Sunday, May 21, 2023

ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅಂದೋಲನ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂಬ ಕೂಗು ಕ್ಷೇತ್ರದಲ್ಲಿ ಹೆಚ್ಚಾಗುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಂದೋಲನವಾಗಿ ಮಾರ್ಪಟ್ಟಿದೆ.
    ಭದ್ರಾವತಿ, ಮೇ. ೨೧ : ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂಬ ಕೂಗು ಕ್ಷೇತ್ರದಲ್ಲಿ ಹೆಚ್ಚಾಗುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಂದೋಲನವಾಗಿ ಮಾರ್ಪಟ್ಟಿದೆ.
ಶ್ರೀ ಬಿ.ಕೆ ಸಂಗಮೇಶ್ವರ್‌ರವರು ಮಿನಿಸ್ಟರ್ ಪಟ್ಟ ಏರಲೇಬೇಕು... ಎಂಬ ಶೀರ್ಷಿಕೆಯೊಂದಿಗೆ ಅಂದೋಲನ ನಡೆಯುತ್ತಿದ್ದು, ಭದ್ರಾವತಿಯಲ್ಲಿ ೪ನೇ ಬಾರಿ ಗೆದ್ದು ಶಾಸಕರಾಗಿ ಆಯ್ಕೆಯಾದ ನಮ್ಮ ಶ್ರೀ ಬಿ.ಕೆ ಸಂಗಮೇಶ್ವರ್ ಅವರನ್ನು ಮಿನಿಸ್ಟರ್ ಮಾಡದೆ ಇನ್ಯಾರನ್ನ ಮಾಡುತ್ತೀರಾ..? ಎಂಬ ಅಂದೋಲನದಲ್ಲಿ ಆರಂಭಿಸಿದ್ದಾರೆ.
    ಈಗಾಗಲೇ ಪಕ್ಷದ ಸ್ಥಳೀಯ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಮಾತ್ರವಲ್ಲದೆ ಪಕ್ಷಭೇದ ಮರೆತು ವಿವಿಧ ಸಮುದಾಯಗಳು, ಸಂಘ-ಸಂಸ್ಥೆಗಳು, ಗಣ್ಯರು ಸಹ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಒಕ್ಕೂರಲಿನಿಂದ ಆಗ್ರಹಿಸಿದ್ದಾರೆ.
    ಒಂದು ವೇಳೆ ಸಚಿವ ಸ್ಥಾನ ನೀಡಲು ವಿಳಂಬ ಮಾಡಿದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ಸಹ ಕೇಳಿ ಬರುತ್ತಿದೆ. ಈಗಾಗಲೇ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಸರ್ಕಾರ ರಚನೆ ಆರಂಭದಲ್ಲಿಯೇ ಸಚಿವ ಸ್ಥಾನ ಸಿಗದಿರುವ ಕುರಿತು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.  

ವಿಜೃಂಭಣೆಯಿಂದ ಜರುಗಿದ ಮಾರಿಯಮ್ಮ ದೇವಿ ಕರಗ ಉತ್ಸವ

ಪ್ರತಿವರ್ಷದಂತೆ ಈ ಬಾರಿ ಸಹ ಭದ್ರಾವತಿ ನ್ಯೂಟೌನ್ ಕೂಲಿಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದ ಶ್ರೀ ಮಾರಿಯಮ್ಮನವರ ದೇವಸ್ಥಾನದಲ್ಲಿ ಭಾನುವಾರ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಮೇ. ೨೧ : ಪ್ರತಿವರ್ಷದಂತೆ ಈ ಬಾರಿ ಸಹ ನ್ಯೂಟೌನ್ ಕೂಲಿಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದ ಶ್ರೀ ಮಾರಿಯಮ್ಮನವರ ದೇವಸ್ಥಾನದಲ್ಲಿ ಭಾನುವಾರ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು.
    ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಿಂದ ಅಲಂಕೃತಗೊಂಡ ಶಕ್ತಿ ಕರಗ ಮೆರವಣಿಗೆ ಮೂಲಕ ಕಲಾತಂಡಗಳೊಂದಿಗೆ ಮಧ್ಯಾಹ್ನ ಸುಮಾರು ೨ ಗಂಟೆಗೆ ಅಮ್ಮನವರ ದೇವಸ್ಥಾನಕ್ಕೆ ಆಗಮಿಸಿತು. ನಂತರ ಕರಗ ಪ್ರತಿಷ್ಠಾಪನೆ ನಡೆಯಿತು. ಇದಕ್ಕೂ ಮೊದಲು ಬೆಳಿಗ್ಗೆ ಅಮ್ಮನವರಿಗೆ ಎಳನೀರು ಅಭಿಷೇಕ ಮತ್ತು ೧೦೮ ಕಲಶ ಸಹಿತ ಬ್ರಹ್ಮಕಲಶ ಅಭಿಷೇಕ ಮತ್ತು ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.


    ಬಹುತೇಕ ಭಕ್ತರು ಅಂಬಲಿ ಸೇವೆ ಹಾಗು ಪ್ರಸಾದ ನೈವೇದ್ಯ ಸಮರ್ಪಿಸಿದರು. ತೀರ್ಥಪ್ರಸಾದ ವಿನಿಯೋಗ, ನಂತರ ಅನ್ನದಾನ ನಡೆಯಿತು. ಸಂಜೆ  ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಥದಲ್ಲಿ ಅಮ್ಮನವರ ರಾಜಬೀದಿ ಉತ್ಸವ ಮತ್ತು ಮಂಗಳವಾದ್ಯದೊಂದಿಗೆ ಕರಗ ಆಟ ನಡೆಯಿತು. ಸುರಗಿತೋಪು, ಬಾಲಭಾರತಿ, ನ್ಯೂಟೌನ್, ವಿದ್ಯಾಮಂದಿರ, ಗಣೇಶ್‌ಕಾಲೋನಿ, ಜನ್ನಾಪುರ, ಹುಡ್ಕೋಕಾಲೋನಿ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು.