸುಧಾ ಮೋಹನ್ ಪಳನಿಯವರನ್ನು ತಾಲೂಕು ವನ್ನಿಕುಲ(ವಹ್ನಿಕುಲ) ಗೌಂಡರ್ ಸಂಘದ ಅಧ್ಯಕ್ಷ ಮಣಿ ಎಎನ್‌ಎಸ್ ಸೇರಿದಂತೆ ನಗರದ ಗಣ್ಯರು ಅಭಿನಂದಿಸಿದ್ದಾರೆ.